ರಾಯಚೂರಿನ ಪ್ರತಿ ಸರ್ಕಾರಿ ಕಚೇರಿಯಲ್ಲೂ ಗುಜರಿ ವಾಹನಗಳು: ಏನಿದರ ಕಥೆ? | Wasteful Vehicles In Every Government Office In Raichur

Raichur

oi-Umapathi Ramoji

By ರಾಯಚೂರು ಪ್ರತಿನಿಧಿ

|

Google Oneindia Kannada News

ರಾಯಚೂರು ಜುಲೈ 18: ಜಿಲ್ಲೆಯ ಯಾವುದೇ ಪ್ರಮುಖ ಕಚೇರಿಗೆ ತೆರಳಿ ಅಲ್ಲಿ ಗುಜರಿ ವಾಹನಗಳು ನಿಂತಿರುವುದು ಕಾಣಸಿಗುತ್ತವೆ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಡಕೋಟಾ ವಾಹನಗಳೇ ಇವೆ. ರಾಯಚೂರಿಗೆ ಹೊಸ ವಾಹನಗಳು ಮಂಜೂರಾದರೂ ಇಲ್ಲಿಯ ಅಧಿಕಾರಿಗಳಿಗೆ ಕೊನೆಗೆ ಸಿಗುವುದು ಬೆಂಗಳೂರಿನವರು ಬಳಸಿದ ಡಕೋಟಾ ವಾಹನಗಳೇ.

ಇದು ಯಾವುದೋ ಒಂದು ಇಲಾಖೆಯ ಕತೆ ಅಲ್ಲ. ಬಹುತೇಕ ಇಲಾಖೆಗಳಲ್ಲಿ ಇದೇ ಸಮಸ್ಯೆ ಇದೆ. ಇಲಾಖೆಗಳಿಗೆ ಕಾಯಂ ಅಧಿಕಾರಿಗಳು ಇರದಿರುವುದೂ ಇದಕ್ಕೆ ಪ್ರಮುಖ ಕಾರಣ. ಆಯ್ದ ಅಧಿಕಾರಿಗಳನ್ನು ಇಲ್ಲಿಗೆ ವರ್ಗ ಮಾಡುವ ಪ್ರವೃತ್ತಿ ಇದೆ. ಕೆಲ ಇಲಾಖೆಯಲ್ಲಿ ಒಬ್ಬರೇ ಎರಡು, ಮೂರು ಹುದ್ದೆಗಳ ಪ್ರಭಾರ ಹೊಂದಿದ್ದಾರೆ. ಎರಡು ಜಿಲ್ಲೆಗಳ ಪ್ರಭಾರ ನಿರ್ವಹಿಸುತ್ತಿರುವ ಅಧಿಕಾರಿಗಳೂ ಇದ್ದಾರೆ. ಅಧಿಕಾರಿಗಳ ಕೊರತೆ ಇರುವ ಕಾರಣ ಎರಡು ಹುದ್ದೆ ನಿಭಾಯಿಸುತ್ತಿರುವ ಕೆಲವರು ಬೆಂಗಳೂರಿನಲ್ಲಿ ನಾಲ್ಕು ದಿನ, ರಾಯಚೂರಿನಲ್ಲಿ ಎರಡು ದಿನ ಕೆಲಸ ಮಾಡುತ್ತಿದ್ದಾರೆ.

Wasteful Vehicles In Every Government Office In Raichur

ಕೆಲಸದ ಒತ್ತಡದಿಂದಾಗಿ ಆಸಕ್ತಿಯಿಂದ ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆಗಳನ್ನೂ ಸಲ್ಲಿಸುವುದು ಅಪರೂಪ. ಈ ರೀತಿಯ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಡಕೋಟಾ ವಾಹನಗಳು ತುಂಬಿಕೊಂಡಿವೆ ಎನ್ನುವುದು ಹಲವರ ಅಭಿಪ್ರಾಯ.

ವಾಹನ ನೂಕಿದವರಿಗೆ ಪ್ರಯಾಣ ಸೌಲಭ್ಯ

ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆಂದೇ ಜಿಲ್ಲೆಯಲ್ಲಿ ವಾರ್ತಾ ಮತ್ತು ಸಂಪರ್ಕ ಇಲಾಖೆ ಇದೆ. ಇಲ್ಲಿ ಸಹ ಎರಡು ಡಕೋಟಾ ವಾಹನಗಳು ಇವೆ. ಯಾವುದೋ ಒಂದು ಸರ್ಕಾರಿ ಕಾರ್ಯಕ್ರಮಕ್ಕೆ ತೆರಳಬೇಕಾದರೆ ಅದಕ್ಕೆ ಪ್ರತಿಯೊಬ್ಬರೂ ಬೆನ್ನೆಲುಬಾಗಿ ನಿಲ್ಲಬೇಕು. ಅಂದಾಗ ಮಾತ್ರ ಆ ವಾಹನದಲ್ಲಿ ಸಂಚರಿಸುವವರಿಗೆ ಪ್ರಯಾಣ ಭಾಗ್ಯ ಲಭಿಸುತ್ತದೆ.

ವಾರ್ತಾ ಇಲಾಖೆಯ ಕಚೇರಿ ಆವರಣದಲ್ಲಿ ನಿಲ್ಲಿಸಿರುವ ವಾಹನವನ್ನು ಪತ್ರಕರ್ತರೆಲ್ಲ ಸೇರಿ ನೂಕಿಕೊಂಡು ಮೊದಲು ಹೊರಗೆ ತರಬೇಕು. ನಂತರ ಸ್ವಲ್ಪ ದೂರದವರೆಗೆ ತಳ್ಳುತ್ತ ಮುಂದೆ ಸಾಗಬೇಕು. ವಾಹನ ಸ್ಟಾರ್ಟ್‌ ಆದ ಮೇಲೆ ಅದರಲ್ಲಿ ಕುಳಿತು ಅವರು ಹೋಗಬೇಕಿರುವ ಸ್ಥಳಕ್ಕೆ ತೆರಳಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮತ್ತೆ ಅದನ್ನು ಹಿಂದಿನಿಂದ ತಳ್ಳಬೇಕು. ಅದು ಸ್ಟಾರ್ಟ್‌ ಆದರೆ ಮಾತ್ರ ಮರಳಿ ಕಚೇರಿಗೆ ಬರಲು ಸಾಧ್ಯ. ಇಲ್ಲವಾದರೆ ಪತ್ರಕರ್ತರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.

Wasteful Vehicles In Every Government Office In Raichur

ವಾಹನಗಳ ನಿರ್ವಹಣೆಗೆ ಹಿಂದಿನ ಸರ್ಕಾರಗಳು ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಅನೇಕ ವಾಹನಗಳಿಗೆ ವಿಮೆ ಇಲ್ಲ. ದುರಸ್ತಿಗೂ ಹಣ ಕೊಡುತ್ತಿಲ್ಲ. ಕಳೆದ ಹತ್ತು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದೆ.

ಇತ್ತೀಚಿಗೆ ಜಿಲ್ಲೆಯ ಶಕ್ತಿನಗರಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿಕೊಟ್ಟ ಸಂದರ್ಭದಲ್ಲಿ ಡಕೋಟಾ ವಾಹನದಲ್ಲೇ ಪತ್ರಕರ್ತರನ್ನು ಒಯ್ಯಲಾಯಿತು. ಪತ್ರಕರ್ತರೆಲ್ಲ ಅದನ್ನು ನೂಕಿಕೊಂಡು ಹೋಗಿ, ಮರಳಿ ನೂಕಿಕೊಂಡೇ ತರಬೇಕಾಯಿತು. ಸರ್ಕಾರ ಕೈಗನ್ನಡಿಯಂತಿರುವ ವಾರ್ತಾ ಇಲಾಖೆಯದ್ದೇ ಈ ಸ್ಥಿತಿಯಾದರೆ, ಇನ್ನುಳಿದ ಇಲಾಖೆಯ ಗತಿ ಏನಾಗಿರಬಾರದು ಎಂದು ಸರ್ಕಾರಿ ಅಧಿಕಾರಿಗಳು ಆಡಿಕೊಳ್ಳುತ್ತಿದ್ದಾರೆ.

ಡಿಡಿಪಿಐ ಕಚೇರಿ ಆವರಣದಲ್ಲಿ ಗುಜರಿ ವಾಹನಗಳು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆವರಣದಲ್ಲಿ ಅನೇಕ ವಾಹನಗಳು ನಿಂತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಅವುಗಳನ್ನು ದುರಸ್ತಿಯನ್ನು ಮಾಡಿಸುತ್ತಿಲ್ಲ. ಗುಜರಿಗೂ ಕೊಡುತ್ತಿಲ್ಲ. ವಾಹನಗಳು ಕಚೇರಿ ಆವರಣದಲ್ಲಿ ನಿಂತಲ್ಲೇ ನಿಂತು ಮಣ್ಣಿನಲ್ಲಿ ಹೂತು ಹೋಗಿವೆ. ಕೆಲವು ತುಕ್ಕು ಹಿಡಿದಿವೆ.

ನಗರಸಭೆ ಕಚೇರಿಗೆ ಹೋಗುವ ಮಾರ್ಗದಲ್ಲಿರುವ ಡಿಡಿಪಿಐ ಹಳೆಯ ಕಚೇರಿ ಕಟ್ಟಡ ಆವರಣದಲ್ಲಿ ಕೆಟ್ಟು ಹೋದ ಅನೇಕ ವಾಹನಗಳು ನಿಂತಿವೆ. ಹಳೆಯ ವಾಹನಗಳಿಗೆ ಬೆಲೆ ಕಡಿಮೆ. ಅವು ಮಾರಾಟವೂ ಆಗುವುದಿಲ್ಲ ಎನ್ನುವ ನಂಬಿಕೆ ಹಲವರಲ್ಲಿ ಇದೆ. ವಾಸ್ತವದಲ್ಲಿ ಗುಜರಿ ವಾಹನಗಳಿಗೂ ಬೆಲೆ ಇದೆ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಇದೆ.

ಇಲ್ಲಿಯ ಶಿಕ್ಷಣ ಇಲಾಖೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಅಷ್ಟೇ ಅಲ್ಲ ಆಡಳಿತ ವ್ಯವಸ್ಥೆಯಲ್ಲೂ ಹಿಂದೆ ಇದೆ. ಕಚೇರಿ ಆವರಣಕ್ಕೆ ಭೇಟಿ ಕೊಡುವವರಿಗೆ ಇಲಾಖೆಯ ಸ್ಥಿತಿ ಎಂಥವರಿಗೂ ಅರ್ಥವಾಗುತ್ತಿದೆ. ಕೆಡಿಪಿ ಸಭೆಯಲ್ಲಿ ಸಚಿವರು ಮಾತಿನ ಚಾಟಿ ಏಟು ಕೊಟ್ಟರೂ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯಾಗಿಲ್ಲ.

ಅಧಿಕಾರಿಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳದ ಕಾರಣ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಹಾಳಾಗುತ್ತಿದೆ. ಅಧಿಕಾರಿಗಳ ಆಡಳಿತ ವ್ಯವಸ್ಥೆಗೆ ಇವೆಲ್ಲ ಕೈಗನ್ನಡಿಯಾಗಿವೆ. ಪ್ರತಿಕ್ರಿಯೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಒಂದು ವಾರದಿಂದ ಕರೆ ಮಾಡಿದರೂ ಕರೆಗಳನ್ನು ಸ್ವೀಕರಿಸಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಆರೋಗ್ಯ ಕವಚ ವಾಹನಕ್ಕೆ ತುಕ್ಕು

ಆರೋಗ್ಯ ಇಲಾಖೆಯ ಆವರಣದಲ್ಲೂ ಅನೇಕ ರೋಗಗ್ರಸ್ಥ ವಾಹನಗಳು ನಿಂತಿವೆ. ಆಂಬ್ಯುಲೆನ್ಸ್‌ಗಳು, ತಾಲೂಕು ವೈದ್ಯಾಧಿಕಾರಿಗಳು ಬಳಸಿದ ಟಾಟಾ ಸುಮೊಗಳು, ಆರೋಗ್ಯ ಕವಚ 108 ವಾಹನಗಳು ನಿಂತಿವೆ. ಅನೇಕ ವಾಹನಗಳ ಮೇಲೆ ಗಿಡದ ಎಲೆಗಳು ಬಿದ್ದು ಅನೇಕ ವರ್ಷಗಳಾಗಿದ್ದು, ತುಕ್ಕು ಹಿಡಿದಿವೆ.

ಕೆಲವು ವಾಹನಗಳನ್ನು ಅಪಘಾತಪಡಿಸಿ ದುರಸ್ತಿ ಮಾಡದೇ ತಂದು ನಿಲ್ಲಿಸಲಾಗಿದೆ. ಈಗ ಅವುಗಳ ನೋಂದಣಿ ಅವಧಿಯೂ ಮುಗಿದಿದೆ. ವಿಮೆ ಇಲ್ಲದ ಕಾರಣ ದುರಸ್ತಿ ವೆಚ್ಚವೇ ಅಧಿಕವಾಗುತ್ತಿದೆ. ಹೀಗಾಗಿ ತಾಂತ್ರಿಕ ದೋಷ ಎನ್ನುವ ನೆಪ ಹೇಳಿ ಅಧಿಕಾರಿಗಳು ಅವುಗಳನ್ನು ಕಚೇರಿ ಆವರಣದಲ್ಲಿ ನಿಲ್ಲಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಹೇಳುತ್ತಾರೆ. ಕೆಲವು ಕಚೇರಿಗಳಿಗೆ ಹೊಸ ವಾಹನಗಳು ಬಂದಿದ್ದರೂ ಹಳೆಯ ವಾಹನಗಳ ಮಾರಾಟ ಮಾಡಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡಿಲ್ಲ. ತುಕ್ಕು ಹಿಡಿದ ಮೇಲೆ ಇನ್ನಷ್ಟು ಮೌಲ್ಯ ಕಳೆದುಕೊಳ್ಳಲಿವೆ.

’15 ವರ್ಷ ಅವಧಿ ಮುಗಿದ ವಾಹನಗಳೇ ಇವೆ. ಅವುಗಳಿಗೆ ವಿಮೆ ಮಾಡಲು ಸಹ ಸಾಧ್ಯವಾಗದು. ಹಳೆಯ ವಾಹನಗಳ ವಿಲೇವಾರಿಗೆ ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಹಾಳಾದ ವಾಹನಗಳ ಜಾಗದಲ್ಲಿ ಶೀಘ್ರದಲ್ಲೇ ಒಂದು ಹೊಸ ವಾಹನ ಬರಲಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರಬಾಬು ಹೇಳಿದ್ದಾರೆ.

ಮಸ್ಕಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 108 ಆರೋಗ್ಯ ಕವಚದ ಎರಡು ವಾಹನಗಳು ಕೆಟ್ಟು ನಿಂತು ಹಲವು ತಿಂಗಳುಗಳಾಗಿವೆ. ತಾಲೂಕಿನಾದ್ಯಂತ ಹೆರಿಗೆ, ಅಪಘಾತ ಸಂದರ್ಭದಲ್ಲಿ ಜನರಿಗೆ ಉತ್ತಮ ಸೇವೆ ನೀಡಿದ ವಾಹನಗಳು ಈಗ ರೋಗಗ್ರಸ್ಥವಾಗಿ ನಿಂತಿವೆ.

ಈ ವಾಹನಗಳು ಉಸ್ತುವಾರಿ ಯಾರು ಎಂಬ ಪ್ರಶ್ನೆ ಮೂಡಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಈ ಆರೋಗ್ಯ ಇಲಾಖೆಯ ವಾಹನಗಳಿಗೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಮಳೆ, ಬಿಸಿಲಿಗೆ ತುಕ್ಕು ಹಿಡಿದಿವೆ. ಈ ವಾಹನಗಳ ದುರಸ್ತಿ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಆಡಳಿತ ಯಂತ್ರದ ಅವ್ಯವಸ್ಥೆಗೆ ಸಾಕ್ಷಿಯಾಗಿವೆ.

ಲಿಂಗಸುಗೂರು : ವಾಹನಗಳ ನಿರ್ವಹಣೆ ವೈಫಲ್ಯ

ಲಿಂಗಸುಗೂರು ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಅಧಿಕಾರಿಗಳ ನಿರ್ವಹಣೆ ನಿರ್ಲಕ್ಷದಿಂದ ವಾಹನಗಳು ಬಳಕೆ ಆಗದೆ ತುಕ್ಕು ಹಿಡಿದಿವೆ. ತಾಲೂಕು ಪಂಚಾಯಿತಿಗೆ ಸಂಬಂಧಿಸಿದ ಜೀಪ್‌ಗಳು ದಶಕದಿಂದ ಬಳಕೆಯಾಗಿಲ್ಲ. ಇದೀಗ ವಾಹನಗಳ ಬಿಡಿ ಭಾಗಗಳು ಮಾಯವಾಗಿವೆ.

ಪುರಸಭೆ ಆಡಳಿತ ಮಂಡಳಿ ಘನ ತ್ಯಾಜ್ಯ ವಿಲೇವಾರಿಗೆ ಖರೀದಿಸಿದ ಕಾಲುವೆ ಸ್ವಚ್ಛಗೊಳಿಸುವ ಮಿನಿ ಫೋಕಲೈನ್, ಸಕ್ಕಿಂಗ್ ಮಷಿನ್ ಡಂಪಿಂಗ್ ವಾಹನ ಸೇರಿದಂತೆ ಅನೇಕ ವಾಹನಗಳು ನಿಂತಲ್ಲೇ ನಿಂತು ಹಾಳಾಗಿವೆ.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್, ಪಶು ಪಾಲನ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪ್ರವಾಸಿ ಮಂದಿರದ ಆವರಣದಲ್ಲಿ ಬಿಡಿಭಾಗಗಳು ಇಲ್ಲದ ಅಸ್ತಿಪಂಜರದಂತಿರುವ ವಾಹನಗಳು ಇವೆ. ಬಿಡಿಭಾಗಗಳನ್ನು ಕಚೇರಿ ಸಿಬ್ಬಂದಿಯೇ ಮಾರಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.

ಮಾನ್ವಿ: ನಿರುಪಯುಕ್ತ ವಾಹನಗಳು

ಮಾನ್ವಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲರುವ ಜೀಪು ಹಾಗೂ ಸೆಪ್ಟಿಕ್ ಟ್ಯಾಂಕ್ ಹೊಂದಿರುವ ಟ್ರ್ಯಾಕ್ಟರ್ ಹಲವು ವರ್ಷಗಳಿಂದ ‌ನಿರುಪಯುಕ್ತವಾಗಿವೆ. ತಾ.ಪಂ. ಅಧಿಕಾರಿಗಳ ಸಂಚಾರಕ್ಕಾಗಿ ಬಳಕೆಯಾಗುತ್ತಿದ್ದ ಜೀಪು ದಶಕದಿಂದ ದುರಸ್ತಿ ಕಂಡಿಲ್ಲ.

ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಗೆ ಮಂಜೂರಾಗಿದ್ದ ಟ್ರ್ಯಾಕ್ಟರ್ ಹಾಗೂ ಸೆಪ್ಟಿಕ್ ಟ್ಯಾಂಕ್ ಐದು ವರ್ಷಗಳಿಂದ ಒಮ್ಮೆಯೂ ಬಳಕೆಯಾಗಿಲ್ಲ. ಟ್ರ್ಯಾಕ್ಟರ್ ಹೊಸದಾಗಿ ಖರೀದಿಯಾದಾಗ ನೋಂದಣಿ ಮಾಡಿಸದ ಹಿನ್ನೆಲೆಯಲ್ಲಿ ಬಳಕೆಯಾಗಿಲ್ಲ ಎಂದು ತಾ.ಪಂ ಸಿಬ್ಬಂದಿ ತಿಳಿಸಿದ್ದಾರೆ. ಸರ್ಕಾರದ ಅನುದಾನ ಬೇಕಾಬಿಟ್ಟಿಯಾಗಿ ಬಳಕೆಯಾಗುತ್ತಿರುವುದಕ್ಕೆ‌ ನಿರುಪಯುಕ್ತವಾಗಿ‌ ನಿಂತಿರುವ ಈ ಟ್ರ್ಯಾಕ್ಟರ್ ಹಾಗೂ ಸೆಪ್ಟಿಕ್ ಟ್ಯಾಂಕ್ ವಾಹನ ಸಾಕ್ಷಿಯಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.

ಸಿಂಧನೂರು:ತುಕ್ಕು ಹಿಡಿದರೂ ಕೇಳುವವರಿಲ್ಲ!

ಸಿಂಧನೂರು ನಗರದ ಮಿನಿವಿಧಾನಸೌಧ ಕಚೇರಿಯ ಶೌಚಾಲಯ ಪಕ್ಕದಲ್ಲಿ ನಿಲ್ಲಿಸಿರುವ ಎರಡು ಕಾರುಗಳ ಎಂಜಿನ್, ಬಿಡಿ ಭಾಗಗಳು, ಟೈರ್ ಗಳು, ಸೀಟ್‌ಗಳು ಚೆನ್ನಾಗಿವೆ. ತಾಂತ್ರಿಕ ದೋಷದಿಂದ ಕೆಟ್ಟು ನಿಂತ ನಂತರ ದುರಸ್ತಿ ಮಾಡಿ ಬಳಸಿಲ್ಲ. ಅವುಗಳನ್ನು ಮೂಲೆಗಿಟ್ಟು ವಾಹನ ಬಳಸಲಾಗುತ್ತಿದೆ.

ತಾಲೂಕು ಪಂಚಾಯಿತಿ ಆವರಣದಲ್ಲಿ ಎರಡು ಸರ್ಕಾರಿ ಜೀಪುಗಳ ಮೇಲ್ಭಾಗ ಬಿಡಿ ಭಾಗಗಳು ಸಂಪೂರ್ಣವಾಗಿ ಹಾನಿಯಾಗಿವೆ. ಆದಾಗ್ಯೂ ಎರಡು ವಾಹನಗಳು ತುಕ್ಕು ಹಿಡಿದು ಮೂಲೆಗುಂಪಾಗಿವೆ. ‘ಹಳೆ ವಾಹನಗಳ ಹರಾಜಿಗೆ ಟೆಂಡರ್ ಕರೆಯಲಾಗಿತ್ತು. ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಕೊಳ್ಳಲು ಕೆಲವರು ಅರ್ಜಿಸಲ್ಲಿಸಿದ ಪ್ರಯುಕ್ತ ಮಾರಾಟ ಮಾಡಿಲ್ಲ’ ಎಂದು ಸಿಂಧನೂರಿನ ಅರುಣ ಎಚ್.ದೇಸಾಯಿ ಹೇಳಿದ್ದಾರೆ.

ಸಿರವಾರ: ನಿರುಪಯುಕ್ತವಾಗಿ ಕಚೇರಿ ಆವರಣದಲ್ಲಿಯೇ ಬಿದ್ದ ವಾಹನಗಳು

ಪಟ್ಟಣದ ನೀರಾವರಿ ಇಲಾಖೆಯ ಹತ್ತಾರು ವಾಹನಗಳು ರೋಲರ್‌ಗಳು 10ಕ್ಕೂ ಹೆಚ್ಚು ವರ್ಷಗಳಿಂದ ತುಕ್ಕು ಹಿಡಿದಿದ್ದು, ಗುಜರಿಗೂ ಸೇರದೇ ನಿರುಪಯುಕ್ತವಾಗಿ ಕಚೇರಿ ಆವರಣದಲ್ಲಿ ಬಿದ್ದಿವೆ. ಕಾಲುವೆ ದುರಸ್ತಿ ಸಮಯದಲ್ಲಿ ಬೇಕಾಗುವಂತಹ ಜೀಪು ರೂಲರ್, ಕಂಕರ್, ಸಿಮೆಂಟ್ ಸೇರಿಸುವ ಯಂತ್ರಗಳು ಸೇರಿದಂತೆ ಹಲವಾರು ಯಂತ್ರಗಳು ನಿರುಪಯುಕ್ತವಾಗಿವೆ.

English summary

Here is the more details about Wasteful vehicles in every government office at Raichur. Know more

Story first published: Tuesday, July 18, 2023, 16:24 [IST]

Source link