ವೈರಲ್ ಆದ ತೋರಣಗಲ್ಲು ಪೊಲೀಸ್ ಅಧಿಕಾರಿಯ ರಜೆ ಪತ್ರದಲ್ಲಿ ಅಂತದೇನಿದೆ? | Police Officer’s Leave Letter Goes Viral: He mentioned High Stress Lead to Misbehaviour with Public

Ballari

oi-Mamatha M

|

Google Oneindia Kannada News

ಬಳ್ಳಾರಿ, ಜೂನ್. 21: ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳ ರಜೆ ವಿನಂತಿ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. 30 ದಿನಗಳ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದ ಅವರಿಗೆ 5 ದಿನಗಳ ರಜೆ ದೊರೆತಿದೆ. ಇದನ್ನು ನಿರಾಕರಿಸಿ 30 ದಿನಗಳ ರಜೆಯನ್ನು ನೀಡಬೇಕು ಎಂದಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ಕೂಡ ತುಂಬಾ ಕುತೂಹಲಕಾರಿಯಾಗಿದೆ.

ತಮಗೆ 30 ದಿನಗಳ ರಜೆ ನೀಡದಿದ್ದರೇ ತಮಗಿರುವ ಒತ್ತಡವು ಸಾರ್ವಜನಿಕರು ಮತ್ತು ಅಧೀನ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆಗೆ ಕಾರಣವಾಗಬಹುದು ಎಂದು ತೋರಣಗಲ್ಲು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರು, ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Police Officers Leave Letter Goes Viral: He mentioned High Stress Lead to Misbehaviour with Public

ವೈರಲ್ ಪತ್ರದಲ್ಲಿ ಇರುವುದೇನು…?

ವೈಯಕ್ತಿಕ ಕಾರಣಕ್ಕೆ ರಜೆ ಮಂಜೂರು ಮಾಡುವ ಬಗ್ಗೆ ಸಂಬಂಧಿಸಿದಂತೆ ಮಾನ್ಯರಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಉಲ್ಲೇಖ-1 ರ ಪ್ರಕಾರ ನನಗೆ 30 ದಿನಗಳ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದೆನು. ಉಲ್ಲೇಖ-2 ರ ಪ್ರಕಾರ ತಾವು 5 ದಿನಗಳ ಪರಿವರ್ತಿತ ರಜೆಯನ್ನು ಮಂಜೂರು ಮಾಡಿದ್ದು, ಉಳಿದ 25 ದಿನಗಳ ರಜೆ ಮಂಜೂರು ಮಾಡಲು ತಮಗಿದ್ದ ತೊಂದರೆ, ತೊಡಕು ಅಥವಾ ಅಸಹಾಯಕತೆ ಅಥವಾ ಅನಿವಾರ್ಯತೆ ಬಗ್ಗೆ ತಿಳಿಸದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ. ನೀವು ಕಣ್ಣಪ್ಪಿನಿಂದ 5 ದಿನ ಪರಿವರ್ತಿತ ರಜೆ ಮಂಜೂರು ಮಾಡಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿ ರಜೆಯನ್ನು ತಡೆ ಹಿಡಿದಿದ್ದೀರೋ ಅಥವಾ ನನ್ನ ಖಾತೆಯಲ್ಲಿ ರಜೆ ಇಲ್ಲವೋ ಯಾವುದನ್ನೂ ಸ್ಪಷ್ಟವಾಗಿ ನಮೂದಿಸದೇ ಮತ್ತೊಮ್ಮೆ ತಾವು ತಮ್ಮ ನಿರ್ಲಕ್ಷ ಆಡಳಿತದ ವೈಖರಿಯನ್ನು ಪ್ರದರ್ಶಿಸಿದ್ದೀರಿ ಎಂದು ನನಗೆ ಅನ್ನಿಸುತ್ತಿದೆ.

ನಾನು ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದು, ಕಾರಣಗಳನ್ನು ವಿವರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇಲ್ಲವೆಂದು ಭಾವಿಸಿದ್ದೆನು. ಆದರೆ ಈಗ ಅದನ್ನು ತಿಳಿಸುವ ಅನಿವಾರ್ಯತೆಯನ್ನು ತಾವು ಸೃಷ್ಠಿಸಿದ್ದೀರಿ, ನಿಮ್ಮ ಆಡಳಿತವು ತಾರತಮ್ಯ, ಕಿರುಕುಳ, ಸುಳ್ಳು, ಮೋಸದಿಂದಾಗಿ ನೀವು ನನ್ನ ಮಾನಸಿಕ ನೆಮ್ಮದಿಯನ್ನು ಸತತವಾಗಿ ಕದಡುತ್ತಾ ಬಂದಿದ್ದೀರಿ, ನಿಮ್ಮ ಈ ರೀತಿಯ ವರ್ತನೆಯು ಮುಂದುವರೆದು ನಿಮ್ಮ ಅಧೀನದಲ್ಲಿ ಇದೆ ಪರಿಸ್ಥಿತಿಯಲ್ಲಿ ನನ್ನ ಕೆಲಸವನ್ನು ಮುಂದುವರೆಸಿದಲ್ಲಿ ನನಗೆ ಮಾನಸಿಕ ಕೋಬೆ ಅಥವಾ ಖಿನ್ನತೆಗೆ ಒಳಗಾಗುವ ಸಂಭವ ಇರುವುದರಿಂದ ಕೆಲಕಾಲಮಟ್ಟಿಗಾದರೂ ನಿಮ್ಮ ಕಿರುಕುಳದಿಂದ ದೂರವಾಗಿ ಮನಸ್ಸಿಗೆ ಶಾಂತಿ ಸದೃಡತೆ, ಪ್ರಾರ್ಥನೆಯಂತಹ ಉದ್ದೇಶಕ್ಕಾಗಿ ನನಗೆ ಯೋಗ ನಮ್ಮ ಸಂಸ್ಕೃತಿಯ ಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಅವಶ್ಯಕತೆ ಇರುವುದರಿಂದ 30 ದಿನಗಳ ಮೊದಲ ಹಂತದ ಪ್ರಯತ್ನವಾಗಿ ರಜೆ ಕೋರಿದ್ದೆನು.

ನಿಮ್ಮೊಂದಿಗೆ ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ಮತ್ತು ನಿಮ್ಮ ಕಿರುಕುಳವನ್ನು ನಿಭಾಯಿಸಿ ಸಾರ್ವಜನಿಕರಿಗೆ ಅನ್ಯಾಯವಾಗದಂತೆ ನನ್ನ ಮಾನಸಿಕ ಸ್ಥಿತಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ಕರ್ತವ್ಯನಿರ್ವಹಿಸಲು ನನಗೆ ಯೋಗ, ದ್ಯಾನ, ಪ್ರಾರ್ಥನೆಯಂತಹ ಮಾರ್ಗೋಪಾಯಗಳ ಆವಶ್ಯಕತೆ ಇರುತ್ತದೆ. ಆದ್ದರಿಂದ ತಾವು ನನ್ನ ಖಾತೆಯಲ್ಲಿದ್ದ 30 ದಿನಗಳ ರಜೆಯನ್ನು ಮಂಜೂರು ಮಾಡಲು ಮತ್ತೊಮ್ಮೆ ಕೋರುತ್ತೇನೆ.

ಒಂದು ವೇಳೆ ತಾವು ರಜೆ ಮಂಜೂರು ಮಾಡದೇ 5 ದಿನಕ್ಕೆ ಹಿಂದಿರುಗಿ ಬಂದು ಕೆಲಸ ಮಾಡಬೇಕು. ಎಂಬ ಆಶಯ ಮತ್ತು ಉದ್ದೇಶವು ನಿನ್ನದಾಗಿದ್ದರೆ ಈ ಪತ್ರ ತಲುಪಿದ 3 ದಿನಗಳ ಒಳಗಾಗಿ ತಾವು ನನಗೆ ಜ್ಞಾಪನ ನೀಡಲು ಕೋರಲಾಗಿದೆ.

ಅಂತಹ ಒತ್ತಡದ ಪರಿಸ್ಥಿತಿಯಲ್ಲಿ ನನ್ನ ಕರ್ತವ್ಯ ಮಾಡುವುದು ಆನಿವಾರ್ಯವಾಗಿದ್ದಲ್ಲಿ ನನ್ನ ಒತ್ತಡ ನಿಭಾಯಿಸುವಿಕೆಯು (Stress management) ಮಿತಿ ಮೀರಿಹೋದಲ್ಲಿ ಅದರಿಂದ ಸಾರ್ವಜನಿಕರಿಗಾಗಲಿ ಅಥವಾ ಅಧೀನ ಸಿಬ್ಬಂದಿಗಳಿಗಾಗಲಿ ಅಥವಾ ನಿಮ್ಮೊಂದಿಗಾಗಲಿ ಅವಗಡಗಳು, ಆಚಾತುರ್ಯಗಳು ನಡೆದಲ್ಲಿ ಸಂಪೂರ್ಣವಾಗಿ ತಮ್ಮದೇ ಜವಾಬ್ದಾರಿ ಎಂದು ಭಾವಿಸಿ ಆ ಎಲ್ಲಾ ಜವಾಬ್ದಾರಿಗಳನ್ನು ತಾವು ಹೊತ್ತುಕೊಳ್ಳುವದಾದಲ್ಲಿ ನನಗೆ ನಿಮ್ಮ ಒತ್ತಡದ ನಡುವೆಯೂ ಕೆಲಸ ಮಾಡಬಲ್ಲೆ ಯಾವುದೇ ಅಚಾತುರ್ಯಕ್ಕೆ ಆವಗಡಗಳಿಗೆ ನಾನು ಹೊಣೆಗಾರನಾಗಲಾರೆ.

ಆದ್ದರಿಂದ ತಮ್ಮ ನಿರ್ಧಾರವನ್ನು ದಿನಾಂಕ:22.06.2023 ರ ಒಳಗಾಗಿ ತಿಳಿಸಿದಲ್ಲಿ ಆ ಪ್ರಕಾರ ಕರ್ತವ್ಯಕ್ಕೆ ಬರುತ್ತೇನೆ. ಇಲ್ಲವಾದಲ್ಲಿ ನಾನು ದಿನಾಂಕ:19.06.2023 ರಿಂದ ರಜೆಯ ಮೇಲೆ ತೆರಳುತ್ತಿದ್ದು ನನ್ನ ಉಲ್ಲೇಖಿತ-1 ರ ಮನವಿಯಂತೆ ನನಗೆ 30 ದಿನಗಳ ರಜಾ ಮಂಜೂರು ಮಾಡುತ್ತೀರಿ ಎಂಬ ನಂಬಿಕೆಯ ಮೇಲೆ ಹೊರಡುತ್ತಿದ್ದೇನೆ.

ಒಂದು ತಿಂಗಳ ನಂತರ ಸದೃಡ ಮನಸ್ಸಿನೊಂದಿಗೆ ನಿಮ್ಮ ಒತ್ತಡ, ಕಿರುಕುಳವನ್ನು ನಿಭಾಯಿಸುವ ಶಾಂತಿ ಮಂತ್ರ ಕಲಿತು ಬರುವ ವಿಶ್ವಾಸದಲ್ಲಿದ್ದೇನೆ. ಮತ್ತೊಮ್ಮೆ ಕಷ್ಟವಾದಲ್ಲಿ ಮುಂದಿನ ಕಾರ್ಯಕ್ರಮ ಕಾಲಾಯ ತಸ್ಮೈ ನಮಃ ಎಂದಿದ್ದಾರೆ.

ಪತ್ರದ ಪ್ರತಿಗಳನ್ನು ಡಿಜಿ & ಐಜೆಪಿ , ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) , ಬಳ್ಳಾರಿ ವಲಯದ ಐಜಿಪಿ ಮತ್ತು ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಕಳುಹಿಸಲಾಗಿದೆ.

English summary

Ballari district’s toranagallu senior police officer’s leave letter goes viral: He mentioned “high stress lead to misbehaviour with public”. know more.

Source link