Bengaluru
oi-Madhusudhan KR

ಬೆಂಗಳೂರು, ಜುಲೈ, 13: ಬಿಡಿಎ ಸ್ವಾಮ್ಯದ ಸ್ವತ್ತನ್ನು ಮೆಟ್ರೋ ಕಾಮಗಾರಿಗೆ ಸ್ವಾಧೀನಪಡಿಸಿರುವ ಸರ್ಕಾರಿ ಜಮೀನಿನ ಪರಿಹಾರವನ್ನು ಖಾಸಗಿಯವರಿಗೆ 24 ಕೋಟಿ ಪರಿಹಾರ ನೀಡಿ ಅಕ್ರಮ ಎಸಗಲಾಗಿರುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸ್ವತ್ತನ್ನು ಬಿಡಿಎ ಸ್ವಾಧೀನಕ್ಕೆ ಬಂದ ನಂತರ ಬಿಎಂಆರ್‌ಸಿಎಲ್ ಮೆಟ್ರೋ ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಂಡಿದೆ ಎಂದು ನಮ್ಮ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಸರ್ಕಾರಿ ಜಮೀನು ಸ್ವಾಧೀನಕ್ಕೆ ಖಾಸಗಿಯವರಿಗೆ ಪರಿಹಾರ ನೀಡಲಾಗಿದೆ ಎಂಬ ಆರೋಪ ಕೇಳಿಬಂದರೆ ಈ ಬಗ್ಗೆ ಖಂಡಿತವಾಗಿ ತನಿಖೆ ಮಾಡಲಾಗುವುದು ಎಂದರು.
ಹಾಗೆಯೇ ನಿಮ್ಮ ಬಳಿ ಏನೇ ದಾಖಲೆಗಳಿದ್ದರೂ ನಮಗೂ ನೀಡಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಣವನ್ನು ಬೇರೆಯವರು ಪಡೆದಿದ್ದರೆ ಅದರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಐವರು ದಕ್ಷ ಅಧಿಕಾರಿಗಳ ಟಾಸ್ಕ್ ಫೋರ್ಸ್ ರಚನೆ ಮಾಡಿರುವುದು ಸ್ವಾಗತಾರ್ಹ ಎಂದರು. ಇದೇ ಟಾಸ್ಕ್ ಫೋರ್ಸ್ ಅನ್ನು ಬಿಡಿಎ ವ್ಯಾಪ್ತಿಗೂ ವಿಸ್ತರಿಸಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಬೇಕು ಎಂದು ಸದಸ್ಯ ಮರಿತಿಬ್ಬೆಗೌಡರು ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿಗಳು, ನಾನು ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಅಷ್ಟರಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಬೆಂಗಳೂರಿನ ಶಾಸಕರೊಬ್ಬರು ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರ ಯಾಕೆ? ಇಡೀ ಬೆಂಗಳೂರಿನಲ್ಲಿ ತನಿಖೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇಂದು ಟಾಸ್ಕ್ ಫೋರ್ಸ್ ರಚನೆ ಬಗ್ಗೆ ತೀರ್ಮಾನ ಮಾಡುತ್ತೇನೆ. ನೀವು ಹೇಳಿರುವ ಪ್ರಕರಣದ ಬಗ್ಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಕೊಡಿ. ಈ ವಿಚಾರವಾಗಿಯೂ ತನಿಖೆ ಮಾಡಿಸಲಾಗುವುದು ಎಂದು ತಿಳಿಸಿದರು.
ನಂತರ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರು ಕೆಬಿಜೆಎನ್ಎಲ್ ಮತ್ತು ಕೆಎನ್ಎಲ್ ನಿಗಮಗಳಲ್ಲಿ ಎಸ್‌ಸಿಪಿ, ಟಿಎಸ್ಪಿ ಯೋಜನೆ ಅಡಿಯಲ್ಲಿ ಬಾಗಲಕೋಟೆಯಲ್ಲಿ 608ರ ಪೈಕಿ 91 ಕೊಳವೆಬಾವಿ ಟೆಂಡರ್ ಹಂತದಲ್ಲಿವೆ. ಉಳಿದ ಕೊಳವೆಬಾವಿ ಟೆಂಡರ್ ಆಗಿದೆ. ಆದಷ್ಟು ಬೇಗ ಈ ಕೊಳವೆ ಬಾವಿ ತೆಗೆದು ಫಲಾನುಭವಿಗಳಿಗೆ ನೀಡಬೇಕು ಎಂದು ಕೇಳಿದ್ದಕ್ಕೆ ಈ ಭಾಗದಲ್ಲಿ 608 ಕೊಳವೆಬಾವಿ ಕೊರೆಯಲು ತೀರ್ಮಾನಿಸಲಾಗಿದ್ದು, 91 ಪ್ಯಾಕೇಜ್‌ಗಳನ್ನು ನಿಗದಿ ಮಾಡಲಾಗಿದೆ.
ಕೆಲವು ಕೊರೆಯಲಾಗಿದ್ದು, ಮತ್ತೆ ಕೆಲವು ಕೊರೆಯಲಾಗಿಲ್ಲ. ಸರ್ಕಾರದಿಂದ ಕೊರೆಯದಂತೆ ಸುತ್ತೋಲೆ ಹೋಗಿದ್ದ ಕಾರಣ ತಡವಾಗಿದ್ದು, ನಿಯಮಾನುಸಾರ ಈ ಕಾಮಗಾರಿ ಮುಕ್ತಾಯಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಯುಕೆಪಿ ಸಾಮರ್ಥ್ಯ ಹೆಚ್ಚಳಕ್ಕೆ ಭೂಸ್ವಾದೀನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಈ ಯೋಜನೆಗೆ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿತ್ತು. ಆದರೆ ಹಣ ನಿಗದಿ ಮಾಡುವಾಗ 1200 ಕೋಟಿ ನೀಡಿತ್ತು. ನಮ್ಮ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಅಷ್ಟೇ ಮೊತ್ತವನ್ನು ಮುಂದುವರೆಸಿದೆ. ಈ ಅನುದಾನ ಯೋಜನೆಗೆ ಸಾಲುವುದಿಲ್ಲ. ಈಗ ನೀಡಲಾಗಿರುವ ಹಣವನ್ನು ಪೂರೈಸಲಾಗುವುದು.
ಈ ಯೋಜನೆಗೆ ಭೂಸ್ವಾಧೀನ ತಡವಾದಷ್ಟು ಬೆಲೆ ಹೆಚ್ಚಾಗಿ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಾವು ನಮ್ಮ ಪ್ರಣಾಳಿಕೆಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾವು ಗ್ಯಾರಂಟಿ ಯೋಜನೆಗಳ ಜಾರಿ ಜೊತೆಗೆ ಈ ಯೋಜನೆಗಳನ್ನು ನಿಭಾಯಿಸಬೇಕಿದೆ. ಮುಂದಿನ ದಿನಗಳಲ್ಲಿ ನೀರಾವರಿಗೆ ಹೆಚ್ಚಿನ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು.
ಈ ಯೋಜನೆ ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ಬೇಡಿಕೆ ಇದೆ. ಕೇಂದ್ರ ಸರ್ಕಾರ ಈ ವಿಚಾರವಾಗಿ ನೋಟಿಫಿಕೇಷನ್ ಹೊರಡಿಸುತ್ತಿಲ್ಲ. ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ಕೊಟ್ಟಂತೆ ನಮಗೂ ಸಹಕಾರ ನೀಡಿದ್ದರೆ ಇದಕ್ಕೆ ಈಗಾಗಲೇ ರೂಪ ಸಿಗುತ್ತಿತ್ತು. 26 ಸಂಸದರು ಸೇರಿ ಕೇಂದ್ರದ ಮೇಲೆ ಒತ್ತಡ ಹಾಕಿ ನಮಗೆ ಸಹಕಾರ ನೀಡಿ. ಈ ವಿಚಾರದಲ್ಲಿ ರಾಜಕೀಯ ಬದ್ಧತೆ ಕೂಡ ಬೇಕಿದೆ. ಆದ್ಯತೆ ಮೇರೆಗೆ ನೀರಾವರಿ ಯೋಜನೆಗಳ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಸದಸ್ಯ ಶರವಣ ಅವರು ಬಿಡಿಎ ನಿವೇಶನ ಹಂಚಿಕೆ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು, ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ನಿಮಗೆ ನೀಡಿದ್ದು, ಬದಲಿ ನಿವೇಶನ ಯಾರಿಗೆ ನೀಡಲಾಗಿದೆ ಎಂಬ ಪಟ್ಟಿಯೂ ನೀಡಲಾಗಿದೆ. ಇಲ್ಲಿ ಆಗಿರುವ ತಪ್ಪಿನ ಬಗ್ಗೆ ನನ್ನ ಗಮನ ಸೆಳೆದಿದ್ದೀರಿ. ನಿವೇಶನ ಹಂಚಿಕೆಯಲ್ಲಿ ತಾಂತ್ರಿಕ ವಿಚಾರಗಳಿವೆ. ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಲುವುದು ಸಹಜ. ನಿಮ್ಮ ಬಳಿ ಇರುವ ಎಲ್ಲಾ ಮಾಹಿತಿಗಳನ್ನು ನಮಗೆ ನೀಡಿ. ಅದರಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಯಾರೇ ತಪ್ಪು ಮಾಡಿದ್ದರೂ ಅದನ್ನು ಬಯಲಿಗೆಳೆಯೋಣ ಎಂದು ತಿಳಿಸಿದರು.
English summary
We will investigate the case of Metro works Illegal land acquisition Says DK Shivakumar in Bengaluru,
Story first published: Thursday, July 13, 2023, 21:38 [IST]