ಬೇಟೆಗಾರನ ಜೊತೆ ಹುಲಿ ಮದುವೆ: ಕೊಡಗಿನಲ್ಲಿ ನಡೆಯುತ್ತಿದ್ದ ಈ ಪದ್ಧತಿ ಹುಟ್ಟಿದ್ದೇಗೆ? | Tiger Wedding Special Ritual In Kodagu District

Features

lekhaka-Lavakumar B M

|

Google Oneindia Kannada News

ಹುಲಿ ಮದುವೆ ಎಂದಾಕ್ಷಣ ಎಲ್ಲರೂ ಅಚ್ಚರಿಯ ನೋಟ ಬೀರುವುದಂತು ಖಚಿತ. ಏಕೆಂದರೆ ಈ ಪದವೇ ಒಂದು ರೀತಿಯ ಅಚ್ಚರಿ ಮೂಡಿಸುತ್ತದೆ. ಜೊತೆಗೆ ಹುಲಿ ಮದುವೆನಾ? ಯಾರಿಗೆ? ಯಾರ ಜೊತೆ? ಹೇಗೆ ನಡೆಯುತ್ತೆ? ಇಂತಹ ಹತ್ತಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತದೆ. ನಿಜ ಹೇಳಬೇಕೆಂದರೆ ಇಂತಹದೊಂದು ಆಚರಣೆ ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ನಡೆಯುತ್ತಿತ್ತು ಎಂದರೆ ನಾವು ನಂಬಲೇಬೇಕು.

ಇಷ್ಟಕ್ಕೂ ಹುಲಿ ಮದುವೆ ನಡೆಯುತ್ತಿದ್ದದ್ದು, ಬೇಟೆಗಾರನಿಗೂ ಮತ್ತು ಸತ್ತ ಹುಲಿಗೆ. ಇದು ಅಚ್ಚರಿ ಎನಿಸುತ್ತದೆ. ಆದರೆ ಇದರ ಬಗ್ಗೆ ತಿಳಿಯುತ್ತಾ ಹೋದರೆ ಅವತ್ತಿನ ಆಚರಣೆ ಮತ್ತು ಅದರ ಹಿಂದಿನ ಉದ್ದೇಶಗಳು ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಕೊಡಗಿನಲ್ಲಿ ಹಲವು ದಶಕಗಳ ಹಿಂದೆ ನಡೆಯುತ್ತಿದ್ದ ಹುಲಿ ಮದುವೆಯನ್ನು ಕೊಡವ ಭಾಷೆಯಲ್ಲಿ ನರಿಮಂಗಲ (ಕೊಡವ ಭಾಷೆಯಲ್ಲಿ ನರಿ ಅಂದರೆ ಹುಲಿ ಮಂಗಲ ಅಂದರೆ ಮದುವೆ) ಎಂದು ಕರೆಯಲಾಗುತ್ತಿತ್ತು. ಇವತ್ತಿಗೂ ಕೊಡಗಿನ ಕೆಲವು ಐನ್ ಮನೆಗಳಲ್ಲಿ ಹಳೆಯ ಕಾಲದ ಹುಲಿಮದುವೆಯ ಚಿತ್ರಗಳು ಕಾಣಸಿಗುತ್ತವೆ.

Tiger Wedding Special Ritual In Kodagu District

ಇನ್ನು ಹುಲಿ ಮದುವೆಯ ಆಚರಣೆ ಕೊಡಗಿನಲ್ಲಿ ಹೇಗೆ ಬಂತು? ಅದರ ಹಿಂದಿನ ಉದ್ದೇಶ ಏನಿರಬಹುದು? ಎಂಬುದನ್ನು ಹುಡುಕುತ್ತಾ ಹೋದರೆ ಅದರ ಹಿಂದೆ ಕೊಡವರ ಶೌರ್ಯ ಮತ್ತು ಜನ ಜಾನುವಾರುಗಳ ಸಂರಕ್ಷಣೆಯ ಕಾಳಜಿ ಎದ್ದು ಕಾಣಿಸುತ್ತಿದೆ. ಹಿಂದಿನ ಕಾಲದಲ್ಲಿ ರಾಜರೇ ಕಾಡಿಗೆ ಬೇಟೆಗೆ ತೆರಳಿ ಹುಲಿಯನ್ನು ಬೇಟೆಯಾಡುತ್ತಿದ್ದ ಕಥೆಗಳು ಬಹಳಷ್ಟಿವೆ. ಅದರಂತೆ ಇದು ಕೂಡ.

 ಆನೆ, ಹಂದಿ ಆಯ್ತು.. ಇದೀಗ ಮೈಸೂರು ಜಿಲ್ಲೆಯ ಈ ತಾಲೂಕಿನ ರೈತರಿಗೆ ಹುಲಿ ಭಯ ಶುರು ಆನೆ, ಹಂದಿ ಆಯ್ತು.. ಇದೀಗ ಮೈಸೂರು ಜಿಲ್ಲೆಯ ಈ ತಾಲೂಕಿನ ರೈತರಿಗೆ ಹುಲಿ ಭಯ ಶುರು

ದಟ್ಟ ಕಾಡುಗಳ ನಡುವೆ ಜೀವನ

ಕೊಡಗು ಹಲವು ದಶಕಗಳ ಹಿಂದೆ ಹೀಗಿರಲಿಲ್ಲ. ರಸ್ತೆ ಸೇರಿದಂತೆ ಮೂಲ ಸೌಕರ್ಯಗಳು ಇರಲಿಲ್ಲ. ಇಡೀ ಜಿಲ್ಲೆ ದಟ್ಟ ಕಾಡುಗಳಿಂದ ಕೂಡಿತ್ತು. ಬೆಟ್ಟಗುಡ್ಡ ಕಾಡುಗಳಿಂದ ಆವೃತವಾಗಿದ್ದ ಸ್ಥಳಗಳಲ್ಲಿಯೇ ಜನರು ಕೃಷಿ ಮಾಡಿಕೊಂಡು ಬದುಕಬೇಕಾಗಿತ್ತು. ಆಗ ವಾಣಿಜ್ಯ ಬೆಳೆಗಳ ಭರಾಟೆಗಳಿರಲಿಲ್ಲ. ಭತ್ತವೇ ಎಲ್ಲದಕ್ಕೂ ಮೂಲವಾಗಿತ್ತು. ನೀರಿನಾಶ್ರಯವಿರುವ ಸಮತಟ್ಟಾದ ಜಾಗಗಳನ್ನು ಕಡಿದು ಗದ್ದೆಗಳನ್ನು ನಿರ್ಮಿಸಿಕೊಂಡು ರೈತರು ಭತ್ತ ಬೆಳೆಯುತ್ತಿದ್ದರು.

ಹೀಗೆ ಭತ್ತದ ಕೃಷಿ ಮಾಡಬೇಕಾದರೆ ಉಳುಮೆ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳಿಗೆ ಜಾನುವಾರುಗಳ ಅಗತ್ಯವಿತ್ತು. ಹೀಗಾಗಿ ಪ್ರತಿಯೊಬ್ಬರೂ ದನಗಳನ್ನು ಸಾಕುತ್ತಿದ್ದರು. ಈ ದನಗಳನ್ನು ಕಾಡುಗಳಲ್ಲಿ ಮೇಯಿಸಿಕೊಂಡು ಬರುತ್ತಿದ್ದರು. ಮನೆಗಳು ಕೂಡ ಅಲ್ಲೊಂದು ಇಲ್ಲೊಂದು ಎಂಬಂತಿತ್ತು. ಕಾಡಿನ ನಡುವೆ ಒಂಟಿ ಮನೆಗಳಲ್ಲಿ ವಾಸಿಸುತ್ತಿದ್ದ ಜನ ಧೈರ್ಯವಂತರಾಗಿದ್ದರು. ತಾವು ಮಾಡಿದ ಕೃಷಿಯನ್ನು ಕಾಪಾಡಲು ಮತ್ತು ಸಾಕುಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಸದಾ ವನ್ಯ ಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು.

Tiger Wedding Special Ritual In Kodagu District

ಅವತ್ತು ಹುಲಿಯನ್ನು ಬೇಟೆಯಾಡಿದವನು ಶೂರ

ಅದರಲ್ಲೂ ಹುಲಿಗಳ ನಡುವೆ ಬದುಕುವುದು ಅಷ್ಟು ಸುಲಭವಾಗಿರಲಿಲ್ಲ. ಕೆಲವೊಮ್ಮೆ ಬೆಟ್ಟಗುಡ್ಡ, ಕಾಡಿನ ನಡುವೆ ಇರುತ್ತಿದ್ದ ಹುಲಿಗಳು ಜಾನುವಾರುಗಳ ಮೇಲೆ ದಾಳಿ ಮಾಡಿ ತಿಂದು ಹಾಕುತ್ತಿದ್ದವು. ಅಂತಹ ಹುಲಿಯನ್ನು ಕೊಂದು ದನಗಳನ್ನು ರಕ್ಷಿಸಬೇಕಾಗುತ್ತಿತ್ತು. ಆ ದಿನಗಳಲ್ಲಿ ಬೇಟೆಗೆ ನಿಷೇಧವಿರಲಿಲ್ಲ. ಜತೆಗೆ ಕೋವಿಗಳ ಬಳಕೆ ಬಂದ ನಂತರ ಬೇಟೆಯಾಡುವ ಆಸಕ್ತಿ ಜನರಲ್ಲಿ ಹೆಚ್ಚಾಯಿತು. ಹೀಗಿರುವಾಗ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಭಕ್ಷಿಸುವ ಹುಲಿಗಳನ್ನು ಯಾರಾದರೂ ಗುಂಡಿಕ್ಕಿ ಕೊಂದರೆ ಅವನೇ ಶೂರನಾಗಿ ಬಿಡುತ್ತಿದ್ದನು.

ಹುಲಿಯನ್ನು ಬೇಟೆಯಾಡಿ ಕೊಲ್ಲುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ಧೈರ್ಯ ಬೇಕು. ಅಂತಹ ವೀರನನ್ನು ಸುಮ್ಮನೆ ಬಿಡಲು ಸಾಧ್ಯವೇ? ಖಂಡಿತಾ ಇಲ್ಲ. ಹೀಗಾಗಿ ಕೋವಿಯೊಂದಿಗೆ ಸತ್ತ ಹುಲಿ ಜತೆ ನಿಲ್ಲಿಸಿ ಆತನಿಗೆ ಸನ್ಮಾನ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಕುಟುಂಬಸ್ಥರು, ಗ್ರಾಮಸ್ಥರೆಲ್ಲರೂ ಸೇರಿ ಸತ್ತ ಹುಲಿಯನ್ನು ಕಾಡಿನಿಂದ ಹೊತ್ತು ತಂದು ಅದನ್ನು ಸಿಂಗರಿಸಿ ಹೊತ್ತು ಬೇಟೆಯಾಡಿದ ವೀರನೊಂದಿಗೆ ಮೆರವಣಿಗೆ ಮಾಡುತ್ತಿದ್ದರು.

ಈ ವೇಳೆ ಹುಲಿಯನ್ನು ಬೇಟೆಯಾಡಿದ ವೀರ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ಕೋವಿಯನ್ನು ಹೆಗಲ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಜೈಕಾರಗಳು ಮೊಳಗುತ್ತಿದ್ದವು, ಅಭಿನಂದನೆ, ಸನ್ಮಾನಗಳು ಸಲ್ಲುತ್ತಿದ್ದವು. ನಂತರ ಊರ್ ಮಂದ್(ಗ್ರಾಮದ ಮೈದಾನ)ನಲ್ಲಿ ಸನ್ಮಾನ ನಡೆಯುತ್ತಿತ್ತಲ್ಲದೆ, ಊರವರಿಗೆಲ್ಲ ಬೋಜನ ಏರ್ಪಡಿಸಲಾಗುತ್ತಿತ್ತು.

Tiger Wedding Special Ritual In Kodagu District

ಹುಲಿ ಬೇಟೆಗಾರರಿಗೆ ಗೌರವ ಸಮರ್ಪಣೆ

ಇದಾದ ಬಳಿಕ ಹುಲಿಯನ್ನು ಕೊಂದ ವೀರನಿಗೆ ಎಲ್ಲೆಡೆಯೂ ಗೌರವ, ಸನ್ಮಾನಗಳು ದೊರೆಯುತ್ತಿತ್ತು. ಕೆಲವೊಮ್ಮೆ ಕುಟುಂಬದ ಐನ್ ಮನೆ(ಕುಟುಂಬದ ಹಿರಿಯ ಮನೆ)ಯಲ್ಲಿಯೇ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವತ್ತಿಗೂ ಕೊಡಗಿನ ಹಲವು ಕುಟುಂಬಗಳಲ್ಲಿ ಹುಲಿಯನ್ನು ಬೇಟೆಯಾಡಿ ಶೂರನೆನೆಸಿಕೊಂಡು ಕಾಲವಾದ ಹಿರಿಯರ ಬಗ್ಗೆ ಸಾಹಸೀ ಕಥೆಗಳಿವೆ. ಜೊತೆಗೆ ಅಲ್ಲಲ್ಲಿ ಹುಲಿ ಮದುವೆಯ ಕಪ್ಪುಬಿಳುಪಿನ ಭಾವಚಿತ್ರಗಳು ಸಾಕ್ಷಿಯಾಗಿ ಉಳಿದಿವೆ.

ಹಿಂದಿನ ಕಾಲದ ಶೂರತ್ವದ ಸಂಕೇತವಾಗಿದ್ದ ಹುಲಿಮದುವೆಯನ್ನು ನಂತರದ ಕಾಲಾವಧಿಯಲ್ಲಿ ನಿಷೇಧಿಸಲಾಯಿತು. ಈಗ ಉಪಟಳ ನೀಡುವ ಹುಲಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗುತ್ತಿದೆ. ಅವತ್ತಿನ ಕಾಲಘಟ್ಟದಲ್ಲಿದ್ದ ಹುಲಿ ಮದುವೆ ಈಗ ಇತಿಹಾಸವಾಗಿದೆ. ಹಾಗಾಗಿ ವೇದಿಕೆ ಕಾರ್ಯಕ್ರಮಗಳಲ್ಲಿ ಅವುಗಳ ಅಣಕು ಪ್ರದರ್ಶನದ ಮೂಲಕ ಕೊಡಗಿನಲ್ಲೊಂದು ವಿಶಿಷ್ಟವಾದ ಸಂಪ್ರದಾಯವಿತ್ತು ಎಂಬುದನ್ನು ನೆನಪಿಸಿಕೊಳ್ಳುವುದು ನಡೆಯುತ್ತಿದೆ. ಏನೇ ಸಂಪ್ರದಾಯಗಳಿದ್ದರೂ ಅವು ಯಾವುದೂ ಸುಮ್ಮನೆ ಬಂದಿದ್ದಲ್ಲ. ಅವತ್ತಿನ ಕಾಲಘಟ್ಟದಲ್ಲಿ ಅದು ಅನಿವಾರ್ಯವಾಗಿತ್ತು. ಅದು ಏನೇ ಇರಲಿ ಇವತ್ತಿನ ದಿನಗಳಲ್ಲಿ ನಾವೆಲ್ಲರೂ ಹುಲಿಗಳ ಸಂರಕ್ಷಣೆ ಕೈಜೋಡಿಸೋಣ. ಅದು ನಮ್ಮ ಕರ್ವವ್ಯವೂ ಹೌದು.

English summary

Here is the more information about Tiger Wedding special ritual in Kodagu District. Know more,

Story first published: Sunday, July 30, 2023, 12:19 [IST]

Source link