ವಾಸ್ತು ಧಿಕ್ಕರಿಸಿದ ಸಿದ್ದರಾಮಯ್ಯ: ಮೆಚ್ಚುಗೆ ವ್ಯಕ್ತಪಡಿಸಿದ ‘ಮೇಷ್ಟ್ರು’ ವಾಸ್ತು ಬಗ್ಗೆ ಹೇಳಿದ್ದೇನು? | Siddaramaiah Disregards ‘Vaastu’ and Enters Office through South-Facing Door

Bengaluru

oi-Naveen Kumar N

|

Google Oneindia Kannada News

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇರ ನಡೆ ನುಡಿಗೆ ಮೊದಲಿನಿಂದಲೂ ಹೆಸರಾದವರು, ದೇವರನ್ನು ನಂಬುವ ಅವರು, ಮೊದಲಿನಿಂದಲೂ ದೇವರ ಹೆಸರಿನಲ್ಲಿ ನಡೆಯುವ ಮೌಢ್ಯಗಳನ್ನು ವಿರೋಧಿಸುತ್ತಾ ಬಂದವರು. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದರೂ, ಸಿದ್ದರಾಮಯ್ಯ ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಅನಿಸಿದ್ದನ್ನು ಮಾಡುವವರು, ನುಡಿಯುವಂತೆ ನಡೆದು ಹಲವು ಬಾರಿ ಮೆಚ್ಚುಗೆಗೆ ಪಾತ್ರರಾದವರು.

ಮೂಢನಂಬಿಕೆಯ ಕಾರಣ ಹಲವು ವರ್ಷಗಳಿಂದ ಮುಚ್ಚಿದ್ದ ಸಿಎಂ ಕಚೇರಿಯ ಬಾಗಿಲನ್ನು ತೆರೆಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸಿಎಂ ಕಚೇರಿಯಲ್ಲಿ ಹಲವು ವರ್ಷಗಳಿಂದ ವಾಸ್ತು ದೋಷದ ಕಾರಣ ನೀಡಿ ದಕ್ಷಿಣ ದಿಕ್ಕಿನ ಬಾಗಿಲನ್ನು ಮುಚ್ಚಲಾಗಿತ್ತು.

 Siddaramaiah

ಶನಿವಾರ ಇದನ್ನು ಗಮನಿಸಿದ ಸಿದ್ದರಾಮಯ್ಯ ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ವಾಸ್ತು ಸರಿಯಿಲ್ಲದ ಕಾರಣ ಬಾಗಿಲು ಮುಚ್ಚಿರುವುದಾಗಿ ತಿಳಿಸಿದರು. ಆದರೆ ಸಿದ್ದರಾಮಯ್ಯ ತಕ್ಷಣ ಆ ಬಾಗಿಲು ತೆರೆಯುವಂತೆ ಸೂಚನೆ ನೀಡಿದರು. ತಕ್ಷಣ ಸಿಬ್ಬಂದಿ ಒಳಗಿನಿಂದ ಬಂದು ಬಾಗಿಲು ತೆರೆದರು, ಸಿದ್ದರಾಮಯ್ಯ ಅದೇ ಬಾಗಿಲ ಮೂಲಕ ಕಚೇರಿ ಒಳಗೆ ಪ್ರವೇಶಿದಿರು.

“ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ” ಎಂದು ಅಧಿಕಾರಿಗಳ ಜತೆ ತಮ್ಮ ನಿಲುವನ್ನು ಸಿಎಂ ಸಿದ್ದರಾಮಯ್ಯ ಹಂಚಿಕೊಂಡರು. ಸಿದ್ದರಾಮಯ್ಯ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೌಢ್ಯವನ್ನು ಬಿಟ್ಟು ಜನಪರ ಕೆಲಸ ಮಾಡಿದರೆ ಸಾಕು ಎಂದು ಹಲವರು ಅನಿಸಿಕೆ ಹಂಚಿಕೊಂಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ ಮೆಚ್ಚುಗೆ

ಇನ್ನು ಸಿದ್ದರಾಮಯ್ಯ ಅವರ ಈ ನಡೆಗೆ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಮಾದರಿಯಾಗಲಿ ಎಂದು ಹೇಳಿದ್ದಾರೆ. ಟ್ವೀಟ್ ಮಾಡಿರುವ ಅವರು, “ಇದೊಂದು ಸಣ್ಣಘಟನೆ ಎಂದು ಪರಿಗಣಿಸಬಾರದು. ಜನ ತಮ್ಮ ಖಾಸಗಿ ನಂಬಿಕೆಗಳನ್ನು ಅವರ ಮನೆಯೊಳಗೆ ಹೇಗಾದರೂ ಆಚರಿಸಿಕೊಳ್ಳಲಿ. ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ವಾಸ್ತು ವಿರೋಧಿ ನಡೆ ಅವರೆಲ್ಲ ಮಂತ್ರಿಗಳಿಗೂ ಅಧಿಕಾರಿಗಳಿಗೂ ಮತ್ತು ಸರ್ಕಾರೀ ಕಛೇರಿಗಳಿಗೂ ಮಾದರಿಯಾಗಲಿ. ಒಳ್ಳೆಯ ಗಾಳಿ, ಬೆಳಕು ಮತ್ತು ಹೃದಯ ನಿಜವಾದ ವಾಸ್ತು. ವಿಜ್ಞಾನದ ಎಲ್ಲ ಬಾಗಿಲುಗಳೂ ತೆರೆಯಲಿ.” ಎಂದು ಹೇಳಿದ್ದಾರೆ.

ನಡೆ-ನುಡಿ ಶುದ್ಧವಾಗಿರಲಿ

ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, “ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ. ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ – ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ. ಜನತೆಯ ಆಶೀರ್ವಾದ ಇರಲಿ.” ಎಂದು ಹೇಳಿದ್ದಾರೆ.

English summary

Chief Minister Siddaramaiah Overcomes Vaastu Objection, Opens South-Facing Door for Review Meeting; Writer and Director Nagathihalli Chandrashekara Appreciates Siddaramaiah’s Decision to Disregard ‘Vaastu’.

Source link