ಶ್ರೀಮಂತರಿಗೆ ಕೊಟ್ರೆ ಆರ್ಥಿಕ ಚೇತರಿಕೆ, ಬಡವರಿಗೆ ಕೊಟ್ರೆ ಪುಕ್ಸಟ್ಟೆಯಾ..? : ವಿಪಕ್ಷಗಳ ವಿರುದ್ಧ ಕೃಷ್ಣಭೈರೇಗೌಡ ಕಿಡಿ | Krishna Byre Gowda spark against the opposition BJP over congress guarantees

Bengaluru

oi-Mamatha M

|

Google Oneindia Kannada News

ಬೆಂಗಳೂರು, ಜುಲೈ 12: ಶ್ರೀಮಂತರ ತೆರಿಗೆ ಕಡಿತ ಮಾಡಿದರೆ, ಕಾರ್ಪೊರೇಟ್ ಸಾಲ ಮನ್ನಾ ಮಾಡಿದರೆ ಆರ್ಥಿಕ ಅಭಿವೃದ್ಧಿ. ಅದೇ ಬಡವರಿಗೆ ಕೊಟ್ಟರೆ ಪುಕ್ಸಟ್ಟೆಯಾ..? ಹೊಟ್ಟೆ ತುಂಬಿದ ಜನ ಬಡವರ ಬಗ್ಗೆ ಹೀಗೆ ಅವಹೇಳನ ಮಾಡುವುದು ಹೊಸದಲ್ಲ ಬಿಡಿ ಎಂದು ಬಿಜೆಪಿ ನಾಯಕರ “ಪುಕ್ಸಟ್ಟೆ” ಪದ ಪ್ರಯೋಗಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷ ಸದಸ್ಯರು ಸರ್ಕಾರದ ಶಕ್ತಿ ಯೋಜನೆ ಬಗ್ಗೆ ಚರ್ಚೆಗೆ ಮುಂದಾದರು. ಈ ವೇಳೆ ಸಚಿವ ಕೃಷ್ಣಭೈರೇಗೌಡ ಸದಸ್ಯರ ಪ್ರಶ್ನೆಗೆ ಉತ್ತರಿಸುತ್ತಾ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಹೇಗೆ ಲಾಭದಾಯಕವಾಗಿವೆ..? ಎಂದು ವಿವರಿಸಲು ಮುಂದಾದರು. ನಂತರ ಮಧ್ಯ ಪ್ರವೇಶಿಸಿದ ಸದಸ್ಯೆ ಭಾರತಿ ಶೆಟ್ಟಿ ಇದೊಂದು ಪುಕ್ಸಟ್ಟೆ ಭಾಗ್ಯ. ಪುಕ್ಸಟ್ಟೆ ಇದೆ ಎಂದು ಜನ ಈಗ ಬಸ್‌ಗಳಲ್ಲಿ ಓಡಾಡಲು ಮುಗಿಬಿದ್ದಿದ್ದಾರೆ. ಆದರೆ, ಪರಿಸ್ಥಿತಿ ಯಾವಾಗಲೂ ಹೀಗೆ ಇರಲ್ಲ ಎಂದು ಹೀಯಾಳಿಸಿದ್ದಾರೆ.

Revenue Minister Krishna Byre Gowda

ಭಾರತಿ ಶೆಟ್ಟಿ ಅವರ ಮಾತಿಗೆ ತೀವ್ರ ಅಸಮಾಧಾನ ಹೊರಹಾಕಿದ ಸಚಿವ ಕೃಷ್ಣಭೈರೇಗೌಡ, “ಕೇಂದ್ರ ಬಿಜೆಪಿ ಸರ್ಕಾರ ಕಳೆದ ವರ್ಷ 2 ಲಕ್ಷ ಕೋಟಿ ಕಾರ್ಪೊರೇಟ್ ಸಾಲ ಮನ್ನಾ ಮಾಡಿದೆ. ಶ್ರೀಮಂತ ತೆರಿಗೆಯನ್ನು ಶೇ.30 ರಿಂದ ಶೇ.22ಕ್ಕೆ ಇಳಿಸಲಾಗಿದೆ. ನಿಮ್ಮ ಪ್ರಕಾರ ಶ್ರೀಮಂತರಿಗೆ ಕೊಟ್ಟರೆ ಆರ್ಥಿಕ ಅಭಿವೃದ್ಧಿ, ಬಡವರಿಗೆ ಕೊಟ್ಟರೆ ಪುಕ್ಸಟ್ಟೆ ಎಂದು ಹೀಯಾಳಿಸುತ್ತೀರ..? ಶ್ರೀಮಂತರ ಬಗ್ಗೆ ಇರುವ ಬಿಜೆಪಿ ನಾಯಕರ ಮಮಕಾರ ಬಡವರ ಮೇಲೆ ಏಕಿಲ್ಲ..? ಬಡವರೆಂದರೆ ನಿಮಗೆ ಏಕಿಷ್ಟು ಅಸಡ್ಡೆ..?” ಎಂದು ಕಿಡಿಕಾರಿದ್ದಾರೆ.

ಈ ವೇಳೆ ಮದ್ಯಪ್ರವೇಶಿಸಿದ ಸಭಾಪತಿ ತೇಜಸ್ವಿನಿ ಗೌಡ ಜನಪರ ಕಾರ್ಯಕ್ರಮದ ಬಗ್ಗೆ ಹೀಗೆ ಹೀಯಾಳಿಸುವುದು ಸರಿಯಲ್ಲ. ಸದನದಲ್ಲಿ ಸದಸ್ಯರು ಪುಕ್ಸಟ್ಟೆ ಪದ ಪ್ರಯೋಗ ಮಾಡುವ ಅಗತ್ಯ ಇಲ್ಲ ಎಂದು ವಿಪಕ್ಷ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯವನ್ನು ಲೂಟಿ ಮಾಡುವುದು, ಜನರಿಗೆ ಅನ್ಯಾಯ, ಕಲಾಪದ ಸಮಯ ಹಾಳುವುದೇ ಬಿಜೆಪಿ ಕೆಲಸ : ಸಚಿವ ಕೃಷ್ಣಭೈರೇಗೌಡರಾಜ್ಯವನ್ನು ಲೂಟಿ ಮಾಡುವುದು, ಜನರಿಗೆ ಅನ್ಯಾಯ, ಕಲಾಪದ ಸಮಯ ಹಾಳುವುದೇ ಬಿಜೆಪಿ ಕೆಲಸ : ಸಚಿವ ಕೃಷ್ಣಭೈರೇಗೌಡ

ಶಕ್ತಿ ಯೋಜನೆಯಿಂದ ಮೌನಕ್ರಾಂತಿ

ಸರ್ಕಾರದ ಶಕ್ತಿ ಯೋಜನೆಯಿಂದ ಸಾರಿಗೆ ನಿಯಮಗಳಲ್ಲಿ ಮೌನಕ್ರಾಂತಿ ನಡೆಯುತ್ತಿದೆ ಎಂದು ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಸದಸ್ಯ ಡಿಎಸ್ ಅರುಣ್ ಸರ್ಕಾರದ ಶಕ್ತಿ ಯೋಜನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಮತ್ತಷ್ಟು ನಷ್ಟ ಎದುರಿಸಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Revenue Minister Krishna Byre Gowda

ಡಿಎಸ್ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣಭೈರೇಗೌಡ, “ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಲಾಭದ ಕಡೆಗೆ ಮುಖ ಮಾಡಿವೆ. ಇಷ್ಟು ದಿನಗಳಿಂದ ನಷ್ಟದಲ್ಲಿದ್ದ ನಿಗಮಗಳು ಈಗ ಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಬಲದ ಮೇಲೆ ನಿಲ್ಲುವಂತಾಗಿದೆ. ಶಕ್ತಿ ಯೋಜನೆ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಶೇ.35 ರಷ್ಟು ಹೆಚ್ಚಾಗಿದೆ. ಈ ಪೈಕಿ ಶೇ.15 ರಷ್ಟು ಪುರುಷರಿದ್ದಾರೆ” ಎಂದಿದ್ದಾರೆ.

“ಈ ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ವೃದ್ದಿಯಾಗಿದೆ. ಉದ್ಯೋಗ ಸೃಷ್ಟಿಯಾಗಿದ್ದು ಆರ್ಥಿಕ ಅಭಿವೃದ್ಧಿಗೂ ಕಾರಣವಾಗಿದೆ. ಈ ಬಗ್ಗೆ ಹಲವಾರು ಪತ್ರಿಕೆಗಳು ದಾಖಲೆ ಸಮೇತ ವರದಿ ಮಾಡಿವೆ. ಈ ಯೋಜನೆಯಿಂದ ಎಲ್ಲ ಸಾರಿಗೆ ನಿಗಮಗಳೂ ಲಾಭದಲ್ಲಿವೆ. ನಿಗಮಗಳು ಹೊಸ ಬಸ್ ಖರೀದಿಗೆ ಮುಂದಾಗಿವೆ. ಹೀಗಾಗಿ ಸರ್ಕಾರಿ ಸಾರಿಗೆ ಜಾಲ ಮತ್ತಷ್ಟು ಹಳ್ಳಿಗಳಿಗೆ ವಿಸ್ತರಿಸಲಿದೆ” ಎಂದು ತಿಳಿಸಿದ್ದಾರೆ.

” ಈ ಯೋಜನೆಯಿಂದ ಹೆಚ್ಚಿನ ಸಂಖ್ಯೆಯ ಬಡವರು ಮತ್ತು ಶ್ರಮಿಕ ವರ್ಗ ಇದರ ಉಪಯೋಗ ಪಡೆಯಲಿವೆ. ನಗರದಲ್ಲಿ ಹೆಚ್ಚುತ್ತಿರುವ ಸಾರಿಗೆ ದಟ್ಟಣೆಯ ನಿಯಂತ್ರಣಕ್ಕೂ ಸಾರ್ವಜನಿಕ ಸಾರಿಗೆಯ ಅಭಿವೃದ್ಧಿಯೊಂದೇ ಪರಿಹಾರ” ಎಂದು ಸರ್ಕಾರದ ಯೋಜನೆಯನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ಸಮರ್ಥಿಸಿಕೊಂಡಿದ್ದಾರೆ.

English summary

Revenue Minister Krishna Byre Gowda spark against the karnataka BJP over criticizing congress guarantees . know more.

Story first published: Wednesday, July 12, 2023, 21:55 [IST]

Source link