Mandya
lekhaka-Srinivasa K
ಮಂಡ್ಯ, ಜುಲೈ 30: ಚಾಲಕನ ನಿಯಂತ್ರಣ ತಪ್ಪಿ ಕಾರು ವಿಸಿ ನಾಲೆಗೆ ಉರುಳಿ ಬಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಅವರ ಪತ್ನಿ ಮಹದೇವಮ್ಮ, ಸಂಬಂಧಿಕರಾದ ರೇಖಾ, ಸಂಜನಾ, ಮಹಾದೇವಿ ಮೃತ ಮಹಿಳೆಯರು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಚಾಲಕ ಮನೋಜ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದಿಚುಂಚನಗಿರಿಯಲ್ಲಿ ಏರ್ಪಡಿಸಿದ್ದ ದೇವತಾ ಕಾರ್ಯಕ್ಕೆ ಆಹ್ವಾನಿಸಲು ಗೊರವನಹಳ್ಳಿ ಗ್ರಾಮದಿಂದ ದೊಡ್ಡ ಮುಲಗೂಡು ಗ್ರಾಮಕ್ಕೆ ನಾಲ್ವರು ಮಹಿಳೆಯರು ಆಗಮಿಸುತ್ತಿದ್ದರು. ರಾತ್ರಿ ಎಂಟು ಗಂಟೆ ವೇಳೆಗೆ ರಾಮನಹಳ್ಳಿ ಗ್ರಾಮದ ನಾಲೆ ಏರಿ ಮೇಲೆ ಕಾರು ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕತ್ತಲೆಯಲ್ಲಿ ಕಾರು ನಾಲಿಗೆ ಉರುಳಿದೆ.
ಕಾರು ನಾಲಿಗೆ ಮುರಳಿ ಬಿದ್ದ ಶಬ್ದ ಕೇಳಿದ ಊರಿನವರು ಸ್ಥಳಕ್ಕೆ ಧಾವಿಸಿದರು ಕತ್ತಲೆಯಲ್ಲಿ ಕಾರು ಸರಿಯಾಗಿ ಕಾಣಿಸಲಿಲ್ಲ. ಆನಂತರ ಕಾರನ್ನು ಪತ್ತೆ ಹಚ್ಚಿ ಒಳಗಿರುವವರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದರು. ಅಷ್ಟರಲ್ಲಿ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಚಾಲಕ ಮನೋಜ್ ನನ್ನು ರಕ್ಷಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಪೊಲೀಸರು ಮೃತದೇಹಗಳನ್ನು ಮೇಲೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ: ಕಲಾವಿದ ದಾರುಣ ಸಾವು
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಚಿತ್ರಕಲಾ ಕಲಾವಿದ, ನಟ ಲೋಕೇಶ್ (38) ಮೃತಪಟ್ಟಿದ್ದಾರೆ. ಲೋಕೇಶ್ ಬೆಂಗಳೂರಿನಿಂದ ಮೈಸೂರು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದು, ಮಂಡ್ಯ ತಾಲೂಕಿನ ಯಲಿಯೂರು ಬಳಿ ಅಪಘಾತ ಸಂಭವಿಸಿದೆ.
ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಗ್ರಾಮದವರಾದ ಲೋಕೇಶ್ ಹಲವು ಕಲಾ ನಿರ್ದೇಶಕರ ಬಳಿ ಕೆಲಸ ಮಾಡಿದ್ದರು. ಅಲ್ಲದೇ ಅಮೂಲ್ಯ ರತ್ನ ಕಿರುಚಿತ್ರ ಹಾಗೂ ಫ್ಯಾಮಿಲಿ ಪ್ಯಾಕ್ ಚಲನಚಿತ್ರದಲ್ಲಿ ಅಭಿನಯಿಸಿದ್ದರು ಎಂದು ವರದಿಯಾಗಿದೆ.
English summary
Four women die after car accidentally falls into VC canal at Srirangapatna Mandya District. Know more
Story first published: Sunday, July 30, 2023, 9:30 [IST]