Mysuru
lekhaka-Lavakumar B M
ಮೈಸೂರು, ಜೂನ್, 25: ಜಿಲ್ಲೆಯ ಹಿಂದುಳಿದ ತಾಲೂಕು ಆಗಿರುವ ಹೆಚ್.ಡಿ.ಕೋಟೆಯಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುತ್ತಿದ್ದು, ಇವತ್ತಿಗೂ ಇಲ್ಲಿರುವವರು ಅಗತ್ಯ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇವರತ್ತ ಸಂಬಂಧಿಸಿದ ಇಲಾಖೆಗಳಾಗಲಿ, ಜನಪ್ರತಿನಿಧಿಗಳಾಗಲೀ ಇದುವರೆಗೂ ಗಮನಹರಿಸಿಲ್ಲ. ಪರಿಣಾಮ ಪ್ರತಿನಿತ್ಯ ಇಲ್ಲಿನ ಜನರು ಸಮಸ್ಯೆಗಳ ಸರಮಾಲೆಯ ನಡುವೆಯೇ ಬದುಕು ಸಾಗಿಸುವಂತಾಗಿದೆ.
ಇದರ ನಡುವೆ ಹೆಚ್.ಡಿ.ಕೋಟೆ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ವಡ್ಡರಗುಡಿ ಗ್ರಾಮದ ಗಿರಿಜನ ಹಾಡಿ ಸಮಸ್ಯೆಯಿಂದ ಬಳಲುವಂತಾಗಿದ್ದು, ಇಲ್ಲಿನ ಸಮಸ್ಯೆಗಳತ್ತ ತುರ್ತಾಗಿ ಗಮನಹರಿಸಬೇಕಾದ ಅಗತ್ಯವಿದೆ. ಈ ಹಾಡಿಗಳಲ್ಲಿ ವಾಸ ಮಾಡುವ ನಿವಾಸಿಗಳು ಬಡವರಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ಹೆಂಚಿನ ಪುಟ್ಟ ಗುಡಿಸಲುಗಳೇ ಇವರ ಪಾಲಿನ ಅರಮನೆಯಾಗಿವೆ.
ಇಲ್ಲಿ ವಾಸಿಸುತ್ತಿರುವವರು ಇವತ್ತು ನಿನ್ನೆಯವರಲ್ಲ. ಐದಾರು ತಲೆಮಾರುಗಳಿಂದ ವಾಸಿಸುತ್ತಾ ಬಂದಿದ್ದಾರೆ. ಸದ್ಯ ಇಲ್ಲಿ ಸುಮಾರು 72ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇವರು ನೆಲೆ ನಿಂತಿರುವ ವಡ್ಡರಗುಡಿ ಗ್ರಾಮವು ಹೆಚ್.ಡಿ.ಕೋಟೆ ಪಟ್ಟಣದಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿದೆ. ಪಟ್ಟಣಕ್ಕೆ ಇಷ್ಟು ಹತ್ತಿರವಿರುವ ಈ ಹಾಡಿಗೆ ಸರ್ಕಾರದ ಸೌಲಭ್ಯಗಳು ತಲುಪಿಲ್ಲ ಎನ್ನುವುದಾದರೆ ಕುಗ್ರಾಮಗಳಲ್ಲಿರುವ ಹಾಡಿ ಜನರ ಬದುಕು ಹೇಗಿರಬಹುದು ಎಂಬುದನ್ನು ಊಹೆ ಮಾಡಿದರೆ ಮೈಜುಮ್ಮೆನ್ನದಿರದು.
Monsoon Delay: ನೀರಿನ ಕೊರತೆ ಬಗ್ಗೆ ಮಹತ್ವದ ಸಭೆ, ಅಧಿಕಾರಿಗಳಿಗೆ ಎಂಬಿ ಪಾಟೀಲ್ ತಾಕೀತು
ಅಶುಚಿತ್ವದಿಂದ ಕೂಡಿದ ನೀರಿನ ತೊಂಬ
ಈಗಾಗಲೇ ಶುಚಿತ್ವದ ಕೊರತೆಯಿಂದಾಗಿ ನೀರಿನಿಂದ ಕೆಲವೊಂದು ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಹೀಗಿರುವಾಗ ವಡ್ಡರಗುಡಿ ಗ್ರಾಮದ ಈ ಗಿರಿಜನ ಹಾಡಿಗೆ ಸರಬರಾಜಾಗುವ ನೀರಿನ ತೊಂಬೆಗಳನ್ನು ಗಮನಿಸಿದರೆ ಭಯವಾಗುತ್ತದೆ. ಇಲ್ಲಿ ಶುಚಿತ್ವವೇ ಮಾಯವಾಗಿದೆ. ಈ ತೊಂಬೆಗಳನ್ನು ಶುಚಿಗೊಳಿಸದೆ ಅದೆಷ್ಟು ವರ್ಷಗಳಾಗಿವೆಯೋ ಗೊತ್ತಿಲ್ಲ. ನೀರು ಸೋರುವ ಜಾಗ ಹೊರ ನೋಟಕ್ಕೆ ಪಾಚಿ ಕಟ್ಟಿ ಅಸಹ್ಯ ಮೂಡಿಸುತ್ತದೆ. ಇನ್ನು ಒಳಗೆ ಹೇಗಿದೆಯೋ ಆ ದೇವರಿಗೆ ಗೊತ್ತಾಗಬೇಕು.
ಆದರೆ ಇಲ್ಲಿನ ವಾಸಿಗಳು ಬೇರೆ ದಾರಿ ಕಾಣದೆ ಅದೇ ನೀರನ್ನೇ ಬಳಸುವಂತಾಗಿದೆ. ಇನ್ನು ಇಲ್ಲಿಯೇ ಕೆಲವರು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮಾಡುತ್ತಾರೆ. ಈ ಕೊಳಚೆ ನೀರು ಅಲ್ಲಲ್ಲಿ ನಿಲ್ಲುತ್ತಿದ್ದು, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ವಿವಿಧ ರೋಗಗಳಿಗೆ ಆಹ್ವಾನ ನೀಡುವಂತಾಗಿದೆ. ಹಾಡಿಯ ಪರಿಸ್ಥಿತಿ ಹೀಗಿದ್ದರೂ ಇಲ್ಲಿನ ಪುರಸಭೆ ಅಧಿಕಾರಿಗಳಾಗಲೀ, ವಾರ್ಡ್ನ ಚುನಾಯಿತ ಪ್ರತಿನಿಧಿಗಳಾಗಲೀ ಇತ್ತ ಭೇಟಿ ನೀಡುವ ಪ್ರಯತ್ನ ಮಾಡದಿರುವುದು ಬೇಸರದ ಸಂಗತಿಯಾಗಿದೆ.
ಹಾಡಿಯಲ್ಲಿ ಆದಿಮಾನವರಂತೆ ಬದುಕು
ಹಾಗೆ ನೋಡಿದರೆ ಇದು ಕೇವಲ ವಡ್ಡರಗುಡಿ ಗ್ರಾಮದ ಹಾಡಿಯ ಕಥೆಯಲ್ಲ. ತಾಲೂಕಿನ ಕುಗ್ರಾಮದಲ್ಲಿ ಬದುಕು ಕಟ್ಟಿಕೊಂಡಿರುವ ಹಲವು ಹಾಡಿಗಳು ಅಭಿವೃದ್ಧಿ ಕಾಣದ ಪರಿಣಾಮ ಇವತ್ತಿಗೂ ಹೀನಾಯ ಬದುಕನ್ನು ಸಾಗಿಸುತ್ತಿವೆ. ಮನುಷ್ಯ ಜೀವನ ಮಾಡಲು ಅಗತ್ಯವಿರುವ ಶುದ್ಧ ಕುಡಿಯುವ ನೀರು, ರಸ್ತೆ, ವಿದ್ಯುತ್, ಸುಸಜ್ಜಿತ ಮನೆ ಯಾವುದೂ ಇಲ್ಲದೆ, ಆದಿ ಮಾನವರಂತೆ ಬದುಕು ಸವೆಸುವುದು ಅನಿವಾರ್ಯ ಆಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಇನ್ನು ಗಿರಿಜನರ ಬದುಕು ಉದ್ದಾರವಾಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಇನ್ನು ಗಿರಿಜನರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕಾದ ಐಟಿಡಿಪಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಹೀಗೆ ಜವಾಬ್ದಾರಿ ಸ್ಥಾನದಲ್ಲಿರುವ ಯಾರು ಕೂಡ ಇತ್ತ ಗಮನಹರಿಸದಿರುವುದೇ ಇವತ್ತು ಹಾಡಿಗಳು ಅಭಿವೃದ್ಧಿ ವಂಚಿತವಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಸರಬರಾಜಾಗದ ಪೌಷ್ಠಿಕ ಆಹಾರ
ಇದೆಲ್ಲದರ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಆದಿವಾಸಿ ಸಮುದಾಯಗಳ ಅಭಿವೃದ್ದಿಗೆ ಇರುವ ಯೋಜನೆಗಳು ಸಮರ್ಪಕವಾಗಿ ತಲುಪದೆ ಜೇನುಕುರುಬ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇತರೆ ಬುಡಕಟ್ಟು ಸಮುದಾಯದ ಜನರು ಜೇನು ಕುರುಬ ಸಮುದಾಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಹಲವು ಮುಖಂಡರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಮತ್ತೊಂದೆಡೆ ಬುಡಕಟ್ಟು ಆದಿವಾಸಿ ಸಮುದಾಯದ ಜನರು ಅಪೌಷ್ಟಿಕತೆಯಿಂದ ನರಳಬಾರದು ಎಂದು ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಮೊಟ್ಟೆ, ಬೆಣ್ಣೆ ತುಪ್ಪ ಸೇರಿದಂತೆ ಅನೇಕ ಪೌಷ್ಠಿಕ ಆಹಾರಗಳು ಇರುವ ಕಿಟ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜೂನ್ ತಿಂಗಳು ಮುಗಿಯುವ ಹಂತದಲ್ಲಿದ್ದರೂ ತಾಲೂಕಿನ ಒಟ್ಟು 163 ಹಾಡಿಗಳಿಗೆ ಪೌಷ್ಟಿಕ ಆಹಾರ ಸರಬರಾಜಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಸಮಸ್ಯೆಗಳಿಗೆ ಪರಿಹಾರ ಸಿಗುತ್ತಾ?
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಪೌಷ್ಠಿಕ ಆಹಾರ ಸರಬರಾಜಿಗೆ ಹೊಸ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಯವರೆಗೂ ಹಳೆ ಟೆಂಡರ್ದಾರರೇ ಪೌಷ್ಠಿಕ ಆಹಾರ ವಿತರಣೆ ಮಾಡಲು ಸೂಚಿಸಲಾಗಿದೆ. ಇನ್ನು ವಡ್ಡರಗುಡಿ ಹಾಡಿಗೆ ತೊಂಬೆಗಳ ಮೂಲಕ ಆಶುದ್ಧ ನೀರು ಸಂಬಂಧ ಪುರಸಭೆ ಅಧಿಕಾರಿಗಳ ಜೊತೆ ಮಾತನಾಡಲಾಗುವುದು. ಈ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಇನ್ನು ಅಧಿಕಾರಿಗಳು ನೀಡಿರುವ ಭರವಸೆಗಳು ಈಡೇರುತ್ತವೆಯ ಎಂದು ಕಾದು ನೋಡಬೇಕಾಗಿದೆ.
English summary
Provide clean drinking water: HD Kote taluk’s Vaddaragudi village’s people Demand to government,
Story first published: Sunday, June 25, 2023, 16:30 [IST]