Karnataka
oi-Malathesha M
ಬೆಂಗಳೂರು: ನಗರದಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗುತ್ತಿದ್ದು, ಸರ್ಕಾರಿ ಸಾರಿಗೆ ವ್ಯವಸ್ಥೆ ಇನ್ನಷ್ಟು ಬಲವಾಗಬೇಕು ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಖಾಸಗಿ ವಾಹನಗಳ ಹೆಚ್ಚಳದಿಂದ ವಾಯು ಮಾಲಿನ್ಯದ ಜೊತೆಗೆ ಟ್ರಾಫಿಕ್ ಕಂಟಕ ಕೂಡ ಈಗ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಕುರಿತು ಬೆಂಗಳೂರಲ್ಲಿ ಮಹತ್ವದ ಚರ್ಚೆ ನಡೆಯಿತು.
ಗ್ರೀನ್‌ಪೀಸ್ ಇಂಡಿಯಾ ಆಯೋಜನೆ ಮಾಡಿದ್ದ ‘ಲೆಟ್ಸ್ ಮೂವ್ ಬೆಂಗಳೂರು’ ಕಾರ್ಯಕ್ರಮ ಗಮನ ಸೆಳೆಯಿತು. ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮದ ಭಾಗವಾಗಿದ್ದವು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ಪ್ರಾಯೋಗಿಕ ಪರಿಹಾರಗಳ ಕುರಿತಾಗಿ ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಗ್ರೀನ್‌ಪೀಸ್ ಪ್ರಚಾರಕಿ ಅಮೃತಾ ನಾಯರ್ ಕಾರು ಕೇಂದ್ರಿತ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಆದ್ಯತೆಯ ಕುರಿತು ಕಳವಳ ವ್ಯಕ್ತಪಡಿಸಿದರು. ಸಂಚಾರ ವ್ಯವಸ್ಥೆಯನ್ನು ಪ್ರತ್ಯೇಕಿಸುತ್ತದೆ ಮತ್ತು ಖಾಸಗಿ ಸಾರಿಗೆಯನ್ನು ಪಡೆಯಲು ಸಾಧ್ಯವಾಗದ ಜನರ ಗುಂಪುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಈ ಸಂಚಾರ ವ್ಯವಸ್ಥೆ ಪ್ರವೇಶಿಸಲು ಆಗಲ್ಲ ಎಂಬ ಅನಿಸಿಕೆ ಹಂಚಿಕೊಂಡರು.
ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಮನವಿ
ಇನ್ನು ರಾಜ್ಯದಲ್ಲಿ ಜಾರಿಯಾಗಿರುವ ಶಕ್ತಿ ಯೋಜನೆ ಕುರಿತು ಚರ್ಚೆ ನಡೆಯಿತು. ಈ ವೇಳೆ ಬೆಂಗಳೂರಿನಲ್ಲಿ ವಾಸವಿರುವ ನಿವಾಸಿಗಳು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು. ಹಾಗೇ ನಗರದಲ್ಲಿ ಸುಮಾರು 1 ಕೋಟಿ ವಾಹನಗಳಿವೆ. ಆದರೆ ಈ ಸಂಖ್ಯೆಗೆ ಹೋಲಿಸಿದಾಗ ಬಿಎಂಟಿಸಿ ಕೇವಲ 6700 ಬಸ್‌ಗಳನ್ನ ಹೊಂದಿದೆ. ಇದರ ಪಾಲು ಶೇಕಡಾ 1 ಕ್ಕಿಂತಲೂ ಕಡಿಮೆಯಿದೆ. ಇದು ಬಸ್‌ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳದ ಅಗತ್ಯತೆ ಸೂಚಿಸುತ್ತದೆ. ಇನ್ನು ಈ ಬಗ್ಗೆ ಮಾತನಾಡಿದ ನಾಗರಿಕ ಹಕ್ಕುಗಳ ಹೋರಾಟಗಾರ ಶ್ರೀನಿವಾಸ್, ಉತ್ತಮ ಬಸ್ ಸೇವೆಗಳನ್ನು ಪಡೆಯಲು ಪ್ರತಿ ಲಕ್ಷ ಜನಸಂಖ್ಯೆಗೆ ಕನಿಷ್ಠ 120 ಬಸ್ಸು ಅಗತ್ಯವಿದೆ. ಬಸ್ಸುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಇದು ಸಕಾಲ ಎಂದು ಪ್ರತಿಪಾದಿಸಿದರು.
ಬೆಂಗಳೂರಿನಲ್ಲಿ ಪಿಕ್‌ಪಾಕೇಟ್ ಗ್ಯಾಂಗ್ ಕೈವಾಡ: ಬಿಎಂಟಿಸಿ ಸವಾರರೇ ಟಾರ್ಗೆಟ್!
ಬೆಂಗಳೂರು ವಾಯುಮಾಲಿನ್ಯದ ಪ್ರಸ್ತಾಪ
ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಸಾರ್ವಜನಿಕ ಸಾರಿಗೆಯು ಒಂದು ಪ್ರಮುಖ ಸಾಧನ. ಹಾಗೇ ಗ್ರೀನ್‌ಪೀಸ್ ಇತ್ತೀಚಿಗೆ ಬಿಡುಗಡೆ ಮಾಡಿದ ವಿವಿಧ ನಗರಗಳ AQIನ ವಿಶ್ಲೇಷಣೆ ಕುರಿತು ಕೂಡ ಚರ್ಚೆ ನಡೆಯಿತು. ಅಷ್ಟಕ್ಕೂ ವಾಯುಮಾಲಿನ್ಯ ಉಂಟುಮಾಡುವ PM2.5 ಅಂದ್ರೆ ಪರ್ಟಿಕ್ಯುಲೇಟ್ ಮ್ಯಾಟರ್-ಗಾಳಿಯಲ್ಲಿನ ಸೂಕ್ಷ್ಮ ಮಾಲಿನ್ಯಕಾರಕ ಕಣಗಳಮಟ್ಟ 5.8 ಪಟ್ಟು ಹೆಚ್ಚಾಗಿದೆ. ಹಾಗೇ NO2 ಮಟ್ಟ ಮಾನದಂಡಕ್ಕಿಂತ ಸುಮಾರು 2 ಪಟ್ಟು ಹೆಚ್ಚಾಗಿದೆ ಎಂದು ಗ್ರೀನ್‌ಪೀಸ್ ಇತ್ತೀಚಿಗೆ ಬಿಡುಗಡೆ ಮಾಡಿದ್ದ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲೂ ಚರ್ಚೆ ನಡೆಸಲಾಯಿತು. ಹಾಗೇ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯು ವಾಯು ಮಾಲಿನ್ಯಕ್ಕೆ ನೀಡುತ್ತಿರುವ ಕೊಡುಗೆ ಬಗ್ಗೆ ಚರ್ಚೆಯಾಯಿತು.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್, ಗಾರ್ಮೆಂಟ್ಸ್ ನೌಕರರು, ವಿದ್ಯಾರ್ಥಿಗಳು & ವೃದ್ಧರು ಸೇರಿದಂತೆ ಬೆಂಗಳೂರಿನಲ್ಲಿ ವಾಸ ಇರುವ ವಿವಿಧ ವರ್ಗದ ಜನರು ತಮ್ಮ ತಮ್ಮ ಅನಿಸಿಕೆ ಹಂಚಿಕೊಂಡರು. ಅಲ್ಲದೆ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಆಗಬೇಕಿರುವ ಬದಲಾವಣೆ ಕುರಿತು ಪ್ರಸ್ತಾಪ ಮಾಡಲಾಯಿತು. ಪ್ರಮುಖವಾಗಿ ಬೆಂಗಳೂರಿನ ಮೂಲೆ ಮೂಲೆಗೂ ಬಸ್ ಸಂಪರ್ಕ ಕಲ್ಪಿಸಲು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಮತ್ತು ಸಾರಿಗೆ ಇಲಾಖೆಯನ್ನು ಒತ್ತಾಯಿಸಲಾಯಿತು. ಪ್ರತ್ಯೇಕ ಬಸ್ ಲೇನ್ ಒದಗಿಸುವ ಮೂಲಕ ಮತ್ತು ಹೆಚ್ಚು ಬಸ್ಸು ಒದಗಿಸುವ ಮೂಲಕ ಬಸ್ಸಿಗಾಗಿ ಕಾಯುವ ಸಮಯ ಕಡಿಮೆಗೊಳಿಸಲು ಮನವಿ ಮಾಡಲಾಯಿತು. ಹಾಗೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶೇಕಡಾ 59ರಷ್ಟು ಸರ್ವೆಯಲ್ಲಿ ಇದೇ ಮಾತನ್ನ ಹೇಳಿದ್ದಾರೆ.
ಒಟ್ನಲ್ಲಿ ಬೆಂಗಳೂರಿನ ವಾಯುಮಾಲಿನ್ಯ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಹಾಗೇ ಸಾರ್ವಜನಿಕ ಸಾರಿಗೆ ಪ್ರಮಾಣ ಹೆಚ್ಚಳಕ್ಕೂ ಮನವಿ ಮಾಡಲಾಗಿದೆ. ನಗರದಲ್ಲಿ ಕಾರುಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಆತಂಕ ಮೂಡಿಸುತ್ತಿದೆ. ಕೊರೊನಾ ಕಂಟಕದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಉಂಟಾಗುತ್ತಿದೆ. ಇದೇ ಕಾರಣಕ್ಕೆ ವಾಯುಮಾಲಿನ್ಯ ಕೂಡ ಹೆಚ್ಚಾಗುತ್ತಿರುವುದು ಆತಂಕದ ವಿಚಾರ.
English summary
Greenpeace discussion about Bangalore pollution and public transport system.
Story first published: Sunday, June 25, 2023, 17:24 [IST]