Karnataka
oi-Reshma P
ಬೆಂಗಳೂರು, ಜುಲೈ 03: ಸಿಎಂ ಕಚೇರಿಯಲ್ಲಿ ಲಂಚ ಕೊಡದೇ ಯಾವುದೇ ಕೆಲಸ ಆಗಲ್ಲ. ಕೇವಲ ಶಾಸಕರ ಪತ್ರ ತೆಗೆದುಕೊಂಡು ಬಂದರೆ ಆಗಲ್ಲ. ಅದರ ಜೊತೆ 30 ಲಕ್ಷ ಹಣ ತರಬೇಕು ಎಂದು ಅಲ್ಲಿನ ಅಧಿಕಾರಿಗಳು ಡಿಮ್ಯಾಂಡ್ ಮಾಡುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಧ್ವನಿಗೂಡಿಸಿದ್ದಾರೆ.
ವಿಧಾನಸೌಧದಲ್ಲಿ ಕುಮಾರಸ್ವಾಮಿ ಆರೋಪದ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅದು ಯಾವುದೋ ಸಣ್ಣ ಹುದ್ದೆ ಇರಬೇಕು ಅದಕ್ಕೆ 30 ಲಕ್ಷ ಕೇಳಿದ್ದಾರೆ,ಅಲ್ಲಿ ಕೋಟ್ಯಾಂತರ ರೂಪಾಯಿ ಕೇಳುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ವರ್ಗಾವಣೆ ರದ್ದು ಆಗುವುದು, ಮತ್ತೆ ಅಧಿಕಾರಿ ಬಂದು ಮಾಡಿಸುವುದು. ಐಎಎಸ್,ಐಪಿಎಸ್ ಅಧಿಕಾರಿಗಳ ಮಾತೆ ಸ್ಪಷ್ಟವಾದ ಸಾಕ್ಷಿ, ಬೆಂಕಿ ಇಲ್ಲದೆ ಹೊಗೆ ಆಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಾಣಿಕತೆ ಬಗ್ಗೆ ಮಾತನಾಡ್ತಾರೆ, ಸಿಎಂ ಕಚೇರಿ ನಡೆದುಕೊಳ್ಳುವ ರೀತಿ ನೋಡಿದ್ರೆ ಭಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಶಿಸ್ತಿನ ಪ್ರಶ್ನೆ ಇಲ್ಲ. ನಾಳೆಯಿಂದ ಅಧಿವೇಶನ ಅಧಿಕೃತವಾಗಿ ಆರಂಭವಾಗಲಿದೆ. ಅಷ್ಟರೊಳಗೆ ವಿಪಕ್ಷನಾಯಕನ ಆಯ್ಕೆಯಾಗಲಿದೆ, ನಮ್ಮಲ್ಲಿರುವ 66 ಜನರು ಸಮರ್ಥರಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದು, ಬಿಟ್ ಕಾಯಿನ್ ಪ್ರಕರಣ ಎಸ್‌ಐಟಿಗೆ ನೀಡುವ ಪ್ರಶ್ನೆಗೆ ಉತ್ತರಿಸಿ, ಕೊಡಲಿ ಒಳ್ಳೆದಾಯ್ತು, ಯಾವುದೇ ರೂಪದಲ್ಲಿ ತನಿಖೆ ಮಾಡಿಸಲಿ ಎಂದರು.
Adjustment Politics: ಪಕ್ಷದ ವೇದಿಕೆಯಲ್ಲಿಯೇ ಬೊಮ್ಮಾಯಿ-ಪ್ರತಾಪ ಸಿಂಹ ಬಹಿರಂಗ ಜಟಾಪಟಿ! ಕಾರಣವೇನು?
ರಾಜ್ಯಪಾಲರ ಭಾಷಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಕಂಡಂತೆ ಸಪ್ಪೆ ಭಾಷಣ. ಯಾವುದೇ ಜೀವಾಳ ಇಲ್ಲ, ಹೊಸ ಸರ್ಕಾರ ಬಂದಾಗ,ಹೊಸ ಚೈತನ್ಯ, ಹೊಸ ದಿಕ್ಸೂಚಿ ಇಲ್ಲದೆ ಕವಲು ದಾರಿಯಲ್ಲಿರುವ ಸರ್ಕಾರ ಇದು ಎಂದು ಟೀಕಿಸಿದ್ದು, ಭರವಸೆ ಮೂಡುವಂತಹ ಯಾವುದೇ ಭಾಷಣ ಇಲ್ಲ. ಸುಳ್ಳಿನ ಕಂತೆ ಅಂತ ಸಾಭಿತಾಗಿದೆ. ಅಕ್ಕಿಯನ್ನು 10 ಕೆಜಿ ಕೊಡ್ತೀವಿ ಅಂತ ಸಹಿ ಮಾಡಿ ಹೇಳಿದರು.
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿದ್ದರು. ಆದರೆ, ಈಗ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ. ಜನರನ್ನು ಯಾಮಾರಿಸುವ ಕೆಲಸ ಮಾಡಿದ್ದಾರೆ. ಜವಾಬ್ದಾರಿಯಿಂದ ನುಸುಳಿಕೊಳ್ಳುತ್ತಿರುವ ಸರ್ಕಾರ ಇದು. ಅರ್ಥವಿಲ್ಲದೆ ಸುಮ್ಮನೆ ಬೊಗಳೆ ಭಾಷಣ ಮಾಡಿಸಿದ್ದಾರೆ. ಈ ಸರ್ಕಾರಕ್ಕೆ ಅಭಿವೃದ್ಧಿಯ ಚಿಂತನೆಯಿಲ್ಲ ಎಂದು ಆರೋಪಿಸಿದರು.
English summary
Basavaraj Bommai has made allegations of corruption against congress government