ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಒಬ್ಬ ಪೊಲೀಸ್ ಸಿಬ್ಬಂದಿ ಸೇರಿ ನಾಲ್ವರಿಗೆ ಗಾಯ | Manipur violence: Four persons, including one cop injured in fresh violence

India

oi-Mamatha M

|

Google Oneindia Kannada News

ಇಂಫಾಲ, ಜುಲೈ. 27: ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಮತ್ತು ಶಂಕಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳ ನಡುವೆ ಮತ್ತೆ ಘರ್ಷಣೆ ನಡೆದಿದೆ. ಹೊಸ ಹಿಂಸಾಚಾರದಲ್ಲಿ ಒಬ್ಬ ರಾಜ್ಯ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊ ಇಖಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಫೌಗಕ್‌ಚಾವೊ ಇಖಾಯ್ ಅವಾಂಗ್ ಲೈಕೈ ಮತ್ತು ತೆರಖೊಂಗ್‌ಸಾಂಗ್‌ಬಿ ಪ್ರದೇಶಗಳಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಎರಡು ಕಡೆಯವರ ನಡುವೆ ಗುಂಡಿನ ದಾಳಿ ಮತ್ತು ಪ್ರತಿದಾಳಿ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಆದರೂ, ಒಬ್ಬ ಪೊಲೀಸ್ ಸಿಬ್ಬಂದಿ ಮತ್ತು ಮೂವರು ಗ್ರಾಮ ಸ್ವಯಂಸೇವಕರು ಗಾಯಗೊಂಡಿರುವ ವರದಿಯು ಮಧ್ಯಾಹ್ನ 1.45 ರ ಸುಮಾರಿಗೆ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

manipur-violence

ಘರ್ಷನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಿಷ್ಣುಪುರ ಜಿಲ್ಲಾಸ್ಪತ್ರೆ ಮತ್ತು ಇಂಫಾಲ್‌ನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ. ಬಿಷ್ಣುಪುರ ಜಿಲ್ಲೆಯ ಕ್ವಾಕ್ಟಾ ಬಳಿ ನಾವು ತಲುಪಿದಾಗ ಗುಂಡಿನ ಸದ್ದು ಕೇಳಿದೆ ಎಂದು ಗುರುವಾರ ಆ ಪ್ರದೇಶಕ್ಕೆ ಭೇಟಿ ನೀಡಿದ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಮಣಿಪುರ ವೈರಲ್ ವಿಡಿಯೋ ತನಿಖೆ ಸಿಬಿಐ ಹೆಗಲಿಗೆ ವಹಿಸಿದ ಕೇಂದ್ರ ಸರ್ಕಾರಮಣಿಪುರ ವೈರಲ್ ವಿಡಿಯೋ ತನಿಖೆ ಸಿಬಿಐ ಹೆಗಲಿಗೆ ವಹಿಸಿದ ಕೇಂದ್ರ ಸರ್ಕಾರ

ಬುಧವಾರ, ಜನಸಮೂಹವು 15 ರಿಂದ 16 ಮನೆಗಳನ್ನು ಸುಟ್ಟುಹಾಕಿದೆ. ಇಂಡೋ-ಮ್ಯಾನ್ಮಾರ್ ಗಡಿಯ ಬಳಿ ಇಂಫಾಲ್‌ನಿಂದ ದಕ್ಷಿಣಕ್ಕೆ 110 ಕಿಮೀ ದೂರದಲ್ಲಿರುವ ಗಡಿ ಪಟ್ಟಣವಾದ ಮೋರೆಯಲ್ಲಿ ಅರಣ್ಯ ಅತಿಥಿ ಗೃಹವನ್ನು ಭಾಗಶಃ ಸುಟ್ಟುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ವೇಳೆ ಭದ್ರತಾ ಪಡೆಗಳು ಮಧ್ಯ ಪ್ರವೇಶಿಸಿ ಉದ್ರಿಕ್ತ ಗುಂಪನ್ನು ಚದುರಿಸಿದ್ದಾರೆ.

manipur-violence

ಇನ್ನು, ಮಣಿಪುರ ವೈರಲ್ ವಿಡಿಯೋ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ ತನಿಖೆ ನಡೆಸಲಿದೆ. ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ ಮತ್ತು ಸರ್ಕಾರವು ರಾಜ್ಯದ ಹೊರಗೆ ಅದರ ವಿಚಾರಣೆಯನ್ನು ಕೋರಲಿದೆ ಎಂದು ಅಧಿಕಾರಿಗಳು ಜುಲೈ 27 ರಂದು ತಿಳಿಸಿದ್ದಾರೆ.

ಮೇ 4ರಂದು ನಡೆದಿದೆ ಎನ್ನಲಾದ ಘಟನೆಯ ಜುಲೈ 19 ರಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ದೇಶಾದ್ಯಂತ ಈ ವಿಡಿಯೋಗೆ ಆಕ್ರೋಶ ವ್ಯಕ್ತವಾಗಿತ್ತು. ಅಂದಿನಿಂದ ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಆಡಳಿತದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ವೈರಲ್ ವಿಡಿಯೋ ಪ್ರಕರಣದ ವಿಚಾರಣೆಯನ್ನು ಕಲಹ ಪೀಡಿತ ಮಣಿಪುರದ ಹೊರಗೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಅಫಿಡವಿಟ್ ಅನ್ನು ಸರ್ಕಾರ ಸಲ್ಲಿಸಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಮೇ 4 ರಂದು 800-1000 ಪುರುಷರ ಗುಂಪೊಂದು ಮಹಿಳೆಯ ಸಹೋದರ ಮತ್ತು ತಂದೆಯನ್ನು ಕೊಂದಿದ್ದಾರೆ. ಒಂದೇ ಕುಟುಂಬದ ಮೂವರು ಮಹಿಳೆಯರಲ್ಲಿ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಈ ಘಟನೆಯ ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

English summary

Manipur fresh violence: Four persons, including one state police personnel, sustained injuries in a fresh violence in Manipur. know more.

Story first published: Thursday, July 27, 2023, 22:22 [IST]

Source link