Karnataka
oi-Malathesha M
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಮಸ್ಯೆ ಸುಳಿಗೆ ಸಿಲುಕಿದ್ದಾರೆ. ಆದರೆ ಹವಾಮಾನ ಇಲಾಖೆ ಇದೀಗ ಸಿಹಿಸುದ್ದಿ ಕೊಟ್ಟಿದ್ದು, ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಈ ಭಾಗಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಹಾಗಾದ್ರೆ ರಾಜ್ಯದ ಯಾವ ಯಾವ ಭಾಗದಲ್ಲಿ ಭಾರಿ ಮಳೆ ಬೀಳಲಿದೆ? ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ 3 ಗಂಟೆಗಳಲ್ಲಿ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆಯಂತೆ. ಒಂದು ಅಥವಾ ಎರಡು ಸ್ಥಳಗಳಲ್ಲಿ ಬಲವಾದ ಗಾಳಿಯ ಜೊತೆಯಲ್ಲೇ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಕರ್ನಾಟಕದಲ್ಲಿ ಮಳೆ ಕೊರತೆಯು ತೀವ್ರವಾಗುತ್ತಿದೆ. ಮತ್ತೊಂದ್ಕಡೆ ‘ಬಿಪರ್ಜಾಯ್’ ಚಂಡಮಾರುತ ಪರಿಣಾಮ ಮುಂಗಾರು ಮಾರುತಗಳು ಚದುರಿ ಹೋಗಿವೆ, ಹೀಗಾಗಿ ಕರ್ನಾಟಕ ಸೇರಿ ಬಹುತೇಕ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ ಎನ್ನಲಾಗಿತ್ತು. ಕಳೆದ ಕೆಲ ದಿನದಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.
ಕರಾವಳಿ ಭಾಗದಲ್ಲೂ ಭಾರಿ ಮಳೆ
ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಈ ವಾರ ಉತ್ತಮವಾಗಿ ಮಳೆಯಾಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದೇ ರೀತಿ ಈ ವಾರವು ಕೂಡ ಕರಾವಳಿ ಭಾಗದಲ್ಲಿ ಮಳೆರಾಯ ಅಬ್ಬರಿಸುವುದು ಬಹುತೇಕ ಗ್ಯಾರಂಟಿ ಎಂದಿದೆ ಹವಾಮಾನ ಇಲಾಖೆ. ರಾಜ್ಯದ ಕರಾವಳಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹೊಂದಿಕೊಂಡ ಉತ್ತರ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಬೀಳಬಹುದು ಎನ್ನಲಾಗಿದೆ. ಹಾಗೂ ಅಲ್ಲಲ್ಲಿ ಅಧಿಕ ಮಳೆ ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಚದುರಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಮಾಹಿತಿ ರೈತರಿಗೆ ಒಂದಷ್ಟು ನೆಮ್ಮದಿ ತಂದಿದೆ.
Monsoon ಮಳೆ ಅಭಾವ: 77 ಅಡಿಗೆ ಕುಸಿದ KRS ಅಣೆಕಟ್ಟೆ ನೀರಿನ ಮಟ್ಟ
77 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂನಲ್ಲಿ ಈಗ 77 ಅಡಿ ಮಾತ್ರ ನೀರು ಉಳಿದಿದೆ. KRS ಜಲಾಶಯದಲ್ಲಿ ಗರಿಷ್ಠ ಮಟ್ಟ 124.80 ಅಡಿ, ಆದರೆ ಇದೀಗ ಉಳಿದಿರುವ ನೀರು ಕೇವಲ 77 ಅಡಿ. ಇನ್ನೇನು 10 ಅಡಿ ಕಡಿಮೆ ಆದರೂ ಡೆಡ್ ಸ್ಟೋರೇಜ್‌ಗೆ ಅಂದ್ರೆ 66 ಅಡಿಗೆ ತಲುಪುತ್ತದೆ. ಆಗ ನೀರು ಪಡೆಯಲು ಪರದಾಡಬೇಕಿದ್ದು, ಬೆಂಗಳೂರಿಗೂ ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಎದುರಾಗಿದೆ. ಉತ್ತರದಲ್ಲಿ ಕೂಡ ಮಳೆ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ಕೃಷಿಕರು ಆಕಾಶ ನೋಡುತ್ತಾ ಕೂತಿದ್ದಾರೆ. ಈಗಲಾದರೂ ಕೃಪೆ ತೋರು ಎಂದು ಮಳೆರಾಯನ ಮೊರೆ ಹೋಗಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ?
ಈಗಿನ ಪರಿಸ್ಥಿತಿ ನೋಡಿದರೆ ಕೆಲವು ದಿನಗಳಲ್ಲಿ ಉತ್ತಮವಾಗಿ ಮಳೆ ಆಗದೇ ಇದರೆ ರಾಜ್ಯದಲ್ಲಿ ಕುಡಿಯುವ ನೀರಿಗೂ ಜನ ಪರದಾಡಬೇಕು ಅಂಥ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾರಿ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕಾರಣಕ್ಕೆ ಮಂಡ್ಯ, ಮೈಸೂರು ಭಾಗದ ರೈತರು ಚಿಂತೆ ಮಾಡುವಂತಾಗಿದೆ. ಮತ್ತೊಮ್ಮೆ ಕಾವೇರಿ ನೀರಿಗೆ ಕಿತ್ತಾಟ ಶುರುವಾಗುವ ಆತಂಕ ಕೂಡ ಆವರಿಸಿದೆ. ಇದು ಕೆಆರ್‌ಎಸ್ ಪರಿಸ್ಥಿತಿ ಮಾತ್ರವಲ್ಲ, ರಾಜ್ಯದಲ್ಲಿನ ಬಹುತೇಕ ಡ್ಯಾಂಗಳಲ್ಲಿ ಸ್ಥಿತಿಯೂ ಇದೇ ಆಗಿದೆ.
ಒಟ್ನಲ್ಲಿ ಕರ್ನಾಟಕದಲ್ಲಿ ಭಾರಿ ಮಳೆ ಕೊರತೆ ಎದುರಾಗಿದ್ದು, ಅದರಲ್ಲೂ ಜೂನ್ ತಿಂಗಳ ಮಳೆ ಕೊರತೆ ಹೊಸ ಇತಿಹಾಸ ಬರೆದಿದೆ. ಅಂದುಕೊಂಡಂತೆ ಮುಂಗಾರು ಮಾರುತಗಳು ಮಳೆ ಸುರಿಸಿದ್ದರೆ ಇಷ್ಟೊತ್ತಿಗೆ ರೈತರು ಕೃಷಿ ಕೆಲಸದಲ್ಲಿ ಬ್ಯುಸಿ ಆಗಿರಬೇಕಿತ್ತು. ಈಗಿನ ಸ್ಥಿತಿ ನೋಡಿದ್ರೆ ಪರಿಸ್ಥಿತಿ ಹಿಡಿತಕ್ಕೆ ಸಿಗಲು ಈಗಲಾದರೂ ಭಾರಿ ಮಳೆ ಬೀಳಬೇಕಿದೆ. ಇಲ್ಲವಾದ್ರೆ 2023ರಲ್ಲಿ ದೊಡ್ಡ ಪ್ರಮಾಣದ ಬರ ಎದುರಾಗುವುದು ಗ್ಯಾರಂಟಿ.
English summary
Karnataka Rain information by IMD today.
Story first published: Monday, June 26, 2023, 13:21 [IST]