ಮೋದಿಯ ನಾಗಾಲೋಟಕ್ಕೆ ಬ್ರೇಕ್ ಹಾಕಲು “ಆ” ಮಿತ್ರಪಕ್ಷಗಳು ಸಜ್ಜು, ಹೇಗಿದೆ ಪ್ಲಾನ್‌?, ಇಲ್ಲಿದೆ ವಿವರ | Opposition parties plan to defeat Narendra Modi in Lok Sabha elections

Bengaluru

lekhaka-Lavakumar B M

|

Google Oneindia Kannada News

ಬೆಂಗಳೂರು, ಜುಲೈ, 13: ಕರ್ನಾಟಕದಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ರಾಷ್ಟ್ರವ್ಯಾಪಿ ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳಲ್ಲಿ ಹುಮ್ಮಸ್ಸು ಬಂದಿದೆ. ಅಷ್ಟೇ ಅಲ್ಲದೆ ಮುಂದಿನ 2024ರ ಲೋಕಸಭಾ ಚುನಾವಣಾ ವೇಳೆಗೆ ಇಲ್ಲಿ ಬಳಸಲಾದ ಗ್ಯಾರಂಟಿ ಯೋಜನೆಯನ್ನೇ ದೇಶಾದ್ಯಂತ ಟ್ರಂಪ್ ಕಾರ್ಡ್ ಆಗಿ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕುವ ತಂತ್ರವನ್ನು ಸಿದ್ಧಗೊಳ್ಳುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಇಲ್ಲಿಂದಲೇ ಮುಂದಿನ ಲೋಕಸಭಾ ಚುನಾವಣೆಗೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಜ್ಜಾಗಿವೆ. ಅದರ ಒಂದು ಭಾಗವಾಗಿ ಇದೇ ಜುಲೈ 17 ಮತ್ತು 18ರಂದು ಮಿತ್ರಪಕ್ಷಗಳ ಸಭೆ ನಡೆಯುತ್ತಿದೆ. ಇದರಲ್ಲಿ ಸುಮಾರು 24 ಪಕ್ಷಗಳ ಪ್ರಮುಖರು ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಭೆಯ ಬಳಿಕ ಕೈಜೋಡಿಸಿದ ಪಕ್ಷಗಳು, ಮುಖಂಡರು, ಮುಂದಿನ ಕಾರ್ಯತಂತ್ರಗಳೇನು ಎಂಬುದು ಗೊತ್ತಾಗಲಿದೆ.

Opposition parties plan to defeat Narendra Modi in Lok Sabha elections

ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಹೇಗಾದರೂ ಮಾಡಿ ಸೋಲಿಸಿ ಎನ್‌ಡಿಎಯೇತರ ಆಡಳಿತವನ್ನು ಜಾರಿಗೆ ತರಬೇಕು ಎನ್ನುವ ಬಯಕೆ ಕಳೆದೊಂದು ದಶಕದಿಂದ ಕಾಂಗ್ರೆಸ್ ಸೇರಿದಂತೆ ವಿರೋಧಿ ಪಕ್ಷಗಳಲ್ಲಿದೆ. ಇದಕ್ಕಾಗಿ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದ್ದರೂ ಅದು ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಹಠಕ್ಕೆ ಬಿದ್ದಿದ್ದು, ಇದಕ್ಕೆ ಮಿತ್ರಕೂಟದ ನಾಯಕರು ಕೈಜೋಡಿಸಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ರೇಣುಕಾಚಾರ್ಯ ಕಣ್ಣು: ಜಿ.ಎಂ.ಸಿದ್ದೇಶ್ವರ್‌ಗೆ ಸೆಡ್ಡು ಹೊಡೆದ್ರಾ ಮಾಜಿ ಸಚಿವರು?ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ರೇಣುಕಾಚಾರ್ಯ ಕಣ್ಣು: ಜಿ.ಎಂ.ಸಿದ್ದೇಶ್ವರ್‌ಗೆ ಸೆಡ್ಡು ಹೊಡೆದ್ರಾ ಮಾಜಿ ಸಚಿವರು?

ತೆಲಂಗಾಣ ಸಿಎಂ ಪ್ರಯತ್ನ ಕೈಗೂಡಲಿಲ್ಲ

ಹಾಗೆನೋಡಿದರೆ ಇತ್ತೀಚಿನ ವರ್ಷಗಳಲ್ಲಿ ಮೋದಿ ವಿರುದ್ಧ ಮೊದಲ ಬಾರಿಗೆ ರಣಕಹಳೆ ಊದಿದವರು ತೆಲಂಗಾಣದ ಬಿಆರ್‌ಎಸ್ ಪಕ್ಷದ ನಾಯಕ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್. ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟ ಅವರು ಅದಕ್ಕಾಗಿ ಇತರೆ ಪಕ್ಷಗಳ (ಕರ್ನಾಟಕದ ಜೆಡಿಎಸ್ ಪಕ್ಷ ಸೇರಿದಂತೆ) ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಯುದ್ಧ ಸಾರಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರ ಸಂಪರ್ಕ ಬೆಳೆಸಿದ ಅವರು ಮಾತುಕತೆ ನಡೆಸಿದ್ದರು. ಮೊದಲಿಗೆ ಅದು ಫಲಪ್ರವಾಗುತ್ತದೆ ಎಂಬಂತೆ ಕಂಡು ಬಂತಾದರೂ, ನಂತರ ಮಿತ್ರಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣದಿಂದಾಗಿ ಚಂದ್ರಶೇಖರ್ ರಾವ್ ಮೌನಕ್ಕೆ ಜಾರಬೇಕಾಯಿತು. ಚಂದ್ರಶೇಖರ್ ರಾವ್ ಅವರು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಹೊರಗಿಟ್ಟು ತೃತೀಯ ರಂಗ ರಚಿಸುವ ತೀರ್ಮಾನ ಮಾಡಿದ್ದರು. ಆದರೆ ಅದು ಕೂಡ ಫಲಕೊಡಲಿಲ್ಲ.

ಆಶಾಭಾವನೆ ಮೂಡಿಸಿದ ಕಾಂಗ್ರೆಸ್ ಗೆಲುವು

ಇದೀಗ ಕಾಂಗ್ರೆಸ್ ಜತೆಗೂಡಿ ಸುಮಾರು 24 ಪಕ್ಷಗಳು ಬಿಜೆಪಿ ಅರ್ಥಾತ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದಾಗಿ ಹೋರಾಟಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೆ, ಗೆದ್ದು ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಈ ಸಂಬಂಧ ಈಗಾಗಲೇ ಮೊದಲ ಸಭೆ ನಡೆಸಲಾಗಿದ್ದು, ಎರಡನೇ ಸಭೆಗೆ ಬೆಂಗಳೂರಿನಲ್ಲಿ ಸಿದ್ಧತೆಗಳು ಸಮಾರೋಪಾಧಿಯಲ್ಲಿ ಸಾಗುತ್ತಿದೆ. ಇದು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಲ್ಲಿ ಆಶಾಭಾವನೆ ಮೂಡಿಸಿದೆ.

ದೇಶದಲ್ಲಿ ಬಿಜೆಪಿಯನ್ನೊಳಗೊಂಡ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ತೃತೀಯ ರಂಗ ರಚಿಸುವ ಸಾಹಸವನ್ನು ಮಾಡಿದ್ದರೂ ಅದು ಪ್ರಯೋಜನ ಕಾಣಲಿಲ್ಲ. ಕಳೆದ ಬಾರಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ಕೈಜೋಡಿಸಿ ಮಹಾಘಟಬಂದನ್ ಮಾಡಿದರೂ ಅದು ಯಶಸ್ಸು ಕಾಣಲಿಲ್ಲ. ಇದು ಇವತ್ತು ನಿನ್ನೆಯ ಕಥೆಯಲ್ಲ. ಪ್ರತಿ ಚುನಾವಣೆ ಬಂದಾಗಲೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ವಿದ್ಯಮಾನವಾಗಿ ಉಳಿದಿದೆ.

ಕಾಂಗ್ರೆಸ್‌ಗೆ ಮಿತ್ರಪಕ್ಷಗಳ ಆಸರೆ

ಹಾಗೆಂದು ಈ ಬಾರಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಒಗ್ಗಟ್ಟು ಪ್ರದರ್ಶನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮಿತ್ರಪಕ್ಷಗಳೆಲ್ಲ ಒಗ್ಗಟ್ಟಾದರೆ ಮೋದಿಯನ್ನು ಮಣಿಸುವುದು ಕಷ್ಟವಾಗಲಾರದು. ಜೊತೆಗೆ ಕರ್ನಾಟಕದಲ್ಲಿನ ಗೆಲುವು ಕೂಡ ಕಾಂಗ್ರೆಸ್‌ಗೆ ಶಕ್ತಿ ತುಂಬಿದೆ. ಹೀಗಾಗಿಯೇ ಮುಂದಿನ 2024ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭವಾಗಿದೆ.

ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಮೈತ್ರಿಯೊಂದಿಗೆ ಚುನಾವಣೆಗೆ ಹೋಗುವ ತೀರ್ಮಾನ ಮಾಡಿದರೂ ಅದಕ್ಕೆ ರಾಜ್ಯಮಟ್ಟದಲ್ಲಿ ಯಾವ ರೀತಿಯ ಸ್ಪಂದನೆ ದೊರೆಯುತ್ತದೆ? ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆಗೆ ಮೊದಲೇ ಘೋಷಣೆ ಮಾಡುತ್ತಾರಾ? ರಾಹುಲ್ ಗಾಂಧಿ ಪ್ರಧಾನಿ ಆಗುವುದನ್ನು ಮಿತ್ರಪಕ್ಷಗಳ ನಾಯಕರು ಒಪ್ಪುತ್ತಾರಾ? ಎನ್ನುವ ಮುಂತಾದ ಪ್ರಶ್ನೆಗಳು ಹುಟ್ಟಿಕೊಂಡಿವೆ.

ರಾಷ್ಟ್ರ ರಾಜಕಾರಣಗಳಲ್ಲಿ ಹಲವು ಬೆಳವಣಿಗೆ

ಸದ್ಯದ ಮಟ್ಟಿಗೆ ಇದ್ಯಾವುದರ ಬಗ್ಗೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಯೋಚಿಸಿದಂತೆ ಕಾಣುತ್ತಿಲ್ಲ. ಅವರ ಉದ್ದೇಶವಿರುವುದು ನರೇಂದ್ರ ಮೋದಿಯವರನ್ನು ಸೋಲಿಸುವುದಷ್ಟೇ ಆಗಿದೆ. ಅದಕ್ಕೆ ಏನು ಬೇಕೋ ಅದನ್ನು ಮಾಡಲು ತಯಾರಿ ಶುರುವಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ನಾಯಕರು ಒಮ್ಮತಕ್ಕೆ ಬಂದು ದೃಢ ಸಂಕಲ್ಪ ಮಾಡಿದರೆ ಅದನ್ನು ಬಿಜೆಪಿ ಹೇಗೆ ಎದುರಿಸುತ್ತದೆಯೋ ಗೊತ್ತಿಲ್ಲ.

ಇದೆಲ್ಲದರ ನಡುವೆ ಯಾವಾಗ ಕಾಂಗ್ರೆಸ್ ಮಿತ್ರಪಕ್ಷಗಳ ಸಭೆ ನಡೆಸಲು ಮುಂದಾಯಿತೋ ಬಿಜೆಪಿ ಕೂಡ ತನ್ನ ಎನ್ ಡಿಎ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಜೊತೆಗೆ ಒಂದಷ್ಟು ನಾಯಕರನ್ನು ಎಳೆದು ತರುವ ಕೆಲಸಕ್ಕೂ ಕೈಹಾಕಿದೆ. ಲೋಕಸಭಾ ಚುನಾವಣೆಗೆ ಎಂಟೋ ಹತ್ತೋ ತಿಂಗಳಷ್ಟೇ ಬಾಕಿಯಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಿತ್ರಪಕ್ಷಗಳ ಸಭೆ ಕುತೂಹಲ ಕೆರಳಿಸಿದ್ದು, ಸಭೆಯ ಬಳಿಕ ರಾಷ್ಟ್ರರಾಜಕಾರಣಗಳಲ್ಲಿ ಹಲವು ರೀತಿಯ ಬೆಳವಣಿಗೆಯಾಗುವುದಂತು ಖಚಿತ.

English summary

Lok Sabha elections: Opposition parties plan to defeat Narendra Modi in Lok Sabha elections, here see details

Story first published: Thursday, July 13, 2023, 18:32 [IST]

Source link