Bengaluru
oi-Mamatha M
ಬೆಂಗಳೂರು, ಜುಲೈ. 20: ವೈದ್ಯರಿಗೆ ಧರ್ಮವಿಲ್ಲ ಎಂಬ ಮಾತು ಸಾವಿರಾರು ಬಾರಿ ಕೇಳಿರುತ್ತೇವೆ. ತಮ್ಮ ಬಳಿ ಚಿಕಿತ್ಸೆಗೆ ಬಂದವರ ಧರ್ಮ, ಕುಲ, ಅಂತಸ್ತು ಯಾವುದನ್ನು ಪತಿಗಣಿಸದೇ ಚಿಕಿತ್ಸೆ ನೀಡಿ ರೋಗಿಯನ್ನು ಗುಣಪಡಿಸುವುದೇ ವೈದ್ಯರ ಕರ್ತವ್ಯ. ತಮ್ಮ ಬಗ್ಗೆ, ತಮ್ಮ ಸಮುದಾಯದ ಬಗ್ಗೆ ಆಡಿದ ಮಾತುಗಳನ್ನು ಗಮನಿಸದೇ ತನ್ನ ರೋಗಿಯನ್ನು ಕಾಪಾಡುತ್ತಾರೆ ವೈದ್ಯರು.
ಇದ್ಯಾಕೆ ಈಗ ವೈದ್ಯರ ಬಗ್ಗೆ ಪಾಠ ಎಂದು ಕೊಳ್ಳುತ್ತಿದ್ದಿರಾ…? ನೆನಪಿದೆಯೇ ನಿನ್ನೆಯಷ್ಟೇ ವಿಧಾನಸಭಾ ಕಲಾಪದಲ್ಲಿ ಪ್ರತಿಭಟನೆ ಮಾಡುವ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದು ಒಬ್ಬ ಮುಸ್ಲಿಂ ವೈದ್ಯರು. ಹೌದು. ಇಲ್ಲಿ ಮುಸ್ಲಿಂ ಪದ ಮುಖ್ಯವಾಗಿದೆ. ಏಕೆಂದರೆ, ಬಸನಗೌಡ ಪಾಟೀಲ್ ಯತ್ನಾಳ್ ಅದೇಷ್ಟು ಬಾರಿ ಈ ಸಮುದಾಯದ ವಿರುದ್ಧ ಕಿಡಿಕಾರಿಲ್ಲ ಹೇಳಿ.
ವಿಧಾನಸೌಧದಲ್ಲಿ ನಡೆದ ಗದ್ದಲದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ.ಅಬ್ದುಲ್ ಖಾದರ್ ಚಿಕಿತ್ಸೆ ನೀಡಿದ್ದಾರೆ. ಯತ್ನಾಳ್ ಅವರು ತಮ್ಮ ಹಿಂದಿನ ಹಲವು ಭಾಷಣಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರಿದ್ದಾರೆ. ತನಗೆ ಮುಸ್ಲಿಂ ಮತಗಳು ಬೇಡ ಎಂದೂ ಹೇಳಿದ್ದಾರೆ. ಈಗ ಅವರಿಗೆ ಮುಸ್ಲಿಂ ಡಾಕ್ಟರೊಬ್ಬರು ಚಿಕಿತ್ಸೆ ನೀಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಾನು ಸಂಪೂರ್ಣ ಗುಣಮುಖನಾಗಿದ್ದೆನೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ
ಜೈ ಶ್ರೀರಾಮ 🙏💐🚩— Basanagouda R Patil (Yatnal) (@BasanagoudaBJP) July 19, 2023
ಮುಸ್ಲಿಂ ಸಮುದಾಯದ ಮತ ಬೇಡ ಎಂದವರೂ ಈಗ ಮುಸ್ಲಿಂ ಸಮುದಾಯದ ವೈದ್ಯರಿಂದ ಚಿಕಿತ್ಸೆ ನಿರಾಕರಿಸುತ್ತಾರೆಯೇ?? ಎಂಬ ಟ್ವೀಟ್ಗಳು ವೈರಲ್ ಆಗಿದ್ದವು. ಇನ್ನು ಕೆಲವರು ವೈದ್ಯಕೀಯ ವಿಚಾರ ಬಂದಾಗ ಜಾತಿ, ಧರ್ಮ ಯಾವುದು ಮುಖ್ಯವಾಗುವುದಿಲ್ಲ. ಇದೇ ಮಾನವೀಯ ಧರ್ಮ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಚಿಕಿತ್ಸೆ ನೀಡಿ ಅವರ ಬಗ್ಗೆ ಮಾಹಿತಿ ನೀಡಿದ್ದ ಡಾ.ಅಬ್ದುಲ್ ಖಾದರ್, ” ಬೆವರುವಿಕೆ ಮತ್ತು ತಲೆಸುತ್ತು ಅಂತ ಬಂದು ಆಸ್ಪತ್ರೆ ದಾಖಲಾದರು. ಸದ್ಯ ಆರೋಗ್ಯ ಸ್ಥಿರವಾಗಿದೆ. ಆರಾಮಾಗಿ ಮಾತಾಡ್ತಾ ಇದ್ದಾರೆ. ಹೆಚ್ಚಿನ ತಪಾಸಣೆಗೆಂದು ಎಕೋ ಮತ್ತು ಇಸಿಜಿ ಕೂಡ ಮಾಡಲಾಗಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ ” ಎಂದು ತಿಳಿಸಿದ್ದರು. ಶುಕ್ರವಾರ ಶಾಸಕರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಸನಗೌಡ ಪಾಟೀಲ್ ಯತ್ನಾಳ್
ಇನ್ನು, ತಮ್ಮ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, “ನಾನು ಸಂಪೂರ್ಣ ಗುಣಮುಖನಾಗಿದ್ದೆನೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ. ಜೈ ಶ್ರೀರಾಮ” ಎಂದು ಟ್ವೀಟ್ ಮಾಡಿದ್ದಾರೆ. ಬುಧವಾರ ಅವರು ಆಸ್ಪತ್ರೆಗೆ ದಾಖಲಾದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸ್ಪೀಕರ್ ಯುಟಿ ಖಾದರ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದ್ದರು.
English summary
Vijayapur BJP MLA Basanagouda Patil Yatnal was treated by a muslim doctor Dr. Abdul Khader. know more.
Story first published: Thursday, July 20, 2023, 21:17 [IST]