India
oi-Malathesha M
ವಾಷಿಂಗ್ಟನ್: ಸಿಲಿಕಾನ್ ಸಿಟಿ, ಐಟಿ-ಬಿಟಿ ನಗರಿ, ಗಾರ್ಡನ್ ಸಿಟಿ ಹೀಗೆ ಹಲವು ಬಿರುದನ್ನ ಪಡೆದಿದೆ ಬೆಂಗಳೂರು. ಹೀಗೆ ಕೆಂಪೇಗೌಡರು ಕಟ್ಟಿದ ರಾಜ್ಯ ರಾಜಧಾನಿ ಜಗತ್ತಿನಾದ್ಯಂತ ಹೆಸರು ಪಡೆದಿದೆ. ಇದೀಗ ಜಗತ್ತಿನ ‘ಅತ್ಯಂತ ವಾಸಯೋಗ್ಯ ನಗರ’ಗಳ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದೆ ನಮ್ಮ ಬೆಂಗಳೂರು. ಹಾಗಾದ್ರೆ ಬೆಂಗಳೂರಿಗೆ ಸಿಕ್ಕಿದ್ದು ಎಷ್ಟನೇ ಸ್ಥಾನ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಶತಮಾನಗಳ ಹಿಂದೆ ಜನ್ಮತಾಳಿ, ಕೋಟ್ಯಂತರ ಜನರಿಗೆ ಅನ್ನ ಕೊಡುವ ತಾಯಿಯಾಗಿದೆ ನಮ್ಮ ಬೆಂಗಳೂರು. ಜಗತ್ತಿನ ಮೂಲೆ ಮೂಲೆಯಿಂದ ಬಂದು ಬೆಂಗಳೂರಿನಲ್ಲಿ ಬದುಕನ್ನ ಕಟ್ಟಿಕೊಂಡಿದ್ದಾರೆ. ಅದ್ರಲ್ಲೂ ಕನ್ನಡಿಗರ ಹೃದಯ ಅಂದ್ರೆ ರಾಜಧಾನಿ ಇರುವುದು ಕೂಡ ಇದೇ ಊರಿನಲ್ಲಿ. ಇಂಥ ಮಹಾನ್ ನಗರಿ ದಿಲ್ಲಿಯಿಂದ ಹಿಡಿದು ಅಮೆರಿಕ ತನಕ ಹೆಸರು ಗಳಿಸಿದೆ. ಹೀಗಾಗಿಯೇ ಜಗತ್ತಿನ ವಾಸಯೋಗ್ಯ ನಗರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಈ ಮೂಲಕ ಸಣ್ಣ ಸಣ್ಣ ಸಮಸ್ಯೆಗೂ ಬೆಂಗಳೂರನ್ನು ಜರಿದವರಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ.
ನಮ್ಮ ಬೆಂಗಳೂರಿಗೆ ಮತ್ತೊಂದು ಗರಿ!
ಜಗತ್ತಿನ 173 ‘ಅತ್ಯಂತ ವಾಸಯೋಗ್ಯ ನಗರ’ಗಳ ಪಟ್ಟಿಯಲ್ಲಿ ಭಾರತದ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈ 141ನೇ ಸ್ಥಾನದಲ್ಲಿವೆ. ಇನ್ನುಳಿದಂತೆ ಚೆನ್ನೈ 144ನೇ ಸ್ಥಾನ ಪಡೆದರೆ, ಅಹಮದಾಬಾದ್ 147ನೇ ಸ್ಥಾನವನ್ನ ಪಡೆದುಕೊಂಡಿದೆ. ನಮ್ಮ ಬೆಂಗಳೂರು ಈ ಪಟ್ಟಿಯಲ್ಲಿ 148ನೇ ಸ್ಥಾನ ಪಡೆದಿದೆ. ‘ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್’ ಅಂದ್ರೆ ‘ಇಐಯು’ ಸಂಸ್ಥೆ ಜಗತ್ತಿನ 173 ನಗರಗಳ ರ್ಯಾಂಕ್ ರಿಲೀಸ್ ಮಾಡಿದೆ. ಈ ಪೈಕಿ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ನಗರ ಈ ವಿಶ್ವದ ‘ಅತ್ಯಂತ ವಾಸಯೋಗ್ಯ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ ಬೆಂಗಳೂರಿಗೆ 148ನೇ ಸ್ಥಾನ ಸಿಕ್ಕಿದೆ.
ಹಾಗಾದರೆ ಟಾಪ್ 10 ವಾಸಯೋಗ್ಯ ನಗರಗಳು ಯಾವುವು?
1) ವಿಯೆನ್ನಾ, ಆಸ್ಟ್ರಿಯಾ
2) ಕೋಪನ್ ಹೇಗನ್, ಡೆನ್ಮಾರ್ಕ್
3) ಮೆಲ್ಬೋರ್ನ್, ಆಸ್ಟ್ರೇಲಿಯಾ
4) ಸಿಡ್ನಿ, ಆಸ್ಟ್ರೇಲಿಯಾ
5) ವ್ಯಾಂಕೋವರ್, ಕೆನಡಾ
6) ಜ್ಯೂರಿಚ್, ಸ್ವಿಜರ್ಲ್ಯಾಂಡ್
7) ಕ್ಯಾಲ್ಗರಿ, ಕೆನಡಾ
8) ಜಿನಿವಾ, ಸ್ವಿಜರ್ಲ್ಯಾಂಡ್
9) ಟೊರಾಂಟೊ, ಕೆನಡಾ
10) ಒಸಾಕಾ, ಜಪಾನ್
141) ದೆಹಲಿ, ಭಾರತ
141) ಮುಂಬೈ, ಭಾರತ
144) ಚೆನ್ನೈ, ಭಾರತ
147) ಅಹಮದಾಬಾದ್, ಭಾರತ
148) ಬೆಂಗಳೂರು, ಭಾರತ
ಯಾವ ದೇಶಕ್ಕೆ ಹೆಚ್ಚಿನ ಸ್ಥಾನ?
ಅಂದಹಾಗೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಸಂಸ್ಥೆ 173 ನಗರಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಈ ವರದಿ ಆರೋಗ್ಯ ರಕ್ಷಣೆ, ಶಿಕ್ಷಣ, ಸ್ಥಿರತೆ, ಮೂಲಸೌಕರ್ಯ ಮತ್ತು ಪರಿಸರ ಸೇರಿದಂತೆ ಹಲವಾರು ಮಹತ್ವದ ಅಂಶ ಆಧರಿಸಿದೆ. ಆಸ್ಟ್ರೇಲಿಯಾದ 2 ನಗರಗಳಾದ ಮೆಲ್ಬೋರ್ನ್ ಮತ್ತು ಸಿಡ್ನಿ 3 ಮತ್ತು 4ನೇ ಸ್ಥಾನ ಪಡೆದಿವೆ. ಹಾಗೇ ಇನ್ನೊಂದ್ಕಡೆ ಕೆನಡಾದ 3 ನಗರ ಅಂದರೆ ವ್ಯಾಂಕೋವರ್, ಕ್ಯಾಲ್ಗರಿ ಸೇರದಂತೆ ಟೊರೊಂಟೊ ಕ್ರಮವಾಗಿ 5ನೇ, 7ನೇ ಮತ್ತು 9ನೇ ಸ್ಥಾನ ಪಡೆದಿವೆ. ಹಾಗೇ ಸ್ವಿಜರ್ಲ್ಯಾಂಡ್ ದೇಶದ 2 ನಗರಗಳು ಕೂಡ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಹೀಗೆ ಭಾರತದ 5 ನಗರಗಳು ಟಾಪ್ 173 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿ ಸೇರಿದಂತೆ ಮುಂಬೈ, ಚೆನ್ನೈ, ಅಹಮದಾಬಾದ್ ಮತ್ತು ಬೆಂಗಳೂರು ಭಾರತದ ಕೀರ್ತಿ ಪತಾಕೆಯನ್ನ ಜಗತ್ತಿನಾದ್ಯಂತ ಹಾರಿಸಿವೆ. ಆದರೆ ಚೆನ್ನೈ ಮತ್ತು ಬೆಂಗಳೂರನ್ನು ಬಿಟ್ಟರೆ ದಕ್ಷಿಣ ಭಾರತದ ಯಾವುದೇ ನಗರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಲ್ಲ. ಹಾಗೇ ಕೆನಡಾದ 3 ನಗರಗಳು ಟಾಪ್ 10ರಲ್ಲಿ ಸ್ಥಾನ ಪಡೆದು ಇತಿಹಾಸ ನಿರ್ಮಿಸಿವೆ. ಹಾಗೇ ಆಸ್ಟ್ರೇಲಿಯಾ ಕೂಡ ಟಾಪ್ 10ರಲ್ಲಿ ಭರ್ಜರಿ ಸ್ಥಾನ ಪಡೆದಿದೆ. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ನಗರ 2023ರಲ್ಲಿ ವಿಶ್ವದ ‘ಅತ್ಯಂತ ವಾಸಯೋಗ್ಯ ನಗರ’ ಎಂಬ ಹೆಗ್ಗಳಿಕೆ ಪಡೆದಿದೆ.
English summary
Bengaluru got a spot in Most liveable cities in the world 2023.
Story first published: Friday, June 23, 2023, 15:36 [IST]