ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿಯಲ್ಲೇ ಇದ್ದಾರೆ, ಉಚ್ಚಾಟನೆ ಮಾಡಿಲ್ಲ: ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷರ ಅಚ್ಚರಿ ಹೇಳಿಕೆ | Madal Virupakshappa still in BJP Says Davanagere district president

Davanagere

lekhaka-Yogaraja G H

By ದಾವಣಗೆರೆ ಪ್ರತಿನಿಧಿ

|

Google Oneindia Kannada News

ದಾವಣಗೆರೆ, ಜೂನ್‌, 30: ಪುತ್ರನ ಲಂಚ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿಯಲ್ಲೇ ಇದ್ದಾರೆ. ಅವರನ್ನು ಉಚ್ಚಾಟನೆ ಮಾಡಿಲ್ಲ. ಅವರ ಪುತ್ರ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಪರಿಣಾಮ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಡಾಳ್ ವಿರೂಪಾಕ್ಷಪ್ಪ ಅವರು ಬಿಜೆಪಿ ಪಕ್ಷ ಬಿಟ್ಟಿಲ್ಲ. ನಾವು ಅವರನ್ನು ತೆಗೆದು ಹಾಕಿಲ್ಲ. ನಮ್ಮಲ್ಲೇ ಇದ್ದಾರೆ. ಕೆಲ ಘಟನೆಗಳಿಂದ ತಟಸ್ಥರಾಗಿದ್ದಾರೆ. ಹಾಗಾಗಿ, ಹೆಚ್ಚಾಗಿ ಪಾಲ್ಗೊಂಡಿಲ್ಲ ಎಂದರು.

Madal Virupakshappa still in BJP Says Davanagere district president

ಇನ್ನು ಅವರ ಪುತ್ರನ ಪರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದಾರಲ್ವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯ ಕಾರ್ಯಕರ್ತರೇ ಬೇರೆ ಪಕ್ಷಕ್ಕೆ ಮತ ಹಾಕಿದ್ದಾರೆ. ಕೆಲವೆಡೆ ಪಕ್ಷದ ವಿರುದ್ಧವೇ ಪ್ರಚಾರ ಮಾಡಿದ್ದಾರೆ. ಹಾಗಾಗಿ ನಮಗೆ ಸೋಲಾಯಿತು. ಮಾಯಕೊಂಡದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಪುಷ್ಪಾ ವಾಗೀಶ್ ಸ್ವಾಮಿ ಸ್ಪರ್ಧೆ ಮಾಡಿದ್ದರು. ವಾಗೀಶ್ ಸ್ವಾಮಿ ಅವರೇನೂ ಬಿಜೆಪಿ ದೊಡ್ಡ ಮುಖಂಡರಲ್ಲ ಎಂದು ಹೇಳಿದರು.

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬುದೇನಿಲ್ಲ. ಪಕ್ಷದ ರಾಜ್ಯ ನಾಯಕರು, ಜಿಲ್ಲಾ ನಾಯಕರು ಪಕ್ಷದ್ರೋಹ ಮಾಡಿದವರ ಕುರಿತಂತೆ ಕ್ರಮ ಕೈಗೊಳ್ಳುತ್ತಾರೆ. ಮಾಡಾಳ್ ವಿರೂಪಾಕ್ಷಪ್ಪರ ಪುತ್ರನಿಗೆ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದೆವು. ಕೇಳದೇ ಸ್ಪರ್ಧೆ ಮಾಡಿದರು. ಆ ಕಾರಣಕ್ಕೆ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಹೇಳಿದರು.

ಇನ್ನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನು ಆಕಾಂಕ್ಷಿ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಆದರೆ ಎಲ್ಲಿಯೂ ಅಭ್ಯರ್ಥಿ ಎಂದು ಹೇಳಿಲ್ಲ. ಅವರ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಇದೆ. ಜಿ.ಎಂ. ಸಿದ್ದೇಶ್ವರ ಅವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ನಾವೆಲ್ಲರೂ ಒಟ್ಟಾಗಿ ಸೇರಿ ಸಿದ್ದೇಶ್ವರ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರು ವಿಫಲರಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರೇಣುಕಾಚಾರ್ಯ ಹೇಳಿದ್ದಾರೆ. ಈ ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ. ರಾಜ್ಯದ ಶಿಸ್ತು ಸಮಿತಿ ಇದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರೇಣುಕಾಚಾರ್ಯರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುತ್ತಾರೆ ಎಂದು ತಿಳಿಸಿದರು.

ಚುನಾವಣೆ ಬಂದಾಗ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮ ಮಾಡಲ್ಲ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆ ಬರುತ್ತಿದೆ. ಕಾರ್ಯಕರ್ತರು, ಬಿಜೆಪಿ ಮುಖಂಡರು ಚುನಾವಣೆಗೆ ಸದಾ ಸಿದ್ಧರಿರುತ್ತಾರೆ. ಚುನಾವಣೆಗಾಗಿ ನಾವು ಕಾರ್ಯಕ್ರಮ ಮಾಡಲ್ಲ. ಅಲ್ಲದೆ ಕರ್ನಾಟಕದಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿವೆ. ಆದ್ದರಿಂದ ನರೇಂದ್ರ ಮೋದಿ ಆಯ್ಕೆ ಜನರ ಮೊದಲ ಆದ್ಯತೆಯಾಗಿದೆ ಎಂದರು.

ಕೊರೊನಾ ಹಿಮ್ಮೆಟ್ಟಿಸಿದ್ದು, ಲಸಿಕೆ ನೀಡುವ ಮೂಲಕ ಜನರಪರವಾಗಿ ಕೆಲಸ ಮಾಡಿದ್ದು ಕೇಂದ್ರ ಸರ್ಕಾರವಾಗಿದೆ. ಹಾಗಾಗಿ ವಿಶ್ವವೇ ಮೋದಿ ಅವರನ್ನು ಮೆಚ್ಚಿದೆ. ಮತದಾರರು ಪ್ರಜ್ಞಾವಂತರಿದ್ದಾರೆ. ಕಾರ್ಯಕರ್ತರು ಉತ್ಸಾಹದಿಂದ ಇದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಹಲವಾರು ಹಿನ್ನೆಡೆ ಆಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು.

ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಸಿದ್ದೇಶ್ವರ ಅವರ 71ನೇ ಹುಟ್ಟುಹಬ್ಬದ ನಮ್ಮಾಭಿಮಾನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಹೆಸರು ಪ್ರಕಟಿಸಿರುವುದು ಸಹ ಚರ್ಚೆಗೆ ಕಾರಣವಾಗಿದೆ. ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿದ್ದ ಹೆಚ್.ಎಸ್. ಶಿವಕುಮಾರ್ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ. ಇದಕ್ಕೆ ಚನ್ನಗಿರಿ ಬಿಜೆಪಿ ನಾಯಕರು, ಕಾರ್ಯಕರ್ತರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

English summary

Madal Virupakshappa still in BJP Says Davanagere district president Veeresh Hanagawadi,

Story first published: Friday, June 30, 2023, 20:54 [IST]

Source link