Chitradurga
lekhaka-Chidananda M
ಚಿತ್ರದುರ್ಗ, ಜೂನ್, 23: ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಜನತೆಗೆ 10 ಕೆ.ಜಿ.ಅಕ್ಕಿ ಕೊಡಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
10 ಕೆ.ಜಿ. ಅಕ್ಕಿ ಕೊಡುವವರೆಗೆ ಬಿಡಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಸೀನಿಯರ್. ಈ ಹಿಂದೆ ಬಿಎಸ್‌ವೈ ಸಂಪುಟದಲ್ಲಿ ನಾನು ಸಚಿವನಾಗಿದ್ದೆ. ನಾನು ಬಿಎಸ್‌ವೈಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ ಎಂದರು.
ಇತ್ತೀಚೆಗಷ್ಟೇ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಒಟ್ಟು 10 ಕೆ.ಜಿ. ಅಕ್ಕಿ ಎಂದು ಹೇಳಿದ್ದೇವು. ಮಾತು ಕೊಟ್ಟಂತೆ ನಮ್ಮ ಸರ್ಕಾರದಿಂದ ಅಕ್ಕಿ ನೀಡುತ್ತೇವೆ. ಆದರೆ ಬಿಜೆಪಿ ನೀಡಿದ್ದ ಭರವಸೆ ಒಂದೂ ಈಡೇರಿಲ್ಲ ಎಂದರು.
ರೀ.. ವಿದ್ಯುತ್ ದರ ಏರಿಸಿದ್ದು ಯಾರು ಅಂತಾ ನಿಮ್ಗೆ ಗೊತ್ತಿದೆಯಾ?: ಕೈಗಾರಿಕೋದ್ಯಮಿಗಳಿಗೆ ಶಿವಲಿಂಗೇಗೌಡ ಪ್ರಶ್ನೆ
ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸಭೆಯ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಸಚಿವರು ಅಧಿಕಾರ ಇದ್ದಾಗ ತಿರುಗಿಲ್ಲ, ಈಗ ತಿರುಗುತ್ತಾರೆ ಎಂದರು. ಇನ್ನು ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿ ಓಲೈಕೆ ಇಲ್ಲ, ಬಿಜೆಪಿಯವರು ಚುನಾವಣೆಯಲ್ಲಿ ಸೋತಿದ್ದಾರೆ. ಅದಕ್ಕೆ ಮಾತಾಡುತ್ತಾರೆ ಅಷ್ಟೇ ಎಂದು ಹೇಳಿದರು.
ಜಿಲ್ಲೆಯ ಹಿರಿಯ ಶಾಸಕ ಬಿಜಿ ಗೋವಿಂದಪ್ಪ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಹಾಗಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯ ಕಾಮಗಾರಿ ಪರಿಶೀಲನೆಗೆ ಜಿಲ್ಲೆಯ ಶಾಸಕರೊಂದಿಗೆ ನಾಳೆ ಕಾಮಗಾರಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಡಿ.ಕೆ.ಶಿ ಹೇಳಿದ್ದೇನು?
ಹಾಗೆಯೇ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಅನ್ನಭಾಗ್ಯ ಯೋಜನೆ ಜಾರಿ ಬಗ್ಗೆ ಮಾತನಾಡಿದ್ದು, ತಡವಾದರೂ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡುತ್ತೇವೆ. ಈ ಯೋಜನೆಯ ಜಾರಿ ವಿಚಾರವಾಗಿ ಬಡವರು, ಫಲಾನುಭವಿಗಳು ಹೋರಾಟ ಮಾಡುತ್ತಿಲ್ಲ. ಬದಲಿಗೆ ಹೊಟ್ಟಿ ತುಂಬಿರುವ ಕೆಲವರು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ಸರ್ಕಾರದಿಂದ ನಮಗೆ ಸಹಾಯ ಆಗುತ್ತಿದೆ ಎಂದು ಬಡವರು ಹೇಳುತ್ತಿದ್ದಾರೆ. ಅಲ್ಲದೆ ನಮ್ಮ ಶಕ್ತಿ ಯೋಜನೆಯಿಂದ ನಮ್ಮ ಅಕ್ಕ, ತಂಗಿಯರು ದೇವಸ್ಥಾನಗಳಿಗೆ ಭೇಟಿ ನೀಡಿ ಧರ್ಮಯಾತ್ರೆ ಮಾಡುತ್ತಿದ್ದಾರೆ ಎಂದರು.
ಅವರ ಖುಷಿ ನೋಡಲಾಗದೇ ಕೆಲವರು ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರೂ ಹೋರಾಟ ಮಾಡುತ್ತೇನೆ ಎಂದು ಸಂಕಟಪಡುತ್ತಿದ್ದಾರೆ. ಯಡಿಯೂರಪ್ಪನವರು ಧರಣಿ ಮಾಡುವುದರಲ್ಲಿ ಸಮರ್ಥರು. ಈಗಲೂ ಅವರು ವಿಧಾನಸಭೆಗೆ ಬಂದು ಹೋರಾಟ ಮಾಡಲಿ ಎಂದು ಆಹ್ವಾನ ಕೊಟ್ಟರು. ಇನ್ನು ಅನ್ನಭಾಗ್ಯ ಯೋಜನೆ ಜಾರಿ ವಿಚಾರವಾಗಿ ಮುನಿಯಪ್ಪ ಕೇಂದ್ರ ಸಚಿವ ಪಿಯೂಶ್ ಗೋಯಲ್ ಜೊತೆ ಮಾತನಾಡಲಿದ್ದಾರೆ. ಮತ್ತೊಂದೆಡೆ ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂದರು.
ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ
ಗೃಹಲಕ್ಷ್ಮಿ ಯೋಜನೆ ಆರಂಭವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳ ಮಾತನಾಡಿ ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ನಾನೇ ಸದ್ಯಕ್ಕೆ ತಡೆದಿದ್ದೇನೆ. ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ ಆಗುತ್ತಲೇ ಇದೆ. ಆದ್ದರಿಂದ ಮನೆಯೊಡತಿಯೇ ಸ್ವಯಂ ಅರ್ಜಿ ಸಲ್ಲಿಸುವಂತೆ ಸರಳೀಕರಣ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಹಾಗೂ ಆಫ್ ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಹಣ ವಸೂಲಿ ಮಾಡಿದ್ರೆ ಕ್ರಮ
ಗೃಹಲಕ್ಷ್ಮಿ ಯೋಜನೆ ವಿಚಾರವಾಗಿ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಲಾಗುವುದು. ಈ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೆಲವರು 200-300 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದೆ. ಈ ಅರ್ಜಿ ತುಂಬಲು ಏಜೆನ್ಸಿಗಳಾಗಲಿ ಅಥವಾ ಯಾರೇ ಲಂಚ ಪಡೆದರೆ ಅವರ ಪರವಾನಿಗೆ ರದ್ದಾಗುತ್ತದೆ. ಹಾಗೂ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
English summary
Anna Bhagya scheme; We will give 10 kg rice says minister D.Sudhakar in chitradurga,
Story first published: Friday, June 23, 2023, 19:14 [IST]