Karnataka
oi-Gururaj S
ಬೆಂಗಳೂರು, ಜುಲೈ 27; ತಮ್ಮನ್ನು ಸೆನೆಗಲ್‌ನಿಂದ ಹಸ್ತಾಂತರಿಸುವ ಸಂದರ್ಭದಲ್ಲಿ ಸೆನೆಗಲ್ ನ್ಯಾಯಾಲಯ ಉಲ್ಲೇಖಿಸಿರುವ ಪ್ರಕರಣಗಳಲ್ಲಿ ಮಾತ್ರ ಶೀಘ್ರ ವಿಚಾರಣೆಗೊಳಪಡಿಸಿ ವಿಲೇವಾರಿ ಮಾಡುವಂತೆ ಕೋರಿ ಭೂಗತ ಪಾತಕಿ ರವಿ ಪೂಜಾರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸದ್ಯ ಮಹಾರಾಷ್ಟ್ರದ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಅಲಿಯಾಸ್ ರವಿಪ್ರಕಾಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ಅಲ್ಲದೆ, ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸದ ಪ್ರಕರಣಗಳ ವಿಚಾರಣೆ ಒಳಪಡಿಸಬಹುದೇ? ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿತು.
ಕಾಯಿದೆ ಉಲ್ಲಂಘನೆ: ಅರ್ಜಿದಾರರ ಪರ ವಕೀಲರು, ಹಸ್ತಾಂತರ ಕಾಯಿದೆ ಸೆಕ್ಷನ್ 21ರ ಪ್ರಕಾರ, ವಿದೇಶದಿಂದ ಹಸ್ತಾಂತರಿಸಲ್ಪಟ್ಟ ವ್ಯಕ್ತಿಯನ್ನು ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಿರುವ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದು. ಆದರೆ, ಇತರೆ ಪ್ರಕರಣಗಳ ವಿಚಾರಣೆಗೆ ಅವಕಾಶವಿಲ್ಲ.
ಹಸ್ತಾಂತರ ಆದೇಶದಲ್ಲಿ ನಮೂದಿಸಿರುವ ಪ್ರಕರಣಗಳು ಹೊರತುಪಡಿಸಿ ಪೂಜಾರಿ ಅವರನ್ನು ವಿಚಾರಣೆಗೆ ಒಳಪಡಿಸುವುದು ಮತ್ತು ವಿಚಾರಣೆ ನಡೆಸುವುದು ಹಸ್ತಾಂತರ ಕಾಯಿದೆ ಸೆಕ್ಷನ್ 21 ಅನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಹಸ್ತಾಂತರ ಆದೇಶದಲ್ಲಿ 37 ಪ್ರಕರಣಗಳ ವಿಚಾರಣೆಗೆ ಅರ್ಜಿದಾರರು ಬೇಕಾಗಿತ್ತು ಎಂಬುದಾಗಿ ಹೇಳಲಾಗಿದೆ. ಆದರೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಲ್ಲಿ 107 ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಆದರೂ ಹಸ್ತಾಂತರ ಆದೇಶದಲ್ಲಿನ ಪ್ರಕರಣಗಳ ವಿಚಾರಣೆ ನಡೆಸದಿರುವುದು ಹಸ್ತಾಂತರ ಮಾಡಿರುವ ನ್ಯಾಯಾಲಯ ಆದೇಶ ಉಲ್ಲಂಘನೆಯಾಗಲಿದೆ ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ರವಿ ಪೂಜಾರಿ ಅವರು ಕಳೆದ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರೂ, ಹಸ್ತಾಂತರಕ್ಕೆ ಕಾರಣವಾಗಿರುವ ಪ್ರಕರಣಗಳ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲು ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿಯಲ್ಲಿ ಮುಂದುವರೆದಲ್ಲಿ ಅವರ ಹಕ್ಕುಗಳಿಗೆ ಧಕ್ಕೆಯಾಗಲಿದ್ದು, ಸೆರೆವಾಸದಿಂದ ಹೊರ ಬರುವುದಕ್ಕೆ ಯಾವುದೇ ಭರವಸೆ ಇಲ್ಲದಂತಾಗಲಿದೆ. ಜತೆಗೆ, ಮಾನಸಿಕ ನೋವು ಅವಮಾನಗಳನ್ನು ಅನುಭವಿಸುವಂತಾಗಲಿದ್ದು, ಮಾನಸಿಕ ಕಿರುಕುಳಕ್ಕೆ ಒಳಗಾಗಲಿದ್ದಾರೆ ಎಂದರು.
ಪ್ರಕರಣದ ಹಿನ್ನೆಲೆ: ನಗರದ 1ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆನೆಗಲ್ ನಿಂದ ಭಾರತಕ್ಕೆ ಹಸ್ತಾಂತರಿಸಿದ್ದರು. ಆ ಬಳಿಕ ತಿಲಕ್ ನಗರ ಪೊಲೀಸ್ ಸ್ಟೇಷನ್ ಸೇರಿದಂತೆ ಇತರೆ ಠಾಣೆಗಳಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದರು. ಅದಾದ ಬಳಿಕ ಆರೋಪಿಯ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣಗಳಲ್ಲಿ ಕೆಲವು ವಿಚಾರಣೆ ಪ್ರಾರಂಭವಾಗಿದ್ದು, ಆದೇಶಗಳು ಹೊರ ಬಂದಿವೆ. ಇನ್ನೂ ಹಲವು ಪ್ರಕರಣಗಳು ವಿಚಾರಣೆಯಿಂದ ಬಾಕಿ ಉಳಿದಿವೆ.
ಒಂದು ದೇಶದಿಂದ ಒಬ್ಬ ವ್ಯಕ್ತಿಯನ್ನು ಹಸ್ತಾಂತರ ಮಾಡುವುದು ಎರಡೂ ರಾಷ್ಟ್ರಗಳ ನಡುವಿನ ಪರಸ್ಪರ ನಂಬಿಕೆಯನ್ನು ಆಧರಿಸುತ್ತದೆ. ಅಲ್ಲದೆ, ಅರ್ಜಿದಾರರನ್ನು ಹಸ್ತಾಂತರ ಒಪ್ಪಂದ ಭಾಗವಾಗಿರುವ ಪ್ರಕರಣಗಳ ವಿಚಾರಣೆ ನಡೆಸಿ ತನಿಖೆ ಮತ್ತು ವಿಚಾರಣೆಗೆ ಪ್ರೋತ್ಸಾಹಿಸದಿರುವುದು ಹಸ್ತಾಂತರ ಮಾಡಿದ ದೇಶದ ಭರವಸೆ ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ, ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖಾ ಹಂತದಲ್ಲಿವೆ. ಥಾಣೆಯಲ್ಲಿ ದಾಖಲಾಗಿರುವ 6 ಪ್ರಕರಣಗಳು ತನಿಖೆ ಆರಂಭವಾಗಿಲ್ಲ. ಅಲ್ಲದೆ, ಅರ್ಜಿದಾರರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಕಳೆದ ಮೂರು ವರ್ಷಗಳಿಂದ ಪೊಲೀಸರು ವಶಕ್ಕೆ ಕೇಳಿ ನ್ಯಾಯಾಲಯಕ್ಕೆ ಅರ್ಜಿ ಸಲಿಸಿಲ್ಲ. ಹಾಗಾಗಿ ರವಿ ಪೂಜಾರಿ ವಿರುದ್ಧ ದಾಖಲಾಗಿರುವ ಇತರೆ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ ಶೀಘ್ರದಲ್ಲಿ ವಿಲೇವಾರಿ ಮಾಡಬೇಕು ಎಂದು ಪ್ರತಿವಾದಿಗಳಿಗೆ ಸೂಚನೆ ನೀಡಬೇಕು ಎಂದು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
English summary
Underworld don Ravi Pujari moved Karnataka high court for early hearing of cases. Court issue of notice to the union and Karnataka government.
Story first published: Thursday, July 27, 2023, 11:25 [IST]