Mysuru
lekhaka-Lavakumar B M
ಮೈಸೂರು, ಜೂನ್, 25: ಈಗಿನ ಕಾಲದಲ್ಲಿ ಕಷ್ಟ ಬಂದರೇ ಸಾಕು ತಮ್ಮ ಪೋಷಕರನ್ನು ದೂರ ಮಾಡುವ ಮಕ್ಕಳೇ ಹೆಚ್ಚಾಗಿದ್ದಾರೆ. ಅಂತದ್ದರಲ್ಲೂ ಮೈಸೂರು ಜಿಲ್ಲೆಯಲ್ಲೊಂದು ತಂಡ ಮನೆ ಮನೆಗೆ ಭೇಟಿ ನೀಡಿ ವಯಸ್ಸಾದವರ ಆರೋಗ್ಯವನ್ನು ವಿಚಾರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಅಷ್ಟಕ್ಕೂ ಆ ತಂಡದ ಹೆಸರೇನು? ಇದು ಆರಂಭವಾಗಿದ್ದು ಯಾವಾಗ? ಮತ್ತು ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಎಲ್ಲ ಭಾಗ್ಯಗಳಿಗಿಂತಲೂ ಮಿಗಿಲಾದದ್ದು ಆರೋಗ್ಯ ಭಾಗ್ಯ ಎನ್ನುವುದು ನಮಗೆ ಗೊತ್ತಾಗುವುದು ನಮ್ಮ ಆರೋಗ್ಯ ಹದಗೆಟ್ಟಾಗ ಮಾತ್ರ. ಅದರಲ್ಲೂ ವಿವಿಧ ಕಾಯಿಲೆ, ವೃದ್ಧಾಪ್ಯದಿಂದ ಹಾಸಿಗೆ ಹಿಡಿದರೆ ಅಂತಹವರ ಬದುಕು ಮತ್ತು ಅವರನ್ನು ನೋಡಿಕೊಳ್ಳುವವರ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಅನುಭವ ಇದ್ದವರಿಗೆ ಮತ್ತು ಅನುಭವಿಸುತ್ತಿರುವವರಿಗೆ ಮಾತ್ರ ಗೊತ್ತು.
ಇಂತಹ ರೋಗಿಗಳಿಗೆ ಮತ್ತು ಆ ರೋಗಿಯ ಮನೆಯರಿಗೆ ಕಷ್ಟದ ಕಾಲದಲ್ಲಿ ಒಂದಿಷ್ಟು ಸಾಂತ್ವನ ಮತ್ತು ಆರೋಗ್ಯದ ಬಗೆಗೆ ಸಹಕಾರ ಸಿಕ್ಕಿದರೆ ಅದು ಮರುಭೂಮಿಯಲ್ಲಿ ಸಿಕ್ಕ ನೀರಿನಷ್ಟು ಖುಷಿಯಾಗುತ್ತದೆ. ಬಹಳಷ್ಟು ಮನೆಗಳಲ್ಲಿರುವ ಇಂತಹ ರೋಗಿಗಳನ್ನು ನೋಡಿಕೊಳ್ಳಲು ಸಂಬಂಧಿಕರಿರಲಿ, ಒಡಹುಟ್ಟಿದವರು, ಮಕ್ಕಳೇ ಮುಂದೆ ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಆಸರೆಯಾಗಿ ನಿಂತು ಆರೈಕೆ ಮಾಡಿದ ಮತ್ತು ಮಾಡುತ್ತಿರುವ ಕೀರ್ತಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ಗೆ ಸಲ್ಲುತ್ತದೆ.
ಹೆಚ್.ಡಿ.ಕೋಟೆ: ನಾವು ಕುಡಿಯುತ್ತಿರುವುದೇ ಕೊಳಚೆ ನೀರು, ವಡ್ಡರಗುಡಿ ಗ್ರಾಮದ ಜನ ಹೀಗೆ ಹೇಳಿದ್ದೇಕೆ?
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆರಂಭಿಸಿರುವ ವಿಶೇಷ ವೈದ್ಯಕೀಯ ಆರೈಕೆಯ ಉಪಶಮನ ಆರೈಕೆ ಯೋಜನೆ ಇವತ್ತು ಬಹಳಷ್ಟು ರೋಗಿಗಳಿಗೆ ಆರೋಗ್ಯ ಸುಧಾರಣೆಗೆ, ಮಾನಸಿಕ ನೆಮ್ಮದಿಗೆ ದಾರಿಯಾಗಿದೆ. ಇನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆರಂಭಿಸಿರುವ ಉಪಶಮನ ಆರೈಕೆ ಯೋಜನೆ ಎಂದರೇನು? ಇದು ಯಾವಾಗ ಆರಂಭವಾಯಿತು? ಎಂಬಿತ್ಯಾದಿ ವಿಚಾರಗಳ ಕುರಿತಂತೆ ಪ್ರಶ್ನೆಗಳು ಪ್ರತಿಯೊಬ್ಬರಲ್ಲಿ ಮೂಡದಿರದು. ಅದರ ಬಗ್ಗೆ ತಿಳಿಯುತ್ತಾ ಹೋದರೆ ಉಪಶಮನ ಆರೈಕೆ ಯೋಜನೆಯ ಕಾರ್ಯವೈಖರಿ ಮತ್ತು ಮಹತ್ವ ಅರಿವಾಗುತ್ತದೆ.
ಕ್ಯಾನ್ಸರ್, ಹೃದಯ- ಸಂಬಂಧಿ ಕಾಯಿಲೆ, ಪ್ರಮುಖ ಅಂಗ ವೈಫಲ್ಯ, ಔಷಧ-ನಿರೋಧಕ ಕ್ಷಯ, ಕೊನೆಯ ಹಂತದ ದೀರ್ಘಕಾಲದ ಅನಾರೋಗ್ಯ, ತೀವ್ರವಾದ ಆಘಾತ, ವೃದ್ಧಾಪ್ಯದ ತೀವ್ರ ನಿಶ್ಶಕ್ತತೆ ಹೀಗೆ ಹತ್ತು ಹಲವು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಊರುಗೋಲಾಗಿ ನಿಂತು ಅವರ ಆರೈಕೆಗೆ ಒತ್ತು ನೀಡುವುದರೊಂದಿಗೆ, ಗಂಭೀರವಾದ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರ ನೋವನ್ನು ನಿವಾರಿಸುವ, ದೈಹಿಕ, ಮಾನಸಿಕ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (SVYM) ಮಾಡುತ್ತಿದೆ.
ಈ ಸಂಸ್ಥೆ 2009ರಲ್ಲಿ ಮೈಸೂರು ನಗರದಲ್ಲಿ ಉಪಶಮನ ಆರೈಕೆ ಯೋಜನೆಯನ್ನು ಆರಂಭಿಸಿತು. ಆರಂಭದ ದಿನಗಳಲ್ಲಿ ಮನೆ ಆಧಾರಿತ ಸೇವೆಯಾಗಿತ್ತು. ಆದರೂ ನಂತರ 2018ರಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ 16 ಹಾಸಿಗೆಯುಳ್ಳ ಆರೋಗ್ಯ ಕೇಂದ್ರವನ್ನು ಆರಂಭಿಸಿತು. ಈಗ ಸರಗೂರು, ಹಾಸನ, ಬೆಂಗಳೂರು ಮತ್ತು ಧಾರವಾಡದಲ್ಲೂ ಈ ಯೋಜನೆ ವಿಸ್ತರಣೆಯಾಗಿದೆ.
ಮನೆ ಆಧಾರಿತ ಆರೈಕೆಗೆ ಮೊದಲ ಆದ್ಯತೆ
ಉಪಶಮನ ಆರೈಕೆ ಯೋಜನೆ ವಿವಿಧ ಹಂತಗಳಲ್ಲಿ ಬಳಕೆಯಾಗುತ್ತಿದ್ದು, ಇಲ್ಲಿ ರೋಗಿ ಹಾಗೂ ಕುಟುಂಬವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಆರೈಕೆಯನ್ನು ರೂಪಿಸುವುದು ವಿಶೇಷವಾಗಿದೆ. ಕೆಲವು ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಉಳಿದಂತೆ ಮನೆ ಆಧಾರಿತ ಆರೈಕೆಗೆ ಆದ್ಯತೆ ನೀಡಲಾಗುತ್ತಿದೆ.
ಇಲ್ಲಿ ವೈದ್ಯರು, ದಾದಿಯರು ಹಾಗೂ ಸಾಮಾಜಿಕ ಕಾರ್ಯಕರ್ತರ ತಂಡವಿದ್ದು, ಈ ತಂಡವು ರೋಗಿಯ ಮನೆಗೆ ಭೇಟಿ ಮಾಡಿ ಕೂಲಂಕುಶವಾಗಿ ಪರೀಕ್ಷಿಸುತ್ತದೆ. ನಂತರ ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡುತ್ತದೆ. ಜೊತೆಗೆ ಕುಟುಂಬದವರಿಗೆ ರೋಗಿಯ ಸೂಕ್ತ ಆರೈಕೆ ಮಾಡಲು ತರಬೇತಿ ನೀಡಲಾಗುತ್ತದೆ.
ಅಷ್ಟೇ ಅಲ್ಲದೆ, ಆಪ್ತಸಮಾಲೋಚನೆ ಮೂಲಕ ರೋಗಿ ಮತ್ತು ಕುಟುಂಬದವರಿಗೆ ಭಾವನಾತ್ಮಕ ಬೆಂಬಲ ಕೊಡಲಾಗುತ್ತದೆ. ಆರ್ಥಿಕ ಸಮಸ್ಯೆಗಳಿದ್ದಲ್ಲಿ, ಸರ್ಕಾರಿ ಯೋಜನೆಗಳ ಶಿಫಾರಸ್ಸು ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ತಂಡದ ದೂರವಾಣಿ ಸಂಖ್ಯೆಯನ್ನು ಎಲ್ಲಾ ನೊಂದಾಯಿತ ರೋಗಿ ಹಾಗೂ ಕುಟುಂಬದವರಿಗೆ ನೀಡಿ ದಿನದ ಯಾವುದೇ ಸಮಯದಲೂ ಅಗತ್ಯ ಬಂದಲ್ಲಿ ಉಪಶಮನ ಆರೈಕೆ ತಂಡವನ್ನು ಸಂಪರ್ಕಿಸುವ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಸಂಪೂರ್ಣ ಉಚಿತ ಸೇವೆ
ಒಂದು ವೇಳೆ ರೋಗಲಕ್ಷಣಗಳು ತೀವ್ರಗೊಂಡಲ್ಲಿ ಅಥವಾ ಮನೆಯಲ್ಲಿ ಆರೈಕೆ ಮಾಡಲು ಕಷ್ಟವಾದಾಗ, ಉಪಶಮನ ಆರೈಕೆ ಕೇಂದ್ರದ ಒಳರೋಗಿ ವಿಭಾಗದಲ್ಲಿ ದಾಖಲಿಸಿ ಆರೈಕೆ ಮಾಡುವುದು ವಿಶೇಷವಾಗಿದೆ. ರೋಗ ಉಲ್ಬಣಗೊಂಡು ರೋಗಿ ಮೃತರಾದ ನಂತರವೂ ಪರಿಸ್ಥಿತಿಗೆ ಅನುಗುಣವಾಗಿ ಕುಟುಂಬದವರಿಗೆ ಮುಂದಿನ ಜೀವನ ಸುಗಮವಾಗಿ ಸಾಗಿಸಲು ಅನುಕೂಲವಾಗುವಂತೆ ಸೀಮಿತ ಅವಧಿಗೆ ಬೆಂಬಲ ನೀಡಲಾಗುತ್ತಿದೆ.
ಇದರ ಜತೆಗೆ ಸಮುದಾಯದಲ್ಲಿ ಉಪಶಮನ ಆರೈಕೆ ಬಗ್ಗೆ ಅರಿವು ಮೂಡಿಸಲು ಉಪನ್ಯಾಸ ಕಾರ್ಯಕ್ರಮ, ಆರೋಗ್ಯ ಶಿಬಿರ, ಜಾಥಾ, ಕರಪತ್ರದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿವಿಧ ಸಂಸ್ಥೆಗಳ ವೈದ್ಯಕೀಯ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮತ್ತು ಸಂಶೋಧನೆಯಲ್ಲಿ ಭಾಗಿಯಾಗುತ್ತಿದೆ. ಈ ಎಲ್ಲಾ ಸೇವೆಗಳನ್ನು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಸಂಪರ್ಕಿಸಬೇಕಾದ ಮೊಬೈಲ್ ನಂಬರ್
ಉಪಶಮನ ಆರೈಕೆ ಯೋಜನೆಯ ಪ್ರಯೋಜನವನ್ನು ಇದುವರೆಗೆ 8,400ಕ್ಕೂ ಹೆಚ್ಚು ಕುಟುಂಬಗಳು ಪಡೆದಿದ್ದು, ಈ ಕಾರ್ಯ ಸಾಗುತ್ತಲೇ ಇದೆ. ಈ ಕುರಿತಂತೆ ಮಾಹಿತಿಗೆ ಎಸ್.ವಿ.ವೈ.ಎಂನ ಉಪಶಮನ ಆರೈಕೆ ಕೇಂದ್ರದ ವ್ಯವಸ್ಥಾಪಕರಾದ ನಂದಿನಿ ಶಂಕರ್ ಅವರ ಮೊಬೈಲ್ ನಂ. 9591407955ನ್ನು ಸಂಪರ್ಕಿಸಬಹುದಾಗಿದೆ.
English summary
Free health service to poor patients from Upashamana Araike in Mysuru district, here see details,
Story first published: Sunday, June 25, 2023, 17:19 [IST]