India
oi-Mamatha M
ಪಾಟ್ನಾ, ಜೂನ್. 23: 2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಎದುರಿಸಲು ಒಗ್ಗಟ್ಟಿನ ಸೂತ್ರ ರೂಪಿಸುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ನಡೆಸಿದ ವಿರೋಧ ಪಕ್ಷಗಳ ಸಭೆ ಯಶಸ್ವಿಯಾಗಿದೆ ಎಂದು ಪಕ್ಷಗಳು ಹೇಳಿಕೊಂಡಿವೆ. ಇದರ ಬೆನ್ನಲ್ಲೆ ಶಿಮ್ಲಾದಲ್ಲಿ ಜುಲೈ 10, 12ಕ್ಕೆ ಮತ್ತೆ ಸಭೆ ನಡೆಸಲು ನಿರ್ಧರಿಸಿವೆ.
2024 ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಆಯಾ ರಾಜ್ಯಗಳಲ್ಲಿ ಹೇಗೆ ಒಟ್ಟಾಗಿ ಮುನ್ನಡೆಯಬೇಕು ಎಂಬುದರ ಕುರಿತು ಕಾರ್ಯಸೂಚಿಯನ್ನು ಸಿದ್ಧಪಡಿಸಲು ಜುಲೈನಲ್ಲಿ ಶಿಮ್ಲಾದಲ್ಲಿ ಮತ್ತೆ ಸಭೆ ನಡೆಸಲಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷಗಳ ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ-ಯುನೈಟೆಡ್ ನಾಯಕ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ವಿರೋಧ ಪಕ್ಷಗಳು “ಒಳ್ಳೆಯ ಸಭೆ” ನಡೆಸಿವೆ ಮತ್ತು ಒಟ್ಟಾಗಿ ಚುನಾವಣೆಯನ್ನು ಎದುರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. “ಇದು ಉತ್ತಮ ಸಭೆಯಾಗಿದ್ದು, ಒಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಲಾಗುವುದು” ಎಂದು ನಿತೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏಕಾಂಗಿಯಾಗಿ ಪ್ರಧಾನಿ ಮೋದಿಯನ್ನು ಸೋಲಿಸಲು ಕಾಂಗ್ರೆಸ್ ಅಸಮರ್ಥ: ಬಿಜೆಪಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಸಂಸದ ಸಂಜಯ್ ರಾವತ್ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಭೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ದೆಹಲಿಯಲ್ಲಿ ಕೇಂದ್ರದ ಸುಗ್ರೀವಾಜ್ಞೆಗೆ ಬೆಂಬಲ ನೀಡುವಂತೆ ಎಎಪಿಯ ಬೇಡಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಮುಂಗಾರು ಅಧಿವೇಶನಕ್ಕಾಗಿ ಸಂಸತ್ತು ಸಭೆ ಸೇರಿದಾಗ ಚರ್ಚಿಸಬಹುದಾದ ಹಲವು ವಿಷಯಗಳಿವೆ ಎಂದು ಹೇಳಿದ್ದಾರೆ.
ಆವೇಶಭರಿತ ಭಾಷಣದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಾವು ಒಗ್ಗಟ್ಟಾಗಿದ್ದೇವೆ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ. ಇತಿಹಾಸ ಇಲ್ಲಿಂದ ಪ್ರಾರಂಭವಾಗಿದ್ದು, ಇತಿಹಾಸವನ್ನು ಬದಲಾಯಿಸಬೇಕೆಂದು ಬಿಜೆಪಿ ಬಯಸುತ್ತದೆ. ಬಿಹಾರದಿಂದ ಇತಿಹಾಸವನ್ನು ಉಳಿಸಬೇಕು ಎಂದು ನಾವು ಬಯಸುತ್ತೇವೆ. ಈ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಮಾತನಾಡುವುದು ನಮ್ಮ ಉದ್ದೇಶ” ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.
“ಸಭೆಯಲ್ಲಿ ಹಲವು ಸಿಎಂಗಳು, ಮಾಜಿ ಸಿಎಂಗಳು ಉಪಸ್ಥಿತರಿದ್ದರು. ಸಭೆಯನ್ನು ಚೆನ್ನಾಗಿ ಆಯೋಜಿಸಲಾಗಿತ್ತು. ಎಲ್ಲ ಹಿರಿಯ ನಾಯಕರು ಇಲ್ಲಿ ಇದ್ದಾರೆ. ಪಾಟ್ನಾದಲ್ಲಿ ಸಭೆ ನಡೆಸುವಂತೆ ನಾನೇ ಸೂಚಿಸಿದ್ದೆ. ನಾವು ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ನಮ್ಮನ್ನು ವಿರೋಧ ಪಕ್ಷ ಎಂದು ಕರೆಯಬೇಡಿ. ನಾವೂ ದೇಶಪ್ರೇಮಿಗಳು, ಮಣಿಪುರ ಹೊತ್ತಿ ಉರಿಯುತ್ತಿದ್ದರೆ ನಮಗೆ ನೋವಾಗುತ್ತದೆ” ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ರಾಜಭವನವನ್ನು ಪರ್ಯಾಯ ಸರ್ಕಾರವನ್ನಾಗಿ ಮಾಡುವ ಬಿಜೆಪಿಯ ದುಷ್ಕೃತ್ಯ. ಅದಕ್ಕೆ ಅಸಮ್ಮತಿ ವ್ಯಕ್ತಪಡಿಸುವ ಯಾರಾದರೂ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳವನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಮತ್ತೆ ಗೆದ್ದರೆ ಭಾರತ ನಾಶವಾಗುತ್ತದೆ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
English summary
Lok Sabha elections 2024: Opposition parties meeting in Bihar’s patna satisfied, parties decided to meet again in Shimla on July 10-12. know more.