ಮಂಡ್ಯ: ಜೂನ್‌ 30ರಿಂದ ಮೈಷುಗರ್‌ನಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭ | Sugarcare Crushing start from june 30 in Mandya’s MySugar factory

Agriculture

lekhaka-Srinivasa K

By ಮಂಡ್ಯ ಪ್ರತಿನಿಧಿ

|

Google Oneindia Kannada News

ಮಂಡ್ಯ, ಜೂನ್‌, 25: ಮೈಷುಗರ್‌ನಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಜೂನ್‌ 30ರಿಂದ ಪ್ರಾರಂಭ ಮಾಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ್ ಪಾಟೀಲ್ ತಿಳಿಸಿದರು.

ಕಾರ್ಖಾನೆಯ ತಮ್ಮ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಂತ್ರಗಳ ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗಿದೆ. ಜೂನ್‌ 28ರಿಂದಲೇ 500 ಟನ್ ಕಬ್ಬು ಅರೆಯಲಾಗುವುದು. ನಂತರದ ದಿನಗಳಲ್ಲಿ ಎರಡೂವರೆ ಸಾವಿರ ಟನ್ ಕಬ್ಬು ಅರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Sugarcare Crushing start from june 30 in Mandyas MySugar factory

ಕಬ್ಬು ಕಟಾವು ಮಾಡಲು ಕಾರ್ಮಿಕರ ವ್ಯವಸ್ಥೆಯನ್ನೂ ಕಂಪನಿ ವತಿಯಿಂದ ಮಾಡಲಾಗಿದೆ. ರೈತರು ಕಟಾವು ಮಾಡಿದ ತಾಜಾ ಕಬ್ಬನ್ನು 24 ಗಂಟೆಯೊಳಗೆ ನುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಬ್ಬು ಸರಬರಾಜು ಮಾಡಿದ 14 ದಿನಗಳಿಗೊಮ್ಮೆ ಕಬ್ಬಿನ ಬಿಲ್‌ ಅನ್ನು ಪಾವತಿಸಲಾಗುವುದು. ರೈತರು ಕಂಪನಿಯ ಏಳಿಗೆಗೆ ಗುಣಮಟ್ಟದ ಕಬ್ಬನ್ನು ಖಾಸಗೀ ಕಾರ್ಖಾನೆಗಳಿಗೆ ಪರಬಾರೆ ಮಾಡದೆ ಮೈಷುಗರ್ ಕಂಪನಿಗೆ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.

ರಾಯಚೂರು: ನಿರೀಕ್ಷಿತ ಮಟ್ಟ ತಲುಪದ ಬಿತ್ತನೆ ಬೀಜ ಸಂಗ್ರಹ, ರೈತರಲ್ಲಿ ಆತಂಕರಾಯಚೂರು: ನಿರೀಕ್ಷಿತ ಮಟ್ಟ ತಲುಪದ ಬಿತ್ತನೆ ಬೀಜ ಸಂಗ್ರಹ, ರೈತರಲ್ಲಿ ಆತಂಕ

ಕಳೆದ ಬಾರಿ ತಡವಾಗಿ ಕಂಪನಿ ಪ್ರಾರಂಭಿಸಲು ನಿರ್ಧಾರ ಕೈಗೊಳ್ಳಲಾಯಿತು. ನಂತರದ ದಿನಗಳಲ್ಲಿ ದುರಸ್ಥಿ ಕಾರ್ಯವೂ ತಡವಾಗಿತ್ತು. ಹಾಗಾಗಿ ಹೆಚ್ಚಿನ ಕಬ್ಬು ಅರೆಯಲು ಸಾಧ್ಯವಾಗಲಿಲ್ಲ. ಈ ಬಾರಿ ಜೂನ್‌ನಿಂದಲೇ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲು ನಿರ್ಧರಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಯಂತ್ರೋಪಕರಣಗಳು 35 ವರ್ಷಗಳಷ್ಟು ಹಳೆಯದಾಗಿರುವ ಕಾರಣ ಬಿಡಿ ಭಾಗಗಳು ಸಿಗುತ್ತಿರಲಿಲ್ಲ. ಈ ಹಿನ್ನೆಲೆ ಯಾವ ಕಂಪನಿಗಳು ಯಂತ್ರಗಳನ್ನು ತಯಾರಿಸುತ್ತಿವೆ ಅಲ್ಲಿಗೇ ಕಳುಹಿಸಿ ಸರಿಪಡಿಸಲಾಗಿದೆ. ಒಟ್ಟು ಶೇ.90ರಷ್ಟು ಯಂತ್ರೋಪಕರಣಗಳು ಸಜ್ಜುಗೊಂಡಿದೆ ಎಂದು ವಿವರಿಸಿದರು.

ಕಳೆದ ಬಾರಿ ಫೈಬ್ರೇಜರ್ (ಕಬ್ಬು ಪುಡಿ ಮಾಡುವ ಯಂತ್ರ) ಕೈಕೊಟ್ಟಿದ್ದರಿಂದಾಗಿ ಮೂರ್ನಾಲ್ಕು ದಿನಗಳ ಕಾಲ ನಿಲ್ಲಿಸಬೇಕಾಗಿತ್ತು. ಈ ಬಾರಿ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಎಚ್ಚರಿಕೆ ವಹಿಸಲಾಗಿದೆ. ಸಂಪೂರ್ಣವಾಗಿ ಅದನ್ನು ದುರಸ್ಥಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

5.50 ಲಕ್ಷ ಟನ್ ಕಬ್ಬಿಗೆ ಒಪ್ಪಿಗೆ

ಪ್ರಸಕ್ತ ಸಾಲಿನಲ್ಲಿ 5.50 ಲಕ್ಷ ಟನ್ ಕಬ್ಬಿಗೆ ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಖಾಸಗಿ ಕಂಪನಿಗಳು ಸಹ ಪ್ರಾರಂಭಿಸಿರುವುದು ಹಾಗೂ ಸ್ಥಳೀಯವಾಗಿ ಆಲೆಮನೆಗಳು ಪ್ರಾರಂಭವಾಗಿರುವ ಕಾರಣ ಒಂದಷ್ಟು ಕಬ್ಬು ಅಲ್ಲಿಗೂ ಹೋಗುವ ಸಾಧ್ಯತೆಗಳಿವೆ. ಒಪ್ಪಿಗೆ ಕಬ್ಬಿನಲ್ಲಿ ಸುಮಾರು 4.50 ಲಕ್ಷ ಟನ್ ಅರೆಯಬಹುದು. ಉಳಿದಂತೆ ಇನ್ನೂ ಒಪ್ಪಿಗೆ ಪ್ರಕ್ರಿಯೆಯನ್ನು ಮುಂದುವರೆಸಿದ್ದೇವೆ ಎಂದು ಹೇಳಿದರು.

3500 ಮಂದಿ ಕಟಾವು ಕಾರ್ಮಿಕರು :

ಕಬ್ಬು ಕಟಾವು ಮಾಡಲು ನಮ್ಮಲ್ಲಿ 3,500 ಕಾರ್ಮಿಕರು ಕರೆಸಲಾಗುತ್ತಿದೆ. ಇದರಲ್ಲಿ ಸ್ಥಳೀಯರು 1,000, ಬಳ್ಳಾರಿ 1,000, ಮಹಾರಾಷ್ಟ್ರ, ಬಿಜಾಪುರ, ಜಾರ್ಖಂಡ್‌ನ ತಲಾ 500 ಮಂದಿ ಕಾರ್ಮಿಕರು ಸಜ್ಜಾಗಿದ್ದಾರೆ. ಸದ್ಯ ಇದೀಗ ಕಾರ್ಖಾನೆಯೊಳಗೆ ಕೆಲಸ ಮಾಡಲು 300 ಮಂದಿ ನುರಿತ ಕಾರ್ಮಿಕರು ಇದ್ದಾರೆ ಎಂದರು.

ಹಣದ ಕೊರತೆ ಇಲ್ಲ

ಸರ್ಕಾರಕ್ಕೆ 105 ಕೋಟಿ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದೆವು. ಪ್ರತಿ ತಿಂಗಳಿಗೆ 35 ಕೋಟಿ ನೀಡಬೇಕೆಂದು ಪ್ರಸ್ತಾವನೆ ನೀಡಲಾಗಿತ್ತು. ಈಗ ಸರ್ಕಾರ 15 ಕೋಟಿ ದುರಸ್ಥಿ ಹಾಗೂ 35 ಕೋಟಿ ದುಡಿಯುವ ಬಂಡವಾಳವಾಗಿ ನೀಡಿದೆ. ಆಗಸ್ಟ್‌ನಲ್ಲಿ ಮತ್ತೆ 30 ಕೋಟಿ ರೂಪಾಯಿ ಕೊಡುವ ನಿರೀಕ್ಷೆಯಿದೆ.

ಸದ್ಯ ಇರುವ ಹಣದಲ್ಲಿ 1.50 ಲಕ್ಷ ಟನ್ ಕಬ್ಬನ್ನು ನುರಿಸಬಹುದಾಗಿದೆ. ಇದರಲ್ಲಿ ಕಾರ್ಮಿಕರ ಕೂಲಿ ಹಾಗೂ ವೇತನ, ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿ ಮಾಡಬಹುದು. ನಂತರ ನಮ್ಮಲ್ಲಿ ಸಕ್ಕರೆ ಉತ್ಪಾದನೆಯಾಗುತ್ತದೆ. ಅದರಲ್ಲಿ ನಿರ್ವಹಣೆ ಮಾಡಬಹುದಾಗಿದೆ ಎಂದರು.

ಸಹ ವಿದ್ಯುತ್ ಘಟಕವನ್ನು 30 ಮೆಗಾ ವ್ಯಾಟ್‌ ಉತ್ಪಾದನೆಗೆ ನಿಗದಿಗೊಳಿಸಿ ಅಳವಡಿಸಲಾಗಿದೆ. ಅದನ್ನು 10 ಮೆಗಾ ವ್ಯಾಟ್ ಉತ್ಪಾದನೆಗೆ ಬದಲಾವಣೆ ಮಾಡಬೇಕಾಗಿದೆ. ಬ್ಯಾಕ್‌ಪ್ರೆಷರ್ ಯಂತ್ರ ಅಳವಡಿಸಿ ಅದರಲ್ಲಿ ಕನಿಷ್ಟ 5 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಹೆಚ್ಚಿನ ಬಗಾಸ್ ಬಂದಲ್ಲಿ 18 ಮೆಗಾ ವ್ಯಾಟ್‌ವರೆಗೆ ವಿದ್ಯುತ್ ಉತ್ಪಾದನೆ ಮಾಡಬಹುದು. ಇದರಲ್ಲಿ ಕಾರ್ಖಾನೆಗೆ 5ರಿಂದ 7 ಮೆಗಾ ವ್ಯಾಟ್‌ ಬೇಕಾಗುತ್ತದೆ. ಅದನ್ನು ಉಪಯೋಗಿಸಿಕೊಂಡು ವಿದ್ಯುತ್ ಕಂಪನಿಗೆ ಮಾರಾಟ ಮಾಡಬಹುದು ಎಂದರು.

ಒಂದು ವೇಳೆ ಕಡಿಮೆ ಪ್ರಮಾಣದ ಬಯೋ ಗ್ಯಾಸ್‌ ಉತ್ಪಾದನೆಯಾದಲ್ಲಿ ನಾವೇ ವಿದ್ಯುತ್ ಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು. ಅಲ್ಲದೆ 2017-18ನೇ ಸಾಲಿನಲ್ಲಿ 25 ಲಕ್ಷ ರೂಪಾಯಿ ಮೌಲ್ಯದ ಬಾಯ್ಲರ್ ಪಂಪ್ ಖರೀದಿಸಲಾಗಿದೆ. ಅಂದು ಬ್ಯಾಂಕ್‌ನಿಂದ ಹಣ ಕೊಟ್ಟು ಪಡೆಯದ ಕಾರಣ ಸರಬರಾಜುದಾರರು ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಅದಕ್ಕೆ 46 ಲಕ್ಷ ಪಾವತಿ ಮಾಡಬೇಕಾಗಿದೆ.

ನ್ಯಾಯಾಲಯ ಶೇಕಡಾ 18ರಷ್ಟು ಬಡ್ಡಿ ಪಾವತಿಸಲು ಸೂಚಿಸಲಾಗಿದೆ. ಆದರೂ ನಾವು ಸರಬರಾಜುದಾರರನ್ನು ಕರೆದು ಚರ್ಚಿಸಿ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದೆವು, ಆದರೆ ಒಪ್ಪಿಕೊಂಡಿಲ್ಲ. ಅದಕ್ಕೆ ಸಂಬಂಧಿಸಿದಂತೆ ಇನ್ನೂ 11 ಲಕ್ಷ ರೂಪಾಯಿ ಪಾವತಿ ಮಾಡಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

190 ಕೋಟಿ ರೂಪಾಯಿ ಸಾಲ

ವಿದ್ಯುತ್ ಬಾಕಿ, ಆಹಾರ ನಿಗಮದ ಸಾಲ, ಕೆಆರ್‌ಐಡಿಎಲ್ ಸೇರಿದಂತೆ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಂತೆ 170 ಕೋಟಿ ರೂಪಾಯಿ ಹಾಗೂ ಕಾರ್ಮಿಕರು, ಗುತ್ತಿಗೆದಾರರು, ಮೆಟೀರಿಯಲ್ ಸರಬರಾಜು ಬಾಬ್ತು 17 ಕೋಟಿ ರೂಪಾಯಿ ಸೇರಿದಂತೆ ಒಟ್ಟಾರೆ 190 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಹೇಳಿದರು.

English summary

Mandya MySugar factory start from june 30, Sugarcare Crushing start from june 30 in Mandya MySugar factory,

Story first published: Sunday, June 25, 2023, 10:35 [IST]

Source link