Bengaluru
oi-Punith BU

ಬೆಂಗಳೂರು, ಜೂನ್ 21: ವಿಕಾಸ ಸೌಧದಲ್ಲಿ ಬುಧವಾರ ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಅಧಿಕೃತ ವೆಬ್‌ಸೈಟ್ ಅನ್ನು ಉಪ ಮುಖ್ಯಮಂತ್ರಿ, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಕೆ ಶಿವಕುಮಾರ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಇಂದು ಇಡೀ ವಿಶ್ವವು ಬೆಂಗಳೂರಿನ ಪ್ರಗತಿಯ ಬಗ್ಗೆ ಗಮನಿಸುತ್ತಿದೆ. ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ http://brandbengaluru.karnataka.gov.in ಎನ್ನುವ ವೆಬ್ ಪೋರ್ಟಲ್‌ಅನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಾರ್ವಜನಿಕರು, ಬೆಂಗಳೂರಿನ ನಿವಾಸಿಗಳು, ಎನ್‌ಆರ್‌ಐಗಳು ತಮ್ಮ ಅಭಿಪ್ರಾಯಗಳನ್ನು ಈ ಪೋರ್ಟಲ್ ಮೂಲಕ ಹಂಚಿಕೊಳ್ಳಬಹುದಾಗಿದೆ. ಇಲ್ಲಿ ದಾಖಲಾಗುವ ಅಭಿಪ್ರಾಯಗಳ ಕುರಿತು ಪರಾಮರ್ಶೆ ನಡೆಸಿ ಸೂಕ್ತ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ರಸ್ತೆಗುಂಡಿಗಳ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ನಿವಾಸಿಗಳು, ಬೆಂಗಳೂರಿನಿಂದ ವಿದೇಶಕ್ಕೆ ತೆರಳಿ ನೆಲೆಸಿರುವವರೂ ಕೂಡ ಗಂಭೀರವಾಗಿ ನೋಡುತ್ತಿದ್ದಾರೆ. ಬೆಂಗಳೂರು ವಿಶ್ವದರ್ಜೆಯ ನಗರಗಳಿಗೆ ಸ್ಪರ್ಧೆಯೊಡ್ಡುವಂತೆ ಮಾಡಬೇಕು. ಇದಕ್ಕಾಗಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ ಎಂದು ಹೇಳಿದರು.
ಕೆಲವು ನಿವೃತ್ತ ಅಧಿಕಾರಿಗಳು, ಉದ್ಯಮಿಗಳು, ನಿವಾಸಿಗಳು, ಸ್ಥಳೀಯ ಶಾಸಕರು, ಮಾಜಿ ಕಾರ್ಪೊರೇಟರ್‌ಗಳ ಅಭಿಪ್ರಾಯಗಳನ್ನು ಪಡೆದಿದ್ದೇನೆ. ನಿನ್ನೆಯಷ್ಟೇ ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬೆಂಗಳೂರಿನ ವಿವಿಧ ಜಂಕ್ಷನ್‌ಗಳಿಗೆ ಭೇಟಿ ನೀಡಿ ಅಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಕಣ್ಣಾರೆ ನೋಡಿದ್ದೇನೆ.
ದಿಲ್ಲಿ, ಮುಂಬೈನಲ್ಲಿ ಬೆಂಗಳೂರಿಗಿಂತ ಹೆಚ್ಚು ಟ್ರಾಫಿಕ್ ಸಮಸ್ಯೆ ಇದೆ. ಆದರೆ ಎಲ್ಲರೂ ಬೆಂಗಳೂರಿನ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಏಕೆಂದರೆ ಬೆಂಗಳೂರು ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ. ಈಗ ಬಿಡುಗಡೆಗೊಳಿಸಿರುವ ಪೋರ್ಟಲ್‌ನಲ್ಲಿ ಹಳ್ಳಿಯಲ್ಲಿ ನೆಲೆಸಿರುವವರಿಂದ ಹಿಡಿದು ವಿದೇಶದಲ್ಲಿ ನೆಲೆಸಿರುವವರೂ ಸಲಹೆ ನೀಡಬಹುದಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ರಾಜ್ಯ ರಾಜಧಾನಿಗೆ ಹೊಸ ರೂಪ ನೀಡುವ ಕಾರ್ಯಕ್ಕೆ ರಾಜ್ಯ ಸರ್ಕಾರವೂ ಪಣತೊಟ್ಟು ಸಭೆಗಳ ಮೇಲೆ ಸಭೆ ನಡೆಸಿ ಹಲವು ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಪ್ರಮುಖ ಸಭೆ ನಡೆಸಿದ್ದರು. ಬೆಂಗಳೂರಿಗೆ ಹೊಸ ರೂಪ ನೀಡಿ ಸಮಗ್ರ ಅಭಿವೃದ್ಧಿ, ಬ್ರ್ಯಾಂಡ್ ಬೆಂಗಳೂರು ಬಗ್ಗೆ ಇಂದು ಬೆಂಗಳೂರಿನ 42 ಪ್ರಮುಖ ವ್ಯಕ್ತಿಗಳ ಜತೆ ಡಿಸಿಎಂ ಸಭೆ ನಡೆಸಿದ್ದರು.
ಇದು ಮೊದಲ ಹಂತದ ಸಭೆಯಾಗಿತ್ತು. ಈ ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆ ಬಂದಿದೆ. ಎಲ್ಲರ ಅನುಭವ ಅಭಿಪ್ರಾಯ ಪಡೆಯುತ್ತಿದ್ದೇನೆ. ಮೊದಲು ಎಲ್ಲ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದರು.
English summary
The official website of Brand Bengaluru Abhiyan was launched by Deputy Chief Minister, Bengaluru City District In-charge Minister DK Shivakumar on Wednesday at Vikas Soudha.
Story first published: Wednesday, June 21, 2023, 15:17 [IST]