Karnataka
oi-Gururaj S
ಬೆಂಗಳೂರು, ಜೂನ್ 22: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ಜೂನ್ 11ರಂದು ಯೋಜನೆಗೆ ಚಾಲನೆ ಸಿಕ್ಕಿದ್ದು, ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡುತ್ತಿದ್ದಾರೆ.
ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬೆಂಗಳೂರು ಕೇಂದ್ರ ಕಛೇರಿ ‘ಶಕ್ತಿ’ ಯೋಜನೆ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ‘ಶಕ್ತಿ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಎಂಬ ವಿಚಾರವನ್ನು ಸುತ್ತೋಲೆ ಒಳಗೊಂಡಿದೆ.
‘ಶಕ್ತಿ’ ವಿದ್ಯಾರ್ಥಿನಿಯರ ಶೂನ್ಯ ಟಿಕೆಟ್ ದಾಖಲೆಗೆ ಆದೇಶ
ಸಾಮಾನ್ಯ ಸ್ಥಾಯಿ ಆದೇಶ ದಿನಾಂಕ 07/06/2023 ಉಲ್ಲೇಖ ಮಾಡಲಾಗಿದೆ. ಕರ್ನಾಟಕ ಸರ್ಕಾರವು ರಾಜ್ಯದ ಸಮಸ್ತ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿರುವ ‘ಶಕ್ತಿ’ ಯೋಜನೆಯನ್ನು ದಿನಾಂಕ 11/06/2023 ರಿಂದ ಜಾರಿಗೆ ತಂದಿರುತ್ತದೆ. ‘ಶಕ್ತಿ’ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನಮ್ಮ ಚಾಲನಾ ಸಿಬ್ಬಂದಿಗಳ ಪರಿಶ್ರಮವು ಹೆಚ್ಚಿನ ಮಟ್ಟದಲ್ಲಿರುತ್ತದೆ ಎಂದು ಹೇಳಿದೆ.
ಹುಬ್ಬಳ್ಳಿ-ಧಾರವಾಡ; ಚಿಗರಿ ಬಸ್‌ನಲ್ಲಿ ಮಹಿಳೆಯರಿಗೆ ‘ಶಕ್ತಿ’ ಏಕಿಲ್ಲ?
ಸೌಜನ್ಯವಾಗಿ ನಡೆದುಕೊಳ್ಳಿ; ಆದರೆ ಕೆಲವೊಂದು ಅಹಿತಕರ ಘಟನೆಗಳು ಈ ಮಹತ್ವದ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುತ್ತಿದೆ. ಮುಂದುವರೆದು, ಉಲ್ಲೇಖಿತ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ಚಾಲನಾ ಸಿಬ್ಬಂದಿಗಳು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು ಹಾಗೂ ಈ ಬಗ್ಗೆ ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸುವುದು. ತಪ್ಪಿದಲ್ಲಿ, ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಲಾಗಿರುತ್ತದೆ.
ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಟವಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಅದಾಗ್ಯೂ ಸಹ ಮಹಿಳೆಯರು ಇರುವ ಬಸ್ ನಿಲ್ದಾಣ/ ಬಸ್ ನಿಲುಗಡೆ ಸ್ಥಳಗಳಲ್ಲಿ ಬಸ್ ನಿಲ್ಲಿಸದೇ ಇರುವುದು/ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪುಯಾಣಿಸುವ ಬಗ್ಗೆ ಅಪಹಾಸ್ಯ ಮಾಡುವುದು ಹಾಗೂ ಇನ್ನಿತರ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣ/ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿರುವುದನ್ನು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಸುತ್ತೋಲೆ ಹೇಳಿದೆ.
ಮಹಿಳೆಯರಿಗೆ ವಿತರಿಸುವ ಟಿಕೆಟ್ ಮೊತ್ತವನ್ನು ಸಾರಿಗೆ ಆದಾಯವೆಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮದ ಚಾಲಕ ಮತ್ತು ನಿರ್ವಾಹಕರುಗಳು ನಿಗದಿತ ಎಲ್ಲಾ ಬಸ್ ನಿಲ್ದಾಣ/ ಬಸ್ ನಿಲುಗಡ ಸ್ಥಳಗಳಲ್ಲಿ ನಿಲುಗಡೆ ನೀಡಿ, ಪ್ರಯಾಣಿಕರನ್ನು ವಿಶೇಷವಾಗಿ ಮಹಿಳೆಯರು/ ವಿದ್ಯಾರ್ಥಿಗಳನ್ನು ಹತ್ತಿಸಿ/ ಇಳಿಸುವುದು ಹಾಗೂ ಸದರಿ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು ಎಂದು ಸೂಚಿಸಲಾಗಿದೆ.
ಇನ್ನು ಮುಂದೆ ಮಹಿಳಾ ಪ್ರಯಾಣಿಕರೊಂದಿಗೆ ಯಾವುದೇ ರೀತಿಯಲ್ಲಿ ಅಗೌರವದಿಂದ ನಡೆದುಕೊಳ್ಳುವ ಪ್ರಕರಣಗಳು ವರದಿಯಾದಲ್ಲಿ, ಸಂಬಂಧಪಟ್ಟ ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದು. ಚಾಲನಾ ಸಿಬ್ಬಂದಿಗಳು ‘ಶಕ್ತಿ’ ಯೋಜನೆಯ ಪರಿಣಾಮಕಾರಿ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸುವ ಆಶಯವನ್ನು ನಿಗಮವು ಹೊಂದಿದೆ ಎಂದು ಹೇಳಿದೆ.
ಈ ಸುತ್ತೋಲೆಯಲ್ಲಿರುವ ಅಂಶಗಳ ಬಗ್ಗೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಅಗತ್ಯ ತಿಳುವಳಿಕೆಯನ್ನು ನೀಡುವುದು ಹಾಗೂ ಕೈಗೊಂಡ ಕ್ರಮದ ಬಗ್ಗೆ ಅನುಸರಣಾ ವರದಿಯನ್ನು ಸಲ್ಲಿಸುವುದು ಎಂದು ಎಲ್ಲಾ ನಿಗಮಗಳ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿನಿಯರಿಗೂ ಟಿಕೆಟ್; ‘ಶಕ್ತಿ’ ಯೋಜನೆಯಡಿ ರಾಜ್ಯದ ವಿದ್ಯಾರ್ಥಿನಿಯರಿಗೂ ಸಹ ಉಚಿತ ಪ್ರಯಾಣ ಸೌಲಭ್ಯ ವಿಸ್ತರಣೆ ಮಾಡಲಾಗಿದೆ. ಶಾಲಾ/ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಹಿಂದಿನ ವರ್ಷದ ಬಸ್ ಪಾಸ್ ಅಥವಾ ಶುಲ್ಕ ಪಾವತಿ ರಶೀದಿ ಆಧಾರದ ಮೇಲೆ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಾಗ ‘ಶೂನ್ಯ ಟಿಕೆಟ್’ ಅನ್ನು ಕಡ್ಡಾಯವಾಗಿ ವಿತರಿಸಬೇಕು ಎಂದು ತಿಳಿಸಲಾಗಿದೆ.
ವಿದ್ಯಾರ್ಥಿನಿಯರು ಬಸ್ ಪಾಸ್ ಪಡೆಯಲು ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವಾಗ ‘ಶಕ್ತಿ’ ಯೋಜನೆಯ ಬಗ್ಗೆ ಮಾಹಿತಿ ಬರಲಿದ್ದು, ವಿದ್ಯಾರ್ಥಿ ಬಸ್ ಪಾಸ್ ಪಡೆಯುವುದು ಕಡ್ಡಾಯವಿರುವುದಿಲ್ಲ. ಒಂದು ವೇಳೆ ನಿಯಮಾವಳಿಯನ್ವಯ 2023-24ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಅನ್ನು ಹೆಣ್ಣು ಮಕ್ಕಳು ಪಡೆದಿದ್ದಲ್ಲಿ, ಪಾಸಿನಲ್ಲಿ ನಮೂದಿಸಿದ ಮಾರ್ಗದಲ್ಲಿ ಮಾತ್ರ ಉಚಿತವಾಗಿ ಶೂನ್ಯ ಟಿಕೆಟ್ ಇಲ್ಲದೇ ಉಚಿತವಾಗಿ ಪ್ರಯಾಣಿಸಬಹುದು. ಇತರೆಡೆ ಪ್ರಯಾಣಿಸುವಾಗ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶೂನ್ಯ ಟಿಕೆಟ್ ವಿತರಿಸಬೇಕಿದೆ.
English summary
Karnataka State Road Transport Corporation (KSRTC) circular on effective implementation of Shakti scheme. Woman can travel free in normal government bus under the scheme.