Karnataka
oi-Gururaj S
ಬೆಂಗಳೂರು, ಜುಲೈ 02: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆಡಳಿತ ಯಂತ್ರದಲ್ಲಿ ಬದಲಾವಣೆಯಾಗುತ್ತಿದೆ. ಐಎಎಸ್, ಐಪಿಎಸ್, ಐಎಫ್‌ಎಸ್, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ದಿನಕ್ಕೊಂದು ಆದೇಶ ಹೊರಬೀಳುತ್ತಿದೆ. ಇದು ಪ್ರತಿಪಕ್ಷಗಳ ಕಣ್ಣು ಕೆಂಪಾಗಿಸಿದೆ.
ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವರ್ಗಾವಣೆಯಲ್ಲಿ ಸರ್ಕಾರ ಹಣ ಮಾಡುತ್ತಿದೆ ಎಂದು ಗಂಭೀರ ಆರೋಪವನ್ನು ಮಾಡುತ್ತಿವೆ. ಸರ್ಕಾರಿ ನೌಕರರ ವರ್ಗಾವಣೆಗೆ ಇದ್ದ ಗಡುವನ್ನು ಎರಡು ಬಾರಿ ಈಗಾಗಲೇ ವಿಸ್ತರಣೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವರ್ಗಾವಣೆ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Government employee; ಸರ್ಕಾರಿ ನೌಕರರ ವರ್ಗಾವಣೆ ದಿನಾಂಕ ವಿಸ್ತರಣೆ
ಭಾನುವಾರ ಅವರು ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ವೈಎಸ್‌ಟಿ ತೆರಿಗೆ ಆರಂಭವಾಗಿದೆ” ಎಂದು ನೇರವಾದ ಆರೋಪವನ್ನು ಮಾಡಿದರು.
ರಾಜ್ಯದಲ್ಲಿ ದಿಢೀರ್ 10 ಐಎಎಸ್ ಅಧಿಕಾರಿಗಳ ವರ್ಗಾವಣೆ! ಯಾರೆಲ್ಲಾ?
ಮಾಧ್ಯಮಗಳು ವೈಎಸ್‌ಟಿ ಎಂದರೆ ಏನು? ಬಿಡಿಸಿ ಹೇಳಿ ಎಂದಾಗ, “ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ?. ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ?, ನೀವೂ ಪತ್ತೆ ಹಚ್ಚಿ” ಎಂದರು.
ಒಂದೂ ದಿನ ಬಿಡದೆ ವಿಧಾನಸಭಾ ಕಲಾಪದಲ್ಲಿ ಭಾಗವಹಿಸಲು ಎಚ್‌ಡಿ ಕುಮಾರಸ್ವಾಮಿ ನಿರ್ಧಾರ
ವರ್ಗಾವಣೆ ದಂಧೆ ಬಗ್ಗೆ, ತಮ್ಮ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿರುವ ಹೇಳಿಕೆ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, “ನಾನು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಾನು ನಿಮ್ಮ ಪಕ್ಷದ ಜತೆ ಸರ್ಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದಿರಿ ಎನ್ನುವುದು ಗೊತ್ತಿದೆ” ಎಂದು ಹೇಳಿದರು.
“ಪೊಗದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು?. ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ದೂರ ಇಟ್ಟಿದ್ದೆ; ಎಚ್. ಡಿ ಕುಮಾರಸ್ವಾಮಿ ಮಾತನಾಡಿ, “ಹಣ ಕೊಟ್ಟು ಪೋಸ್ಟ್ ಪಡೆಯಲು ಬಂದವರನ್ನು ನಾನು ದೂರ ಇಟ್ಟಿದ್ದೆ. ಬಿಡಿಎ ಮೇಲೆ ಬಂದು ಕೊರಲು ಬಂದ ಅಧಿಕಾರಿಗೆ ಹೊರಗಟ್ಟಿದ್ದೆ. ಯಲಹಂಕ ತಹಶೀಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡ್ತೀವಿ ಅಂದವರನ್ನು ಆಚೆ ಇಟ್ಟಿದ್ದೆ. ಇದು ನಾನು ನಡೆಸಿದ ಆಡಳಿತ. ಈಗ ನೋಡಿದರೆ ವೈಎಸ್‌ಟಿ ತೆರಿಗೆ ಅಂತ ಇವರು ಶುರು ಮಾಡಿಕೊಂಡಿದ್ದಾರೆ” ಎಂದು ಟೀಕೆ ಮಾಡಿದರು.
“ವಸೂಲಿ ಮಾಡಿ ವರ್ಗಾವಣೆ ಮಾಡುವ, ದಂಧೆ ಮಾಡದೇ ವಸೂಲಿ ಶುರುವಾಗಿದೆ. ಅಧಿಕಾರಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ರಾತ್ರಿ 1 ಗಂಟೆಯವರೆಗೆ ಸಭೆ ಮಾಡುತ್ತಾ ಇದ್ದಾರಲ್ಲಾ ಅದು ಏತಕ್ಕೆ?. ಸರಕಾರಿ ಕಚೇರಿಯಲ್ಲಿ ಏಕೆ ಸಭೆಗಳನ್ನು ನಡೆಸಲ್ಲ?” ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
“ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಆಡಳಿತ ಹಳಿತಪ್ಪಿದೆ. ಒಂದು ಸರ್ಕಾರ, ಹತ್ತಾರು ಮುಖ್ಯಮಂತ್ರಿಗಳು ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರು ಒಬ್ಬರೇ ಮುಖ್ಯಮಂತ್ರಿ ಅಲ್ಲ. ಇಲಾಖೆಗೊಬ್ಬ ಮುಖ್ಯಮಂತ್ರಿ ಇದ್ದಾರೆ. ಒಬ್ಬೊಬ್ಬರು ಮುಖ್ಯಮಂತ್ರಿಯಂತೆ ಹೇಳಿಕೆ ನೀಡುತ್ತಾರೆ” ಎಂದು ಲೇವಡಿ ಮಾಡಿದರು.
“ಇಲ್ಲಿ ಸಿದ್ದರಾಮಯ್ಯ ಒಂದು ಹೇಳುತ್ತಾರೆ, ಸತೀಶ್ ಜಾರಕಿಹೊಳಿ ಇನ್ನೊಂದು ಹೇಳುತ್ತಾರೆ. ಹಾಗಾದರೆ, ಇಲ್ಲಿ ಎಷ್ಟು ಜನ ಸಿಎಂಗಳು ಇದ್ದಾರೆ?. ಇದನ್ನು ಸರ್ಕಾರ ಅಂತ ಕರೀತೀರಾ?, ಇಲ್ಲೇನಾದರೂ ಪಾರದರ್ಶಕತೆ ಅನ್ನೋದು ಇದೆಯಾ?” ಎಂದು ಎಚ್. ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
English summary
Former chief minister of Karnataka H. D. Kumaraswamy slammed Siddaramaiah lead Congress government on the issue of transferring officers.