ಭಾರತ & ಅಮೆರಿಕ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ: ಶ್ವೇತ ಭವನದಲ್ಲಿ ಭಾರತೀಯರ ಜೊತೆ ಪ್ರಧಾನಿ ಮೋದಿ ಮಾತು! | Grand welcome for PM Narendra Modi in White house of America

International

oi-Malathesha M

|

Google Oneindia Kannada News

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ನೆಲದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಹಾಗೇ ಭಾರತದ ತಾಕತ್ತು ಏನು ಎಂಬುದು ಜಗತ್ತಿಗೇ ಮನವರಿಕೆ ಆಗಿದೆ. ಅಮೆರಿಕದ ಶಕ್ತಿಕೇಂದ್ರ ಎಂದೇ ಕರೆಯಲ್ಪಡುವ ಶ್ವೇತ ಭವನ ಅಥವಾ ವೈಟ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ, ಭಾರತ & ಅಮೆರಿಕ ಸ್ನೇಹದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಭಾರತದ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕದ ಶ್ವೇತ ಭವನದ (White House) ಆವರಣದಲ್ಲಿ ಭಾರತ ಮೂಲದ ಅಮೆರಿಕನ್ನರ ಜೊತೆ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎರಡೂ ದೇಶಗಳು ಗೌರವಿಸುತ್ತವೆ. ಹಲವು ಅಭಿವೃದ್ಧಿಗೆ ಸಹಕಾರ, ಪರಸ್ಪರ ನೆರವು ನೀಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೇ ತಮಗೆ ಆತ್ಮೀಯ ಸ್ವಾಗತ ಕೋರಿದ ಅಧ್ಯಕ್ಷ ಜೋ ಬೈಡನ್​​ ಸೇರಿದಂತೆ ಅಮೆರಿಕದ ನಾಗರಿಕರಿಗೂ ಇದೇ ವೇಳೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು. ಅಲ್ಲದೆ ತಾವು 30 ವರ್ಷದ ಹಿಂದೆ ಸಾಮಾನ್ಯ ನಾಗರಿಕನಾಗಿ ಅಮೆರಿಕಗೆ ಬಂದಿದ್ದನ್ನು ಪ್ರಧಾನಿ ಮೋದಿ ನೆನಪು ಮಾಡಿಕೊಂಡರು.

Grand welcome for PM Narendra Modi in White house of America

ಅಂದು ಸಾಮಾನ್ಯ ವ್ಯಕ್ತಿ ಇಂದು ಪ್ರಧಾನಿ!

ಹೌದು, 1993ರ ಘಟನೆಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಮೆಲುಕು ಹಾಕಿಕೊಂಡರು. 3 ದಶಕದ ಹಿಂದೆ ನಾನು ಸಾಮಾನ್ಯ ವ್ಯಕ್ತಿಯಾಗಿ ಅಮೇರಿಕಾ ಪ್ರವಾಸಕ್ಕೆ ಬಂದಿದ್ದೆ. ಆಗ ವೈಟ್ ಹೌಸ್‌ನ ಹೊರಗಡೆಯಿಂದ ನೋಡಿದ್ದೆ. ಈಗ ಪ್ರಧಾನಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದರು. ಹಾಗೇ ಭಾರತೀಯ ಸಮುದಾಯದ ಜನರು ತಮ್ಮ ಜ್ಞಾನ, ಶಕ್ತಿ, ಸಾಮರ್ಥ್ಯ, ನಿಷ್ಠೆಯಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಭಾರತದ ಸ್ನೇಹ ಇನ್ನಷ್ಟು ಗಟ್ಟಿ ಆಗಲು ಭಾರತೀಯರ ಕೊಡುಗೆ ಸಾಕಷ್ಟಿದೆ ಎಂದರು. ಶ್ವೇತಭವನದ ಆವರಣಕ್ಕೆ ಆಗಮಿಸಿದ ಮೋದಿ ಅವರಿಗೆ ಅಮೆರಿಕ ಸೇನಾ ಪಡೆ ಗೌರವ ಸಲ್ಲಿಸಿತು. ಮೋದಿ ಅವರು ಸೇನಾಪಡೆಗಳ ಗೌರವ ವಂದನೆ ಸ್ವೀಕರಿಸಿದರು.

ಮೋದಿ ಉಡುಗೊರೆಗೆ ಬೈಡನ್ ಫಿದಾ!
ಅಂದಹಾಗೆ ಅಮೆರಿಕ ಅಧ್ಯಕ್ಷರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ನೀಡಿರುವ ಉಡುಗೊರೆಯಲ್ಲಿ, ಹಸು ದಾನ, ಭೂ ದಾನ, ಎಳ್ಳು ದಾನ, ಚಿನ್ನ, ತುಪ್ಪ ಅಥವಾ ಬೆಣ್ಣೆ, ಆಹಾರ ಧಾನ್ಯ, ವಸ್ತ್ರದಾನ ಅಥವಾ ಬಟ್ಟೆ ದಾನ, ಬೆಲ್ಲ ದಾನ, ಬೆಳ್ಳಿ ಮತ್ತು ಉಪ್ಪು ದಾನವನ್ನು ಪೆಟ್ಟಿಗೆ ಒಳಗೊಂಡಿದೆ. ಸಣ್ಣ ಸಣ್ಣ ಬೆಳ್ಳಿಯ ಬಟ್ಟಲಲ್ಲಿ ಎಲ್ಲಾ ದಾನದ ವಸ್ತುಗಳನ್ನ ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಈ ಮೂಲಕ 80 ವರ್ಷ ಪೂರೈಸುತ್ತಿರುವ ಅಮೆರಿಕದ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಹಿಂದೂ ಧರ್ಮ ಪ್ರಕಾರ ಮಹತ್ವದ ಉಡುಗೊರೆ ನೀಡಿದ್ದಾರೆ.

ವಿಶೇಷ ಉಡುಗೊರೆ ತಯಾರಿಸಿದ್ದು ಯಾರು?

ಸಹಸ್ರ ಪೂರ್ಣ ಚಂದ್ರೋದಯದ ಆಚರಣೆ ಸಂದರ್ಭದಲ್ಲಿ 10 ವಿವಿಧ ರೀತಿ ದಾನ ನೀಡುವ, ದಶ ದಾನ ಪದ್ಧತಿಯನ್ನ ಸಾವಿರಾರು ವರ್ಷದಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ಭಾರತದ ಹೊರಗೂ ಪ್ರಧಾನಿ ಮೋದಿ ಹಿಂದೂಗಳ ಈ ಸಂಪ್ರದಾಯ ಪಸರಿಸಿದ್ದಾರೆ. ಇನ್ನು ಈ ಪೆಟ್ಟಿಗೆಯಲ್ಲಿ ಇನ್ನೂ ಹಲವು ವಸ್ತುಗಳು ಗಮನ ಸೆಳೆದಿವೆ. ಈ ಪೆಟ್ಟಿಗೆಯಲ್ಲಿ ವಿಘ್ನನಿವಾರಕ ಗಣೇಶನ ಬೆಳ್ಳಿಯ ವಿಗ್ರಹವಿದೆ. ಕೋಲ್ಕತ್ತಾದ 5ನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬ ವಿಗ್ರಹ ತಯಾರಿಸಿದ್ದಾರೆ. ಇಷ್ಟಲ್ಲದೆ ಪೆಟ್ಟಿಗೆಯಲ್ಲಿ ಹಿಂದೂಗಳ ಮನೆಯ ಪವಿತ್ರ ಸ್ಥಳ, ಎಣ್ಣೆ ದೀಪ ಸಂಕೇತಿಸುವ ವಸ್ತುಗಳಿವೆ. ತಾಮ್ರಪತ್ರ ಎಂದೂ ಕರೆಯಲ್ಪಡುವ ತಾಮ್ರ ಫಲಕವನ್ನು ಉತ್ತರ ಪ್ರದೇಶದಿಂದ ತರಲಾಗಿದೆ. ಅದರ ಮೇಲೆ ಶ್ಲೋಕವನ್ನು ಕೆತ್ತಲಾಗಿದೆ.

ಒಟ್ನಲ್ಲಿ ಪಿಎಂ ಮೋದಿ ಅವರ 2023ರ ಭೇಟಿ ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿಯನ್ನ ತೋರಿಸುತ್ತಿದೆ. ಹಾಗೇ ಭಾರತದ ಶತ್ರು ರಾಷ್ಟ್ರಗಳು ಈ ಭೇಟಿಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿವೆ. ನೆರೆಯ ಪಾಕಿಸ್ತಾನಕ್ಕೂ ಈ ಭೇಟಿ ಒಳಗೊಳಗೆ ಉರಿ ತರಿಸಿದ್ದು ಸುಳ್ಳಲ್ಲ. ಹಾಗೇ ಅಮೆರಿಕ ಮತ್ತು ಭಾರತದ ಮಧ್ಯೆ ಹಲವು ಪ್ರಮುಖ ಒಪ್ಪಂದಗಳು ನಡೆದಿರುವುದು ಸಹಜವಾಗಿ ಭಾರತದ ಶತ್ರು ರಾಷ್ಟ್ರಗಳಿಗೆ ಹೊಟ್ಟೆ ಉರಿ ತರಿಸಿದೆ.

English summary

Grand welcome for PM Narendra Modi in White house of America.

Story first published: Thursday, June 22, 2023, 21:49 [IST]

Source link