Udupi
lekhaka-Kishan Kumar
ಉಡುಪಿ, ಜೂನ್ 24: ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ ನಡೆಸಲು ಸಂಪನ್ಮೂಲ ವ್ಯಕ್ತಿಗಳಾಗಿ ಅಹ್ವಾನಿಸಲಾಗಿದ್ದ ರವಿಶಂಕರ್ ಗುರೂಜಿ ಮತ್ತು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರ ಹೆಸರನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ.
ಈ ಇಬ್ಬರ ಹೆಸರನ್ನು ರಾಜ್ಯ ಸರ್ಕಾರ ಕೈ ಬಿಡಲು ಸಾರ್ವಜನಿಕರ ಭಾರೀ ವಿರೋಧವೇ ಕಾರಣ ಎಂದು ಹೇಳಲಾಗಿದೆ. ಗುರುರಾಜ ಕರ್ಜಗಿ ಅವರ ಬದಲಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರನ್ನು ಭಾಷಣಕ್ಕೆ ಆಹ್ವಾನಿಸಲಾಗಿದೆ.
ಜೂನ್ 26 ರಿಂದ ಜೂನ್ 29 ತನಕ ಈ ಶಿಬಿರ ನೆಲಮಂಗಲದ ಬಳಿಕ ಧರ್ಮಸ್ಥಳ ಕ್ಷೇಮ ವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಮಹಮ್ಮದ್ ಕುಂಞ, ಮತ್ತು ವೀಣಾ ಅವರು ನೂತನ ಶಾಸಕರಿಗೆ ಪ್ರವಚನ ನೀಡಲಿದ್ದಾರೆ.
ರವಿಶಂಕರ್ ಗುರೂಜಿ ಅವರ ಹೆಸರು ಕೈ ಬಿಟ್ಟಿರೋದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಉಡುಪಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ರವಿಶಂಕರ್ ಗುರೂಜಿ, ಗುರುರಾಜ್ ಕರ್ಜಗಿಯನ್ನು ಆಹ್ವಾನಿಸಿದ್ದರು. ಯಾರದ್ದೋ ಒತ್ತಡ ಉಂಟು, ಕರೆಯೋದಿಲ್ಲ ಎಂದು ಸ್ಪೀಕರ್ ಖಾದರ್ ಹೇಳುತ್ತಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ಎಂಪಿ ಅಲ್ಲದಿದ್ದರೆ ಕರೆಯೋದಿಲ್ಲ ಎಂದು ಹೇಳಿಕೆಗಳನ್ನು ಕೊಡುತ್ತಾರೆ. ಸ್ಪೀಕರ್ ಎಲ್ಲಾ ಧರ್ಮ, ಎಲ್ಲಾ ಪಕ್ಷ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದರು.
ಹೊಸ ಶಾಸಕರಿಗೆ ತರಬೇತಿ ನೀಡಲು ವಿವಾದಿತರ ಆಹ್ವಾನ: ಸ್ಪೀಕರ್ ಯುಟಿ ಖಾದರ್ ವಿರುದ್ಧ ಅಸಮಾಧಾನ
ಇನ್ನು ಯಾವ ಆಧಾರದಲ್ಲಿ ಕೈಬಿಟ್ಟಿದ್ದೀರಿ? ಕೈಬಿಡಲು ಮಾನದಂಡ ಏನು? ರವಿಶಂಕರ್ ಗುರೂಜಿ- ಕರ್ಜಗಿಯನ್ನು ಕೈ ಬಿಟ್ಟಿದ್ದಕ್ಕೆ ನಾವು ಖಂಡಿಸುತ್ತೇವೆ. ಇಬ್ಬರ ಹೆಸರನ್ನು ಪುನರ್ ಪರಿಶೀಲನೆ ಮಾಡಿ, ಅಪಮಾನ ಮಾಡಬೇಡಿ. ಪ್ರಗತಿಪರರು ಏನು ಹೇಳಿದ್ದರು ಮಾಡುತ್ತೇವೆ ಎಂದರೆ ಇದು ಸರಿಯಲ್ಲ. ಎಡಪಂಥೀಯರು ಹೇಳಿದರು ಎಂದು ಪಠ್ಯಪುಸ್ತಕ, ಗೋ ಹತ್ಯೆ ನಿಷೇಧ, ಮತಾಂತರ ಕಾಯ್ದೆ ವಾಪಾಸ್ ತೆಗೆದುಕೊಳ್ಳುತ್ತೀರಿ ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಈ ಗೊಂದಲಗಳ ಬಗ್ಗೆ ಯುಟಿ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಆಧ್ಯಾತ್ಮಿಕ ಚಿಂತಕರಿಗೆ ಆಹ್ವಾನ ನೀಡಿದ್ದೇವೆ. ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಇನ್ನೂ ನಮಗೆ ಸಮ್ಮತಿ ಸೂಚಿಸಿಲ್ಲ. ಕೆಲವರು ಮಾತ್ರ ಒಪ್ಪಿಗೆ ನೀಡಿದ್ದಾರೆ. ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವ್ಯತಿರಿಕ್ತವಾದ ಮಾತುಗಳು ಕೇಳಿಬರುತ್ತಿದೆ. ತರಬೇತಿ ಶಿಬಿರವನ್ನು ನೋಡದೆ ಈಗಲೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.
ಆ ತರಬೇತಿ ಶಿಬಿರದಲ್ಲಿ ಏನಾದರೂ ಕುಂದುಕೊರತೆಗಳಿದಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದಲ್ಲಿ ಸರಿಪಡಿಸುತ್ತೇವೆ. ಈಗಲೇ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ತಪ್ಪು. ಶ್ರೀ ರವಿಶಂಕರ್ ಗುರೂಜಿಯವರನ್ನು ನಾನು ಭೇಟಿ ಮಾಡಿದ ತಕ್ಷಣ ನಾನು ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ ಎಂದು ಗುಲ್ಲೆಬ್ಬಿಸುವುದು ತಪ್ಪು. ನನಗೆ ಹಿಂದಿನಿಂದಲೂ ಅವರೊಂದಿಗೆ ಆತ್ಮೀಯ ಒಡನಾಡಿಯಾಗಿದ್ದೇನೆ. ಅಲ್ಲದೆ ಅವರು ಈಗ ಅಮೇರಿಕಾದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮದ ಹಿಂದಿದ್ದಾರೆ. ದೇಶದಲ್ಲಿಯೇ ಇಲ್ಲದ ಅವರ ಬಗ್ಗೆ ಇಲ್ಲಸಲ್ಲದ ಮಾತನಾಡುವುದು ತಪ್ಪು ಎಂದು ಹೇಳಿದರು.
ಅಲ್ಲದೇ ಈ ಬಗ್ಗೆ ನನ್ನಲ್ಲಿ ಸ್ಪಷ್ಟೀಕರಣ ಕೇಳದೆ ಹೇಳಿಕೆಗಳನ್ನು ಕೊಡುವವರಿಗೆ ನಾನೇನು ಹೇಳಲು ಹೋಗುವುದಿಲ್ಲ. ಆದ್ದರಿಂದ ತರಬೇತಿ ಕ್ಯಾಂಪ್ ಮುಗಿದ ಬಳಿಕ ಅದರ ಸಾಧಕ ಬಾಧಕಗಳು, ಸಲಹೆ ಸೂಚನೆಗಳನ್ನು ನೀಡಿದರೆ ಅದನ್ನು ಸ್ವಾಗತಿಸಲು ತಯಾರಿದ್ದೇವೆ ಎಂದು ಯು.ಟಿ.ಖಾದರ್ ಹೇಳಿದ್ದರು.
English summary
The state government has dropped the names of Ravi Shankar Guruji and education expert Dr. Gururaja Karjagi, who were invited as resource persons to conduct a three-day training camp for the new MLAs.
Story first published: Saturday, June 24, 2023, 18:27 [IST]