Mandya
lekhaka-Srinivasa K

ಮಂಡ್ಯ, ಜೂನ್, 21: ದೇಹ ಹಾರ್ಡ್‌ವೇರ್ ಆದರೆ ಮನಸ್ಸು ಸಾಫ್ಟ್‌ವೇರ್ ಇದ್ದಂತೆ. ದೇಹಕ್ಕೆ ತೊಂದರೆಯಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು. ಆದರೆ ಮನಸ್ಸಿಗೆ ತೊಂದರೆಯಾದರೆ ಚಿಕಿತ್ಸೆ ಕಷ್ಟಕರ. ದೇಹ ಹಾಗೂ ಮನಸ್ಸನ್ನು ಸಮಾಭಾವದಿಂದ ಇಟ್ಟುಕೊಳ್ಳಲು ಯೋಗಾಭ್ಯಾಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಆಯುರ್ ಮಟಂ ಆಯುರ್ವೇದ ಹೆಲ್ತ್ ವಿಲೇಜ್ ಇವರ ವತಿಯಿಂದ ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರದ ಬೃಂದಾವನ ಗಾರ್ಡನ್‌ನಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯೋಗ ಮಾಡುವವರಿಗೆ ರೋಗ ಇರುವುದಿಲ್ಲ. ಆದ್ದರಿಂದ ರೋಗ ಬರುವ ಮೊದಲೇ ಎಲ್ಲರೂ ಯೋಗವನ್ನು ಮಾಡೋಣ ಎಂದು ಕಿವಿಮಾತು ಹೇಳಿದರು. ಹಾಗೆಯೇ ಯೋಗಕ್ಕೆ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಶಕ್ತಿ ಇದೆ. ಭಾರತ ದೇಶವು ಯೋಗ ವಿದ್ಯೆಯಲ್ಲಿ ಇಡೀ ಪ್ರಪಂಚಕ್ಕೆ ವಿಶ್ವ ಗುರುವಾಗಿದೆ. ಆರೋಗ್ಯವನ್ನು ವೃದ್ಧಿಸುವ ಯೋಗವನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಿ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿರ ಹಾಗೂ ಸದೃಢವಾಗಿ ಇಟ್ಟಿಕೊಳ್ಳಲು ಯೋಗ ಸಹಕಾರಿಯಾಗಿದೆ. ದಿನದಲ್ಲಿ 24 ಗಂಟೆ ಇದ್ದು, ಇದರಲ್ಲಿ ಒಂದು ಗಂಟೆಯನ್ನು ಯೋಗಕ್ಕೆ ಮೀಸಲಿಟ್ಟರೆ ಉಳಿದ 23 ಗಂಟೆಗಳ ಕಾಲ ನಮ್ಮ ದಿನನಿತ್ಯದ ಕೆಲಸವನ್ನು ಲವಲವಿಕೆಯಿಂದ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಯೋಗ ಪ್ರತಿದಿನ ಪ್ರತಿನಿತ್ಯ ನಮ್ಮ ಜೀವನದ ಒಂದು ಭಾಗವಾಗಬೇಕು. ನಮ್ಮ ಪ್ರತಿದಿನದ ಕೆಲಸ ಪ್ರಾರಂಭವಾಗುವ ಮೊದಲು ಉತ್ತವ ಆರೋಗ್ಯ ಹಾಗೂ ಬದುಕಿಗಾಗಿ, ಕುಟುಂಬದ ಸಂತೋಷಕ್ಕಾಗಿ ದಿನದ ಅರ್ಧಗಂಟೆಯನ್ನು ಬೆಳಗಿನ ಜಾವ ಯೋಗಕ್ಕೆ ಮೀಸಲಿಡಬೇಕು. ಇದರಿಂದ ಬೇರೆ ಎಲ್ಲಾ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತದೆ. ಇದನ್ನು ಹಲವಾರು ಮಹಾನ್ ವ್ಯಕ್ತಿಗಳು ಅನುಸರಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳು ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಯೋಗವನ್ನು ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಅಭ್ಯಾಸ ಮಾಡಿದರೆ ಸಾರ್ವಜನಿಕರಿಗೆ ಇನ್ನೂ ಉತ್ತಮ ಸೇವೆ ಒದಗಿಸಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿ ಡಾ. ಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ಅವರು ಮಾತನಾಡಿ 9ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಮಂಡ್ಯ ಜಿಲ್ಲಾಡಳಿತ ಕೆ.ಆರ್.ಎಸ್ ಬೃಂದಾವನ ಉದ್ಯಾನವನದ ಪ್ರಕೃತಿಯ ಒಡಲಿನಲ್ಲಿ ಆಯೋಜಿಸಿರುವುದು ಸಂಸತದ ವಿಚಾರವಾಗಿದೆ. ಯೋಗವು ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುಂಟು ಮಾಡುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ ಎಂದರು.
ಯೋಗವು ಕೇವಲ ದೇಹವನ್ನು ಮಾತ್ರವಲ್ಲದೆ ಮನಸ್ಸು, ದೇಹ ಮತ್ತು ಆತ್ಮ ಸೇರಿದಂತೆ ಎಲ್ಲಾ ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಭಾರತೀಯ ಎಂದರೇ ಭಾವನಾತ್ಮಕ ಜೀವಿ ಎಂದರ್ಥ. ನಮ್ಮ ದೇಶದ ಬಗ್ಗೆ ಅಭಿಮಾನವಿರಬೇಕು. ಈ ಮೂಲಕ ದೇಶದ ಇತಿಹಾಸವನ್ನು ಬೇರೆಯವರಿಗೂ ಹಂಚಬೇಕು. ಜಾತಿ, ಮತ ಪಂಥಗಳು ಇಲ್ಲದೇ ಮಾನವ ಕುಲದ ಒಳಿತಿಗಾಗಿ ಯೋಗಶಾಸ್ತ್ರವಿದೆ ಎಂದು ಪ್ರತಿಪಾದಿಸಿದರು.
ಯೋಗವು ಭಾರತೀಯ ಮೂಲದ 5 ಸಾವಿರ ವರ್ಷ ಪುರಾತನವಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗಶಾಸ್ತ್ರದಲ್ಲಿ ಮಾನವನಾಗಿ ಹುಟ್ಟಿದಮೇಲೆ ಹೇಗೆ ಬದುಕಬೇಕು. ಬೇರೆಯವರಿಗೆ ಯಾವ ರೀತಿ ಮಾರ್ಗದರ್ಶನ ನೀಡಬೇಕು ಎಂಬೆಲ್ಲಾ ಮಾಹಿತಿಗಳಿವೆ. ಅದನ್ನು ಇಂದಿನ ಯುವ ಜನ ಓದಿ ತಿಳಿಯಬೇಕಿದೆ ಎಂದರು. ಹಾಗೆಯೇ ದೇವರ ದಯೆಯಿಂದ ಈ ಬಾರಿ ಉತ್ತಮ ಮಳೆಯಾಗಿ ರೈತ ಹಾಗೂ ನಾಡಿನ ಜನತೆಗೆ ಒಳಿತು ಮಾಡಲಿ ಎಂದು ಆಶಿಸಿದರು.
ಈ ವೇಳೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಸೌಮ್ಯ, ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
English summary
International Yoga Day 2023: Mandya Deputy Commissioner Dr.Kumar gave information about benefits of yogasana,
Story first published: Wednesday, June 21, 2023, 16:28 [IST]