Shivamogga
oi-Naveen Kumar N
ಶಿವಮೊಗ್ಗ, ಜೂನ್ 25: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 42 ಸಾವಿರ ರೂಪಾಯಿ ಮೌಲ್ಯದ ಒಣಗಿರುವ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ವಿದ್ಯಾರ್ಥಿಗಳನ್ನು ತಮಿಳುನಾಡಿನ ಕೃಷ್ಣಗಿರಿಯ ಜಕ್ಕಪ್ಪನಗರದ ನಿವಾಸಿ ಮತ್ತು ಪುರ್ಲೆಯ ಶಿವಗಂಗಾ ಲೇಔಟ್ ನಿವಾಸಿ ವಿಘ್ನರಾಜ್ (28); ಕೇರಳದ ಇಡುಕ್ಕಿ ಜಿಲ್ಲೆಯವರಾದ ವಿನೋದ್ ಕುಮಾರ್ (27), ತಮಿಳುನಾಡಿನ ಧರ್ಮಪುರಿಯ ಪಾಂಡಿದೊರೈ (27), ವಿಜಯಪುರ ಮೂಲದ ಅಬ್ದುಲ್ ಖಯಾಮ್ ಮತ್ತು ವಿಜಯನಗರ ಜಿಲ್ಲೆಯ ಕೊಟ್ಟೂರಿನ ಅರ್ಪಿತಾ (24) ಎಂದು ಗುರುತಿಸಲಾಗಿದೆ.
ಐದೂ ಜನ ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಭಾವಿ ವೈದ್ಯರೇ ಗಾಂಜಾ ಮಾರಾಟಕ್ಕೆ ಇಳಿದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಎರಡು ಪ್ರತ್ಯೇಕ ಪ್ರಕರಣ
ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡವು ಹಳೇ ಗುರುಪುರದ ಮನೆಯೊಂದರಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಕಂಡು ಶುಕ್ರವಾರ ದಾಳಿ ನಡೆಸಿ ಅರ್ಪಿತಾ ಮತ್ತು ಅಬ್ದುಲ್ ಖಯಾಮ್ ಅವರನ್ನು ಬಂಧಿಸಿದೆ ಎಂದು ಎಸ್ಪಿ ಹೇಳಿದರು. ಇವರಿಂದ 20 ಸಾವಿರ ಮೌಲ್ಯದ ಒಣ ಗಾಂಜಾವನ್ನು ತಂಡ ವಶಪಡಿಸಿಕೊಂಡಿದೆ.
ವಿಚಾರಣೆ ವೇಳೆ ಅರ್ಪಿತಾ ಮತ್ತು ಖಯಾಮ್ ಅವರು ಇನ್ನುಳಿದ ಮೂವರ ಹೆಸರುಗಳನ್ನು ಬಹಿರಂಗಪಡಿಸಿದ ನಂತರ ಪೊಲೀಸ್ ತಂಡವು ಶಿವಗಂಗಾ ಲೇಔಟ್ ಮನೆಯಿಂದ ಉಳಿದ ಮೂವರನ್ನು ಬಂಧಿಸಿತು.
ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ದ ಖತರ್ನಾಕ್‌ಗಳು
ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ವಿಘ್ನರಾಜ್ ತನ್ನ ಮನೆಯ ಕೋಣೆಯಲ್ಲೇ ಗಾಂಜಾ ಬೆಳೆಯುತ್ತಿದ್ದ, ಗಾಂಜಾ ಬೆಳೆಯಲು ಸೂರ್ಯನ ಬೆಳಕನ್ನು ಕೃತಕವಾಗಿ ಸೃಷ್ಠಿಸಿದ್ದ ಇದಕ್ಕಾಗಿ ವಿಶೇಷ ಬಲ್ಬ್‌ಗಳನ್ನು ಬಳಸುತ್ತಿದ್ದ ಎಂದು ಹೇಳಿದ್ದಾರೆ. ಅಂತರ್ಜಾಲದ ಮೂಲಕ ಗಾಂಜಾ ಬೆಳೆಯುವುದು ಹೇಗೆ ಎನ್ನುವ ಮಾಹಿತಿ ಸಂಗ್ರಹಿಸಿ, ಆನ್‌ಲೈನ್‌ನಲ್ಲಿ ಬೀಜಗಳನ್ನು ಖರೀದಿಸಿದ್ದ ಎಂದು ಹೇಳಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ವಿನೋದ್ ಮತ್ತು ಪಾಂಡಿದೊರೈ ಅವರಿಂದ ಗಾಂಜಾ ಖರೀದಿಸುತ್ತಿದ್ದರು.
ಮೂವರು ಬಂಧಿತರಿಂದ 5,800 ಮೌಲ್ಯದ ಒಣ ಗಾಂಜಾ, 30,000 ಮೌಲ್ಯದ 1.53 ಕೆಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಎಣ್ಣೆ, ಗಾಂಜಾ ಪೌಡರ್, ಎಲೆಕ್ಟ್ರಾನಿಕ್ ತೂಕದ ಯಂತ್ರ, ಎಕ್ಸಾಸ್ಟ್ ಫ್ಯಾನ್, ಆರು ಟೇಬಲ್ ಫ್ಯಾನ್, ರೋಲಿಂಗ್ ಪೇಪರ್‌ಗಳು, ಎರಡು ಸ್ಟೇಬಿಲೈಸರ್, ಎಲ್‌ಇಡಿ ಲೈಟ್‌ಗಳು ಮತ್ತು 19 ಸಾವಿರ ರೂಪಾಯಿ ನಗದನ್ನು ತಂಡ ವಶಪಡಿಸಿಕೊಂಡಿದೆ.
ಬಂಧಿತ ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಿಥುನ್ ಕುಮಾರ್ ಹೇಳಿದ್ದಾರೆ.
English summary
Shivamogga Police Arrest Five Medical Students for Ganja Cultivation and Peddling; Seize Ganja Worth Rs 42,000. All the five are final-year MBBS students of a private medical college in the city, according to SP G K Mithun Kumar.
Story first published: Sunday, June 25, 2023, 23:44 [IST]