India
oi-Gururaj S
ನವದೆಹಲಿ, ಜೂನ್ 26: ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ರಸ್ತೆಯಲ್ಲಿ ಇನ್ನು ಮುಂದೆ ಪ್ರತಿಭಟನೆ ನಡೆಸುವುದಿಲ್ಲ. ನ್ಯಾಯಾಲಯದಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಕಳೆದ 5 ತಿಂಗಳಿನಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ದೇಶದ ಗಮನ ಸೆಳೆದಿದ್ದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದ ಕುಸ್ತಿಪಟುಗಳು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಹಲವಾರು ಸಂಘಟನೆಗಳು ಸಹ ಈ ಪ್ರತಿಭಟನೆಗೆ ಬೆಂಬಲ ನೀಡಿದ್ದವು.
Vinesh Phogat: ಬಿಜೆಪಿ ಸಂಸದ ಬ್ರಿಜ್ ಭೂಷಣ್ ರಕ್ಷಿಸಲು ಸರ್ಕಾರ ಯತ್ನ: ಕುಸ್ತಿಪಟು ವಿನೇಶ್ ಫೋಗಟ್ ಬಿಚ್ಚಿಟ್ಟ ಸ್ಫೋಟಕ ಸತ್ಯ
ಭಾನುವಾರ ವಿನೇಶ್ ಫೋಘಟ್, ಸಾಕ್ಷಿ ಮಲ್ಲಿಕ್, ಬಜರಂಗ್ ಪೂನಿಯಾ ಟ್ವೀಟ್ ಮೂಲಕ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ. ರಸ್ತೆಯಲ್ಲಿ ಇನ್ನು ಮುಂದೆ ನಾವು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುವುದಿಲ್ಲ. ನ್ಯಾಯಾಲಯದಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ, ನಮ್ಮ ಅಭಿಯಾನವನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Wrestlers protest: ವಿಶ್ವಮಟ್ಟದಲ್ಲಿ ಸುದ್ದಿಯಾದ ಪ್ರತಿಭಟನೆ, WFI ಅಮಾನತು ಮಾಡುವ ಎಚ್ಚರಿಕೆ ನೀಡಿದ ವಿಶ್ವ ಕುಸ್ತಿ ಸಂಸ್ಥೆ!
ಟ್ವೀಟ್‌ನ ವಿವರಗಳು; ‘ಈ ಪ್ರಕರಣದಲ್ಲಿ ಕುಸ್ತಿಪಟುಗಳ ಪ್ರತಿಭಟನೆ ನ್ಯಾಯ ದೊರೆಯುವ ತನಕ ಮುಂದುವರೆಯಲಿದೆ. ಆದರೆ ಈ ಹೋರಾಟ ನ್ಯಾಯಾಲಯದಲ್ಲಿ ಮುಂದುವರೆಯುತ್ತದೆ ಮತ್ತು ರಸ್ತೆಯಲ್ಲಿ ಅಲ್ಲ’ ಎಂದು ಟ್ವೀಟ್‌ನಲ್ಲಿ ಕುಸ್ತಿಪಟುಗಳು ಹೇಳಿದ್ದಾರೆ.
‘ಆ ಬಗ್ಗೆ ನಾನು ಮಾತನಾಡಲ್ಲ’: ಕುಸ್ತಿಪಟು ಬಜರಂಗ್ ಪುನಿಯಾ!
‘ಸರ್ಕಾರ ಭಾರತೀಯ ಕುಸ್ತಿ ಒಕ್ಕೂಟದಲ್ಲಿನ ಬದಲಾವಣೆಗೆ ಮುಂದಾಗಿದೆ. ಸರ್ಕಾರ ನೀಡಿದ ಭರವಸೆಯಂತೆ ಪ್ರಕ್ರಿಯೆ ಆರಂಭವಾಗಿದೆ. ನಾವು ಭರವಸೆ ಕಾರ್ಯಗತವಾಗುವ ತನಕ ಕಾಯುತ್ತೇವೆ. ಜುಲೈ 11ರಂದು ಚುನಾವಣೆ ನಡೆಯಲಿದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿನೇಶ್ ಫೋಘಟ್ ಮತ್ತು ಸಾಕ್ಷಿ ಮಲ್ಲಿಕ್ ತಾವು ಸಾಮಾಜಿಕ ಜಾಲತಾಣಗಳಿಂದ ಬಿಡುವು ಪಡೆಯುತ್ತಿದ್ದೇವೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆ; ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಈಗಾಗಲೇ ದೆಹಲಿ ಪೊಲೀಸರು ತನಿಖೆ ನಡೆಸಿದ್ದಾರೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ 1500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. 200 ಹೇಳಿಕೆಗಳನ್ನು ದಾಖಲು ಮಾಡಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಜೂನ್ 27ರಿಂದ ಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯಲಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಲಿ ಸಂಸದರಾದ ಕಾರಣ ಈ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ಜನಪ್ರತಿನಿಧಿಗಳ ಕೋರ್ಟ್‌ಗೆ ವರ್ಗಾವಣೆ ಮಾಡಿದೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ಎರಡು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಎರಡು ಪ್ರಕರಣಗಳನ್ನು ರದ್ದು ಮಾಡಬೇಕು ಎಂದು ಸಹ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ.
ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354 ( ಹಲ್ಲೆ ಅಥವ ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಗಳನ್ನು ದಾಖಲು ಮಾಡಿದ್ದಾರೆ. ಕುಸ್ತಿಪಟುಗಳ ಈ ಪ್ರತಿಭಟನೆ ಸುಮಾರು 5 ತಿಂಗಳುಗಳಿಂದ ನಡೆಯುತ್ತಿತ್ತು. ಇದು ರಾಜಕೀಯ ವಾಕ್ಸಮರಕ್ಕೆ ಸಹ ಕಾರಣವಾಗಿತ್ತು. ಈಗ ಕೋರ್ಟ್‌ನಲ್ಲಿ ಹೋರಾಟ ಮುಂದುವರೆಸುತ್ತೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟಕ್ಕೆ ಮತ್ತೆ ಚುನಾವಣೆ ನಡೆಸುವುದಾಗಿ ಕುಸ್ತಿಪಟುಗಳ ಜೊತೆಗಿನ ಮಾತುಕತೆಯ ವೇಳೆ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಜುಲೈ 11ಕ್ಕೆ ಚುನಾವಣೆ ನಿಗದಿಯಾಗಿದೆ. ಜೂನ್‌ನಲ್ಲಿ ನಡೆಯಬೇಕಿದ್ದ ಚುನಾವಣೆ ಮಹಾರಾಷ್ಟ್ರ, ಹರ್ಯಾಣ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಕುಸ್ತಿ ಸಂಘಟನೆಗಳಿಂದ ಚುನಾವಣೆ ಮತ್ತು ಮಾನ್ಯತೆಗೆ ಸಂಬಂಧಿಸಿದ ಗೊಂದಲದಿಂದಾಗಿ ಮುಂದೂಡಿಕೆಯಾಗಿದೆ.
English summary
Women wrestlers announced that they were moving their campaign to the court now. Vinesh Phogat, Sakshi Malik and Bajrang Punia posted identical tweet on this.