Mandya
lekhaka-Srinivasa K
ಮಂಡ್ಯ, ಜೂನ್, 22: ವಿದ್ಯುತ್ ದರ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ಮತ್ತು ವಿದ್ಯುತ್ ನಿಗಮದ ವಿರುದ್ಧ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಾಣಿಜ್ಯೋದ್ಯಮಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಮಹಾವೀರ ಭವನದಿಂದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಾ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಸಹಾಯಕರಿಗೆ ಈ ಕುರಿತು ಮನವಿ ಸಲ್ಲಿಸಿದರು. ಕರ್ನಾಟಕ ವಿದ್ಯುತ್ ನಿಗಮಗಳು ಕೆಲ ದಿನಗಳ ಹಿಂದೆ ವಾಣಿಜ್ಯ, ಕೈಗಾರಿಕೆಗಳ ಹಾಗೂ ಗೃಹ ವಿದ್ಯುತ್ ದರಗಳನ್ನು ಏಕಾಏಕಿ ಶೇಕಡಾ 30 ರಿಂದ 70ರಷ್ಟು ಹೆಚ್ಚಳ ಮಾಡಿದೆ. ಹೀಗೆ ಹೆಚ್ಚುವರಿ ಮಾಡಿರುವ ವಿದ್ಯುತ್ ದರ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ದರ ಹೆಚ್ಚಳದಿಂದಾಗಿ ಅದರಲ್ಲೂ ಬಹುಮುಖ್ಯವಾಗಿ ಕೈಗಾರಿಕಾ ವಲಯ ಹಾಗೂ ವಾಣಿಜ್ಯ ಉದ್ಯಮ ಮತ್ತು ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಹೊರೆಯಾಗಲಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆ ಹಾಗೂ ವ್ಯಾಪಾರಗಳನ್ನು ನಡೆಸಲು ಆಗದೆ ಮುಚ್ಚುವ ಪರಿಸ್ಥಿತಿ ಎದುರಾಗಲಿದೆ. ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಹೋರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸುವ ಜನತೆ ಮತ್ತೆ ದರ ಹೆಚ್ಚಳದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಹೆಚ್ಚಳ ಮಾಡಿರುವ ದರವನ್ನು ತಕ್ಷಣ ಕಡಿತಗೊಳಿಸಬೇಕು. ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ವಾಣಿಜ್ಯ ಉದ್ದೇಶ ಮತ್ತು ಗೃಹ ಬಳಕೆಗೆ ಹೆಚ್ಚಿಸಿರುವ ಅವೈಜ್ಞಾನಿಕ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಚಳ್ಳಕೆರೆ: ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪ, KSRTC ಕಂಡಕ್ಟರ್ಗೆ ಗೂಸಾ
ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು, ಕೈಗಾರಿಕೆಗಳು, ಸಂಘ ಸಂಸ್ಥೆಗಳ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ಇದಕ್ಕೂ ಮುನ್ನ ನಗರದ ವಿವಿಧ ರಸ್ತೆಗಳಲ್ಲಿ ತೆರಳಿ ಅಂಗಡಿ ಮುಂಗಟ್ಟುಗಳ ಮಾಲೀಕರುಗಳಿಗೆ ವಿದ್ಯುತ್ ದರ ಹೆಚ್ಚಳ ಕುರಿತಂತೆ ಜಾಗೃತಿ ಮೂಡಿಸಿ, ಬಂದ್ಗೆ ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್, ಉಪಾಧ್ಯಕ್ಷ ಎಂ.ಡಿ. ಹರಿಪ್ರಸಾದ್, ಕಾರ್ಯದರ್ಶಿ ಎಸ್. ಸತೀಶ್ ಬಾಬು, ಪದಾಧಿಕಾರಿಗಳಾದ ಕೆ.ಎಂ. ಶಿವಕುಮಾರ್, ಭರತ್ ಕುಮಾರ್, ಭೀಮಾರಾಮ್, ಎಂ.ಎಸ್. ಶಿವಪ್ರಕಾಶ್, ಪುಟರ್ಮಲ್, ಸೋಮಶೇಖರ್, ವೆಂಕಟೇಶ್ ಬಾಬು, ರಾಜೇಂದ್ರಪ್ರಸಾದ್, ಶಾಂತಿಪ್ರಸಾದ್, ಶಿವರಾಮೇಗೌಡ, ಎಚ್.ಆರ್. ಅರವಿಂದ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಬಂದ್ಗೆ ಬೆಂಬಲ
ವಿದ್ಯುತ್ ದರ ಏರಿಕೆ ವಿರೋಧಿಸಿ ಬಳ್ಳಾರಿಯಲ್ಲಿ ಕೈಗಾರಿಕಾ ಮತ್ತು ವಾಣಿಜೋದ್ಯಮ ಸಂಸ್ಥೆ ಸೇರಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ರಾಜ್ಯ ಸರ್ಕಾರದಿಂದ ಷರತ್ತುಗಳೊಂದಿಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಳೆದ ಮೇ 12ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 70 ಪೈಸೆ ಏರಿಕೆ ಮಾಡಿದೆ.
ಇದರಿಂದ ರೊಚ್ಚಿಗೆದ್ದ ಬಳ್ಳಾರಿ ಛೇಂಬರ್ ಆಫ್ ಕಾಮರ್ಸ್ ಸೇರಿ ಹಲವು ಸಂಘಟನೆಗಳು ನಗರದಲ್ಲಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಸಿವೆ. ಅಲ್ಲದೆ ಬೆಂಗಳೂರು ರಸ್ತೆ, ಹೆಚ್.ಆರ್.ಜಿ ವೃತ್ತದ ಮೂಲಕ ಡಿಸಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.
ವಿದ್ಯುತ್ ಶುಲ್ಕ ಹೆಚ್ಚಳದಿಂದಾಗಿ ವ್ಯಾಪಾರಸ್ಥರು, ಸಾಮಾನ್ಯ ಜನತೆ ಹಾಗೂ ಕೈಗಾರಿಕೆಗಳ ಮೇಲೆ ಆಗುವ ಪರಿಣಾಮಗಳ ಕುರಿತು ಸರ್ಕಾರಕ್ಕೆ ಗಂಭೀರತೆಯನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ವಿದ್ಯುತ್ ಬಿಲ್ ಹೆಚ್ಚಳದಿಂದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿವೆ. ಕೂಡಲೇ ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ.ಶ್ರೀನಿವಾಸ್ ರಾವ್ ಒತ್ತಾಯಿಸಿದರು.
English summary
Electricity charges hike: Entrepreneurs protest against state government in Mandya, Industrialists outrage against congress government.