ಶಾಂತಿ ಮಾತುಕತೆಗೆ ಬೇಡ ಅಂತಾ ಹೇಳಿಲ್ಲ, ಹೇಳೋದು ಇಲ್ಲ: ಪುಟಿನ್! | Russian president hints about peace talks with Ukraine

International

oi-Malathesha M

|

Google Oneindia Kannada News

ಮಾಸ್ಕೋ: ಅಂತೂ ಉಕ್ರೇನ್ ಯುದ್ಧದ ವಿಚಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಯುದ್ಧ ನಿಲ್ಲಬೇಕು, ಲಕ್ಷಾಂತರ ಜನರ ಪ್ರಾಣ ಉಳಿಯಬೇಕೆಂಬುದೇ ಜಗತ್ತಿನ ಆಶಯ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷರು, ನಾವು ಎಂದಿಗೂ ಶಾಂತಿ ಮಾತುಕತೆ ಬೇಡ ಎಂದಿಲ್ಲ. ಆದರೆ ಉಕ್ರೇನ್ ತನ್ನ ಹಠ ಬಿಟ್ಟು ಮುಂದೆ ಬರಲಿ ಎಂದಿದ್ದಾರೆ. ಅಲ್ಲದೆ ಇನ್ನೂ ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ ಪುಟಿನ್.

ಉಕ್ರೇನ್ & ರಷ್ಯಾ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 500ಕ್ಕೂ ಹೆಚ್ಚು ದಿನಗಳೇ ಕಳೆದಿವೆ. ಪರಿಸ್ಥಿತಿ ಹೀಗಿದ್ದಾಗ ಎರಡೂ ದೇಶಗಳ ನಡುವೆ ತಿಕ್ಕಾಟ ನಿಲ್ಲುತ್ತಿಲ್ಲ. ಹೀಗಾಗಿ ಯುದ್ಧ ನಿಲ್ಲಿಸಲು ಇಡೀ ಜಗತ್ತೇ ಪ್ರಯತ್ನ ಮುಂದುವರಿಸಿದೆ. ಆಫ್ರಿಕಾ ನಾಯಕರ ತಂಡ ಇದೇ ರೀತಿ ಪುಟಿನ್ ಜೊತೆ ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಚರ್ಚಿಸಿದೆ. ಆಗ ಪುಟಿನ್ ಸ್ಪಷ್ಟನೆ ನೀಡಿದ್ದು, ನಾವು ಎಂದೆಂದಿಗೂ ಶಾಂತಿ ಮಾತುಕತೆಗೆ ಸಿದ್ಧವಿಲ್ಲ ಎಂದು ಹೇಳಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಉಕ್ರೇನ್ ಪಡೆಗಳು ರಷ್ಯಾ ಮೇಲೆ ನಡೆಸುತ್ತಿರುವ ದಾಳಿ ಬಗ್ಗೆಯೂ ಪುಟಿನ್ ಪ್ರಸ್ತಾಪ ಮಾಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

Russian president hints about peace talks with Ukraine

ಯುದ್ಧ ನಿಲ್ಲಿಸುತ್ತಾರಾ ವ್ಲಾದಿಮಿರ್ ಪುಟಿನ್?

ರಷ್ಯಾ ಈಗ ಕೆಂಡವಾಗಿದ್ದು, ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಭೀಕರಗೊಳಿಸುತ್ತಿದೆ. ಹೀಗಾಗಿ ಉಕ್ರೇನ್ ಕೂಡ ಬೆಚ್ಚಿಬಿದ್ದಿದೆ. ಏನು ಮಾಡಬೇಕು ಎಂಬ ಸ್ಥಿತಿಯಲ್ಲಿದೆ ಉಕ್ರೇನ್. ಇದೇ ಸಂದರ್ಭದಲ್ಲಿ ಪುಟಿನ್ ಶಾಂತಿ ಮಾತುಕತೆ ಬಗ್ಗೆ ಹೇಳಿಕೆ ನೀಡಿದ್ದು, ಈ ಯುದ್ಧಕ್ಕೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆಯನ್ನ ಹುಟ್ಟುಹಾಕಿದೆ. ಪುಟಿನ್ ಯುದ್ಧ ನಿಲ್ಲಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಯುದ್ಧ ನಿಲ್ಲಿಸಲು ಸಿದ್ಧ ಎಂಬ ಮುನ್ಸೂಚನೆ ನೀಡಿದ್ದಾರೆ. ಆದರೆ ಇದೇ ವೇಳೆ ಶರತ್ತು ಕೂಡ ಹಾಕಿದ್ದು, ಬದಲಾದ ಸನ್ನಿವೇಶವನ್ನ ಉಕ್ರೇನ್‌ನ ಸೇನೆ ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಅಂದ್ರೆ ರಷ್ಯಾ ಈಗ ವಶಕ್ಕೆ ಪಡೆದಿರುವ ಜಾಗಗಳು ಉಕ್ರೇನ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

522ನೇ ದಿನಕ್ಕೆ ಕಾಲಿಟ್ಟ ಯುದ್ಧ

ಕೆಲವೇ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 522ನೇ ದಿನಕ್ಕೆ ಕಾಲಿಟ್ಟಿರುವ ಈ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆ ಇಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಹಾಗೂ ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ನೋಡ ನೋಡುತ್ತಲೇ ಯುದ್ಧ 522 ದಿನ ಪೂರೈಸಿದ್ದು, ಇನ್ನೇನು 2ನೇ ವರ್ಷವನ್ನೂ ಈ ಯುದ್ಧ ಪೂರೈಸುವ ಸಾಧ್ಯತೆ ದಟ್ಟವಾಗಿದೆ.

Russian president hints about peace talks with Ukraine

ಒಟ್ನಲ್ಲಿ ಅಂತೂ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಉಕ್ರೇನ್ ಮುಂದೆ ಬಂದು ಮಾತುಕತೆ ನಡೆಸಲಿ ಎಂಬುದೇ ರಷ್ಯಾ ಆಶಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನದಲ್ಲಿ ರಷ್ಯಾ & ಉಕ್ರೇನ್ ವಾರ್ ಇನ್ನಷ್ಟು ಭೀಕರವಾಗುವುದು ಪಕ್ಕಾ. ಹೀಗಾಗಿ ಈಗಲೇ ಯುದ್ಧಕ್ಕೆ ಬ್ರೇಕ್ ಹಾಕಲು ಜಗತ್ತು ಪ್ರಯತ್ನ ಮುಂದುವರಿಸಿದೆ. ಈ ಪರಿಸ್ಥಿತಿ ಉಕ್ರೇನ್ ಕೂಡ ಮನಸ್ಸು ಬದಲಾಯಿಸಿ, ರಷ್ಯಾ ಜೊತೆ ಕೂತು ಚರ್ಚೆ ನಡೆಸಬೇಕು ಎಂಬ ಸಲಹೆ ಕೇಳಿಬರುತ್ತಿದೆ. ಆದರೆ ಇದಕ್ಕೆ ಉಕ್ರೇನ್ ಸೇನೆ ಅಥವಾ ಉಕ್ರೇನ್ ಅಧ್ಯಕ್ಷ ಒಪ್ಪಿಕೊಳ್ತಾರಾ? ಇಲ್ಲ ಯುದ್ಧ ಹೀಗೆ ಮುಂದುವರಿಯುತ್ತಾ? ಕಾದು ನೋಡಬೇಕಿದೆ.

English summary

Russian president hints about peace talks with Ukraine:

Story first published: Sunday, July 30, 2023, 14:19 [IST]

Source link