ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? | CM siddaramaiah said that government will investigate allegations about corruption

Karnataka

oi-Malathesha M

|

Google Oneindia Kannada News

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹಗರಣಗಳ ಯುದ್ಧ ನಡೆಯುತ್ತಿದೆ. ಅದರಲ್ಲೂ 40% ಕಮಿಷನ್ ಆರೋಪವನ್ನೇ ಅಜೆಂಡಾ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಳಿಬಂದಿರುವ ಆರೋಪದ ತನಿಖೆ ಮಾಡಲ್ವಾ? ಹೀಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಜನ ಪ್ರಶ್ನೆ ಕೇಳುತ್ತಿದ್ದರು. ಈಗ ಆ ಪ್ರಶ್ನೆಗೆ ಖುದ್ದು ಸಿಎಂ ಉತ್ತರಿಸಿದ್ದಾರೆ.

ಅಂದಹಾಗೆ ಹಿಂದಿನ ಸರ್ಕಾರಗಳ ಪ್ರಮುಖ ಹಗರಣಗಳಾದ 4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ, 40% ಕಮಿಷನ್ , ಕರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿ ಖರೀದಿ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪೊಲೀಸ್ ಎಎಸ್ಐ ನೇಮಕಾತಿ ಹಗರಣದ ತನಿಖೆ ಹಾಗೂ ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗೆ ಆರೋಪ ಕೇಳಿಬಂದ ಇಲಾಖೆಗಳಲ್ಲಿ ಸೂಕ್ತ ತನಿಖೆ ನಡೆಸಲು ತಮ್ಮ ಸರ್ಕಾರ ಸಿದ್ಧತೆ ನಡೆಸಿರುವ ಬಗ್ಗೆ ಸಿಎಂ ಮುನ್ಸೂಚನೆ ನೀಡಿದ್ದಾರೆ.

government will investigate corruption allegations

ಡಾ.ಸುಧಾಕರ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಅಲ್ಲದೆ ಚಾಮರಾಜನಗರದಲ್ಲಿ ಕೋವಿಡ್ ಸಂದರ್ಭದಲ್ಲಿ ಆಕ್ಷಿಜನ್ ಕೊರತೆಯಿಂದ ಉಂಟಾದ ದುರಂತ ಪ್ರಕರಣದ ಮರು ತನಿಖೆ ಕೈಗೊಳ್ಳುವುದಾಗಿ ತಿಳಿಸಿದರು. ಅಂದಿನ ಆರೋಗ್ಯ ಸಚಿವ ಡಾ.ಸುಧಾಕರ್ ಅಲ್ಲಿ ಸತ್ತಿರುವುದು ಇಬ್ಬರೇ ಎಂದಿದ್ದರು. ಆದರೆ ಅಲ್ಲಿ ಸತ್ತಿರುವವರ ಸಂಖ್ಯೆ ಹೆಚ್ಚಿತ್ತು ಎಂದರು. ಅಲ್ದೆ ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷಗಳ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿ ಈಗಾಗಲೇ 1 ಗ್ಯಾರಂಟಿ ಜಾರಿ ಮಾಡಿದ್ದೇವೆ. ನಾವು ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಜಾರಿಗೆ ತರುತ್ತೇವೆ. ಗೃಹಲಕ್ಷ್ಮೀ ಯೋಜನೆ ಆಗಸ್ಟ್ 15 ರ ನಂತರ ಜಾರಿ ಮಾಡಲಾಗುವುದು. ಈಗಾಗಲೇ ಅರ್ಜಿ ಕರೆದಿದ್ದು, ಅರ್ಜಿಗಳು ಸ್ವೀಕಾರವಾಗುತ್ತಿವೆ ಎಂದರು.

ಅನ್ನಭಾಗ್ಯ ಯೋಜನೆ ಭವಿಷ್ಯ ಏನು?

ಅನ್ನಭಾಗ್ಯಕ್ಕೆ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ. 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೆವು. 2.29 ಲಕ್ಷ ಮೆ.ಟನ್ ಅಕ್ಕಿ ಅಗತ್ಯವಿದೆ. ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದ ಎಫ್.ಸಿ.ಐ ಅಕ್ಕಿ ನೀಡುವುದಾಗಿ ಒಪ್ಪಿ ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆಯುತ್ತಾರೆ. ಇದು ಕೇಂದ್ರ ಸರ್ಕಾರದ ಷಡ್ಯಂತ್ರ, ಅಕ್ಕಿ ದಾಸ್ತಾನು ಇದ್ದರೂ ಕೊಡುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆ ಮೂಲಕ ಹೇಳಿ ಬರೆಸಿದ್ದಾರೆ. ನವದೆಹಲಿಗೆ ಭೇಟಿ ನೀಡಿದಾಗ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಗಮನಕ್ಕೆ ತರಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

government will investigate corruption allegations

ಬಿಜೆಪಿ ನಾಯಕರಿಗೆ ಸಿದ್ದು ತಿರುಗೇಟು

ಅಲ್ಲದೆ ಕೇಂದ್ರ ಸರ್ಕಾರ ಈ ಮೂಲಕ ಬಡವರ ಮೇಲೆ ಗದಾ ಪ್ರಹಾರ ಮಾಡಿದೆ. ನಾವು ಘೋಷಣೆ ಮಾಡಿದಂತೆ ಅಕ್ಕಿ ಕೋರಿ ಪತ್ರ ಬರೆಯಲಾಗಿದೆ. ಅವರು ಒಪ್ಪಿ ಪತ್ರ ಬರೆದಿದ್ದಾರೆ. ನಾವು ಘೋಷಣೆ ಮಾಡುವ ಮುನ್ನ ಯಡಿಯೂರಪ್ಪ, ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿ ಘೋಷಣೆ ಮಾಡಬೇಕಿತ್ತೇ? ಎಂದು ಪ್ರಶ್ನಿಸಿದರು. ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಗರಂ ಆಗಿದ್ದಾರೆ. ಅತ್ತ ಅಕ್ಕಿ ವಿಚಾರಕ್ಕೆ ಬಿಜೆಪಿ ನಾಯಕರು ಯುದ್ಧ ನಡೆಸುವಾಗಲೇ, ಸಿಎಂ ಸಿದ್ದರಾಮಯ್ಯ ಕೂಡ ಪ್ರತ್ಯಸ್ತ್ರ ಪ್ರಯೋಗ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ!

ಹಾಗೇ ಬಿಜೆಪಿ ಬಡವರ ವಿರೋಧಿ ಪಕ್ಷ. ಅಕ್ಕಿ ಪಡೆಯಲು ನಮ್ಮ ಪ್ರಯತ್ನ ಜಾರಿಯಲ್ಲಿದೆ. ನ್ಯಾಫೆಡ್, ಕೇಂದ್ರೀಯ ಭಂಡಾರ್, ಎನ್.ಸಿ.ಸಿಎಫ್ ಜೊತೆ ಮಾತುಕತೆ ನಡೆಯುತ್ತಿದ್ದು, ನಾಳೆ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. ಎಲ್ಲಿಯೂ ಅಗತ್ಯವಿರುಷ್ಟು ಅಕ್ಕಿ ದೊರೆಯುತ್ತಿಲ್ಲ. ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿಗೆ ತರಲಾಗುವುದು ಎಂದರು. ಗ್ಯಾರಂಟಿ ಯೋಜನೆಗಳು ಜಾರಿಯಾಗದಿದ್ದರೆ ಹೋರಾಟ ಮಾಡುವುದಾಗಿ ಬಿಜೆಪಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬೀದಿಗಿಳಿದು ಹೋರಾಟ ಮಾಡಲು ಬಿಜೆಪಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದ ಸಿಎಂ, ರಾಜಕೀಯ ಗಿಮಿಕ್ ಮಾಡಲು ಹೊಗಬೇಡಿ. ಅವರಿಗೆ ನಿಜವಾಗಿಯೂ ಬದ್ಧತೆಯಿದ್ದರೆ ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ ಎಂದರು.

government will investigate corruption allegations

ಗ್ಯಾರಂಟಿ ಜಾರಿ ಮಾಡುವುದು ನಿಶ್ಚಿತ

2022-23ನೇ ಸಾಲಲ್ಲಿ ಯುವ ನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರು ಸೇರಿದಂತೆ ಡಿಪ್ಲೊಮಾ ಮಾಡಿದವರಿಗೆ 6 ತಿಂಗಳೊಳಗೆ ಕೆಲಸ ದೊರೆಯದೇ ಹೋದರೆ, ಪದವೀಧರರಿಗೆ 3 ಸಾವಿರ ಮತ್ತು ಡಿಪ್ಲೊಮಾ ಮಾಡಿದವ್ರಿಗೆ 1500 ರೂ. 24 ತಿಂಗಳು ನೀಡಲಾಗುವುದು. 2.50 ಲಕ್ಷ ಹುದ್ದೆಗಳನ್ನು ಒಂದೇ ಸಾರಿ ಭರ್ತಿ ಮಾಡಲಾಗುವುದಿಲ್ಲ. ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಐದು ಗ್ಯಾರಂಟಿಗಳನ್ನು ಈಡೇರಿಸಲು ವಾರ್ಷಿಕವಾಗಿ 59000 ಕೋಟಿ ರೂ. ಬೇಕು. ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ ಎಂದರು.

ನಾಡ ಪ್ರಭು ಕೆಂಪೇಗೌಡರ ಬಗ್ಗೆ ಹೇಳಿದ್ದೇನು?

ಕೆಂಪೇಗೌಡರು ಜನಪರ ಹಾಗೂ ಜಾತ್ಯಾತೀತ ದೊರೆಯಾಗಿದ್ದರು. ಇವರ ಕಾಲದಲ್ಲಿ ಎಲ್ಲರೂ ಸೌಹಾರ್ದತೆಯಿಂದಿದ್ದರು. ಇಂತಹ ಮಾದರಿ ನಾಡಪ್ರಭುವನ್ನು ಸ್ಮರಿಸುವ ಸಲುವಾಗಿ ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಸರ್ಕಾರದ ವತಿಯಿಂದಲೇ ಕೆಂಪೇಗೌಡರ ಜಯಂತಿ ಆಚರಿಸಲು ಆದೇಶ ನೀಡಲಾಗಿತ್ತು. ಕೆಂಪೇಗೌಡರ ಪ್ರತಿಮೆಯನ್ನೂ ನಮ್ಮ ಅವಧಿಯಲ್ಲಿಯೇ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದು ಒಬ್ಬ ಪ್ರಗತಿಪರ, ಜಾತ್ಯಾತೀತ ದೊರೆಯನ್ನು ಸ್ಮರಿಸುವ ದಿನವಾಗಿದೆ ಎಂದರು ಸಿಎಂ ಸಿದ್ದರಾಮಯ್ಯ.

ಮೊದಲ ಬಾರಿಗೆ ಶಾಸಕರಾದವರು ಸಂವಿಧಾನದ ಮೂಲ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು: ಸಿದ್ದರಾಮಯ್ಯಮೊದಲ ಬಾರಿಗೆ ಶಾಸಕರಾದವರು ಸಂವಿಧಾನದ ಮೂಲ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು: ಸಿದ್ದರಾಮಯ್ಯ

2 ವಾರದಲ್ಲಿ 179 ಕೋಟಿ ರೂಪಾಯಿ ಖರ್ಚು!

11.06.2023ರಿಂದ 25.06.2023ರ ತನಕ ಕರ್ನಾಟಕದ 4 ನಿಗಮಗಳ ಬಸ್‌ಗಳಲ್ಲಿ ಒಟ್ಟಾರೆ 7 ಕೋಟಿ 64 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಒಟ್ಟಾರೆ 179 ಕೋಟಿ 28 ಲಕ್ಷ ರೂ. ಖರ್ಚು ಮಾಡಿದೆ. ಈ ಮೂಲಕ ಸರ್ಕಾರಿ ಸಾರಿಗೆಗೆ ಜನ ಬರ್ತಿಲ್ಲ ಅನ್ನೋ ಕೊರಗು ದೂರವಾಗುತ್ತಿದೆ. ಹಾಗೇ ಸಾರಿಗೆ ಸಂಸ್ಥೆಗಳಿಗೂ ಈ ಮೂಲಕ ಹೊಸ ಉತ್ತೇಜನ ಸಿಕ್ಕಂತಾಗಿದೆ. ಸಾಕಷ್ಟು ನಷ್ಟದ ಹಾದಿಯಲ್ಲಿ ಸಾಗುತ್ತಿದ್ದ ರಾಜ್ಯ ಸರ್ಕಾರಿ ಸಾರಿಗೆಗೆ ಹೊಸ ಹುಮ್ಮಸ್ಸು ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಿದರೂ ರಾಜ್ಯ ಸರ್ಕಾರವೇ ಅದರ ಟಿಕೆಟ್‌ನ ವೆಚ್ಚ ಭರಿಸಲಿದೆ.

ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡುವ ಜೊತೆಗೆ ಹಿಂದಿನ ಸರ್ಕಾರಗಳ ಹಗರಣಗಳ ತನಿಖೆ ನಡೆಸುವ ಬಗ್ಗೆ ವಾಗ್ದಾನ ನೀಡಿದೆ. ಆದರೆ ಈ ವಾಗ್ದನ ಅದೆಷ್ಟು ಬೇಗ ಜಾರಿಯಾಗುತ್ತೆ? ಅಥವಾ ತನಿಖೆ ನಡೆಸುವ ಮಾತು ಕೇವಲ ಆಶ್ವಾಸನೆಗೆ ಮಾತ್ರ ಸೀಮಿತವಾಗುತ್ತಾ? ಕಾದು ನೋಡಬೇಕಿದೆ. ಇದರ ಜೊತೆಗೆ ಅಕ್ಕಿ ಕಾಳಗ ಕೂಡ ಇನ್ನಷ್ಟು ದಿನ ರಾಜ್ಯದಲ್ಲಿ ಮುಂದುವರಿಯುವ ಹಿಂಟ್ ಸಿಕ್ಕಂತಾಗಿದೆ.

English summary

CM siddaramaiah said that government will investigate allegations about corruption

Story first published: Tuesday, June 27, 2023, 15:35 [IST]

Source link