ರಾಜಕಾಲುವೆಗಳ ಸ್ವಚ್ಛತೆ ಕಾರ್ಯ ಮರೀಚಿಕೆ, ಆತಂಕದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಜನ | Clean the rajakaluve: Demand’s Chikkaballapur district people

Chikkaballapur

lekhaka-Mohan Kumar D

By ಚಿಕ್ಕಬಳ್ಳಾಪುರ ಪ್ರತಿನಿಧಿ

|

Google Oneindia Kannada News

ಚಿಕ್ಕಬಳ್ಳಾಪುರ, ಜೂನ್‌, 22: ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಆದರೆ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ಸರಾಗವಾಗಿ ಹರಿಯುವ ರಾಜಕಾಲುವೆಗಳ ಸ್ವಚ್ಛತೆ, ಒತ್ತುವರಿ ತೆರವು ಕಾರ್ಯ ಮಾತ್ರ ಮರೀಚಿಕೆಯಾಗಿದೆ. ಸರಿಯಾಗಿ ಮಳೆನೀರು ಸಂಗ್ರಹ ಆಗಬೇಕೆಂದರೆ ಸ್ವರೂಪ ಕಳೆದುಕೊಂಡಿರುವ ರಾಜಕಾಲುವೆಗಳ ಸಂರಕ್ಷಣೆಯ ಕಾರ್ಯ ಅಗತ್ಯವಾಗಿದೆ.

ಯಾವುದೇ ಶಾಶ್ವತ ನೀರಾವರಿ ಮೂಲಗಳು ಇಲ್ಲದಿರುವುದನ್ನು ಅರಿತುಕೊಂಡ ಹಿರಿಯರು ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಇದರಿಂದಲೇ ಅವಿಭಜಿತ ಕೋಲಾರ ಜಿಲ್ಲೆಗೆ ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಪ್ರದೇಶ ಎಂಬ ಕೀರ್ತಿ ಲಭಿಸಿದೆ. ಆದರೆ, ಇದನ್ನೇ ಹೆಮ್ಮೆಯಿಂದ ಹೇಳಿಕೊಂಡು ಬರಲಾಗುತ್ತಿದೆಯೇ ಹೊರತು, ಕೆರೆ ಮತ್ತು ರಾಜಕಾಲುವೆ ಸಂರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.

Clean the rajakaluve: Demands Chikkaballapur district people

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರೋಬ್ಬರಿ 1981 ಕೆರೆಗಳಿವೆ. ಪ್ರತಿ ವರ್ಷ ಅಕ್ರಮ ಒತ್ತುವರಿ ತೆರವು, ಸಂರಕ್ಷಣೆ ಮತ್ತು ಮತ್ತೆ ಒತ್ತುವರಿಯೂ ಜಲಚಕ್ರದಂತೆ ನಡೆಯುತ್ತಲೇ ಇವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳ ವೈಫಲ್ಯದಿಂದಾಗಿ ರಾಜಕಾಲುವೆಗಳ ಸಂರಕ್ಷಣೆಯ ಕೆಲಸಗಳು ಆಗುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ಜನರು ನಾನಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.

ಹತ್ತಿಬೆಳೆಗೆ ಕೆಂಪು ರೋಗ; ರಾಯಚೂರು ಕೃಷಿ ವಿವಿ ತಜ್ಞರ ಪರಿಶೀಲನೆಹತ್ತಿಬೆಳೆಗೆ ಕೆಂಪು ರೋಗ; ರಾಯಚೂರು ಕೃಷಿ ವಿವಿ ತಜ್ಞರ ಪರಿಶೀಲನೆ

ಚರಂಡಿಗಳಾಗಿ ಮಾರ್ಪಟ್ಟ ರಾಜಕಾಲುವೆ

ಮಳೆ ನೀರು ಕೆರೆಗಳಿಗೆ ಹರಿಯುವಂತಾಗಲು ನಿರ್ಮಿಸಿರುವ ರಾಜಕಾಲುವೆಗಳು ಇಂದು ಅನೇಕ ಕಡೆ ಚರಂಡಿಗಳಾಗಿವೆ. ಅಲ್ಲದೇ ರಾಜಕಾಲುವೆಗಳಲ್ಲಿ ಗಿಡಗಂಟಿಗಳು ಬೆಳೆದು ಮುಚ್ಚುವ ಹಂತಕ್ಕೆ ತಲುಪಿದೆ. ಇದಕ್ಕೆ ನಂದಿ ಕೆರೆ, ಕಂದವಾರ ಕೆರೆ ಮತ್ತು ಅಮಾನಿ ಗೋಪಾಲಕೃಷ್ಣ ಕೆರೆಯ ಸಂಪರ್ಕದ ರಾಜಕಾಲುವೆಯ ದುಸ್ಥಿತಿಯೇ ಒಂದು ನಿದರ್ಶನವಾಗಿದೆ ಎಂದರೆ ತಪ್ಪಾಗಲಾರದು.

ಹಿಂದೆ ಚಿಕ್ಕಬಳ್ಳಾಪುರದ ಪಂಚಗಿರಿಗಳ ತಪ್ಪಲಿನಲ್ಲಿನ ಮಳೆಯ ನೀರು ಕಂದವಾರ ಕೆರೆಗೆ ರಾಜಕಾಲುವೆ ಮೂಲಕ ಹರಿಯುತ್ತಿತ್ತು. ಬಳಿಕ ಕೋಡಿ ಹರಿದು ಅಮಾನಿ ಭೈರಸಾಗರ ಕೆರೆಯನ್ನು ಸೇರುತ್ತಿತ್ತು. ಆದರೆ, ನಂದಿ, ಸುಲ್ತಾನಪೇಟೆ, ಮುದ್ದೇನಹಳ್ಳಿ, ಮೈಲಪನಹಳ್ಳಿ, ಚಿಕ್ಕಬಳ್ಳಾಪುರ ನಗರ, ಅಗಲಗುರ್ಕಿ, ಅಣಕನೂರು ಸೇರಿದಂತೆ ಹಲವೆಡೆ ರಾಜಕಾಲುವೆ ಭಾಗಗಳನ್ನು ಮುಚ್ಚಿ ಹಾಕಲಾಗಿದೆ.

ಮರೀಚಿಕೆಯಾದ ನಿರ್ವಹಣೆ

ಕಳೆದ ವರ್ಷ ಮಳೆಯ ನೀರು ಮನೆಗಳಿಗೆ ನುಗ್ಗಿದ ಸಂದರ್ಭದಲ್ಲಿ ತುರ್ತಾಗಿ ಜೆಸಿಬಿ ಮೂಲಕ ಹೂಳು ತೆಗೆಸುವ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಈಗ ಬಹುತೇಕ ಕಡೆ ಮತ್ತೆ ತ್ಯಾಜ್ಯ, ಮಣ್ಣು ತುಂಬಿಕೊಂಡಿದ್ದು, ಗಿಡಗಳು ಕೂಡ ಬೆಳೆದಿವೆ. ರಾಜಕಾಲುವೆಗಳ ಸ್ವಚ್ಛತಾ ನಿರ್ವಹಣೆ ಮರೀಚಿಕೆ ಆಗಿರುವುದರಿಂದ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಸರಾಗವಾಗಿ ಹರಿಯದ ಸಾಧ್ಯತೆಗಳು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಧಾರಾಕಾರ ಮಳೆ ಸುರಿದರೆ ಇಲ್ಲಿ ಅನಾಹುತಗಳು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕಾಮಗಾರಿ ಕೈಗೊಳ್ಳದೇ ನೀರು ಹರಿಸಲಾಗಿದೆ

ಎಚ್.ಎನ್.ವ್ಯಾಲಿ ಯೋಜನೆಯಡಿ ಜಿಲ್ಲೆಯ 44 ಕೆರೆಗಳಿಗೆ ತ್ಯಾಜ್ಯ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ. ಆದರೆ, ಕೆಲವೆಡೆ ಹೂಳೆತ್ತುವ ಕಾಮಗಾರಿ ಕೈಗೊಳ್ಳದೇ ನೀರು ಹರಿಸಲಾಗಿದೆ. ಸಮರ್ಪಕವಾಗಿ ರಾಜಕಾಲುವೆಗಳ ದುರಸ್ತಿ ಕೆಲಸವಾಗಿಲ್ಲ. ಇದರಿಂದ ಮಳೆಗಾಲದಲ್ಲಿ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಮನೆ, ತೋಟಗಳಿಗೆ ನೀರು ನುಗ್ಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಷ್ಟಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೇತ್ತುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.

ರಾಜಕಾಲುವೆ ಅಕ್ರಮ ಒತ್ತುವರಿ ತೆರವಿಗೆ ಆಗ್ರಹ

ಅಂತರ್ಜಲ ಮಟ್ಟ ಕುಸಿತ ಮತ್ತು ಕೊಳವೆ ಬಾವಿ ವೈಫಲ್ಯ ಸಮಸ್ಯೆಗೆ ತುತ್ತಾಗಿರುವ ಈ ಭಾಗದಲ್ಲಿ ಕೆರೆ ಮತ್ತು ರಾಜಕಾಲುವೆಗಳು ಅಕ್ರಮ ಒತ್ತುವರಿ ಮತ್ತಷ್ಟು ಹಾಹಾಕಾರ ಹೆಚ್ಚಾಗಲು ಕಾರಣವಾಗಿವೆ. ಧಾರಾಕಾರ ಮಳೆ ಸುರಿದರೂ ನೀರನ್ನು ಹಿಡಿದುಕೊಳ್ಳುವ ಕೆಲಸವಾಗುತ್ತಿಲ್ಲ. ಆಂಧ್ರದತ್ತ ಹರಿದು ಹೋಗುತ್ತಿರುತ್ತದೆ. ಕೆಲವೇ ತಿಂಗಳಲ್ಲಿ ಕೆರೆಗಳು ಬತ್ತಿ ಹೋಗುವಿಕೆಯ ಸಮಸ್ಯೆ ಎದುರಾಗುತ್ತಿದ್ದು, ಇನ್ನಾದರೂ ರಾಜಕಾಲುವೆಗಳ ಅಕ್ರಮ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯ ಬಹುತೇಕ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಇದರಿಂದ ಮಳೆಗಾಲದಲ್ಲಿ ಜನರು ನಾನಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಜಿಲ್ಲಾಡಳಿತ ರಾಜಕಾಲುವೆ, ಪೋಷಕ ಕಾಲುವೆಗಳ ಸ್ವಚ್ಛತೆ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಈ ಕೂಡಲೇ ಕ್ರಮವಹಿಸಬೇಕು ಎಂದು ಚಿಕ್ಕಬಳ್ಳಾಪುರ ನಿವಾಸಿ ಲೋಕೇಶ್ ಒತ್ತಾಯಿಸಿದ್ದಾರೆ.

English summary

Clean the rajakaluve: Chikkaballapur district people Demand’s to Government,

Story first published: Thursday, June 22, 2023, 20:16 [IST]

Source link