Karnataka
oi-Gururaj S
ಬೆಂಗಳೂರು, ಜೂನ್ 23: ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ದುಸ್ಥಿತಿ ಬಗ್ಗೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಅಂಕಿ-ಅಂಶಗಳನ್ನು ಗಮನಿಸಿ ಇದು ನಿಜಕ್ಕೂ ಆಘಾತಕಾರಿ, ಮನಸ್ಸನ್ನು ಘಾಸಿಗೊಳಿಸಿದೆ. ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಮೂಲಸೌಕರ್ಯಗಳು ಸಮಪರ್ಕವಾಗಿಲ್ಲದ ಸರ್ಕಾರಿ ಶಾಲೆಗಳಿಂದ ಎಂತಹ ಸಮಾಜವನ್ನು ಕಟ್ಟುತ್ತಿದ್ದೇವೆ? ಎಂದು ಜಾಡಿಸಿದೆ.
ಅಲ್ಲದೆ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ ಇರುವ ಶಾಲೆಗಳಿಗೆ ಮಕ್ಕಳನ್ನು ಹೇಗೆ ಪೋಷಕರು ಕಳುಹಿಸಲು ಬಯಸುತ್ತಾರೆಂದು ಕಿಡಿ ಕಾಡಿದೆ. ಶಾಲೆಗಳಿಂದ ಹೊರಗುಳಿದ ಮಕ್ಕಳ ವಿಚಾರವಾಗಿ 2013ರಲ್ಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ. ಎಂ. ಜಿ. ಎಸ್ ಕಮಲ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಚಿಕ್ಕಮಗಳೂರು: ಅವನತಿಯತ್ತ ಗುಂಡಿಹೊಂಬಳ ಸರ್ಕಾರಿ ಶಾಲೆ, ಶಿಕ್ಷಕನ ವರ್ಗಾವಣೆಗೆ ಪೋಷಕರ ಪಟ್ಟು
ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ ವರದಿಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರುತ್ತಿರುವುದು ಮತ್ತು ಇನ್ನೊಂದು ಶಾಲೆಯಲ್ಲಿ ಶೌಚಾಲಯದ ಸುತ್ತ ಮುಳ್ಳು ಕಂಟಿಗಳನ್ನು ಬೆಳೆದಿರುವ ಫೋಟೋಗಳನ್ನು ಗಮನಿಸಿದ ನ್ಯಾಯಪೀಠ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ದುಸ್ಥಿತಿಗೆ ಇದೊಂದು ನಿದರ್ಶನವಾಗಿದೆ. ಈ ಫೋಟೋಗಳು ನಮ್ಮ ಮನಸ್ಸನ್ನು ಘಾಸಿಗೊಳಿಸಿದೆ. ಈ ಫೋಟೋಗಳನ್ನು ನೋಡಿದರೆ ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡುತ್ತಿದೆ. ಮೂಲಸೌಕರ್ಯಗಳು ಇಲ್ಲದಂತಹ ಇಂತಹ ಸರ್ಕಾರಿ ಶಾಲೆಗಳಿಂದ ನಾವು ಎಂತಹ ಸಮಾಜ ಕಟ್ಟುತ್ತಿದ್ದೇವೆ? ಎಂದು ವಿಷಾದಿಸಿತು.
ಶಾಲೆ ಮೊದಲ ದಿನ; ಎತ್ತಿನ ಗಾಡಿಯಲ್ಲಿ ಬಂದ ಡಿಸಿ, ವಿದ್ಯಾರ್ಥಿಗಳು
ಸಮೀಕ್ಷೆ ನಡೆಸಲು ಸೂಚನೆ: ಸುದೀರ್ಘ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಸ್ಥಿತಿಗತಿ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸಿದ ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು. ಸಮೀಕ್ಷೆ ವೇಳೆ ತಾಲೂಕು ಕಾನೂನು ಸೇವಾ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳನ್ನು ಭಾಗಿದಾರರನ್ನಾಗಿ ಮಾಡಿಕೊಳ್ಳಬೇಕು. ನ್ಯಾಯಾಲಯಕ್ಕೆ ಸಲ್ಲಿಸುವ ವರದಿ ಮೇಲೆ ಅವರ ಸಹಿ ಇರಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಎರಡು ವಾರಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತು.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ: ಅವನತಿಯ ಹಂತದಲ್ಲಿ ಹಿರೇಬೈಲು ಸರ್ಕಾರಿ ಶಾಲೆ: 90 ವಿದ್ಯಾರ್ಥಿಗಳ ಗತಿಯೇನು?
ನ್ಯಾಯಾಲಯಕ್ಕೆ ಸಲ್ಲಿಸುವ ವರದಿಗೆ ಕಾದು ಕುಳಿಯದೆ ಸಮಸ್ಯೆಗಳು ಗಮನಕ್ಕೆ ಬಂದ ತಕ್ಷಣ ಅದನ್ನು ಪರಿಹರಿಸಬೇಕು. ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನ ವಿಶೇಷ ಅನುದಾನ ಹಂಚಿಕೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೇ ಕೋರ್ಟ್ ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೂ ರವಾನಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಮಕ್ಕಳ ಭವಿಷ್ಯವೇನು?; ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ ನಿವಾರಿಸುವ ಸರ್ಕಾರದ ವರದಿ ಕೇವಲ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಒಂದು ಶಾಲೆಯಲ್ಲಿ ಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರಲಾಗುತ್ತಿದೆ. ಇನ್ನೊಂದು ಶಾಲೆಯಲ್ಲಿ ಶೌಲಚಾಲಯದ ಸುತ್ತ ಮುಳ್ಳು ಕಂಟಿಗಳು ಬೆಳೆದಿವೆ. ಶೌಚಾಲಯ ಹೆಸರಿಗಷ್ಟೇ ಇದೆ. ಅಲ್ಲಿ ನೀರಿನ ಸೌಲಭ್ಯ ಇಲ್ಲ. ಇಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಪೋಷಕರು ಒಪ್ಪುವುದಾದರೂ ಹೇಗೆ? ಎಂದಿತು. ಮಕ್ಕಳ ಭವಿಷ್ಯವನ್ನು ಸರ್ಕಾರಿ ಶಾಲೆಗಳಲ್ಲಿ ಕಾಣುವ ಪೋಷಕರ ಕನಸು ನನಸಾಗಲು ಸಾಧ್ಯವೇ? ಪ್ರತಿಭಾವಂತ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯಗಳು ಕೊಡದಿದ್ದರೆ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅವರನ್ನು ತಡೆದಂತೆ ಆಗುತ್ತದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
11 ವರ್ಷವಾದರೂ ಕಿಂಚಿತ್ತೂ ಬದಲಾಗಿಲ್ಲ: ಈ ಅರ್ಜಿಯ ವಿಚಾರಣೆ 2013ರಿಂದ ನಡೆಯುತ್ತಿದೆ. ಈಗ ನಾವು 2023ರಲ್ಲಿ ಇದ್ದೇವೆ. ಈ ಅವಧಿಯಲ್ಲಿ ಮೂರು ಸರ್ಕಾರಗಳು ಬಂದಿದೆ. ಸರ್ಕಾರಗಳು ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ. ನಾಡಿನ ಭವಿಷ್ಯ ಇರುವುದು ಶಾಲೆಗಳಲ್ಲಿ. ಆದರೆ, ಇಂತಹ ಮೂಲಭೂತಸೌಕರ್ಯಗಳು ಇಲ್ಲದ ಶಾಲೆಗಳಿಂದ ಮಕ್ಕಳ ಭವಿಷ್ಯ ಹೇಗೆ ರೂಪಿಸಬಹುದು, ಎಂತಹ ಸಮಾಜ ಕಟ್ಟಬಹುದು. ಸರ್ಕಾರ ಇಷ್ಟೊಂದು ಉದಾಸೀನ ಆಗಬಾರದು. ಕೋರ್ಟ್ ಆದೇಶ ಪಾಲನೆ ಮಾಡದೆ ವರದಿ ಸಲ್ಲಿಸುವ ಧೈರ್ಯ ಅಧಿಕಾರಿಗಳಿಗೆ ಹೇಗೆ ಬಂತು? ಎಂದು ಕೇಳಿತು.
ಸರ್ಕಾರಿ ಅಧಿಕಾರಿಗಳ ಮನೆಯ ಶೌಚಾಲಯಗಳು ಹೀಗೆಯೇ ಇರುತ್ತದೆಯೇ?, ಇಂತಹ ಶಾಲೆಗಳಿಗೆ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಳಿಸಲು ಮುಂದಾಗುತ್ತಾರೆಯೇ?. ಈ ವಿಚಾರ ಮನಸ್ಸಿಗೆ ತುಂಬಾ ನೋವು ತಂದಿದೆ. ಅಧಿಕಾರಿಗಳನ್ನು ಸರ್ಕಾರ ಸಮರ್ಥಿಸಿಕೊಳ್ಳಬಾರದು. ‘ಚಲ್ತಾ ಹೈ’ ಎಂಬ ಭಾವನೆ ಸರ್ಕಾರಿ ಅಧಿಕಾರಿಗಳಿಗೆ ಬಂದು ಬಿಟ್ಟಿದೆಯೇ?. ಅನುದಾನದ ಲಭ್ಯತೆ ಆಧರಿಸಿ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂಬ ಹೇಳಿಕೆ ಸರಿಯಲ್ಲ ಎಂದು ಖಾರವಾಗಿ ನುಡಿಯಿತು.
English summary
Poor infrastructure in Karnataka governmenet schools. Karnataka high court taken task to govt and directed to conduct fresh survey and submit report with in three months.