Raichur
oi-Umapathi Ramoji
ರಾಯಚೂರು, ಜೂನ್ 24: ‘ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ವಾಹನಗಳ ಚಾಲಕರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ ವಾಹನಗಳ ಎದುರೇ ಪ್ರತಿಭಟನೆ ನಡೆಸಿದ್ದಾರೆ.
ಜಾಲಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಶಾಸಕಿ ಕರೆಮ್ಮ ನಾಯಕ ಅವರು ದೇವದುರ್ಗಕ್ಕೆ ಬರುತ್ತಿದ್ದರು. ಈ ವೇಳೆ ಮರಳು ಸಾಗಣೆ ವಾಹನಗಳು ಶಾಸಕಿ ಅವರ ವಾಹನಕ್ಕೆ ದಾರಿ ಬಿಡಲಿಲ್ಲ ಎನ್ನಲಾಗಿದೆ.
ಗನ್‌ಮ್ಯಾನ್ ಜೊತೆಗೆ ವಾಹನದಿಂದ ಹೊರಗೆ ಬಂದ ಶಾಸಕಿ, ದಾರಿ ಬಿಡುವಂತೆ ಕೇಳಿದ್ದಾರೆ. ಈ ವೇಳೆ, ‘ನೀವೇ ದಾರಿ ಬಿಡಿ, ಇಲ್ಲದಿದ್ದರೆ ನಿಮ್ಮ ಮೇಲೆಯೇ ಲಾರಿ ಹತ್ತಿಸಿಕೊಂಡು ಹೋಗುತ್ತೇವೆ ಎಂದು ಲಾರಿ ಚಾಲಕರು ನನಗೆ ಬೆದರಿಕೆ ಹಾಕಿದರು’ ಎಂದು ಕರೆಮ್ಮ ಆರೋಪಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಿಂದ ಲೈವ್ ನೀಡಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ತಿಬೆಳೆಗೆ ಕೆಂಪು ರೋಗ; ರಾಯಚೂರು ಕೃಷಿ ವಿವಿ ತಜ್ಞರ ಪರಿಶೀಲನೆ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ, ‘ರಕ್ಷಣೆ ನೀಡುವಂತೆ ಜಾಲಹಳ್ಳಿ ಹಾಗೂ ದೇವದುರ್ಗ ಪೊಲೀಸರನ್ನು ಕೇಳಿದಾಗ, ‘ನಮ್ಮ ವ್ಯಾಪ್ತಿಗೆ ಬರೋದಿಲ್ಲ’ ಎಂದು ಹೇಳಿದರು. ನಾನು ಗೆದ್ದ ನಂತರ ಇದು ನನ್ನ ಮೇಲೆ ನಡೆಯುತ್ತಿರುವ ನಾಲ್ಕನೇ ಹಲ್ಲೆ ಪ್ರಯತ್ನ. ಜನ ಆಶೀರ್ವಾದ ಮಾಡಿದ್ದಾರೆ. ನಾನು ಸಾಯೋದಕ್ಕೂ ಸಿದ್ಧ’ ಎಂದರು.
‘ಮಾಜಿ ಶಾಸಕರ ಬೆಂಬಲದೊಂದಿಗೆ ಪಿಐ ಹೊಸಕೆರಪ್ಪ ಕೋಳೂರು ಶಾಮೀಲಾಗಿ, ನನ್ನ ಕೊಲೆಗೆ ಅಕ್ರಮ ಮರಳು ದಂಧೆಕೋರರಿಗೆ ಸಹಕರಿಸುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ದೇವದುರ್ಗ ತಹಶೀಲ್ದಾರ್ ಕೆ.ವೈ. ಬಿದರಿ ಕೂಡ ನಿಂತಿದ್ದಾರೆ. ಕಳೆದ ವಾರ ನಿಲವಂಜಿ ಗ್ರಾಮದಲ್ಲಿ ಛತ್ತೀಸಗಡ ಕಾರ್ಮಿಕರ ಸಾವಿಗೆ ನೇರವಾಗಿ ಇವರೇ ಕಾರಣ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನವಾಗಿಲ್ಲ.
ನಾನು ಹೆದರುವುದಿಲ್ಲ. ಅಹೋರಾತ್ರಿ ಇಲ್ಲೇ ಪ್ರತಿಭಟಿಸುತ್ತೇನೆ’ ಎಂದು ತಿಳಿಸಿದರು. ಶಾಸಕಿ ಕರೆಮ್ಮ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿ ಕೊಟ್ಟಿದ್ದೇವೆ. ಅವರ ದೂರನ್ನು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಎಸ್‌ಪಿ ಬಿ.ನಿಖಿಲ್ ಹೇಳಿದ್ದಾರೆ.
English summary
Devadurga MLA Karemma Nayaka Conducts Raid On Illegal Sand Mining Area. Know more
Story first published: Saturday, June 24, 2023, 16:32 [IST]