International
oi-Malathesha M
ನವದೆಹಲಿ: ಚೀನಾ ಮತ್ತು ಭಾರತದ ಸಂಬಂಧದಲ್ಲಿ ಏನೂ ಸರಿ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಚೀನಾ ತನ್ನ ನೆಲದಲ್ಲಿದ್ದ ಭಾರತದ ಕೊನೇ ಪತ್ರಕರ್ತನಿಗೂ ದೇಶ ಬಿಡುವಂತೆ ಆದೇಶ ನೀಡಿದೆ ಅನ್ನೋ ಆರೋಪದ ಬೆನ್ನಲ್ಲೇ, ಭಾರತ ಕೂಡ ಚೀನಾ ದೇಶದ ಕೊನೆಯ ಪತ್ರಕರ್ತನನ್ನು ಹೊರಹಾಕಿದೆ. ಈ ಮೂಲಕ ಭಾರತ & ಚೀನಾ ನಡುವೆ 1980ರ ನಂತರ ಪರಿಸ್ಥಿತಿ ಭೀಕರವಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಾಗಿ.
2 ಪರಮಾಣು ರಾಷ್ಟ್ರಗಳ ನಡುವೆ ತಿಕ್ಕಾಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅದ್ರಲ್ಲೂ ಗಡಿ ಗಲಾಟೆ ಜೋರಾದ ಸಂದರ್ಭದಲ್ಲೇ ಚೀನಾ ಮತ್ತು ಭಾರತ ಪರಸ್ಪರ ಎರಡೂ ದೇಶದ ಪತ್ರಕರ್ತರನ್ನು ಹೊರ ಹಾಕುತ್ತಿವೆ. ಈ ಮೂಲಕ ತಮ್ಮ ಕೋಪವನ್ನು ಪತ್ರಕರ್ತರ ಮೇಲೆ ತೋರಿಸುತ್ತಿರುವ ಆರೋಪ ಕೇಳಿಬಂದಿದೆ. ಈಗ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿಗಾರನನ್ನ ಭಾರತ 1 ವಾರದ ಹಿಂದೆಯೇ ಹೊರಹಾಕಿರುವ ಆರೋಪ ಕೇಳಿಬರುತ್ತಿದೆ. ಭಾರತದಿಂದ ಹೊರಬಿದ್ದ ಚೀನಾ ಪತ್ರಕರ್ತನ ವೀಸಾ ವಿಸ್ತರಣೆಯನ್ನು ನಿರಾಕರಿಸಿದ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ (India China Border Dispute).
ಭಾರತ & ಚೀನಾ ನಡುವೆ ಸೇಡಿಗೆ ಸೇಡು?
ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಕಳೆದ ಕೆಲವು ತಿಂಗಳಿಂದ ಭಾರತ ಮತ್ತು ಚೀನಾದ ನಡುವೆ ಮಾಧ್ಯಮದ ವಿಚಾರದಲ್ಲಿ ತಿಕ್ಕಾಟ ಶುರುವಾಗಿತ್ತು. ಅದರಲ್ಲೂ ಮಾರ್ಚ್ ಬಳಿಕ ಎರಡೂ ದೇಶಗಳು ಪತ್ರಕರ್ತರನ್ನೇ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ಚೀನಾ ಕೂಡ ಭಾರತದ ಪತ್ರಕರ್ತರ ವೀಸಾ ಅವಧಿ ವಿಸ್ತರಿಸಲು ನಿರಾಕರಿಸಿದ್ದ ಆರೋಪ ಕೇಳಿಬಂದಿತ್ತು. ಆ ಬಳಿಕ ಭಾರತ ಮೂಲದ ಕೊನೆಯ ಪತ್ರಕರ್ತನಿಗೆ ಅಲ್ಲಿ ಉಳಿಯಲು ಅವಕಾಶವೂ ಮರೀಚಿಕೆಯಾಗಿದೆ. ಹೀಗೆ ಜೂನ್ ಮೊದಲ ವಾರದಲ್ಲೇ ಚೀನಾ ಪತ್ರಕರ್ತನ ವೀಸಾ ವಿಸ್ತರಣೆಯನ್ನು ಭಾರತ ನಿರಾಕರಿಸಿತ್ತು ಎನ್ನಲಾಗಿದೆ. ಹೀಗಾಗಿ ವೀಸಾ ಅವಧಿ ಮುಗಿದ ಕಾರಣ ಚೀನಾ ಪತ್ರಕರ್ತ 1 ವಾರದ ಹಿಂದೆ ಭಾರತ ತೊರೆದಿದ್ದಾರಂತೆ.
40 ವರ್ಷದ ಬಳಿಕ ಪರಿಸ್ಥಿತಿ ಭೀಕರ
2023ರ ಆರಂಭದಲ್ಲಿ ಚೀನಾದಲ್ಲಿ ನಾಲ್ವರು ಭಾರತೀಯ ಪತ್ರಕರ್ತರು ಇದ್ದರು. ಆದ್ರೆ ಇಬ್ಬರು ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಬಂದು ವಾಪಸ್ಸಾಗುವ ವೇಳೆ ನಿರ್ಬಂಧ ಹೇರಿದ್ದ ಚೀನಾ, ಅವರ ವೀಸಾ ರದ್ದು ಮಾಡಿತ್ತು. ಎಲ್ಲ ಘಟನೆಗಳ ಬಳಿಕ ಜೂನ್ ಆರಂಭದಲ್ಲಿ ಮತ್ತೊಬ್ಬ ಪತ್ರಕರ್ತ ಚೀನಾ ರಾಜಧಾನಿ ಬೀಜಿಂಗ್‌ನಿಂದ ವಾಪಸ್ ಬಂದಿದ್ದರು. ಇದೀಗ ಒಬ್ಬ ಭಾರತೀಯ ಪತ್ರಕರ್ತ ಚೀನಾ ನೆಲದಲ್ಲಿದ್ದು ಅವರೂ ಜೂನ್ ತಿಂಗಳ ಅಂತ್ಯಕ್ಕೆ ವಾಪಸ್ ಬರಲಿದ್ದಾರೆ ಎನ್ನಲಾಗಿತ್ತು. ಇದಕ್ಕೆಲ್ಲಾ ಕಾರಣ ಚೀನಾ ಸರ್ಕಾರದ ನಿರ್ಧಾರ ಅನ್ನೋ ಆರೋಪ ಕೇಳಿಬಂದಿತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಚೀನಾದ ಕೊನೆಯ ಪತ್ರಕರ್ತ ಕೂಡ ಭಾರತ ಬಿಟ್ಟಿದ್ದಾರೆಂಬ ಮಾಹಿತಿ ಓಡಾಡುತ್ತಿದೆ. ಈ ಮೂಲಕ ಬರೋಬ್ಬರಿ 40 ವರ್ಷದ ಬಳಿಕ ಚೀನಾ, ಭಾರತದ ನಡುವೆ ಹೊಸ ತಲೆನೋವು ಎದುರಾಗಿದೆ.
ಚೀನಾದ ಪರ್ತಕರ್ತರಿಗೆ ಭಾರತ ಅನ್ಯಾಯ ಮಾಡುತ್ತಿದೆ & ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯ ಮಾಡುತ್ತಿದೆ ಅನ್ನೋದು ಚೀನಾ ವಾದ. ಆದರೆ ಚೀನಾದ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ ಎಂದು ಭಾರತ ಕೂಡ ಸ್ಪಷ್ಟವಾಗಿ ಹೇಳಿದೆ. ಬೀಜಿಂಗ್‌ನ ವಾದವನ್ನು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಳ್ಳಿ ಹಾಕಿದ್ದರು. ಇಷ್ಟೆಲ್ಲದರ ನಡುವೆ ಚೀನಾ, ಭಾರತದ ಮಧ್ಯೆ ಮಾಧ್ಯಮಗಳ ವಿಚಾರಕ್ಕೆ ದೊಡ್ಡ ಕಿರಿಕ್ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಇಷ್ಟುದಿನ ಗಡಿ ಗಲಾಟೆಗೆ ಸೀಮಿತವಾಗಿದ್ದ ಚೀನಾ ಹಾಗೂ ಭಾರತದ ನಡುವಿನ ಈ ಫೈಟ್ ಈಗ, ಪತ್ರಕರ್ತರ ತನಕ ಬಂದು ನಿಂತಿದೆ. ಹಾಗೂ 1980ರ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಚೀನಾದ ಪತ್ರಕರ್ತರು ಸಂಪೂರ್ಣವಾಗಿ ದೇಶ ಬಿಟ್ಟಿದ್ದಾರೆ. ಹೀಗಾಗಿ ಮುಂದೆ ಎರಡೂ ದೇಶಗಳ ನಡುವೆ ತೀಕ್ಷ್ಣ ತಿಕ್ಕಾಟ ಬರುವ ಆತಂಕ ಸೃಷ್ಟಿಯಾಗಿದೆ.
English summary
India expelled the last Chinese reporter.