ಸಿಎಂ ಕುರ್ಚಿ ಯಾವಾಗ ಮುರಿದು ಬೀಳುತ್ತೋ ಗೊತ್ತಿಲ್ಲ: ಡಿ.ವಿ.ಸದಾನಂದಗೌಡ ವ್ಯಂಗ್ಯ | D.V.Sadananda Gowda outrage against and Siddaramaiah DK Shivakumar

Mandya

oi-Srinivasa K

By ಮಂಡ್ಯ ಪ್ರತಿನಿಧಿ

|

Google Oneindia Kannada News

ಮಂಡ್ಯ, ಜೂನ್‌, 23: ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಯಾವಾಗ ಮುರಿದು ಬೀಳುತ್ತದೆಯೋ ಗೊತ್ತಿಲ್ಲ. ಎರಡು ಕಾಲನ್ನು ಸಿದ್ದರಾಮಯ್ಯ ಮತ್ತೆರಡು ಕಾಲನ್ನು ಡಿ.ಕೆ.ಶಿವಕುಮಾರ್ ಹಿಡಿದು ಎಳೆಯುತ್ತಿದ್ದಾರೆ. ಆದ್ದರಿಂದ ಇದು ಯಾವಾಗ ಬೀಳುತ್ತೋ ತಿಳಿಯದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಂಡ್ಯದಲ್ಲಿ ವ್ಯಂಗ್ಯವಾಡಿದರು.

ಬಿಜೆಪಿ ವತಿಯಿಂದ ನಗರದ ಕಾಳಿಕಾಂಭ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ. ಎಲ್ಲದ್ದಕ್ಕೂ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

 D.V.Sadananda Gowda outrage against and Siddaramaiah DK Shivakumar

ಕಾಂಗ್ರೆಸ್ ನೇತೃತ್ವದ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಜನೋಪಯೋಗಿ ಕಾರ್ಯಗಳಿಗೆ ಅಡ್ಡಗಾಲು ಹಾಕಿದೆ. ಕಾಯಿದೆಗಳನ್ನು ರದ್ದು ಮಾಡಿದೆ. ಸಾಮಾನ್ಯವಾಗಿ ಕಾಯಿದೆಗಳಿಗೆ ತಿದ್ದುಪಡಿ ತರುವುದು ವಾಡಿಕೆಯಾಗಿತ್ತು. ಆದರೆ ರಾಜ್ಯ ಸರ್ಕಾರ ಕಾಯಿದೆಗಳನ್ನೇ ರದ್ದು ಮಾಡುವ ಮಟ್ಟಕ್ಕೆ ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ 2014ರಿಂದ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕೇಂದ್ರ ಸಂಪುಟದ ಒಬ್ಬರೇ ಒಬ್ಬ ಮಂತ್ರಿ ಮೇಲೂ ಭ್ರಷ್ಟಾಚಾರದ ಆರೋಪಗಳಿಲ್ಲ. 2013ರಲ್ಲಿ 252 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ನಂತರದ 2019ರಲ್ಲಿ 320ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಮುಂದಿನ 2024ರಲ್ಲಿ 350 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಾವು ಸೋತಿದ್ದೇವೆ. ಸೋತ ಮಾತ್ರಕ್ಕೆ ಹತಾಶರಾಗುವುದು ಬೇಡ, ವಾಜಪೇಯಿ ಅವರೂ ಸೋತಿದ್ದರು. ಈಗ ನಾವು ಜನಾದೇಶವನ್ನು ಒಪ್ಪಿಕೊಂಡಿದ್ದೇವೆ. ಎಲ್ಲಿ ಸೋತಿದ್ದೇವೋ ಅಲ್ಲಿಂದಲೇ ನಾವು ಮತ್ತೆ ಗೆದ್ದು ತೋರಿಸಬೇಕಾದ ಸಮಯ ಬಂದಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು. ಹಾಗೆಯೆ ಮತ್ತೊಂದೆಡೆ ಕೊಟ್ಟ ಮಾತು ತಪ್ಪಿ ಕಾಂಗ್ರೆಸ್ ಪರಿತಪಿಸುತ್ತಿದೆ. ಸಿದ್ದರಾಮಯ್ಯ ನರಳಾಟ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎನ್ನುತ್ತಿದ್ದಾರೆ.

 D.V.Sadananda Gowda outrage against and Siddaramaiah DK Shivakumar

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ನೋಡಿಕೊಳ್ಳಬೇಕಾಗಿದೆ. ತನ್ನಲ್ಲಿರುವ ಆಹಾರ ಸಾಮಗ್ರಿಗಳನ್ನು ಎಲ್ಲರಿಗೂ ಹಂಚಿಕೆ ಮಾಡಬೇಕು. ಕರ್ನಾಟಕ ಕೇಳಿದಾಕ್ಷಣ ಅಕ್ಕಿ ಕೊಡಲು ಸಾಧ್ಯವಿಲ್ಲ. ಭರವಸೆ ನೀಡುವ ಮುನ್ನ ಎಲ್ಲವನ್ನೂ ಯೋಚಿಸಿ ನಿರ್ಧಾರ ಮಾಡಬೇಕಿತ್ತು. ಅದು ಬಿಟ್ಟು ಈಗ ಕೇಂದ್ರದ ಕಡೆಗೆ ಕೈ ತೋರಿಸುವುದು ಸರಿಯಲ್ಲ. ರಾಜ್ಯದ ಜನರ ಹಿತ ಕಾಂಗ್ರೆಸ್‌ನವರಿಗೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಕಾಂಗ್ರೆಸ್ ಗ್ಯಾರಂಟಿಗಳಿಂದಾಗಿ ಮುಂದಿನ ದಿನಗಳಲ್ಲಿ ಸಮಸ್ಯೆರಾಯ ಸ್ವಾಮಿಯಾಗುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಹಾಗೆಯೇ ಕಾಂಗ್ರೆಸ್‌ನವರು ಉಚಿತ ಬಸ್ ವ್ಯವಸ್ಥೆ ಕೊಟ್ಟು ಅದಕ್ಕೆ ಸರಿಯಾದ ಸೌಲಭ್ಯ ನೀಡಿಲ್ಲ, ಅಕ್ಕಿ ಕೊಡುವುದಾಗಿ ವಾಗ್ದಾನ ಮಾಡಿ ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇನ್ನು ಉಚಿತ ವಿದ್ಯುತ್ ಯೋಜನೆಯಲ್ಲಿ ಕಂಬವೇ ಅವರ ಮೇಲೆ ಬೀಳುವಂತಾಗಿದೆ. ಹೀಗೆ ಆಡಳಿತ ವ್ಯವಸ್ಥೆ ಹದಗೆಟ್ಟುಹೋಗಿದೆ ಎಂದು ಟೀಕಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮಾಜಿ ಸಂಸದ ವಿಜಯಶಂಕರ್, ಮಾಜಿ ಶಾಸಕರಾದ ನಿರಂಜನ್‌ಕುಮಾರ್, ಅಶ್ವತ್ಥ್‌ನಾರಾಯಣ, ಮುಖಂಡರಾದ ಪ್ರೊ. ಮಲ್ಲಿಕಾರ್ಜುನ್, ಡಾ. ಇಂದ್ರೇಶ್, ಎಸ್.ಪಿ.ಸ್ವಾಮಿ, ಸಚ್ಚಿದಾನಂದ, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಮುನಿರಾಜು, ವಿದ್ಯಾನಾಗೇಂದ್ರ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

English summary

Fight for CM post in Congress says D.V.Sadananda Gowda in Mandya,

Story first published: Friday, June 23, 2023, 21:09 [IST]

Source link