India
oi-Mamatha M
ನವದೆಹಲಿ, ಜುಲೈ. 27: ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಸಂಸತ್ತಿನಲ್ಲಿ (ಮಣಿಪುರ ವಿಷಯದ ಬಗ್ಗೆ) ಮಾತನಾಡಲು ಪ್ರಧಾನಿ ಮೋದಿ ಬಯಸುವುದಿಲ್ಲ ಆದರೆ ರಾಜಸ್ಥಾನದಲ್ಲಿ ರಾಜಕೀಯ ಭಾಷಣ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಉಂಟಾದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಂತೆ ಪ್ರಧಾನಿಯನ್ನು ಒತ್ತಾಯಿಸುತ್ತಿರುವ ಕಾಂಗ್ರೆಸ್, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಮಣಿಪುರ ಘಟನೆಯಲ್ಲಿ ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ಸಂಸದರು ಭಾರಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಧಿವೇಶನಗಳಿಗೆ ಕಪ್ಪು ಬಟ್ಟೆ ಧರಿಸಿ ಗುರುವಾರ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ಮಣಿಪುರ ಸಮಸ್ಯೆ ಮತ್ತು ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ. ಗದ್ದಲದ ನಡುವೆಯೇ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದಾದ ನಂತರ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಈ ವಾರಾಂತ್ಯದಲ್ಲಿ ಭೇಟಿ ನೀಡಲಿರುವ ವಿಪಕ್ಷಗಳ ಸಂಸದರು
“ಜನರು ಎಚ್ಚೆತ್ತುಕೊಂಡಿದ್ದಾರೆ ಮತ್ತು ಅವರು ಹೋರಾಟವನ್ನು ಮುಂದುವರಿಸುತ್ತಾರೆ. ನೀವು (ಪ್ರಧಾನಿ ನರೇಂದ್ರ ಮೋದಿ) ಪ್ರಜಾಪ್ರಭುತ್ವದ ಮಂದಿರವಾದ ಸಂಸತ್ತಿನಲ್ಲಿ ಮಾತನಾಡಲು ಬಯಸುವುದಿಲ್ಲ, ಆದರೆ ರಾಜಸ್ಥಾನದಲ್ಲಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಬಹುದು ಅಲ್ಲಿ ರಾಜಕೀಯ ಮಾತನಾಡುತ್ತೀರಾ..?” ಎಂದು ಪ್ರಶ್ನಿಸಿದ್ದಾರೆ.
ಗುರುವಾರ ಕೂಡ ‘ಪ್ರಧಾನ ಮಂತ್ರಿ ಸದನ್ ಮೇ ಆವೋ (ಪ್ರಧಾನಿ, ಸಂಸತ್ ಭವನಕ್ಕೆ ಬನ್ನಿ), ಸದನ್ ಮೇ ಆಕೆ ಜವಾಬ್ ದೋ (ಸದನಕ್ಕೆ ಬಂದು ಉತ್ತರಿಸಿ), ಣಿಪುರ ಪೆ ಜವಾಬ್ ದೋ (ಮಣಿಪುರದ ಪ್ರಶ್ನೆಗಳಿಗೆ ಉತ್ತರಿಸಿ), ಜವಾಬ್ ತುಮ್ಕೋ ದೇನಾ ಹೋಗಾ (ನೀವು ಉತ್ತರಿಸಬೇಕು) ಎಂಬ ತಮ್ಮ ಘೋಷಣೆಗಳ ಮೂಲಕ ಸಂಸತ್ತಿನಲ್ಲಿ ಮಣಿಪುರದ ಕುರಿತು ಪ್ರಧಾನಿಯವರಿಂದ ಹೇಳಿಕೆಗಾಗಿ ವಿರೋಧ ಪಕ್ಷದ ನಾಯಕರು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಸಂಸತ್ತಿನ ಹೊರಗೆ ಕೂಡ ಘೋಷನೆಗಳನ್ನು ಕೂಗಿದ್ದಾರೆ.
ಪ್ರತಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿರುವ ಪ್ರಧಾನಿ ಮೋದಿ ಅವರು ಗುರುವಾರ ರಾಜಸ್ಥಾನದ ಸಿಕಾರ್ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಹಾಕಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಕೆಂಪು ಡೈರಿ’ ಕಾಂಗ್ರೆಸ್ನ ‘ಜುಟ್ ಕಿ ದುಕಾನ್’ (ಸುಳ್ಳಿನ ಅಂಗಡಿ) ನ ಹೊಸ ಯೋಜನೆಯಾಗಿದೆ. ಪಕ್ಷದ ಕರಾಳ ಕಾರ್ಯಗಳನ್ನು ಡೈರಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಲಾಗುತ್ತದೆ ಎಂದಿದ್ದಾರೆ.
ಈ ಬಾರಿ ‘ನಹೀ ಸಾಹೇಗಾ ರಾಜಸ್ಥಾನ’ ಎಂಬ ಒಂದೇ ಒಂದು ಘೋಷಣೆ ಇದೆ. ರಾಜಸ್ಥಾನವು ತನ್ನ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ರಾಜಸ್ಥಾನ ಸಂಪುಟದಿಂದ ವಜಾಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಡಾ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಗ್ಗೆ ದೋಷಾರೋಪಣೆಯ ವಿವರಗಳನ್ನು ಒಳಗೊಂಡಿರುವ “ಕೆಂಪು ಡೈರಿ” ಸುಳಿವು ನೀಡಿದ್ದರು.
English summary
Prime Minister Narendra Modi doesn’t wish to speak in Parliament but talk politics in Rajasthan said Leader of Opposition in Rajya Sabha Mallikarjun Kharge. know more.