Travel
oi-Madhusudhan KR
ಮೈಸೂರು, ಜುಲೈ, 02: ರಾಜ್ಯದ ಬಹುತೇಕ ಕಡೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಆದರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮತ್ತು ಇಲ್ಲಿನ ಸುತ್ತಮುತ್ತಲಿನ ತಾಣಗಳ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಹಾಗಾದರೆ ಮೈಸೂರು ಜಿಲ್ಲೆಯಲ್ಲಿ ಈ ಕಾಲಕ್ಕೆ ನೋಡಲು ಸೂಕ್ತವಾಗಿರುವ ಪ್ರವಾಸಿ ತಾಣಗಳ ವಿವರವನ್ನು ಇಲ್ಲಿ ಗಮನಿಸಿ.
ಮಳೆಗಾಲ ಬಂದರೆ ಸಾಕು ವಾತಾವರಣ ಹೊಸರೂಪದಲ್ಲಿ ಕಂಗೊಳಿಸುತ್ತದೆ. ಕೆಲವು ಪ್ರವಾಸಿ ತಾಣಗಳು ಮಳೆಗಾಲದಲ್ಲಿ ತನ್ನ ಸೌಂದರ್ಯವು ಇಮ್ಮಡಿಗೊಳಿಸುತ್ತವೆ. ಹಾಗಾಗಿ ಬಹುತೇಕರು ಮಳೆಗಾಲದಲ್ಲಿ ತಮ್ಮ ಪ್ರವಾಸವನ್ನು ಚಿರಸ್ಮರಣೀಯವಾಗಿಸಲು ಪ್ರವಾಸ ಮಾಡಲು ಬಯಸುತ್ತಾರೆ.
ಸಾಮಾನ್ಯವಾಗಿ ಮಳೆಗಾಲ ಬಂದರೆ ಸಾಕು ಒಂದಷ್ಟು ಮಂದಿ ಚಹಾ, ಕಾಫಿಯೊಂದಿಗೆ ಬಿಸಿ ಬಿಸಿ ಬೋಂಡಾ, ಬಜ್ಜಿಗಳನ್ನು ಸವಿಯುತ್ತಾ ಮನೆಯೊಳಗೆ ಬೆಚ್ಚಗೆ ಇರಲು ಬಯಸುತ್ತಾರೆ. ಆದರೆ ಇನ್ನೊಂದಷ್ಟು ಮಂದಿ ಮಳೆಗಾಲದಲ್ಲೂ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಅಲ್ಲಿನ ಆಹ್ಲಾದಕರ ವಾತಾವರಣದ ಸವಿಯುಂಡು ಬರಲು ಇಷ್ಟಪಡುತ್ತಾರೆ.
ಜಿನುಗು ಮಳೆ ನಡುವೆಯೇ ಕಾಫಿನಾಡಿನ ಪ್ರಮುಖ ಪ್ರವಾಸಿ ತಾಣಗಳತ್ತ ಹರಿದುಬಂತು ಪ್ರವಾಸಿಗರ ದಂಡು
ನೀವು ನಿಜವಾಗಿಯೂ ಪ್ರವಾಸ ಪ್ರಿಯರಾಗಿದ್ದರೆ ಖಂಡಿತವಾಗಿಯೂ ಮಳೆಗಾಲದ ಜಾಗಗಳಿಗೆ ಜೀವನದಲ್ಲೊಮ್ಮೆ ಆದರೂ ಹೋಗದೆ ಇರಲಾರಿರಿ!
ಹಾಗಾದರೆ ಬನ್ನಿ ನಮ್ಮದೇ ದೇಶದ ಅದ್ಭುತ ಎನಿಸುವ ಕೆಲವು ಸ್ಥಳಗಳನ್ನೊಮ್ಮೆ ಸುತ್ತು ಹಾಕಿಕೊಂಡು ಬರೋಣ.
ಮಳೆಗಾಲ ಬಂದರೆ ಸಾಕು ಕನ್ನಂಬಾಡಿ ಅಣೆಕಟ್ಟು ಸೊಗಸಾಗಿ ಕಾಣುತ್ತದೆ. ಬೃಂದಾವನ ಉದ್ಯಾನವನದ ಪ್ರವೇಶದ್ವಾರದಿಂದ 6 ಕಿಲೋ ಮೀಟರ್ ದೂರದಲ್ಲಿರುವ ಹಿನ್ನೀರಿಗೆ ಪ್ರವಾಸಿಗರು ಸಂಜೆ ಹೊತ್ತಿನಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ. 12ನೇ ಶತಮಾನದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಈಗ ಹೊಸ ಕನ್ನಂಬಾಡಿ ಗ್ರಾಮದ ಹೊರಭಾಗದಲ್ಲಿ ಸ್ಥಳಾಂತರಿಸಲಾಗಿದೆ. ಮಳೆಗಾಲದಲ್ಲಿ ನೀವು ಈ ಪ್ರದೇಶವನ್ನು ನೋಡಲೇಬೇಕು.
2000ರಲ್ಲಿ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಇಳಿದಾಗ ಹಿನ್ನೀರಿನಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಪತ್ತೆಯಾಗಿತ್ತಲ್ಲದೆ, ಅದು ಪ್ರವಾಸಿಗರು, ಸಾರ್ವಜನಿಕರನ್ನು ಬಹುವಾಗಿ ಆಕರ್ಷಿಸಿತ್ತು. ದೇವಾಲಯದ ಸೌಂದರ್ಯಕ್ಕೆ ಮಾರು ಹೋಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರಿಂದ ಖೋಡೆಸ್ ಕಂಪನಿ ಜಲಾಶಯದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡಿ ಸುಂದರವಾಗಿ ದೇವಾಲಯ ನಿರ್ಮಿಸಲಾಗಿದೆ. ಇದೀಗ ದೇವಾಲಯವು ಪ್ರವಾಸಿಗರ ಮನಸೆಳೆಯುತ್ತಿದೆ.
ಇನ್ನು ನಿಸರ್ಗದ ಮಡಿಲಲ್ಲಿರುವ ಎಚ್.ಡಿ.ಕೋಟೆಯ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯ ರೈತರ ಜೀವನಾಡಿಯಾಗಿದೆ. ಜೊತೆಗೆ ಮೈಸೂರು ಸೇರಿದಂತೆ ಹಲವು ಗ್ರಾಮ, ಪಟ್ಟಣಗಳಿಗೆ ಜೀವ ಜಲವೂ ಹೌದು. ಬಾಯಾರಿದ ವನ್ಯ ಮೃಗಗಳ ದಾಹ ತಣಿಸುವ ಜಲದಾತೆಯೂ ಹೌದು. ಕಬಿನಿಯತ್ತ ಹೆಜ್ಜೆ ಹಾಕಿದರೆ ಹಿನ್ನೀರಿನಲ್ಲಿ ಸಹಸ್ರಾರು ಬಾನಾಡಿಗಳು ಬೀಡುಬಿಟ್ಟಿರುವ ಮನಮೋಹಕ ದೃಶ್ಯ ಕಣ್ಮನ ಸೆಳೆಯುತ್ತವೆ.
ಮೊದಲೆಲ್ಲ ವಲಸೆ ಬರುವ ಹಕ್ಕಿಗಳು ರಂಗನತಿಟ್ಟನ್ನು ಆಶ್ರಯಿಸುತ್ತಿದ್ದವು. ಆದರೆ ಇತ್ತೀಚೆಗೆ ಪಕ್ಷಿಗಳು ಕೂಡ ಸುರಕ್ಷಿತ ಮತ್ತು ಹೇರಳ ಆಹಾರ ದೊರೆಯುವ ತಾಣವನ್ನು ಅರಸಿಕೊಂಡು ಹೋಗುತ್ತಿವೆ. ಅವುಗಳು ಜಲಾಶಯಗಳ ಹಿನ್ನೀರಿನಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿವೆ. ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗಿ ನೀರು ಹರಿದುಬರುತ್ತದೆ. ಹೀಗಾಗಿ ಹಿನ್ನೀರು ಪ್ರದೇಶ ನೀರಿನಿಂದ ಆವೃತವಾಗುತ್ತದೆ. ಮಳೆಗಾಲದಲ್ಲಿ ಇದನ್ನು ನೋಡುವುದದೇ ಸೊಗಸು. ಮೈಸೂರಿನಿಂದ ಕಬಿನಿ ಜಲಾಶಯಕ್ಕೆ 60 ಕಿ.ಮೀ. ಇದೆ. ಇಲ್ಲಿದೆ ಕಾರು, ಬೈಕಿನಲ್ಲಿ ಹೋಗಬಹುದು.
ಮಲ್ಲಳ್ಳಿ ಜಲಪಾತವು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಒಂದು ಅದ್ಭುತ ಜಲಪಾತವಾಗಿದೆ. ಮಲ್ಲಳ್ಳಿ ಜಲಪಾತವು ತನ್ನ ಸೌಂದರ್ಯ ಮತ್ತು ಪ್ರಶಾಂತ ಪರಿಸರಕ್ಕೆ ಹೆಸರುವಾಸಿಯಾದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕೊಡಗಿನಲ್ಲಿ ಹಸಿರಿನಿಂದ ಆವೃತವಾದ ಬೆಟ್ಟಗಳು ಇಲ್ಲಿನ ತೋಟಗಳು, ಕಾವೇರಿ ನದಿಯ ವೈಭವ, ನೀರಿನ ಜಲಪಾತಗಳ ದೃಶ್ಯಗಳು ಪರಮಾನಂದಕರ. ಸೋಮವಾರಪೇಟೆಯಲ್ಲಿ ಇದು ಕಂಡು ಬರುತ್ತದೆ. ಮೈಸೂರಿನಿಂದ 120 ಕಿ.ಮೀ.ದೂರ ಇದ್ದು, ರಸ್ತೆ ಪ್ರಯಾಣಕ್ಕೆ ಹೇಳಿಮಾಡಿಸಿದಂತಿದೆ.
ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬಲಮುರಿ ಹಾಗೂ ಎಡಮುರಿ ಜಲಪಾತಗಳು ಪ್ರವಾಸಿಗರ ಪಾಲಿಗೆ ಸುಂದರ ತಾಣಗಳಾಗಿವೆ. ಕುಟುಂಬ ಸಮೇತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ನೀರಿನೊಡನೆ ಕಾಲ ಕಳೆಯಲು ಇದು ಹೇಳಿಮಾಡಿಸಿದ ತಾಣವಾಗಿದೆ. ವಿಶೇಷ ಮೀನೂಟಕ್ಕೂ ಈ ತಾಣ ಪ್ರಸಿದ್ಧ ಪಡೆದಿದೆ. ಆದರೆ, ನೀರಿನೊಂದಿಗೆ ಆಟವಾಡುವಾಗ ಜಾಗೃತಿ ಅವಶ್ಯ. ಇದು ಮೈಸೂರಿನಿಂದ ಕೇವಲ 16 ಕಿ.ಮೀ. ಇದೆ.
ಕೆಆರ್‌ಎಸ್ ಹಿನ್ನೀರು ಪ್ರದೇಶದ ಅದ್ಭತ ಸೊಬಗು ಸವಿಯಬೇಕಾದರೆ ನೀವೊಮ್ಮೆ ಮೀನಾಕ್ಷಿಪುರಕ್ಕೆ ಹೋಗಲೇಬೇಕು. ಇದು ಮೈಸೂರಿನಿಂದ ಕೇವಲ 23 ಕಿಮೀನಲ್ಲೇ ಸಿಗುತ್ತದೆ. ವಿಶಾಲವಾದ ನೀರಿನ ಹರಿವನ್ನು ಕಣ್ತುಂಬಿಕೊಳ್ಳಬೇಕಾದರೆ ಮೀನಾಕ್ಷಿ ಪುರ ಹೇಳಿ ಮಾಡಿಸಿದ ತಾಣವಾಗಿದೆ.
English summary
Monsoon Rain: Best tourist spots for Rainy season near Mysuru district, here see Rout and places details
Story first published: Sunday, July 2, 2023, 17:42 [IST]