ರಾಜ್ಯದ ಶ್ರೀಮಂತ ದೇವಸ್ಥಾನಗಳ ಪಟ್ಟಿ: ಈ ಹತ್ತು ದೇವಾಲಯಗಳ ಆದಾಯ, ಖರ್ಚು ಎಷ್ಟು? | Top 10 Richest Muzrai Temples In Karnataka

Features

oi-Mallika P

|

Google Oneindia Kannada News

ಬೆಂಗಳೂರು, ಜೂನ್‌ 30: ಕರ್ನಾಟಕ ದೇವಾಲಯಗಳ ಬೀಡು. ಇಲ್ಲಿನ ಐತಿಹಾಸಿಕ ದೇವಾಲಯಗಳು, ನಂಬಿಕೆ, ವಾಸ್ತು ಶಿಲ್ಪ, ಸಂಸ್ಕೃತಿಗೆ ಮನಸೋಲವರಿಲ್ಲ. ಹೀಗಾಗಿ ಬೇರೆ ಬೇರೆ ರಾಜ್ಯದಿಂದ, ದೇಶ ವಿದೇಶಗಳಿಂದ ಕರ್ನಾಟಕದ ದೇವಾಲಯಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಕರ್ನಾಟಕದ ಕೆಲವು ಪ್ರಸಿದ್ಧ ದೇವಾಲಯಗಳು ಪ್ರತಿನಿತ್ಯವೂ ತುಂಬಿ ತುಳುಕುತ್ತಿರುತ್ತದೆ. ಹೀಗಾಗಿ ಕರ್ನಾಟಕದ ಟಾಪ್‌ 10 ಶ್ರೀಮಂತ ದೇವಾಲಯಗಳು ಯಾವುವು? ಅವುಗಳ ಆದಾಯ, ವೆಚ್ಚ ಎಷ್ಟು ಎನ್ನುವುದರ ಬಗ್ಗೆ ತಿಳಿಯೋಣ.

ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುವ ರಾಜ್ಯದ ಟಾಪ್ 10 ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. 2022-23ರ ಅವಧಿಯಲ್ಲಿ ದೇವಾಲಯ ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ವಿವರವನ್ನು ಮುಜರಾಯಿ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ.

Rich-temples-in-Karnataka

1. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 2022-23ರ ಅವಧಿಯಲ್ಲಿ 123.64 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 63.77 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ. ಪ್ರತಿನಿತ್ಯವೂ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ.

2. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ

ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿರುವ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಎಲ್ಲಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಮುಖ್ಯವಾಗಿ ಕೇರಳದಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ 2022-23ರ ಅವಧಿಯಲ್ಲಿ 59.47 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 33.32 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

Rich-temples-in-Karnataka

3. ಮೈಸೂರು ಶ್ರೀ ಚಾಮುಂಡೇಶ್ವರಿ ದೇವಾಲಯ

ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟದ ಮೇಲಿರುವ ಮೈಸೂರು ಶ್ರೀ ಚಾಮುಂಡೇಶ್ವರಿ ದೇವಾಲಯ ಕರ್ನಾಟಕದ ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ. ದಸರಾ, ನವರಾತ್ರಿ, ಆಷಾಢ ಸೇರಿದಂತೆ ವಿಶೇಷ ದಿನಗಳಲ್ಲಿ ದೇವಾಲಯ ಭಕ್ತರಿಂದ ತುಂಬಿತುಳುಕುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ಭಕ್ತರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮೈಸೂರು ಶ್ರೀ ಚಾಮುಂಡೇಶ್ವರಿ ದೇವಾಲಯ 2022-23ರ ಅವಧಿಯಲ್ಲಿ 52.40 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ.

4. ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ, ಎಡೆಯೂರು

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿರುವ ಯಡಿಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನವು ಪ್ರಭು ಸಿದ್ಧಲಿಂಗೇಶ್ವರರ ಪ್ರಸಿದ್ಧ ದೇವಾಲಯವಾಗಿದೆ. ರಾಜ್ಯದ ಮೂಲೆ ಮೂಲೆಯ ಭಕ್ತರನ್ನು ಆಕರ್ಷಿಸುವ ಈ ದೇವಾಲಯವು 2022-23ರ ಅವಧಿಯಲ್ಲಿ 36.48 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 35.68 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

Rich-temples-in-Karnataka

5. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಾಜ್ಯದ ಪ್ರಸಿದ್ಧ ದೇವಿ ದೇವಾಲಯಗಳಲ್ಲಿ ಒಂದು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರಾಧ್ಯ ದೈವ. ಜೊತೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ 2022-23ರ ಅವಧಿಯಲ್ಲಿ 32.10 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 25.97 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

6. ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ

ಕಪಿಲಾ ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) ಸಂಗಮದ ಬಳಿ ಪೂರ್ವಾಭಿಮುಖವಾಗಿರುವ ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯವು ಕರ್ನಾಟಕ ಐತಿಹಾಸಿಕ ದೇವಾಲಯಗಳಲ್ಲಿ ಒಂದು. ಕೋಟಿ ಒಡೆಯ ನಂಜುಂಡೇಶ್ವರ ಎನ್ನುವ ಖ್ಯಾತಿ ಪಡೆದಿರುವ ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯವು 2022-23ರ ಅವಧಿಯಲ್ಲಿ 26.71 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 18.74 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

Rich-temples-in-Karnataka

7. ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ, ಸವದತ್ತಿ

ರೇಣುಕಾ ದೇವಸ್ಥಾನ ಎಂದೂ ಕರೆಯಲ್ಪಡುವ ಯಲ್ಲಮ್ಮ ದೇವಸ್ಥಾನ ರೇಣುಕಾ ದೇವಿಯ ದೇವಾಲಯವಾಗಿದೆ. ಈ ದೇವಾಲಯವನ್ನು ಎಲ್ಲಮ್ಮ ಗುಡ್ಡ ಎಂದು ಸಹ ಕರೆಯಲಾಗುತ್ತದೆ. ಉತ್ತರ ಕರ್ನಾಟಕ ಭಾಗದ ಜನರ ಆರಾಧ್ಯ ದೈವವಾಗಿರುವ ಎಲ್ಲಮ್ಮ ತಾಯಿ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಾಲಯವು 2022-23ರ ಅವಧಿಯಲ್ಲಿ 22.52 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 11.51 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

8. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಉಡುಪಿ ಜಿಲ್ಲೆಯಲ್ಲಿ ವಿದ್ಯೆ ಮತ್ತು ಅನ್ನದಾನಕ್ಕೆ ಹೆಸರುವಾಸಿಯಾದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಜನರ ಆರಾಧ್ಯ ದೈವ. ಮಂದಾರ್ತಿ ಅಮ್ಮ ಎಂದೇ ಭಕ್ತರ ಮನದಲ್ಲಿರುವ ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ದೇವಾಲಯವು 2022-23ರ ಅವಧಿಯಲ್ಲಿ 14.55 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 13.02 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

Rich-temples-in-Karnataka

9 . ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ದೊಡ್ಡಬಳ್ಳಾಪುರ

ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಸ್.ಘಾಟಿಯಲ್ಲಿರುವ 600 ವರ್ಷಗಳಷ್ಟು ಹಳೆಯದಾದ ದೇವಾಲಯವಾಗಿದೆ. ಇದು ಸುಬ್ರಹ್ಮಣ್ಯ ಮತ್ತು ಲಕ್ಷ್ಮೀ ನರಸಿಂಹ ದೇವರಿಗೆ ಸಮರ್ಪಿತವಾಗಿದೆ. ದೇವಾಲಯವಾಗಿದೆ. ಈ ದೇವಾಲಯವು 2022-23ರ ಅವಧಿಯಲ್ಲಿ 12.25 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 7.40 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

10. ಶ್ರೀ ಬನಶಂಕರಿ ದೇವಸ್ಥಾನ, ಬೆಂಗಳೂರು

ಶ್ರೀ ಬನಶಂಕರಿ ದೇವಸ್ಥಾನವು ಬೆಂಗಳೂರಿನ ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸ್ಥಳೀಯ ಜನರಲ್ಲಿ ಹೆಚ್ಚು ಜನಪ್ರಿಯವಾಗಿದೆ ಮತ್ತು ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶ್ರೀ ಬನಶಂಕರಿ ದೇವಾಲಯವು 2022-23ರ ಅವಧಿಯಲ್ಲಿ 22.52 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದು, 11.51 ಕೋಟಿ ರೂಪಾಯಿ ದೇವಾಲಯದ ವೆಚ್ಚವಾಗಿದೆ.

English summary

Income and expenditure of Top 10 Richest Muzrai Temples list In Karnataka, Know more

Story first published: Friday, June 30, 2023, 10:44 [IST]

Source link