ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಮಾರಕ ಕಾಯಿಲೆಗಳಿಂದ ಪಾರಾಗುವುದು ಹೇಗೆ?, ಇಲ್ಲಿದವೆ ಪರಿಹಾರೋಪಾಯಗಳು | How is the escape from diseases spread by mosquitoes in rainy season?

Features

lekhaka-Lavakumar B M

|

Google Oneindia Kannada News

ಇದೀಗ ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುವುದು ಪ್ರಮುಖವಾಗಿದೆ. ಏಕೆಂದರೆ ಮಳೆ ಬಂದಂತಹ ಸಮಯದಲ್ಲೇ ಹೆಚ್ಚಾಗಿ ಸೊಳ್ಳೆಗಳು ಅಟ್ಯಾಕ್‌ ಮಾಡುತ್ತವೆ. ಇದರಿಂದ ಸಣ್ಣ ಸಣ್ಣ ರೋಗಗಳು ಹರಡಿ, ಇದು ಮುಂದಿನ ದಿನಗಳಲ್ಲಿ ಮಾರಕ ಕಾಯಿಲೆಗೂ ಕಾರಣವಾಗಬಹುದು. ಆದ್ದರಿಂದ ನೀವು ಅಪಾಯದಿಂದ ತಪ್ಪಿಸಿಕೊಳ್ಳಲು ಈ ಮಾರ್ಗಗಳನ್ನು ಅನುಸರಿಸಿ.

ಮಳೆಗಾಲದಲ್ಲಿ ಶೀತ, ಜ್ವರ ಮನುಷ್ಯನನ್ನು ಕಾಡುವುದು ಸಹಜ. ಹಿಂದಿನ ಕಾಲದಲ್ಲಿ ಜ್ವರ ಕಾಣಿಸಿಕೊಂಡಾಗ ಮಾತ್ರೆನೋ, ಕಷಾಯವೋ ಕುಡಿದರೆ ಜ್ವರ ಹೋಗಿಬಿಡುತ್ತಿತ್ತು. ಈಗ ಹಾಗಿಲ್ಲ, ಅದರಲ್ಲೂ ಕೊರೊನಾ ಕಾಣಿಸಿಕೊಂಡ ಬಳಿಕವಂತೂ ಜ್ವರದ ಬಗ್ಗೆ ನಿರ್ಲಕ್ಷ್ಯವಹಿಸುವಂತಿಲ್ಲ. ಹಾಗೆಂದು ಕಾಡುವ ಜ್ವರವೆಲ್ಲವೂ ಭಯಾನಕವೂ ಅಲ್ಲ. ಆದರೂ ಜ್ವರದ ಬಗ್ಗೆ ಎಚ್ಚರಿಕೆ ನಮ್ಮಲ್ಲಿ ಇರಲೇಬೇಕು.

mosquitoes in rainy season

ಇದೀಗ ಮಳೆಗಾಲ ಆರಂಭವಾಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಜ್ವರಗಳು ಏಕೆ ಕಾಣಿಸುತ್ತವೆ. ಮೇಲ್ನೋಟಕ್ಕೆ ಜ್ವರ ಒಂದೇ ಆಗಿದ್ದರೂ ಅದು ಯಾವ ಜ್ವರ ಎಂಬುದನ್ನು ಪರೀಕ್ಷೆಗಳ ಮೂಲಕ ಕಂಡು ಹಿಡಿದು ಚಿಕಿತ್ಸೆ ಪಡೆಯಬೇಕಾಗುತ್ತದೆ. ಇಲ್ಲದೆ ಹೋದರೆ ಜ್ವರ ನಮ್ಮ ಪ್ರಾಣಕ್ಕೂ ಸಂಚಕಾರ ತರುವ ಸಾಧ್ಯತೆ ಇರುತ್ತದೆ.

ಈಗಾಗಲೇ ಅಲ್ಲಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ, ಅತಿಸಾರ, ಟೈಫಾಯಿಡ್, ವೈರಲ್ ಜ್ವರ, ಕಾಲರಾ ಹೀಗೆ ಹಲವು ರೀತಿಯ ಜ್ವರಗಳು ಕಾಣಿಸತೊಡಗಿವೆ. ನಗರ ಪ್ರದೇಶಗಳಲ್ಲಿ ಜ್ವರಗಳ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಕಾರಣ ಸೊಳ್ಳೆಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸೊಳ್ಳೆಗಳ ಕಡಿತದಿಂದ ಆರಂಭವಾಗುವ ಎಲ್ಲ ರೋಗಗಳು ಕೂಡ ಆರಂಭದಲ್ಲಿ ಜ್ವರದಂತೆ ಕಾಣಿಸಿಕೊಂಡರೂ, ಜೊತೆಯಲ್ಲೇ ಇತರ ನಿರ್ದಿಷ್ಟ ಗುಣಲಕ್ಷಣ ಇರುತ್ತವೆ. ಹೀಗಾಗಿ ಜ್ವರದಿಂದ ದೂರವಿರಬೇಕಾದರೆ ನಾವು ಮಾಡಬೇಕಾದ ಮೊದಲ ಕೆಲಸ ಏನೆಂದರೆ ಶುಚಿತ್ವಕ್ಕೆ ಆದ್ಯತೆ ನೀಡುವುದು ಮತ್ತು ಸೊಳ್ಳೆಗಳ ಸಂತತಿ ಹೆಚ್ಚಾಗದಂತೆ ನೋಡಿಕೊಳ್ಳುವುದಾಗಿದೆ.

ಟೊಮ್ಯಾಟೊ ಬೆಲೆ ಹೆಚ್ಚು ಎಂದು ಕೊಳ್ಳಲು ಆಗುವುದಿಲ್ಲವೇ? ಇಲ್ಲಿವೆ ಪರ್ಯಾಯ ಪದಾರ್ಥಗಳ ಪಟ್ಟಿಟೊಮ್ಯಾಟೊ ಬೆಲೆ ಹೆಚ್ಚು ಎಂದು ಕೊಳ್ಳಲು ಆಗುವುದಿಲ್ಲವೇ? ಇಲ್ಲಿವೆ ಪರ್ಯಾಯ ಪದಾರ್ಥಗಳ ಪಟ್ಟಿ

ಸ್ವಚ್ಛತೆಗೆ ಆದ್ಯತೆ ನೀಡಿ

ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ ಮತ್ತು ಸ್ವಚ್ಛತೆಯಿಂದ ಇರುವಂತೆ ಗಮನಹರಿಸಬೇಕು. ಆಗ ಸೊಳ್ಳೆಗಳ ಸಂತತಿ ಹೆಚ್ಚಾಗದೆ ಆರೋಗ್ಯವಂತ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಇನ್ನು ಮಳೆಗಾಲದಲ್ಲಿ ಕಾಡುವ ಜ್ವರದಂತಹ ರೋಗಗಳು ಯಾವುವು ಮತ್ತು ಅವು ಮನುಷ್ಯನಿಗೆ ಹೇಗೆ ತಗಲುತ್ತದೆ? ಅದರ ತೀವ್ರತೆ ಏನು ಮುಂತಾದ ಒಂದಿಷ್ಟು ಮಾಹಿತಿಗಳನ್ನು ಅರಿತುಕೊಂಡರೆ ರೋಗವನ್ನು ನಿಯಂತ್ರಿಸಲು ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಳೆಗಾಲದಲ್ಲಿ ಕಾಡುವ ರೋಗಗಳಲ್ಲಿ ಡೆಂಗ್ಯೂ ಪ್ರಮುಖವಾಗಿದ್ದಾಗಿದೆ. ಇದು ಟೈಗರ್ ಮಾಸ್ಕಿಟೋ ಅಥವಾ ಹುಲಿ ಸೊಳ್ಳೆಯ ಕಡಿತದಿಂದ ಬರುತ್ತದೆ. ಡೆಂಗ್ಯೂ ಜ್ವರದ ಲಕ್ಷಣಗಳೆಂದರೆ ತೀವ್ರತರದ ಜ್ವರ, ಕಡಿಮೆ ಪ್ಲೇಟ್ಲೆಟ್ ಎಣಿಕೆ, ಸೊಳ್ಳೆ ಕಡಿದ ಭಾಗದಲ್ಲಿ ದದ್ದುಗಳು, ತ್ವಚೆ ಅತಿ ಸಂವೇದಿಯಾಗುವುದು ಗೋಚರಿಸುತ್ತದೆ.

ಈ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಬೇಕಾದರೆ ಸೊಳ್ಳೆ ನಿವಾರಕಗಳು ಹಾಗೂ ಸಿಟ್ರೊನೆಲ್ಲಾದಂತಹ ಕೀಟ ನಿವಾರಕ ಸಸ್ಯಗಳನ್ನು ಬಳಸುವುದು ಒಳ್ಳೆಯದು. ಜೊತೆಗೆ ಇಡೀ ದೇಹವನ್ನು ಆವರಿಸುವ ಬಟ್ಟೆಗಳನ್ನು ಧರಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆಪರದೆ ಬಳಕೆಯೂ ಉಪಯೋಗಕಾರಿಯಾಗಿದೆ.

ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ

ಚಿಕೂನ್ ಗುನ್ಯಾ ಕೂಡ ಸೊಳ್ಳೆಗಳಿಂದಲೇ ಬರುತ್ತದೆ. ಮುಖ್ಯವಾಗಿ ಹವಾನಿಯಂತ್ರಣಗಳು, ಕೂಲರ್‌ಗಳು, ಸಸ್ಯಗಳು, ಪಾತ್ರೆಗಳು, ನೀರಿನ ಕೊಳವೆಗಳಲ್ಲಿ ನಿಂತ ನೀರಿನಲ್ಲಿ ಈಡಿಸ್ ಅಲ್ಬೋಪಿಕ್ಟಸ್ ಎಂಬ ಪ್ರಜಾತಿಯ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಈ ನೀರಿನಲ್ಲಿ ಹುಟ್ಟುವ ಜನಿಸಿದ ಸೊಳ್ಳೆಗಳಿಳು ಮನುಷ್ಯನಿಗೆ ಕಚ್ಚುವುದರ ಮೂಲಕ ಚಿಕೂನ್ ಗುನ್ಯಾ ರೋಗವನ್ನು ಹರಡುತ್ತವೆ.

ಈ ರೋಗ ಕಾಣಿಸಿಕೊಂಡ ವ್ಯಕ್ತಿಯ ಮೂಳೆಸಂಧುಗಳಲ್ಲಿ ನೋವು ಮತ್ತು ಜ್ವರ ಬರುತ್ತದೆ. ಇದು ರೋಗದ ಪ್ರಮುಖ ಲಕ್ಷಣವೂ ಹೌದು. ಹೀಗಾಗಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಮತ್ತು ಕೀಟ ನಿವಾರಕ ಬಳಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಇನ್ನು ಮಲೇರಿಯಾ ಕೂಡ ಮಳೆಗಾಲದಲ್ಲಿ ಮನುಷ್ಯನಿಗೆ ಕಾಟ ಕೊಡುತ್ತದೆ. ಇದು ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಬರುತ್ತದೆ. ಈ ಸೊಳ್ಳೆ ಜಲಾವೃತ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಈ ಕಾರಣದಿಂದ ಮಲೇರಿಯಾ ಮಳೆಗಾಲದಲ್ಲಿ ಕಾಡುವ ಸಾಮಾನ್ಯ ರೋಗ ಎಂದರೆ ತಪ್ಪಾಗಲಾರದು.

ಈ ಕಾಯಿಲೆ ತಗುಲಿದರೆ ಅಂತಹವರಲ್ಲಿ ಜ್ವರ, ನಡುಕ, ಸ್ನಾಯು ನೋವು ಮತ್ತು ಅತೀವ ಸುಸ್ತು ಕಾಣಿಸಿಕೊಳ್ಳುತ್ತದೆ. ಇದರಿಂದ ಮುಕ್ತಿ ಹೊಂದಬೇಕಾದರೆ ಮನೆಯ ಸುತ್ತಮುತ್ತ ಮತ್ತು ಒಳಗೆ ನೀರು ಸಂಗ್ರಹವಾಗುವ ಪ್ರದೇಶ ಮಾತ್ರವಲ್ಲದೆ ಮನೆಯ ಟ್ಯಾಂಕ್ ಕಡೆಗೂ ಎಚ್ಚರವಹಿಸಿ ಸ್ವಚ್ಛಗೊಳಿಸುವ ಕೆಲಸವನ್ನು ಮಾಡಬೇಕು. ಹಾಗೂ ಒಂದೇ ಕಡೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.

ಶುದ್ಧ ಆಹಾರ, ನೀರನ್ನು ಮಾತ್ರ ಸೇವಿಸಿ

ಟೈಫಾಯಿಡ್ ಕೂಡ ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇದು ಶುಚಿತ್ವದ ಕೊರತೆಯಿಂದ ಬರುತ್ತದೆ ಎಂದರೂ ತಪ್ಪಾಗಲಾರದು. ಜೊತೆಗೆ ನಾವು ಬಳಸುವ ಆಹಾರ ಮತ್ತು ನೀರಿನಿಂದಲೂ ಟೈಫಾಯಿಡ್ ಬರಬಹುದು. ಟೈಫಾಯಿಡ್ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಎಸ್‌ಟೈಫಿ ಬ್ಯಾಕ್ಟೀರಿಯ ಆಗಿದೆ.

ಟೈಫಾಯಿಡ್ ರೋಗದ ಲಕ್ಷಣ: ಜ್ವರ, ತಲೆನೋವು, ಅತೀವ ಸುಸ್ತು, ಮೈ ಕೈ ನೋವು ಮತ್ತು ಗಂಟಲ ಬೇನೆ, ನುಂಗಲು ಕಷ್ಟವಾಗುವುದಾಗಿದೆ. ಇದರ ತಡೆಗೆ ಕೈಯ್ಯನ್ನು ಹ್ಯಾಂಡ್ ಸ್ಯಾನಿಟೈಜರ್‌ನಿಂದ ಸ್ವಚ್ಛಗೊಳಿಸುವುದು, ಬೀದಿ ಬದಿಯ ಆಹಾರ ಸೇವನೆಯಿಂದ ದೂರವಿರುವುದು, ಶುದ್ಧ ನೀರನ್ನು ಕುಡಿಯುವುದಕ್ಕೆ ಆದ್ಯತೆ ನೀಡಬೇಕು.

ಕಲುಷಿತ ನೀರು ಮತ್ತು ಈ ನೀರಿನಿಂದ ತಯಾರಿಸಿದ ಆಹಾರವನ್ನು ಸೇವನೆಯಿಂದ ಜಾಂಡೀಸ್ ಬರಬಹುದು. ಜಾಂಡೀಸ್ ತಗುಲಿದರೆ ಅತಿಯಾದ ಸುಸ್ತು, ಹಳದಿ ಬಣ್ಣದ ಮೂತ್ರ, ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಜಾಂಡೀಸ್ ಬರದಂತೆ ಮುಂಜಾಗ್ರತೆ ಅಗತ್ಯವಾಗಿದೆ. ಆದ್ದರಿಂದ ಕುದಿಸಿ ತಣಿಸಿದ ನೀರನ್ನು ಕುಡಿಯುವುದು, ಮನೆಯಲ್ಲಿ ತಯಾರಿಸಿದ ಆಹಾರಗಳನ್ನೇ ಸೇವಿಸುವುದು ಉತ್ತಮ.

ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮರೆಯದಿರಿ

ಅತಿಸಾರ ಮಳೆಗಾಲದಲ್ಲಿ ಕಾಡಬಹುದಾಗಿದ್ದು ಇದು ಕರುಳಿನ ಕಾಯಿಲೆಯಾಗಿದ್ದು ಶುದ್ಧವಲ್ಲದ ಆಹಾರ ಮತ್ತು ನೀರು ಸೇವಿಸುವುದರಿಂದ ಕಾಡುತ್ತದೆ ಅತಿಸಾರದಲ್ಲಿ ತೀವ್ರ ಮತ್ತು ದೀರ್ಘ ಎಂಬ ಎರಡು ಬಗೆಯಿದ್ದು, ಇವೆರಡನ್ನೂ ಸರಳ ಚಿಕಿತ್ಸೆಗಳಿಂದಲೇ ನಿಭಾಯಿಸಬಹುದಾಗಿದೆ. ಬಿಸಿ ನೀರನ್ನು ಕುಡಿಯುವುದು ಮತ್ತು ಮನೆಯ ಆಹಾರವನ್ನೇ ಸೇವಿಸುವುದರಿಂದ ಅತಿಸಾರವುಂಟಾಗದಂತೆ ನೋಡಿಕೊಳ್ಳಬಹುದಾಗಿದೆ.

ಮಳೆಗಾಲದ ಕಾಯಿಲೆಯಲ್ಲಿ ಕಾಲರಾ ಸೇರಲಿದ್ದು, ಕಲುಷಿತ ಆಹಾರ, ನೀರಿನ ಸೇವನೆಯಿಂದ ಕಾಣಿಸಿಕೊಳ್ಳುತ್ತದೆ. ಇದು ಕೂಡ ನೈರ್ಮಲ್ಯದ ಮತ್ತು ಸ್ವಚ್ಛತೆಯ ಕೊರತೆಯಿಂದ ಬರುವ ಕಾಯಿಲೆಯಾಗಿದೆ. ಅತಿಯಾದ ಮಲವಿಸರ್ಜನೆ ಮತ್ತು ಸುಸ್ತು ಇದರ ಲಕ್ಷಣಗಳಾಗಿದೆ. ಇದೆಲ್ಲ ರೋಗಗಳ ನಡುವೆ ವೈರಲ್ ಜ್ವರ ಕಾಣಿಸಿಕೊಳ್ಳುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಮಳೆಗಾಲ ಮಾತ್ರವಲ್ಲದೆ ಎಲ್ಲ ಕಾಲದಲ್ಲಿಯೂ ಕಾಣಿಸಿಕೊಳ್ಳಲಿದೆ. ತೀವ್ರ ಜ್ವರ, ಶೀತ ಮತ್ತು ಕೆಮ್ಮು ಇದರ ಲಕ್ಷಣವಾಗಿದ್ದು, ಇದು ತಗುಲಿದರೆ ಮೂರು ದಿನದಿಂದ ಏಳು ದಿನಗಳ ವರೆಗೆ ವ್ಯಕ್ತಿಯನ್ನು ಕಾಡುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ವಾತಾವರಣವೂ ಮೊದಲಿನಂತೆ ಈಗಿಲ್ಲ. ಅದರಂತೆ ಕಾಯಿಲೆಗಳು ಕೂಡ. ಯಾವ ಕಾಯಿಲೆ ಯಾವಾಗ ನಮಗೆ ತಗಲುತ್ತದೆಯೋ ಗೊತ್ತಿಲ್ಲ. ಆದರೆ ಎಚ್ಚರಿಕೆಯಿಂದ ಇದ್ದು, ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದೇ ಆದರೆ ಬರಲಿರುವ ಕಾಯಿಲೆಗಳಿಗೆ ಕಡಿವಾಣ ಹಾಕಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂಬುದನ್ನು ಮರೆಯಬಾರದು.

English summary

Monsoon rain: How is the escape from diseases spread by mosquitoes in rainy season?, here see details

Source link