ವಿವಾಹಿತ ಪುರುಷರ ಆತ್ಮಹತ್ಯೆ: ರಾಷ್ಟ್ರೀಯ ಪುರುಷರ ಆಯೋಗ ಸ್ಥಾಪನೆಗೆ ಸಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ | Supreme Court to Hear PIL Seeking ‘National Commission for Men’ Amidst Concerns of Male Suicide

India

oi-Naveen Kumar N

|

Google Oneindia Kannada News

ಮಹಿಳೆಯರ ಪರವಾಗಿ ದನಿ ಎತ್ತಲು ರಾಷ್ಟ್ರಮಟ್ಟದಲ್ಲಿ ಮಹಿಳಾ ಆಯೋಗ ಇರುವಂತೆ, ಪುರುಷರ ವಿರುದ್ಧ ನಡೆಯುವ ಕೌಟುಂಬಿಕ ದೌರ್ಜನ್ಯದ ದೂರನ್ನು ಕೇಳುವ, ಸಮಸ್ಯೆಗೆ ಸ್ಪಂದಿಸಲು ‘ಪುರುಷರಿಗಾಗಿ ರಾಷ್ಟ್ರೀಯ ಆಯೋಗ’ವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ 3 ರಂದು ವಿಚಾರಣೆ ನಡೆಸಲಿದೆ.

ಭಾರತದಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿದ್ದು ಆತಂಕ ಮೂಡಿಸುವ ವಿಷಯವಾಗಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗುವ ಪುರುಷರ ಹಿತಾಸಕ್ತಿ ಕಾಪಾಡಲು ಮಾರ್ಗಸೂಚಿಗಳನ್ನು ರೂಪಿಸಲು ಆಯೋಗ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Supreme Court to Hear PIL Seeking National Commission for Men Amidst Concerns of Male Suicide

ಸುಪ್ರೀಂ ಕೋರ್ಟ್ ವೆಬ್‌ಸೈಟ್ ಪ್ರಕಾರ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗಾಗಿ ಪಟ್ಟಿ ಮಾಡಿದೆ ಎಂದು ಡಿಹೆಚ್ ವರದಿ ಮಾಡಿದ.

ಹೆಚ್ಚಾಗುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆ

ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಸಲ್ಲಿಸಿರುವ ಮನವಿಯಲ್ಲಿ 2021 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಭಾರತದಲ್ಲಿ ಆಕಸ್ಮಿಕ ಸಾವುಗಳ ಕುರಿತು ಪ್ರಕಟಿಸಿದ ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದಾರೆ. 2021ರಲ್ಲಿ ಭಾರತದಲ್ಲಿ 1,64,033 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಅದರಲ್ಲಿ 81,063 ವಿವಾಹಿತ ಪುರುಷರು, 28,680 ವಿವಾಹಿತ ಮಹಿಳೆಯರು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

“2021ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುರುಷರಲ್ಲಿ 33.2 ಪ್ರತಿಶತ ಕೌಟುಂಬಿಕ ಸಮಸ್ಯೆಗಳಿಗಾಗಿ ಆತ್ಮಹತ್ಯೆ ಹಾದಿ ಹಿಡಿದಿದ್ದರೆ, 4.8 ಪ್ರತಿಶತ ಪುರುಷರು ವಿವಾಹ ಸಂಬಂಧಿತ ಸಮಸ್ಯೆಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ ಒಟ್ಟು 1,18,979 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಪುರುಷರ ಆತ್ಮಹತ್ಯೆ ಪ್ರಮಾಣ ಶೇಕಡಾ 72ರಷ್ಟಿದ್ದರೆ, ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇಕಡಾ 27ರಷ್ಟಿದೆ” ಎಂದು ಎನ್‌ಸಿಆರ್‌ಬಿ ಒದಗಿಸಿದ ಅಂಕಿ-ಅಂಶಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪುರುಷರ ದೂರುಗಳನ್ನು ಸ್ವೀಕರಿಸಲು ಆಯೋಗ

ವಿವಾಹಿತ ಪುರುಷರ ಆತ್ಮಹತ್ಯೆಯ ಸಮಸ್ಯೆಯನ್ನು ನಿಭಾಯಿಸಲು ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಪುರುಷರ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

“ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರ, ಕೌಟುಂಬಿಕ ಸಮಸ್ಯೆಗಳು ಮತ್ತು ಮದುವೆ ಸಂಬಂಧಿತ ಸಮಸ್ಯೆಗಳಿಂದಾಗಿ ಒತ್ತಡದಲ್ಲಿ ಇರುವವರ ದೂರನ್ನು ಸ್ವೀಕರಿಸಲು ಪ್ರತಿ ಪೊಲೀಸ್ ಠಾಣೆಯ ಪೊಲೀಸ್ ಪ್ರಾಧಿಕಾರಕ್ಕೆ, ಸ್ಟೇಷನ್ ಹೌಸ್ ಆಫೀಸರ್‌ಗೆ ಗೃಹ ಸಚಿವಾಲಯದ ಮೂಲಕ ಸರಿಯಾದ ಮಾರ್ಗಸೂಚಿಗಳನ್ನು ನೀಡಲು ಭಾರತೀಯ ಒಕ್ಕೂಟಕ್ಕೆ (ಪ್ರತಿವಾದಿ ಸಂಖ್ಯೆ 1) ನಿರ್ದೇಶನ ನೀಡಬೇಕು. ಭಾರತ ಸರ್ಕಾರದಿಂದ ಸರಿಯಾದ ಕಾನೂನು ಜಾರಿಗೆ ಬರುವವರೆಗೆ ಇಂತಹ ಪ್ರಕರಣಗಳ ವಿಲೇವಾರಿ ಮಾಡಲು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ನಿರ್ದೇಶನ ನೀಡುವಂತೆ” ಕೋರಲಾಗಿದೆ.

“ಕೌಟುಂಬಿಕ ಹಿಂಸಾಚಾರ ಅಥವಾ ಕೌಟುಂಬಿಕ ಸಮಸ್ಯೆ ಮತ್ತು ವಿವಾಹ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆಯ ವಿಷಯದ ಬಗ್ಗೆ ಸಂಶೋಧನೆ ನಡೆಸಲು ಮತ್ತು ರಾಷ್ಟ್ರೀಯ ಪುರುಷರ ಆಯೋಗವನ್ನು ರಚಿಸುವ ಬಗ್ಗೆ ಅಗತ್ಯ ವರದಿಯನ್ನು ಮಾಡಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಿ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

English summary

The Supreme Court will hear a PIL on July 3 regarding guidelines for addressing domestic violence against married men leading to suicide. The PIL also advocates for the creation of a ‘National Commission for Men’ to safeguard men’s interests.

Story first published: Friday, June 30, 2023, 11:00 [IST]

Source link