ಶ್ರೀಚಾಮರಾಜೇಶ್ವರ ಮಹಾರಥೋತ್ಸವ, ಕಾರ್ಯಕ್ರಮಗಳು, ದಿನಾಂಕಗಳ ವಿವರ ತಿಳಿಯಿರಿ | Sri Chamarajeshwara Rathotsava, Know programs, dates details

Chamarajanagar

lekhaka-Lavakumar B M

|

Google Oneindia Kannada News

ಚಾಮರಾಜನಗರ, ಜೂನ್‌, 28: ಕಳೆದ ಐದು ವರ್ಷಗಳ ನಿಲುಗಡೆಯ ನಂತರ ಹೊಸರಥದಲ್ಲಿ ಎರಡನೇ ಬಾರಿಗೆ ಶ್ರೀ ಚಾಮರಾಜೇಶ್ವರ ಕೆಂಪನಂಜಾಂಬದೇವಿ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವ ನಡೆಯುತ್ತಿದೆ. ಆಷಾಢ ಮಾಸದಲ್ಲಿ ನಡೆಯುವ ಈ ವಿಶೇಷ ರಥೋತ್ಸವಕ್ಕೆ ಇಡೀ ಚಾಮರಾಜನಗರ ಸಡಗರ, ಸಂಭ್ರಮದೊಂದಿಗೆ ಸಜ್ಜಾಗುತ್ತಿದ್ದರೆ, ಸುತ್ತಮುತ್ತಲಿನ ನವ ದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದಾರೆ.

ಆಷಾಢ ತಿಂಗಳಿನಲ್ಲಿ ನಡೆಯುವ ಚಾಮರಾಜೇಶ್ವರ ಸ್ವಾಮಿ ರಥೋತ್ಸವಕ್ಕೆ ಜಿಲ್ಲೆಯ ಭಕ್ತರು ಮಾತ್ರವಲ್ಲದೆ, ಹೊರಗಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ನವ ವಿವಾಹಿತರು ರಥಕ್ಕೆ ಬಾಳೆ ಹಣ್ಣು, ಧವನ ಎಸೆದು ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿಸುವುದಲ್ಲದೆ, ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ.

Sri Chamarajeshwara Rathotsava, Know programs, dates details

ಈ ಬಾರಿ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಜುಲೈ 3ರಂದು ನಡೆಯಲಿದ್ದು, ಜುಲೈ 7ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಇನ್ನು ಜುಲೈ 3ರಂದು ಸೋಮವಾರ ಮೂಲ, ಪೂರ್ವಾಷಾಢ ನಕ್ಷತ್ರದಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ಜರುಗಲಿದೆ.

Ganesh Chaturthi 2023: ಗಣೇಶ ಹಬ್ಬಕ್ಕೆ 156 ವಿಶೇಷ ರೈಲುಗಳ ಸಂಚಾರ, ಮಾರ್ಗಗಳು, ದಿನಾಂಕ, ಸಮಯದ ವಿವರ ತಿಳಿಯಿರಿGanesh Chaturthi 2023: ಗಣೇಶ ಹಬ್ಬಕ್ಕೆ 156 ವಿಶೇಷ ರೈಲುಗಳ ಸಂಚಾರ, ಮಾರ್ಗಗಳು, ದಿನಾಂಕ, ಸಮಯದ ವಿವರ ತಿಳಿಯಿರಿ

ಇದಕ್ಕೂ ಮುನ್ನ ರಥೋತ್ಸವದ ಸಂಬಂಧ ವಿವಿಧ ಧಾರ್ಮಿಕ ಕೈಂಕರ್ಯಗಳು ಜೂನ್ ಇಂದಿನಿಂದ ಆರಂಭವಾಗಲಿದ್ದು, ಚಂದ್ರಮಂಡಲಾರೋಹಣೋತ್ಸವವೂ ನಡೆಯಲಿದೆ. ನಂತರ ಜೂನ್‌ 29ರಂದು (ಗುರುವಾರ) ಅನಂತ ಪೀಠಾರೋಹಣೋತ್ಸವ, ಜೂನ್‌ 30ರಂದು ಪುಷ್ಪಮಂಟಪಾರೋಹಣೋತ್ಸವ, ಜುಲೈ 1ರಂದು ವೃಷಭಾರೋಹಣೋತ್ಸವ, ಜುಲೈ 2ರಂದು ವಸಂತೋತ್ಸವ ಪೂರ್ವಕ ಗಜಾವಾಹನೋತ್ಸವ ನಡೆಯಲಿದೆ.

ಜುಲೈ 3ರಂದು ಚಾಮರಾಜೇಶ್ವರ ಮಹಾರಥೋತ್ಸವ

ಜುಲೈ 3ರಂದು ಚಾಮರಾಜೇಶ್ವರಸ್ವಾಮಿಯ ಮಹಾರಥೋತ್ಸವ ನಡೆಯಲಿದ್ದು, ಇದಾದ ಬಳಿಕ ಜುಲೈ 4ರಂದು ಮೃಗಯಾತ್ರಾ ಪೂರ್ವಕ ಅಶ್ವಾರೋಹಣ ನಂತರ ಮಹಾಭೂತಾರೋಹಣ, ದೇವಿ ಪ್ರಣಯ ಕಲಹ ಸಧಾನೋತ್ಸವ, ಜುಲೈ 5ರಂದು ಹಗಲುಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ, ಧ್ವಜಾವರೋಹಣ, ಮೌನಬಲಿ ನಡೆಯಲುದೆ.

ಇನ್ನು ಜುಲೈ 6ರಂದು ಪುಷ್ಪಯೋಗ ಪೂರ್ವಕ ಕೈಲಾಸಯಾನಾರೋಹಣೋತ್ಸವ ಹಾಗೂ ಜುಲೈ 7ರಂದು ಮಹಾಸಂಪ್ರೋಕ್ಷಣಾ ಪೂರ್ವಕ ನಂದಿವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಇದಕ್ಕೆ ಬೇಕಾದ ತಯಾರಿಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳುತ್ತಿದೆ. ಆಷಾಢದ ವಿಶೇಷವಾಗಿರುವ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ನಡೆಯುವ ದೇವಸ್ಥಾನದ ಬಗ್ಗೆಯೂ ಹೇಳಬೇಕಾಗುತ್ತದೆ. ಇವತ್ತಿನ ಚಾಮರಾಜನಗರವನ್ನು ಹಿಂದೆ ಅರಿಕುಟಾರ ಎಂದು ಕರೆಯಲಾಗುತ್ತಿತ್ತು. ನಂತರ ಇದು ಚಾಮರಾಜನಗರ ಆಯಿತೆಂದು ಹೇಳಲಾಗುತ್ತಿದೆ.

ಈಗಿನ ಚಾಮರಾಜನಗರ ಆಗಿನ ಅರಿಕುಟಾರದಲ್ಲಿ 1774ರಲ್ಲಿ ಜನಿಸಿದ ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಂದೆ ಚಾಮರಾಜ ಒಡೆಯರ್ ಸ್ಮರಣಾರ್ಥ 1826ರಲ್ಲಿ ಚಾಮರಾಜೇಶ್ವರ ಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದರು. ದೇಗುಲದಲ್ಲಿ ಶಿವಲಿಂಗವನ್ನು ಶೃಂಗೇರಿಯಿಂದ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಜೊತೆಯಲ್ಲಿಯೇ ತಾಯಿಯ ನೆನಪಿಗಾಗಿ ಕೆಂಪನಂಜಾಂಬ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಎರಡು ಮುಖಮಂಟಪದ ದೇಗುಲ

ದೇವಾಲಯವು 5 ಹಂತದ ರಾಜಗೋಪುರ ಹೊಂದಿದ್ದು, ನೆಲಮಟ್ಟದಿಂದ ಎಪ್ಪತ್ತು ಅಡಿಯಷ್ಟು ಎತ್ತರವಿದೆ. ರಾಜಗೋಪುರಕ್ಕೆ ಕಿರೀಟಪ್ರಾಯದಂತೆ ಐದು ಹಿತ್ತಾಳೆಯ ಕಳಸಗಳಿವೆ. ಇನ್ನು ದೇವಾಲಯದ ಸುತ್ತಲೂ ವಿವಿಧ ದೇವಾನು ದೇವತೆಗಳ ಕೆತ್ತನೆಗಳು ಕಣ್ಮನ ಸೆಳೆಯುತ್ತವೆ. ಚಾಮರಾಜೇಶ್ವರ ದೇಗುಲವನ್ನು ಪ್ರವೇಶಿಸುವ ಪ್ರವೇಶ ದ್ವಾರದ ಎಡಭಾಗದಲ್ಲಿ ಗಣೇಶ ಮತ್ತು ಬಲಭಾಗದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಎರಡು ಮುಖಮಂಟಪದ ದೇಗುಲವು ಪ್ರಾಂಗಣ ಮತ್ತು ನಂದಿ ಮಂಟಪ, ಗರ್ಭಗುಡಿಯನ್ನು ಹೊಂದಿದೆ.

1836ರಲ್ಲಿ ಆರಂಭವಾದ ಆಷಾಢ ರಥೋತ್ಸವ

ದೇವಾಲಯದ ನಿರ್ಮಾಣದ ಬಳಿಕ 1836ರಲ್ಲಿ ಆಷಾಢ ಹುಣ್ಣಿಮೆಯಂದು ಮೊದಲ ಬಾರಿಗೆ ರಥೋತ್ಸವವನ್ನು ನಡೆಸಲಾಯಿತು. ಅಲ್ಲಿಂದ ಪ್ರತಿವರ್ಷ ಆಷಾಢದಲ್ಲಿ ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ 2017ರಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ದೇವಸ್ಥಾನದ ಆವರಣದಲ್ಲಿ ನಿಲ್ಲಿಸಲಾಗಿದ್ದ 181 ವರ್ಷದಷ್ಟು ಹಳೆಯ ಮರದ ರಥಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿಬಿಟ್ಟಿದ್ದನು. ಪರಿಣಾಮ ರಥ ಭಾಗಶಃ ಸುಟ್ಟು ಹೋಗಿತ್ತು.

ನಂತರ ಸುಟ್ಟ ರಥವನ್ನು ದುರಸ್ತಿ ಮಾಡಿ ರಥೋತ್ಸವ ನಡೆಸುವುದು ಶುಭವಲ್ಲ ಎಂದು ಹೊಸ ರಥದ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿತ್ತು. ರಥವಿಲ್ಲದ ಕಾರಣ 2017 ರಿಂದ 2021 ರಥೋತ್ಸವ ನಡೆದಿರಲಿಲ್ಲ. ಆದರೆ ನೂತನ ರಥ ಸಿದ್ಧಗೊಂಡ ಕಾರಣ 2022ರಿಂದ ಮತ್ತೆ ರಥೋತ್ಸವ ಆರಂಭಗೊಂಡಿದೆ. ಹೀಗಾಗಿ ಮತ್ತೆ ರಥೋತ್ಸವದ ಸಂಭ್ರಮ ಮನೆ ಮಾಡಿದೆ.

English summary

Sri Chamarajeshwara Rathotsava in Chamarajanagar, here see details of Jatra dates and Chamarajeshwara temple history

Story first published: Wednesday, June 28, 2023, 16:32 [IST]

Source link