India
oi-Sunitha B
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಇಬ್ಬರು ಮುಸ್ಲಿಂ ಪುರುಷರನ್ನು ದೊಣ್ಣೆಗಳಿಂದ ಥಳಿಸಿದ್ದಾರೆ.
ಸಿಹಾದ ಗ್ರಾಮದ ಇಬ್ಬರು ಮುಸ್ಲಿಂ ಪುರುಷರು ದ್ವಿಚಕ್ರವಾಹನದಲ್ಲಿ ಇಮ್ಲಿಪುರದಿಂದ ಮಾಂಸವನ್ನು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ. ಖಾಂಡ್ವಾದ ಪಾಲಿಟೆಕ್ನಿಕ್ ಕಾಲೇಜು ಬಳಿ ಬಜರಂಗದಳದ ಕಾರ್ಯಕರ್ತರು ಅವರನ್ನು ತಡೆದು ಗೋಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಮುಸ್ಲಿಂ ಪುರುಷರು ತಳ್ಳಿಹಾಕಿದ್ದಾರೆ. ತಾವು ಕುರಿಮರಿ ಮಾಂಸವನ್ನು ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದರೂ ಬಜರಂಗದಳದ ಕಾರ್ಯಕರ್ತರು ಅವರನ್ನು ಥಳಿಸಿ ಅವರ ಬಟ್ಟೆಗಳನ್ನು ಹರಿದು ಹಾಕಿದ್ದಾರೆ.
ಮಾತ್ರವಲ್ಲದೆ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ.
‘ಆಡಳಿತವು ಖಾಂಡ್ವಾದ ಕಸಾಯಿಖಾನೆಗಳ ಮೇಲೆ ಕಟ್ಟುನಿಟ್ಟಾದ ನಿಗಾ ಇರಿಸುತ್ತದೆ ಮತ್ತು ಇಲ್ಲಿ ಗೋಮಾಂಸವನ್ನು ಪಡೆಯಲು ಸಾಧ್ಯವಿಲ್ಲ. ಕೆಲವು ಸಂಘಟನೆಗಳು ಸುಳ್ಳು ಆರೋಪ ಮಾಡುವ ಮೂಲಕ ನಗರದ ವಾತಾವರಣ ಹಾಳು ಮಾಡಲು ಷಡ್ಯಂತ್ರ ನಡೆಸುತ್ತಿವೆ’ ಎಂದು ನಗರ ಖಾಜಿ (ಮ್ಯಾಜಿಸ್ಟ್ರೇಟ್ ಅಥವಾ ಶರಿಯಾ ನ್ಯಾಯಾಲಯದ ನ್ಯಾಯಾಧೀಶ) ಸೈಯದ್ ನಿಸಾರ್ ತಿಳಿಸಿದ್ದಾರೆ.
ಈ ಬಗ್ಗೆ ಬಜರಂಗದಳ ಜಿಲ್ಲಾ ಸಂಯೋಜಕ ಆದಿತ್ಯ ಮೆಹ್ತಾ ಮಾತನಾಡಿ, ಇಬ್ಬರು ಗೋಮಾಂಸ ಸಾಗಿಸುತ್ತಿರುವುದನ್ನು ನಮ್ಮ ಕಾರ್ಯಕರ್ತರು ಗಮನಿಸಿದ್ದಾರೆ. ಹೀಗಾಗಿ ಅವರನ್ನು ಹಿಡಿದು ರಾಮೇಶ್ವರ ಚೌಕಿಗೆ ಕರೆತಂದಿದ್ದಾರೆ ಎಂದು ವಾದಿಸಿದ್ದಾರೆ.
ಎಸ್ಪಿ ಸತ್ಯೇಂದ್ರ ಶುಕ್ಲಾ ಈ ಬಗ್ಗೆ ಮಾತನಾಡಿ, ‘ಮುಸ್ಲಿಂ ಸಮುದಾಯದ ಕೆಲವರು ವಿಡಿಯೋವನ್ನು ತೋರಿಸಿದ್ದಾರೆ. ವೀಡಿಯೋವನ್ನು ಸಿಎಸ್ಪಿ ಹಾಗೂ ಠಾಣೆಯ ಉಸ್ತುವಾರಿಗೆ ನೀಡಿದ್ದೇವೆ. ಎಲ್ಲಾ ಸಂದರ್ಭಗಳನ್ನು ತನಿಖೆ ಮಾಡಲಾಗುತ್ತದೆ. ಅದರ ಸತ್ಯಗಳ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ಜೊತೆಗೆ ”ಎರಡು ಪ್ರಕರಣಗಳು ದಾಖಲಾಗಿವೆ. ಪತ್ತೆಯಾದ ಮಾಂಸಕ್ಕೆ ಯಾವುದೇ ರಸೀದಿ ಇಲ್ಲದ ಕಾರಣ ಇಬ್ಬರು ಮುಸ್ಲಿಂ ಪುರುಷರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಗೋಮಾಂಸವೇ ಎಂದು ಪಶುವೈದ್ಯರು ಮಾದರಿಗಳನ್ನು ಪರಿಶೀಲಿಸುತ್ತಿದ್ದಾರೆ,” ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಗೋಹತ್ಯೆ ಕಾನೂನು
2019 ರಲ್ಲಿ, ಮಧ್ಯಪ್ರದೇಶ ವಿಧಾನಸಭೆಯು ಗೋಹತ್ಯೆ ವಿರೋಧಿ ತಿದ್ದುಪಡಿ ಕಾಯ್ದೆ 2019 ಅನ್ನು ಅಂಗೀಕರಿಸಿದ್ದು, ಗೋವಿನ ಹೆಸರಿನಲ್ಲಿ ಹಿಂಸಾಚಾರ ಎಸಗುವ ಅಪರಾಧಿಗಳಿಗೆ ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000-50,000 ರೂ. ದಂಡ ವಿಧಿಸಲಾಗುತ್ತದೆ.
ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಜೂನ್ 2019 ರಲ್ಲಿ ಅಂಗೀಕರಿಸಿದ ಗೋಹತ್ಯೆ ವಿರೋಧಿ ಕಾಯ್ದೆ 2004 ರ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಗೋಹತ್ಯೆ ವಿರೋಧಿ ಕಾಯ್ದೆ 2004 ರ ಪ್ರಕಾರ, ಮಧ್ಯಪ್ರದೇಶದ ಮೂಲಕ ಜಾನುವಾರುಗಳನ್ನು ಸಾಗಿಸಲು ಯಾರಿಗೂ ಅವಕಾಶವಿಲ್ಲ. ಅದಕ್ಕೆ ನಿಯಮಗಳನ್ನು ಅನುಸರಿಸಬೇಕು.
English summary
Bajrang Dal activists beat up two Muslims who were transporting beef on Bakrid festival in Madhya Pradesh.
Story first published: Saturday, July 1, 2023, 15:31 [IST]