Udupi
lekhaka-Kishan Kumar
ಉಡುಪಿ, ಜೂನ್ 24: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿನಿ ಮರಳಿ ಮನೆಗೆ ಶವವಾಗಿ ಹಿಂದುರುಗಿದ ಹೃದಯ ವಿದ್ರಾವಕ ಘಟನೆ ಉಡುಪಿಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದ ನಿಕಿತಾ ಮೃತಪಟ್ಟಿದ್ದಾಳೆ ಆರೋಪಿಸಿ ನಿಕಿತಾ ಕುಟುಂಬಸ್ಥರು ಹಾಗೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲಿನ ನಿಕಿತಾ ಜೂನ್ 14ರ ಬುಧವಾರ ಉಡುಪಿಯ ಸಿಟಿ ಆಸ್ಪತ್ರೆಗೆ ಹೊಟ್ಟೆ ನೋವೆಂದು ಭೇಟಿ ನೀಡಿದ್ದರು. ಆದರೆ ಭಾನುವಾರ ವೇಳೆಗೆ ನಿಕಿತಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ನಿಖಿತಾ ಸಾವಿನ ಬಗ್ಗೆ ಸರ್ಜನ್ ಡಾ.ರಾಮಚಂದ್ರ ರಾವ್ ಸ್ಪಷ್ಟನೆ ನೀಡಿದ್ದು, ಚಿಕಿತ್ಸೆಗಾಗಿ ನಮ್ಮ ಬಳಿಗೆ ಬಂದ ನಿಖಿತಾ ಅವರ ನಿಧನಕ್ಕೆ ನಾವು ವಿಷಾದಿಸುತ್ತೇವೆ. ನಾವು ಅತ್ಯುತ್ತಮ ಚಿಕಿತ್ಸೆಯನ್ನು ನೀಡಿದ್ದೇವೆ. ದುರದೃಷ್ಟವಶಾತ್ ನಾವು ಅವಳನ್ನು ಕಳೆದುಕೊಂಡಿದ್ದೇವೆ. ಇಲ್ಲಿ ನಿರ್ಲಕ್ಷ್ಯ ಇಲ್ಲ. ನಿಕಿತಾ ಜೂನ್ 14ರ ಬುಧವಾರ ಸಿಟಿ ಆಸ್ಪತ್ರೆಗೆ ವಾಂತಿ, ಹೊಟ್ಟೆ ನೋವು ಕಾರಣ ಆಸ್ಪತ್ರೆಗೆ ಬಂದಿದ್ದರು.ಈ ವೇಳೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ ಕರುಳಿನಲ್ಲಿ ಸಮಸ್ಯೆಗಳು ಕಂಡು ಬಂದವು. ನಿಕಿತಾ ಅವರ ತಾಯಿಗೆ ವಿವರಿಸಿ ಅವರ ಒಪ್ಪಿಗೆ ಪಡೆದು ಲ್ಯಾಪ್ರೋಸ್ಕೋಪಿಕ್ ಸರ್ಜರಿ ಮಾಡಲಾಗಿದೆ.
ಎಲ್ಲಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಾವು ಅನುಸರಿಸುವ ದಿನನಿತ್ಯದ ಕಾರ್ಯವಿಧಾನವಾಗಿ ಎಲ್ಲಾ ಪ್ರಕ್ರಿಯೆಗಳನ್ನು ವೀಡಿಯೊ ರೆಕಾರ್ಡ್ ಮಾಡಲಾಗಿದೆ. ಶಸ್ತ್ರಚಿಕಿತ್ಸಾ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, ರೋಗಿಯು ಅರಿವಳಿಕೆಯಿಂದ ಹೊರಬರಲು ಪ್ರಯತ್ನಿಸಿಲ್ಲ. ಮತ್ತು ಉಸಿರಾಟವೂ ನಿಧಾನಗತಿಯಲ್ಲಿ ಆಗಿದೆ. ನಾವು ಎಷ್ಟೇ ಪ್ರಯತ್ನ ಪಟ್ಟರೂ ನಿಕಿತಾರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮೃತಪಟ್ಟ ಬಳಿಕ ಪೋಸ್ಟ್ ಮಾರ್ಟಂ ಮಾಡಲು ಅನುಮತಿ ಕೊಡುವಂತೆ ನಿಕಿತಾ ಸಂಬಂಧಿಕರನ್ನು ಒತ್ತಾಯಿಸಿದ್ದೇವೆ. ಆದರೆ ಮರಣೋತ್ತರ ಪರೀಕ್ಷೆ ನಡೆಸಲು ರೋಗಿಯ ಸಂಬಂಧಿಕರು ನಿರಾಕರಿಸಿದ್ದಾರೆ ಎಂದರು.
ವೈದ್ಯರ ಸ್ಪಷ್ಠಿಕರಣದ ನಂತರವೂ ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಕೊಠಡಿಯಲ್ಲಿ ಪೋಷಕರು, ಸಂಬಂಧಿಕರೊಂದಿಗೆ ವೈದ್ಯರು ಮಾತುಕತೆ ನಡೆಸಿದ್ದಾರೆ. ಆದರೆ ವೈದ್ಯರ ಮನವೊಲಿಕೆ ನಿಕಿತಾ ಪೋಷಕರು ಒಪ್ಪದೇ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿ ನಿಕಿತಾಳಿಗೆ ಚಿಕಿತ್ಸೆ ಕೊಟ್ಟ ವೈದ್ಯೆ ರಜನಿ ಪ್ರಭಾ ಸ್ಪಷ್ಟನೆ ನೀಡಿದ್ದಾರೆ. ಸಂಬಂಧಿಕರ ಒತ್ತಾಯದಿಂದ ಟ್ಯೂಬ್ ತೆಗೆದಿದ್ದೇವೆ ಎಂದು ಎಂದಿದ್ದು, ವೈದ್ಯೆಯ ಸ್ಪಷ್ಟೀಕರಣಕ್ಕೆ ಪೋಷಕರು ಅಸಮಾಧಾನ ಹೊರಹಾಕಿದ್ದರು.
ನಿನ್ನೆ ನಡೆದ ಪ್ರತಿಭಟನೆ ವೇಳೆ ಎಬಿವಿಪಿ ಆಸ್ಪತ್ರೆಗೆ ಒಂದು ವಾರ ಗಡುವು ನೀಡಿದೆ. ಆಸ್ಪತ್ರೆಯ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಎಎಸ್ಪಿ ಸಿದ್ದಲಿಂಗಪ್ಪ ಮೂಲಕ ಉಡುಪಿ ಡಿಸಿ, ಡಿಎಚ್ಒಗೆ ಎಬಿವಿಪಿ ಒತ್ತಾಯಿಸಿದೆ. ನಿಖಿತಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಒಂದು ವಾರದ ಒಳಗೆ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.
ನಿಕಿತಾ ಸಾವಿನ ನ್ಯಾಯಕ್ಕಾಗಿ ಪಟ್ಟು ಬಿಡದ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಗಳು ಮಧ್ಯಾಹ್ನ 12 ಗಂಟೆಗೆ ಅಜ್ಜರಕಾಡು ಸೈನಿಕ ಸ್ಮಾರಕದಿಂದ ಮೆರವಣಿಗೆ ಮೂಲಕ ಹೊರಟು, ಮೃತ ನಿಕಿತಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಿದ್ದಾರೆ.
English summary
Activists of the Akhila Bharatiya Vidyarthi Parishad, Udupi, staged a protest near the City Hospital and Diagnostic Centre. Know more.