Ramanagara
lekhaka-Ramesh Ramakirshna
ರಾಮನಗರ, ಜೂನ್ 23: ಉದ್ಯಾನ ನಗರಿ ಹಾಗೂ ಸಾಂಸ್ಕೃತಿಕ ನಗರಿಗಳನ್ನು ಸಂಪರ್ಕಿಸುವ ದೃಷ್ಟಿಯಿಂದ ನಿರ್ಮಾಣವಾದ ಬೆಂಗಳೂರು ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇ ಇತ್ತೀಜಿನ ದಿನಗಳಲ್ಲಿ ಸಾವಿನ ಹೆದ್ದಾರಿ ಎಂಬ ಕುಖ್ಯಾತಿ ಪಡೆಯುತ್ತಿರುವ ಹಿನ್ನಲೆಯಲ್ಲಿ ರಾಮನಗರ ಜಿಲ್ಲಾ ಪೊಲೀಸರು ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚು ಮೂಲಕ ಅಪಘಾತ ತಪ್ಪಿಸಲು ಮುಂದಾಗಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಪ್ರಾರಂಭದಿಂದಲ್ಲೂ ವಿವಾದಗಳಲ್ಲೇ ಮಿಂದೆದ್ದಿದೆ. ಹೆದ್ದಾರಿ ಪ್ರಾಧಿಕಾರ ಅಪೂರ್ಣ ಹೆದ್ದಾರಿ ನಿರ್ಮಾಣ ಮಾಡಿ ಜನರಿಂದ ಸುಲಿಗೆ ಮಾಡುತ್ತಿದೆ. ಅಲ್ಲದೇ ಹೆದ್ದಾರಿ ಕಾರ್ಯಾರಂಭ ಮಾಡಿ ಹಲವು ತಿಂಗಳು ಕಳೆದರು ಬೆಂಗಳೂರಿನಿಂದ ಮೈಸೂರಿನ ವರೆಗೆ ಹೆದ್ದಾರಿಯಲ್ಲಿ ಮೂಲ ಸೌಕರ್ಯಗಳಾದ ತುರ್ತು ಚಿಕಿತ್ಸಾ ಘಟಕ, ಪೆಟ್ರೋಲ್ ಬಂಕ್, ವಿಶ್ರಾಂತಿ ತಾಣ ಹಾಗೂ ಶೌಚಾಲಯದ ಸೌಲಭ್ಯಗಳನ್ನು ಒದಗಿಸಲು ವಿಫಲವಾಗಿದೆ.
ರಾಜಕೀಯ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳು ಹೆದ್ದಾರಿ ಟೋಲ್ ಪ್ಲಾಜ ಮುಂಬಾಗ ಪ್ರತಿಭಟನೆ ನಡೆಸುವ ಮೂಲಕ ಹೆದ್ದಾರಿ ಪ್ರಾಧಿಕಾರ ನಡೆಯನ್ನು ಖಂಡಿಸಿದ್ದರು. ನಂತರ ದಿನಗಳಲ್ಲಿ ಹೋರಾಟಗಾರ ಎಚ್ಚರಿಕೆಗೆ ಇಂಬು ನೀಡುವಂತೆ ಎಕ್ಸ್‌ಪ್ರೆಸ್ ಹೆದ್ದಾರಿಯ ಅಪಘಾತಗಳಲ್ಲಿ ಸಾವಿನ ಸಂಖ್ಯೆಯು ಎಕ್ಸ್‌ಪ್ರೆಸ್ ವೇಗದಲ್ಲೇ ಹೆಚ್ಚಾದ ಹಿನ್ನಲೆಯಲ್ಲಿ ಪೋಲಿಸರು ಅಪಘಾತ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ಪೊಲೀಸರಿಂದ ಸಂಚಾರ ಜಾಗೃತಿ
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಖುದ್ದು ರಸ್ತೆಗಿಳಿದಿರುವ ಪೊಲೀಸರು ವಾಹನ ಸವಾರರಿಗೆ ಸಂಚಾರ ಜಾಗೃತಿ ಮೂಡಿಸಿದ್ದಾರೆ. ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ವಿವರಣೆ ನೀಡಿ ನಿಯಮ ಪಾಲಿಸುವಂತೆ ಪಾಠ ಮಾಡಿದ್ದಾರೆ. ದಶಪಥ ಹೆದ್ದಾರಿಯಲ್ಲಿ ದಿನನಿತ್ಯ ಅಪಘಾತಗಳು ನಡೆಯುತ್ತಿದ್ದು, ಅತಿವೇಗ ಚಾಲನೆಯಿಂದ ಅಪಘಾತಗಳು ಹೆಚ್ಚಾಗುವ ಕುರಿತು ವಾಹನ ಸವಾರರಿಗೆ ಅರಿವು ಮೂಡಿಸುತ್ತಿದ್ದಾರೆ.
ದಶಪಥ ಹೆದ್ದಾರಿಯಲ್ಲಿ ಹಲವು ಬ್ಲಾಕ್ ಸ್ಪಾಟ್‌ಗಳ ಗುರುತು ಮಾಡಿರುವ ಪೊಲೀಸ್ ಇಲಾಖೆ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಅಲ್ಲದೇ ತೀವ್ರ ತಿರುವುಗಳು, ಎಂಟ್ರಿ, ಎಕ್ಸಿಟ್ ಗಳ ಬಳಿ ಸೂಚನಾ ಫಲಕ ಅಳವಡಿಸಲು ಹೆದ್ದಾರಿ ಪ್ರಾಧಿಕಾರದ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಅಪಘಾತ ಹೆಚ್ಚಳ ಕುರಿತು ಇತ್ತೀಚೆಗೆ ನಡೆದ ದಿಶಾ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಕ್ಲಾಸ್ ತೆಗೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ಅಪಘಾತ ಕುರಿತು ಅರಿವು ಮೂಡಿಸಲು ಮುಂದಾಗಿದೆ.
54 ಅಂಶದ ವರದಿ ಸಿದ್ಧಪಡಿಸಿದ ಪೊಲೀಸ್ ಇಲಾಖೆ
ಎಕ್ಸ್‌ಪ್ರೆಸ್ ಹೆದ್ದಾರಿ ಅಪಘಾತಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿರುವ ರಾಮನಗರ ಪೊಲೀಸರು ಅಪಘಾತ ತಡೆಗೆ 54 ಅಂಶದ ವರದಿ ಸಿದ್ಧಪಡಿಸಿ, ಅದನ್ನು ಅನುಷ್ಠಾನಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಕ್ಸ್‌ಪ್ರೆಸ್ ಹೈವೇಯಲ್ಲಿನ ಅಪಘಾತಗಳಿಗೆ ಕಡಿವಾಣ ಹಾಕುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ಎಕ್ಸ್‌ಪ್ರೆಸ್ ಹೈವೇಯಲ್ಲಿ ಕಳೆದ 4 ತಿಂಗಳ ಅವದಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದ 45 ಅಪಘಾತಗಳಲ್ಲಿ 56 ಮಂದಿ ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ 128 ಸಣ್ಣ ಅಪಘಾತಗಳಲ್ಲಿ ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿ ನಡೆದ 45 ಅಪಘಾತಗಳಲ್ಲಿ ಸುಮಾರು 18 ಅಪಘಾತಗಳು ಚನ್ನಪಟ್ಟಣ ವ್ಯಾಪ್ತಿಯಲ್ಲಿ ನಡೆದು 27 ಮಂದಿ ಸಾವಿಗೀಡಾಗಿದ್ದಾರೆ.
ಎಕ್ಸ್‌ಪ್ರೆಸ್ ಹೈವೇಯಲ್ಲಿ ನಡೆದ ಅಪಘಾತಗಳನ್ನು ಅಧ್ಯಯನ ಮಾಡಿ 54 ಸ್ಥಳಗಳಲ್ಲಿ ಇಂಜಿನಿಯರಿಂಗ್ ನ್ಯೂನತೆ ಪತ್ತೆ ಮಾಡಿ ಅದನ್ನು ಸರಿ ಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದೇವೆ. ಅಲ್ಲದೇ ಪೊಲೀಸ್ ಇಲಾಖೆಯಿಂದ ಸಂಚಾರಿ ಜಾಗೃತಿಯನ್ನು ಮೂಡಿಸುತ್ತಿದ್ದೇವೆ. ಹಾಗೂ ಹೆದ್ದಾರಿಯಲ್ಲಿ ಎಚ್ಚರಿಕೆ ಹಾಗೂ ಸ್ಪೀಡ್ ಲಿಮಿಟ್ ನಾಮ ಫಲಕ ಅಳವಡಿಸಲು ಕ್ರಮ ಕೈಗೊಂಡಿದ್ದೇವೆ ಎಂದು ರಾಮನಗರ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
English summary
Ramanagara Police has come forward to take prevent accidents on Bengaluru-Mysuru Expressway. Know more.
Story first published: Friday, June 23, 2023, 15:58 [IST]