Karnataka
oi-Reshma P
ಕೋಲಾರ, ಜೂನ್ 24: ಕೋಲಾರ ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಬಳಿ ಸಾಲ ವಸೂಲಿಗೆ ಹೋಗುತ್ತಿದ್ದ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಮೇಲೆ ಪದೇ ಪದೇ ಹಲ್ಲೆ ಪ್ರಕರಣಗಳು ಕೇಳಿಬರುತ್ತಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಮಹಿಳೆಯರ ಬಳಿ ಸಾಲ ವಸೂಲಿಗೆ ಹೋಗದಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸಿಬ್ಬಂದಿಗೆ ಕೋಲಾರ ಎಸ್ ಪಿ ನಾರಾಯಣ್ ಖಡಕ್ ಸೂಚನೆ ಕೊಟ್ಟಿದ್ದಾರೆ. ಹಾಗೆಯೇ ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳದಂತೆ ಮಹಿಳೆಯರಿಗೂ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಘೋಷಿಸಿದ್ದರು. ಅದರಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಹೊಸ ಸರ್ಕಾರ ಬಂದ ಮೇಲೆ ನಮ್ಮ ಸಾಲ ಮನ್ನಾ ಆಗುತ್ತದೆಂದು, ಹಾಗಾಗಿ ಸಾಲ ಕಟ್ಟುವುದಿಲ್ಲ ಎಂದು ಕೆಲವು ಸ್ತ್ರೀ ಶಕ್ತಿ ಸಂಘಗಳು ಅಭಿಯಾನ ನಡೆಸಿದ್ದರು.
ನಾವು ಸಾಲ ಕಟ್ಟುವುದಿಲ್ಲ, ಸಾಲಮನ್ನಾ ಮಾಡಲೇಬೇಕೆಂದು ಮಹಿಳೆಯರು ಒತ್ತಾಯಿಸಿ, ಸಾಲ ವಸೂಲಿಗೆ ಬರುತ್ತಿದ್ದ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ಈಗಾಗಲೇ ವರದಿ ಕಳುಹಿಸಿದ್ದು, ಸರ್ಕಾರದಿಂದ ನಿರ್ದೇಶನ ಬರುವವರೆಗೆ ಸಾಲ ವಸೂಲಿಗೆ ಹೋಗದಂತೆ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಎಸ್ ಪಿ ಸೂಚಿಸಿದ್ದಾರೆ.
700 ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಡಿಸಿಸಿ ಬ್ಯಾಂಕ್ ನಿಂದ ಸಾಲ ನೀಡಲಾಗಿದೆ. ಚುನಾವಣೆಗೂ ಮುನ್ನ 99% ಸಾಲ ವಸೂಲಿ ಮಾಡಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಜಿಲ್ಲೆಯ ವಿವಿಧೆಡೆ ಸಾಲ ವಸೂಲಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಮುಳಬಾಗಿಲು ತಾಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ಗುರುವಾರ ಸಾಲ ವಸೂಲಿಗೆ ತೆರಳಿದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ನಂತರ ಮಂಜು ಎಂಬುವರು ತಮ್ಮ ಬೈಕಿಗೆ ತಾವೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬ್ಯಾಂಕ್ ಸಿಬ್ಬಂದಿಯ ಬೈಕ್ ಎಂದು ಬಿಂಬಿಸಿದ್ದಾರೆ. ಈ ಸಂಬಂಧ ಪೊಲೀಸರು ಮಂಜು ಎಂಬುವನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಕೋಲಾರದಲ್ಲಿ ಸಾಲ ಮನ್ನಾದ ಕಿಚ್ಚು ಚುನಾವಣಾ ಫಲಿತಾಂಶ ಬಂದ ನಂತರ ನಿರಂತರವಾಗಿ ನಡೆಯುತ್ತಲೇ ಇದೆ. ಮರುಪಾವತಿಗೆ ಹೋದಂತಹ ಸಿಬ್ಬಂದಿಯನ್ನು ಮಹಿಳೆಯರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳುವ ಜೊತೆಗೆ ಹಲ್ಲೆ ಯತ್ನಕ್ಕೂ ಮುಂದಾಗಿದ್ದರು. ಕೋಲಾರ ತಾಲೂಕಿನ ವೇಮಗಲ್ ಭಾಗದಲ್ಲಿ ಮಹಿಳೆಯರು ಸಾಲ ಕೇಳಲು ಹೋದ ಬ್ಯಾಂಕ್ ಸಿಬ್ಬಂದಿ ವಿರುದ್ದ ಗಲಾಟೆ ಮಾಡಿದರು.
ಇನ್ನೂ ಕೆಲವು ಕಡೆ ಸಾಲ ಕೇಳಲು ಡಿಸಿಸಿ ಬ್ಯಾಂಕ್ ಸಿಬ್ಬಂದಿ ಬರದಂತೆ ಬ್ಯಾನರ್ ಹಾಕಿದರು. ಅದಾದ ನಂತರ ಮುಳಬಾಗಲು ತಾಲೂಕಿನ ಬೈರಕೂರು ಗ್ರಾಮದಲ್ಲಿ ಸಾಲ ವಸೂಲಿಗೆ ತೆರಳಿದ್ದ ಸಿಬ್ಬಂದಿಯನ್ನು ಹಗ್ಗದಲ್ಲಿ ಕಟ್ಟಿಹಾಕಲು ಮುಂದಾಗಿದ್ದರು. ಮಾಲೂರು ತಾಲೂಕಿನ ರಾಜೇನಹಳ್ಳಿಯಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಮಹಿಳೆಯರು ಕೋಲುಗಳನ್ನು ಹಿಡಿದು ಗ್ರಾಮದಿಂದಲೇ ಹೊರ ಹಾಕಿದ್ದರು. ಬಳಿಕ ಮುಳಬಾಗಿಲಿನ ಬಿಸ್ನಹಳ್ಳಿಯಲ್ಲಿ ಸಿಬ್ಬಂದಿಯ ಮೇಲೆ ಹಲ್ಲೆ ಯತ್ನಕ್ಕೆ ಪ್ರಯತ್ನಿಸಿದ್ದರು.
ಈ ಘಟನೆಗಳ ನಂತರ ಕೋಲಾರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ರಾಜ್ಯ ಸರ್ಕಾರದಿಂದ ಸೂಚನೆ ಬರುವವರೆಗೂ ಬ್ಯಾಂಕ್ ಸಿಬ್ಬಂದಿ ಸಾಲ ವಸೂಲಿಗೆ ಹೋಗಬಾರದು ಎಂದು ಎಸ್ಪಿ ನಾರಾಯಣ್ ತಿಳಿಸಿದ್ದಾರೆ. ಹಾಗೇ ಗ್ರಾಮಕ್ಕೆ ಬರುವ ಬ್ಯಾಂಕ್ ಸಿಬ್ಬಂದಿ ಮೇಲೆ ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದೆಂದು ಮಹಿಳೆಯರಿಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
English summary
A case of assault on bank staff in kolar, SP instructs DCC Bank chairman and staff not to go for debt collection.
Story first published: Saturday, June 24, 2023, 10:27 [IST]