Mysuru
oi-Mallika P
ಮೈಸೂರು, ಜೂನ್ 28: ಮೈಸೂರು-ಬೆಂಗಳೂರು ಹೆದ್ದಾರಿ ಹೈವೆ ರಸ್ತೆಯೇ ಹೊರತು ರೇಸಿಂಗ್ ಟ್ರ್ಯಾಕ್ ಅಲ್ಲ. ರೇಸಿಂಗ್ ಮಾಡುವ ಟ್ರ್ಯಾಕ್ ಬೇರೆ ಕಡೆ ಸಾಕಷ್ಟಿದೆ ಎಂದು ಎಕ್ಸ್‌ಪ್ರೆಸ್ ವೇ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ. ಸಾವಿನ ಹೆದ್ದಾರಿ ಆಗಿ ಮಾರ್ಪಟ್ಟಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿ ಸರಿ ಇಲ್ಲ. ಅವೈಜ್ಞಾನಿಕತೆಯಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸಲಿ. ಕೂಡಲೇ ಎಂಜಿನಿಯರ್ ಕರೆದು ಸರಿಪಡಿಸುತ್ತವೆ. ಅದು ಬಿಟ್ಟು ಸುಮ್ಮನೆ ಹೆದ್ದಾರಿ ಕಾಮಗಾರಿ ಸರಿ ಇಲ್ಲ ಎಂದರೆ ಒಪ್ಪಿಕೊಳ್ಳುವುದು ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆದ್ದಾರಿಯಲ್ಲಿ ಸವಾರರು ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಾಲನೆ ಮಾಡಿದರೆ ಅಪಘಾತಗಳಾಗುವುದಿಲ್ಲ. ಈಗ ಅಪಘಾತವಾಗುತ್ತಿರುವುದು ಚಾಲಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಚಾಲನೆಯಿಂದಲೇ ಹೊರತು ರಸ್ತೆಯ ಕಾರಣಕ್ಕಲ್ಲ. 120 ಕಿಮೀ ವೇಗದಲ್ಲಿ ಕಾರುಗಳು ಹೋಗುತ್ತಿವೆ. ಇದರಿಂದ ಅಪಘಾತ ಆಗುತ್ತಿದೆ. ಕಡಿಮೆ ಸಾಮಾರ್ಥ್ಯ ಇರುವ ಕಾರುಗಳು ಮಧ್ಯರಾತ್ರಿ ಅತಿ ವೇಗದಲ್ಲಿ ಹೋಗಿ ಜೀವಗಳು ಬಲಿಯಾಗುತ್ತಿವೆ ಎಂದರು.
ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ: ದಂಪತಿ ಸೇರಿ ಮೂವರ ದುರ್ಮರಣ
ದಶಪಥ ಹೆದ್ದಾರಿಯ ಸಮಸ್ಯೆಗಳು
ಹೆದ್ದಾರಿ ಬದಿ ಪೆಟ್ರೋಲ್ ಬಂಕ್, ಶೌಚಗೃಹದ ವ್ಯವಸ್ಥೆ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗೆ ಆಗಿದೆ. ಆ ಸಂದರ್ಭದಲ್ಲಿ ನನಗೂ ಅಷ್ಟು ಅನುಭವ ಇರಲಿಲ್ಲ. ಹಾಗಾಗಿ, ಕೆಲವೊಂದು ವ್ಯತ್ಯಾಸಗಳಾಗಿವೆ. ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ಎಕ್ಸ್‌ಪ್ರೆಸ್ ವೇನಲ್ಲಿ ನಿರ್ಬಂಧಿಸಲಾಗುವುದು ಎಂದರು.
ಇನ್ನು ಸರಕು ಸಾಗಣೆ ವಾಹನಗಳನ್ನು ಎಡ ಭಾಗದಲ್ಲಿ ಚಲಿಸುವಂತೆ ಕ್ರಮವಹಿಸಲಾಗುವುದು. ಅಧಿಕಾರಿಗಳು ಮೊದಲೇ ಸರಿಯಾಗಿ ಮಾಡಬಹುದಿತ್ತು. ಊರು ಎಲ್ಲೋ ಇದ್ದರೆ ಅಂಡರ್ ಪಾಸ್ ಎಲ್ಲೋ ಮಾಡಿದರು. ಸೂಕ್ತವಾದ ಪ್ರವೇಶ, ನಿರ್ಗಮನಗಳನ್ನು ನೀಡಲಿಲ್ಲ. ಈ ತಪ್ಪುಗಳನ್ನು ಸರಿಪಡಿಸಬೇಕಾಗಿದೆ. ಅದಕ್ಕಾಗಿಯೇ ಹೊಸದಾಗಿ ಯೋಜನೆ ಸಿದ್ಧಡಿಸಲಾಗಿದೆ ಎಂದರು.
ಶ್ರೀರಂಗಪಟ್ಟಣ ಟೋಲ್ ಸಂಗ್ರಹ ಸದ್ಯಕ್ಕಿಲ್ಲ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಉದ್ಭವವಾಗಿರುವ ಕೆಲವು ಸಮಸ್ಯೆಗಳನ್ನು ಬಗೆಹರಿಸದೆ ಶ್ರೀರಂಗಪಟ್ಟಣ ಟೋಲ್ ಸಂಗ್ರಹ ಆರಂಭಿಸುವುದಿಲ್ಲ. ಜುಲೈ 1 ರಿಂದ ಶ್ರೀರಂಗಪಟ್ಟಣದಲ್ಲಿ ಟೋಲ್ ಸಂಗ್ರಹ ಆರಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ ಈ ಹೆದ್ದಾರಿ ಬಳಕೆಯಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಅದನ್ನು ಪೂರ್ಣಗೊಳಿಸಿದ ಬಳಿಕ ಟೋಲ್ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
English summary
Bengaluru-Mysuru Express Highway is not a racing track says MP Pratap Simha,
Story first published: Wednesday, June 28, 2023, 19:12 [IST]