ಹಳ್ಳಿಗಾಡಿನ ಜನರಿಗೆ ಉತ್ಯಮ ಚಿಕಿತ್ಸೆ, ಔಷಧ ದೊರಕುವಂತೆ ಮಾಡುವುದು ಎಲ್ಲರ ಕರ್ತವ್ಯ-ಡಾ. ವೀರೇಂದ್ರ ಹೆಗ್ಗಡೆ | Village People Should Get Better Treatment: Dr.D Veerendra Heggade

Mandya

lekhaka-Srinivasa K

By ಮಂಡ್ಯ ಪ್ರತಿನಿಧಿ

|

Google Oneindia Kannada News

ಮಂಡ್ಯ, ಜುಲೈ 12: ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ಹಳ್ಳಿಗಾಡಿನ ಜನರಿಗೆ ಉತ್ತಮ ಚಿಕಿತ್ಸೆ, ಔಷಧ ದೊರಕುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಅಶೋಕ ನಗರದಲ್ಲಿರುವ ಸ್ಪಂದನ ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಯಂತ್ರದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ರೋಗವನ್ನು ಶೀಘ್ರ ಪತ್ತೆ ಮಾಡುವ ವ್ಯವಸ್ಥೆ ಇದೆ. ಉತ್ತಮ ಚಿಕಿತ್ಸಾ ವಿಧಾನ, ಅತ್ಯುತ್ತಮ ಔಷಧಗಳು ದೊರಕುತ್ತಿವೆ. ಅದೆಲ್ಲವೂ ಎಲ್ಲ ಜನರಿಗೆ ಸಕಾಲದಲ್ಲಿ ಸಿಗಬೇಕು. ನಗರ ಪ್ರದೇಶದ ಜನರಿಗೆ ದೊರೆಯುವ ಮಾದರಿಯಲ್ಲಿ ಹಳ್ಳಿಗಾಡಿನ ಜನರಿಗೆ ಅತ್ಯುತ್ತಮ ಚಿಕಿತ್ಸೆ, ಔಷಧಗಳು ಸಿಗುವಂತಾದಾಗ ಸಮಾಜ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದರು.

Dr.D Veerendra Heggade

ಯಾವುದೇ ರೋಗವಿರಲಿ, ಆಕಸ್ಮಿಕವಾಗಿ ಸಂಭವಿಸಿದ ಅಪಘಾತಗಳಿರಲಿ ಅವರನ್ನು ಆದಷ್ಟು ಬೇಗ ಆಸ್ಪತ್ರೆ ತಲುಪುವಂತೆ ಮಾಡಿ ಚಿಕಿತ್ಸೆ ದೊರಕಿಸಿದರೆ ಅವರ ಆಯಸ್ಸು ಹೆಚ್ಚಾಗುತ್ತದೆ. ಇಂದಿನ ದಿನಗಳಲ್ಲಿ ವ್ಯಕ್ತಿಗೆ ಬಂದಿರಬಹುದಾದ ರೋಗ ಇಂತಹದ್ದೇ ಎಂದು ನಿರ್ದಿಷ್ಟವಾಗಿ ಹೇಳಬಹುದು. ಅದರ ತೀವ್ರತೆಯನ್ನು ನಿಖರವಾಗಿ ಗುರುತಿಸಿ ಇಷ್ಟೇ ಪ್ರಮಾಣದ ಔಷಧ ನೀಡಿ ರೋಗ ಗುಣಪಡಿಸಬಹುದು ಎಂದು ಹೇಳುವ ಸಾಮರ್ಥ್ಯ ವೈದ್ಯರಲ್ಲಿದೆ. ಅದಕ್ಕಾಗಿ ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.

ಸಿ.ಟಿ.ಸ್ಕ್ಯಾನ್ ಯಂತ್ರ ಗ್ರಾಮೀಣ ಜನರು ಸೇರಿದಂತೆ ಎಲ್ಲ ಜನರಿಗೆ ಅನುಕೂಲಕರವಾದದ್ದು. ಅದರ ಮೂಲಕ ರೋಗಿಯ ಸಮಸ್ಯೆಯನ್ನು ಶೀಘ್ರ ಗುರುತಿಸಿ ಚಿಕಿತ್ಸೆ ನೀಡಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಸಿ.ಟಿ.ಸ್ಕ್ಯಾನ್ ಇದ್ದುದರಿಂದ ನಮ್ಮ ಸಂಸ್ಥೆಯ ಸಿಬ್ಬಂದಿಯೊಬ್ಬರ ಪತ್ನಿಯ ಜೀವ ಉಳಿಯಿತು. ಆನಂತರದಲ್ಲಿ ಸಿ.ಟಿ.ಸ್ಕ್ಯಾನ್ ಮಹತ್ವವನ್ನು ಅರಿತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆ ಯಂತ್ರವನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದೆವು ಎಂದು ಹೇಳಿದರು.

ಕಳೆದ ವರ್ಷ ಕಾಸರಗೋಡು, ಪುತ್ತೂರು, ಚನ್ನರಾಯಪಟ್ಟಣಗಳಿಗೆ ನೀಡಲಾಗಿತ್ತು. ಈ ವರ್ಷವೂ ಮಂಡ್ಯ ಸೇರಿದಂತೆ ಮೂರು ಪ್ರದೇಶಗಳಿಗೆ ನೀಡಲು ನಿರ್ಧರಿಸಿದ್ದೇವೆ. ಈ ಯಂತ್ರೋಪಕರಣವನ್ನು ಜಾಗರೂಕತೆಯಿಂದ ಉಪಯೋಗಿಸಿ ಉತ್ತಮ ಸೇವೆ ಒದಗಿಸುವಂತೆ ತಿಳಿಸಿದರು.

ಮಂಡ್ಯ: ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಕೆ.ಎಂ.ದೊಡ್ಡಿ ಪೊಲೀಸರುಮಂಡ್ಯ: ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಕೆ.ಎಂ.ದೊಡ್ಡಿ ಪೊಲೀಸರು

ಜಿಲ್ಲೆಯಲ್ಲಿರುವ ಧರ್ಮಸ್ಥಳ ಸ್ವಸಹಾಯ ಸಂಘಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶೇ.93ರಷ್ಟು ಸಂಘಗಳು ಕ್ರಿಯಾಶೀಲವಾಗಿದ್ದರೆ, ಶೇ.7ರಷ್ಟು ಸಂಘಗಳು ಮಾತ್ರ ಹಿನ್ನಡೆ ಕಂಡಿವೆ. ಮುಂದಿನ ದಿನಗಳಲ್ಲಿ ಅವೂ ಪ್ರಗತಿಯತ್ತ ದಾಪುಗಾಲಿಡಲಿವೆ ಎಂದ ಡಾ.ವೀರೇಂದ್ರ ಹೆಗ್ಗಡೆ ಅವರು, ಜಿಲ್ಲೆಯ 8,521 ಜನರಿಗೆ ಸಾಲಸೌಲಭ್ಯಗಳನ್ನು ದೊರಕಿಸಿಕೊಟ್ಟು 12 ಕೋಟಿ ಲಾಭಾಂಶ ಮಾಡಿರುವುದು ಸಾಮಾನ್ಯ ಸಂಗತಿಯಲ್ಲ. ವಿಶ್ವದ ಯಾವುದೇ ಸಂಸ್ಥೆ ಈ ಪ್ರಮಾಣದ ಲಾಭ ಮಾಡಿಲ್ಲ ಎಂದು ಮೆಚ್ಚುಗೆ ಸೂಚಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸಮರ್ಪಕವಾಗಿ ಬಳಸಿಕೊಂಡಿರುವ ಜಿಲ್ಲೆ ಮಂಡ್ಯ ಆಗಿದೆ. ಒಳ್ಳೆಯ ವ್ಯವಹಾರ ನಡೆಸಿ ಸಂಘದ ಸದಸ್ಯರು ಸಂತಸದಿಂದ ಇರುವುದು ಇನ್ನಷ್ಟು ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಈ ವೇಳೆ ಉಪಸ್ಥಿತರಿದ್ದ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್‌ ಮಾತನಾಡಿ, ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ. ಸಾಂಸ್ಕೃತಿಕ, ಆಧ್ಯಾತ್ಮಿಕ ಮನಸ್ಸುಗಳನ್ನು ಕಟ್ಟುವ ಕ್ಷೇತ್ರವೂ ಆಗಿದೆ. ಧರ್ಮಸ್ಥಳ ಒಂದು ಶಕ್ತಿ ಕೇಂದ್ರ. ಅದರ ಶಕ್ತಿ ಮತ್ತು ಯುಕ್ತಿಯಾಗಿ ವೀರೇಂದ್ರ ಹೆಗ್ಗಡೆಯವರಿದ್ದಾರೆ. ಯಾವುದೇ, ಜಾತಿ, ಧರ್ಮ, ಮತ ಬೇಧವಿಲ್ಲದೆ ಸರ್ವಜನಾಂಗದ ಶಾಂತಿಯ ತೋಟದಂತೆ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೈತಿಕ ವ್ಯಕ್ತಿತ್ವ ಹೊಂದಿರುವ ಮನಸ್ಸುಗಳನ್ನು ಕಟ್ಟುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಮಾಜದ ಪ್ರಗತಿ, ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಒಂಡು ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಅಲ್ಲಿ ಯಾವುದೇ ಮನಸ್ಸುಗಳು ಒಡೆಯುವ ಸಾಧ್ಯತೆಗಳಿಲ್ಲ. ಒಡೆದ ಮನಸ್ಸುಗಳನ್ನು ಕೂಡಿಸುವ, ಕೆರಳಿದ ಮನಸ್ಸುಗಳನ್ನು ಅರಳಿಸುವ, ಜನರ ಕಣ್ತೆರೆಸುವ ಕಾರ್ಯ ನಡೆದಿದೆ. ನರಳುವವರ ಮೊಗದಲ್ಲಿ ಅರಳುವುದನ್ನು ನೋಡುವ ಅಭಿಲಾಷೆ, ಮನೋದೃಷ್ಟಿಯನ್ನು ಹೊಂದಿರುವ ವೀರೇಂದ್ರ ಹೆಗ್ಗಡೆಯವರು ಜನರ ಬದುಕಿಗೆ ಬೆಳಕಗಾಗಿ ಪವಿತ್ರ ಭಾವದೊಂದಿಗೆ ಕ್ಷೇತ್ರವನ್ನು ಮುನ್ನಡೆಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಮಹಿಳಾ ಸಬಲೀಕರಣವನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರಿಗೆ ಸ್ವ ಉದ್ಯೋಗ ಕಲ್ಪಿಸಿಕೊಟ್ಟು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ. ಎಲ್ಲ ಮಹಿಳೆಯರು ಒಂದೇ ವೇದಿಕೆಗೆ ಬಂದು ತಮ್ಮ ಪ್ರತಿಭೆ, ಆಸಕ್ತಿಯನ್ನು ಬೆಳೆಸಿಕೊಂಡು ಆತ್ಮವಿಶ್ವಾಸದೊಂದಿಗೆ ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಈ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್‌ ವತಿಯಿಂದ ಆರೋಗ್ಯ ರಕ್ಷಾ ಮತ್ತು ಸಂಪೂರ್ಣ ಸುರಕ್ಷಾ ವಿಮಾ ಸೌಲಭ್ಯದ ಕಾರ್ಡ್‌ಗಳನ್ನು, ವ್ಹೀಲ್‌ಚೇರ್, ವಾಕರ್, ವಾಕಿಂಗ್ ಸ್ಟಿಕ್ ಹಾಗೂ ರೋಗಿಗಳಿಗೆ ಉಪಯೋಗವಾಗುವಂತಹ ಉಪಕರಣಗಳನ್ನು ವಿತರಿಸಲಾಯಿತು.

English summary

It is everyone’s duty to ensure that the rural people get the best treatment and medicine says Dr.D Veerendra Heggade. Know more

Story first published: Thursday, July 13, 2023, 17:19 [IST]

Source link