Davanagere
lekhaka-Yogaraja G H
ದಾವಣಗೆರೆ, ಜುಲೈ 05: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಹೇಳಿರುವುದನ್ನು ಈಗಾಗಲೇ ಸ್ವಾಗತಿಸಿದ್ದೇವೆ. ತನಿಖೆ ನಡೆಸಲಿ, ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,ಬಿಟ್ ಕಾಯಿನ್ ಸೇರಿದಂತೆ ಯಾವುದೇ ತನಿಖೆ ನಡೆಸಿದರೂ ಸ್ವಾಗತ. ರಾಜ್ಯದ ಜನರಿಗೆ ಐದು ಗ್ಯಾರಂಟಿ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯಾಗಿ ಇಷ್ಟು ದಿನ ಆದರೂ ಗ್ಯಾರಂಟಿ ಈಡೇರಿಸುವ ಲಕ್ಷಣ ಗೋಚರಿಸುತ್ತಿಲ್ಲ. ಈ ಕಾರಣಕ್ಕಾಗಿ ಸದನದ ಒಳಗೆ ಮತ್ತು ಸದನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ಮುಟ್ಟಿಸಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಜಾರಿ ಮಾಡುತ್ತೇವೆ ಎಂದಿತ್ತು. ಇದುವರೆಗೆ ಅನುಷ್ಠಾನಕ್ಕೆ ತಂದಿಲ್ಲ. ರಾಜ್ಯದ ಜನರು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಗ್ಯಾರಂಟಿ 5 ದೋಖಾಗಳನ್ನು ನೀಡಿ ಜನರಿಗೆ ಮೋಸ ಮಾಡಿದೆ: ಬೊಮ್ಮಾಯಿ
ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನು ಆಗುತ್ತೋ ಗೊತ್ತಾಗುವುದಿಲ್ಲ. ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಸರ್ಕಾರ ಹೇಳಿದ್ದು ಒಂದು ಮಾಡಿದ್ದು ಮಾಡಿದ್ದು ಇನ್ನೊಂದು. ಗ್ಯಾರಂಟಿ 5 ದೋಖಾಗಳನ್ನು ನೀಡಿ ಜನರಿಗೆ ಮೋಸ ಮಾಡಿದೆ. ಆದ್ದರಿಂದ ಸದನದ ಒಳಗೆ ಹೊರಗೆ ಹೋರಾಟ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಜೆಪಿಯ ವಿರೋಧ ಪಕ್ಷದ ನಾಯಕರನ್ನು ಹೈಕಮಾಂಡ್ ನಿರ್ಧರಿಸುತ್ತದೆ: ಬಿಎಸ್ ಯಡಿಯೂರಪ್ಪ
ಕೆಲವೇ ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ಕೇಂದ್ರ ನಾಯಕರು ಬೇರೆ ಬೇರೆ ರಾಜ್ಯಗಳ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಈಗ ನಮ್ಮ ರಾಜ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.
ಬಿಟ್ ಕಾಯಿನ್ ಹಗರಣ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶೇಕಡಾ 40 ಕಮೀಷನ್ ಕೇಸ್ ಬಗ್ಗೆ ತನಿಖೆ ನಡೆಸಲಿ. ಅದರ ಜೊತೆ ಈಗಾಗಲೇ ಲೋಕಾಯುಕ್ತದಲ್ಲಿ ಕೆಲವು ಪ್ರಕರಣಗಳ ತನಿಖೆ ನಡೆಯುತ್ತಿದೆ. 2013ರಿಂದ ಇಲ್ಲಿಯವರೆಗೂ ಎಲ್ಲಾ ಪ್ರಕರಣಗಳ ತನಿಖೆ ಕಮಿಷನ್ ಮುಂದೆ ಒಪ್ಪಿಸಲಿ. ಯಾವುದೋ ಒಂದು ಕೇಸ್ ಹಿಡಿದು ತನಿಖೆ ನಡೆಸಬಾರದು ಎಂದರು.
ಬಿಜೆಪಿ ನಾಯಕರಿಂದ ಸಿದ್ದೇಶ್ವರ ಗುಣಗಾನ
70 ವರ್ಷ ಪೂರೈಸಿ 71 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಕೇಂದ್ರದ ಮಾಜಿ ಸಚಿವ ಹಾಗೂ ದಾವಣಗೆರೆ ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ ಹಾಗೂ ಅವರ ತಂದೆ ಮಲ್ಲಿಕಾರ್ಜುನಪ್ಪರ ಗುಣಗಾನವನ್ನು ಬಿಜೆಪಿ ನಾಯಕರು ಮಾಡಿದರು. ಮಾಜಿ ಸಿಎಂಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಎಂ.ಪಿ. ರೇಣುಕಾಚಾರ್ಯ, ಚಂದ್ರಪ್ಪ, ಬಿ.ಪಿ. ಹರೀಶ್, ಎಸ್.ಎ. ರವೀಂದ್ರನಾಥ್ ಸೇರಿದಂತೆ ಎಲ್ಲಾ ನಾಯಕರು ಹಾಡಿ ಹೊಗಳಿದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜಕೀಯದಲ್ಲಿ ಸಿದ್ದೇಶ್ವರ ನನಗೆ ಆತ್ಮೀಯ ಸಜ್ಜನ, ಸರಳ ಸ್ನೇಹಿತ. ಇದ್ದದ್ದನ್ನು ಹೇಳುವ ವ್ಯಕ್ತಿತ್ವ ಅವರದ್ದು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆಯಲ್ಲಿ ಸಾಮಾಜಿಕ ಸೇವೆ, ಜನರ ಸೇವೆ ಮಾಡಿರುವುದು ಶ್ಲಾಘನೀಯ. ಸಿದ್ದೇಶ್ವರ್ ತಲುಪದ ಹಳ್ಳಿಗಳಿಲ್ಲ ಎಂದರೆ ತಪ್ಪಾಗಲಾರದು. ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಿದ್ದೇಶ್ವರ ಸೋಲಿಸಿರುವುದು ಅವಿಸ್ಮರಣೀಯ ಎಂದು ಬಣ್ಣಿಸಿದರು.
ಅನೇಕ ಕಾರ್ಯಕ್ರಮ ತಂದು ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಸಿದ್ದೇಶ್ವರ ಶ್ರಮಿಸಿದ್ದಾರೆ. ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದು ಖುಷಿಯಾಗಿದೆ. ನೂರು ವರ್ಷ ಬದುಕಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ತಂದೆ ಮಲ್ಲಿಕಾರ್ಜುನಪ್ಪರ ಹಾದಿಯಂತೆ ಸಿದ್ದೇಶ್ವರ ನಡೆಯುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅನೇಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡು ಬಂದಿದ್ದಾರೆ. ದಾವಣಗೆರೆ ಸ್ಮಾರ್ಟ್ ಸಿಟಿ ಆಗಲು ಸಿದ್ದೇಶ್ವರ್ ಅವರೇ ಕಾರಣ. ಮೂಲತಃ ಶ್ರೀಮಂತ ಕುಟುಂಬದವರಾದರೂ ಬಡವರ ಪರ ಕೆಲಸ ಮಾಡಿದ್ದಾರೆ. ಇಂತವರು ಮತ್ತಷ್ಟು ಒಳ್ಳೆಯ ಕೆಲಸ ಮಾಡುವಂತಾಗಲಿ ಎಂದು ಹೇಳಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಜನರ ಸೇವೆ ಮಾಡುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುವುದು ಸಿದ್ದೇಶ್ವರ್ ಅವರನ್ನು ನೋಡಿದಾಗ ಗೊತ್ತಾಗುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರುವಂತೆ ಮಾಡಿದವರು ಸಿದ್ದೇಶ್ವರ ಅವರು. ಅವರ ತಂದೆ ಮಲ್ಲಿಕಾರ್ಜುನಪ್ಪರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಸಿದ್ದೇಶ್ವರ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಶಾಸಕರಾದ ಚಂದ್ರಪ್ಪ ಹಾಗೂ ಬಿ. ಪಿ. ಹರೀಶ್ ಮಾತನಾಡಿ, ಸಿದ್ದೇಶ್ವರ ಅವರು ನಾಲ್ಕು ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸಿದ್ದೇಶ್ವರ ಅವರೇ ಅಭ್ಯರ್ಥಿಯಾಗಬೇಕು ಎಂಬುದು ನಮ್ಮ ಭಾವನೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಿದ್ದೇಶ್ವರ ಅವರ ರಾಜಕೀಯ ನಡೆ ನಮಗೆಲ್ಲಾ ಆದರ್ಶ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಸೋತೇ ಇಲ್ಲ. ಹಳ್ಳಿ ಹಳ್ಳಿಗಳಲ್ಲಿಯೂ ಸಿದ್ದೇಶ್ವರ ಅವರು ಚಿರಪರಿಚಿತ. ಅವರಿಂದ ಮತ್ತಷ್ಟು ಜನಪರ ಕಾರ್ಯಗಳು ಮುಂದುವರಿಯಲಿ ಎಂದು ಹಾರೈಸಿದರು.
English summary
Culprits should be punished in Bitcoin case says Former CM BS Yediyurappa. Know more,
Story first published: Wednesday, July 5, 2023, 18:09 [IST]